ನವದೆಹಲಿ, ಜನವರಿ 24: ದೇಶದ ಹೂಡಿಕೆ ದಿಗ್ಗಜರು ಎಲ್ಲೆಲ್ಲಿ ಹಣ ತೊಡಗಿಸುತ್ತಾರೆ ಎಂದು ಯಾರಿಗಾದರೂ ಕುತೂಹಲ ಮೂಡಿಸುವಂಥದ್ದೇ. ಬಹಳಷ್ಟು ಜನರು ಬೇರೆ ಬೇರೆ ಹೂಡಿಕೆಗಳಿಗೆ ಆದ್ಯತೆ ಕೊಡುವುದುಂಟು. ಕೆಲವರಿಗೆ ಚಿನ್ನ, ಮತ್ತಿನ್ನು ಕೆಲವರಿಗೆ ಭೂಮಿ, ಇನ್ನೂ ಕೆಲವರಿಗೆ ಷೇರು, ಬಾಂಡ್, ಡೆಪಾಸಿಟ್ ಇತ್ಯಾದಿ ಇರುತ್ತವೆ. ಝೀರೋಧ (Zerodha) ಸಂಸ್ಥೆಯ ಸಂಸ್ಥಾಪಕರಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಅವರ ಕುಟುಂಬಕ್ಕೆ (Kamath Family) ಭೂಮಿಗಿಂತ ಚಿನ್ನ ಹೆಚ್ಚು ಸುರಕ್ಷಿತ ಹೂಡಿಕೆ ಆಯ್ಕೆಯಂತೆ. ತಮ್ಮ ಕುಟುಂಬ ಶೇ 10ರಿಂದ 15ರಷ್ಟು ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡುತ್ತದೆ ಎಂದು ನಿತಿನ್ ಕಾಮತ್ ಹೇಳಿದ್ದಾರೆ.
‘ಹಣದುಬ್ಬರವೇ ಎಲ್ಲೆಲ್ಲೂ ಇರುವಾಗ ನನಗೆ ಚಿನ್ನ ಬಹಳ ಸೂಕ್ತ ಹೂಡಿಕೆ ಎನಿಸುತ್ತದೆ. ಒಂದು ಕುಟುಂಬವಾಗಿ ನಾವು ಚಿನ್ನಕ್ಕೆ ಶೇ. 10ರಿಂದ 15ರಷ್ಟು ಹೂಡಿಕೆ ಮಾಡಿದ್ದೇವೆ. ವೈಯಕ್ತಿಕವಾಗಿ ನಮಗೆ ಹಣದುಬ್ಬರದ ಬಗ್ಗೆ ಚಿಂತಿತರಾಗಿದ್ದೇವೆ. ಹೀಗಾಗಿ, ಚಿನ್ನದ ಮೇಲೆ ಇಷ್ಟು ದೊಡ್ಡ ಹೂಡಿಕೆ ಮಾಡಿದ್ದೇವೆ’ ಎಂದು ನಿತಿನ್ ಕಾಮತ್ ವಿವರಿಸಿದ್ದಾರೆ.
ನಿತಿನ್ ಕಾಮತ್ ಕುಟುಂಬ ಚಿನ್ನದ ಮೇಲೆ ಹೂಡಿಕೆ ಮಾಡಿದೆ ಎಂದರೆ ಅದು ಚಿನ್ನಾಭರಣ ಖರೀದಿಸಿದ್ದಾರೆಂದಲ್ಲ. ಅಪರಂಜಿ ಚಿನ್ನವಾದ ಗೋಲ್ಡ್ ಬಾರ್, ಗೋಲ್ಡ್ ಕಾಯಿನ್ ಇತ್ಯಾದಿಗಳನ್ನು ಖರೀದಿಸಿದ್ದಾರೆ.
ಇದನ್ನೂ ಓದಿ: FPI: ಭಾರತದ ಷೇರುಪೇಟೆಯಿಂದ ಎಫ್ಪಿಐ ಹೊರಬೀಳುತ್ತಿರುವುದೇಕೆ? ಶೆಲ್ ಕಂಪನಿಗಳನ್ನು ದೂರವಿಡಲು ಸೆಬಿ ಮಾಡಿದ ನಿಯಮ ಕಾರಣವಾ?
ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ನ ಅಸಿಸ್ಟೆಂಟ್ ಪ್ರೊಫೆಸರ್ ಶೇಖರ್ ತೋಮರ್ ಜೊತೆ ಸಂವಾದ ಮಾಡುವ ವೇಳೆ ನಿತಿನ್ ಕಾಮತ್ ಮತ್ತೊಂದು ಕುತೂಹಲಕಾರಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ ಭೂಮಿ ಬೆಲೆ ಇಷ್ಟೊಂದು ದುಬಾರಿ ಯಾಕಾಗುತ್ತಿದೆ ಎಂದು ಅಚ್ಚರಿ ಪಟ್ಟಿದ್ದಾರೆ. ಹಾಗೆ ಹೇಳುತ್ತಾ ಕೃಷ್ಣಗಿರಿಯಲ್ಲಿನ ಒಂದು ಘಟನೆಯನ್ನು ಮೆಲುಕು ಹಾಕಿದ್ದಾರೆ.
ಕಾಮತ್ ಕುಟುಂಬ ರೈನ್ಮ್ಯಾಟರ್ ಫೌಂಡೇಶನ್ ಎನ್ನುವ ನಾನ್ ಪ್ರಾಫಿಟ್ ಸಂಸ್ಥೆಯನ್ನು ಹೊಂದಿದೆ. ಬೆಂಗಳೂರಿನಿಂದ 70 ಕಿಮೀ ದೂರದಲ್ಲಿರುವ ತಮಿಳುನಾಡಿನ ಕೃಷ್ಣಗಿರಿಯ ಕಾಡಿನಂಚಿನಲ್ಲಿ 100 ಎಕರೆ ಜಾಗದಲ್ಲಿ ಬಿಲ್ಡರ್ವೊಬ್ಬರು ವಿಲ್ಲಾ ಕಟ್ಟಲು ಹೊರಟಿದ್ದರು. ಅದನ್ನು ತಡೆಯಲೆಂದು ನಿತಿನ್ ಕಾಮತ್ ಆ ಜಾಗವನ್ನೇ ಖರೀದಿಸಲು ಹೋಗಿದ್ದರು. ಆದರೆ, ಆ ಬಿಲ್ಡರ್ ಒಡ್ಡಿದ ಬೆಲೆ ಕಂಡು ನಿತಿನ್ ಕಾಮತ್ ಕಾಂಗಾಲಾದರಂತೆ. ಈ ನೆಲದಲ್ಲಿ ಏನೂ ಬೆಳೆಯಲ್ಲ. ಆದರೂ ಇಷ್ಟೊಂದು ಬೆಲೆ ಯಾಕೆ ಎಂಬುದು ಅವರಿಗೆ ಪ್ರಶ್ನೆಯಾಗಿತ್ತು.
ಎಲ್ಲರಿಗೂ ಭೂಮಿ ಬೇಕು. ನಮಗೂ ಭೂಮಿ ಇದೆ ಎನ್ನುವ ನೆಮ್ಮದಿ ಅದು. ಆದರೆ, ಹೂಡಿಕೆದಾರನಾಗಿ ನನಗೇನು ಲಾಭ ಎಂದು ಯೋಚಿಸುತ್ತೇನೆ ಎಂದು ಕಾಮತ್ ತಿಳಿಸಿದ್ದಾರೆ.
ಇದನ್ನೂ ಓದಿ: Rich Rangareddy: ತಲಾದಾಯದಲ್ಲಿ ತೆಲಂಗಾಣ ಯಾಕೆ ನಂ. 1? ಅದಕ್ಕೆ ಕಾರಣ ಹೈದರಾಬಾದ್ ಅಲ್ಲ, ರಂಗಾರೆಡ್ಡಿ ಜಿಲ್ಲೆಯಾ?
‘ಗ್ರಾಮಗಳಲ್ಲಿ ರೈತರಿಗೆ ತಮ್ಮ ಜಮೀನಿನ ಬೆಲೆ ಬಗ್ಗೆ ತಮ್ಮದೇ ಕಲ್ಪನೆ ಹೊಂದಿರುತ್ತಾರೆ. ಒಂದು ಎಕರೆ ಜಾಗದಿಂದ ವರ್ಷಕ್ಕೆ 25,000 ರೂ ಆದಾಯ ಬರುತ್ತಿದ್ದರೂ, ಅದರ ಮೌಲ್ಯವನ್ನು ಆತ 25 ಲಕ್ಷ ರೂ ಎಂದು ಭಾವಿಸಿರುತ್ತಾನೆ. ಆಗ ಸ್ವಲ್ಪಸ್ವಲ್ಪವೇ ಜಾಗವನ್ನು ಆಗಾಗ್ಗೆ ಮಾರಿ ಹಣ ಮಾಡಿಕೊಳ್ಳಲು ಆಲೋಚಿಸುತ್ತಾನೆ’ ಎಂದು ಝೀರೋಧ ಸಂಸ್ಥೆಯ ಸಿಇಒ ಕೂಡ ಆಗಿರುವ ನಿತಿನ್ ಕಾಮತ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ