
ಬೆಂಗಳೂರು, ಮೇ 28: ಈಗಷ್ಟೇ ಕಾಲೇಜು ಮುಗಿಸಿ ಮೊದಲ ಕೆಲಸಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಗಳ ಶೈಕ್ಷಣಿಕ ಸಾಧನೆ ಮತ್ತು ಗ್ರೇಡ್ಗಳನ್ನು ಪರಿಶೀಲಿಸುವುದುಂಟು. ಆದರೆ, ಅನುಭವಿ ವ್ಯಕ್ತಿ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ಆತನ ಕಾಲೇಜು ಪರೀಕ್ಷೆಗಳ ಅಂಕಗಳಿಗೆ ಸಾಮಾನ್ಯವಾಗಿ ಯಾವ ಕಂಪನಿಗಳೂ ಆದ್ಯತೆ ಕೊಡುವುದಿಲ್ಲ. ಗೂಗಲ್ನ 8 ವರ್ಷದ ಅನುಭವಿ ಉದ್ಯೋಗಿಯೊಬ್ಬರು ತಮಗಾದ ಅನುಭವವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವರ್ಷಕ್ಕೆ 80 ಲಕ್ಷ ರೂಗೂ ಅಧಿಕ ಸಂಬಳ ಪಡೆಯುವ ಈ ಗೂಗಲ್ ಟೆಕ್ಕಿಯ (Google Employee) ಅರ್ಜಿಯನ್ನು ಭಾರತೀಯ ಸ್ಟಾರ್ಟಪ್ ತಿರಸ್ಕರಿಸಿತಂತೆ. ಈ ಅಪ್ಲಿಕೇಶನ್ ರಿಜೆಕ್ಟ್ ಮಾಡಲು ಸ್ಟಾರ್ಟಪ್ ನೀಡಿದ ಕಾರಣವನ್ನು ಈ ವ್ಯಕ್ತಿ ಬಹಿರಂಗಪಡಿಸಿದ್ದಾರೆ. ಈ ಕಾರಣ ಕೇಳಿ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಈ ಗೂಗಲ್ ಟೆಕ್ಕಿ (ಹೆಸರು ಹೇಳಲು ಇಚ್ಛಿಸಿಲ್ಲ) ಉದ್ಯೋಗ ಬದಲಾವಣೆಯ ಪ್ರಯತ್ನದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ಉದಯೋನ್ಮುಖ ಸ್ಟಾರ್ಟ್‌ಅಪ್ ಕಂಪನಿಯೊಂದಕ್ಕೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಕಂಪನಿಯು ಅವರಿಗೆ ವಾಟ್ಸಾಪ್ (WhatsApp) ಮೂಲಕ ಸಂದೇಶ ಕಳುಹಿಸಿ, ಅವರ ಅರ್ಜಿಯನ್ನು ತಿರಸ್ಕರಿಸಿರುವುದಾಗಿ ತಿಳಿಸಿದೆ. ಅದಕ್ಕೆ ಅವರು ನೀಡಿದ ಕಾರಣ: “ಅವರ ಕಾಲೇಜು ದಿನಗಳ CGPA ಅಂಕ 7 ಕ್ಕಿಂತ ಕಡಿಮೆ ಇತ್ತು!”. ಸಿಜಿಪಿಎ ಎಂಬುದು ವಿದ್ಯಾರ್ಥಿಯ ಎಲ್ಲಾ ಪರೀಕ್ಷೆಗಳನ್ನು ಸೇರಿಸಿ ನೀಡಲಾಗುವ ಗ್ರೇಡಿಂಗ್. ಸಾಮಾನ್ಯವಾಗಿ 10ಕ್ಕೆ ನಿರ್ದಿಷ್ಟ ಅಂಕಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಐಟಿ ಉದ್ಯಮದಲ್ಲಿ ಬರೋಬ್ಬರಿ 8 ವರ್ಷಗಳ ಸುದೀರ್ಘ ಅನುಭವವಿದೆ. ತಮಾಷೆಯೆಂದರೆ, ಸದರಿ ಎಂಜಿನಿಯರ್ ತಮ್ಮ ಬಯೋಡೇಟಾ (Resume) ದಲ್ಲಿ ಕಾಲೇಜು ಅಂಕಗಳನ್ನೇ ನಮೂದಿಸಿರಲಿಲ್ಲ. ಆದರೂ ಕಂಪನಿಯು ಹಳೆಯ ಅಂಕಗಳನ್ನು ಹುಡುಕಿ ತೆಗೆದು, ಅದರ ಆಧಾರದ ಮೇಲೆ ರಿಜೆಕ್ಟ್ ಮಾಡಿದೆ.
ಕಂಪನಿಯು ಕಳುಹಿಸಿದ ಸಂದೇಶದಲ್ಲಿ CGPA ಕೊರತೆಯನ್ನು ಬಿಟ್ಟರೆ ಅವರ ಕೌಶಲ್ಯ ಅಥವಾ ಅನುಭವದ ಬಗ್ಗೆ ಬೇರೆ ಯಾವುದೇ ಆಕ್ಷೇಪಣೆಗಳನ್ನು ಉಲ್ಲೇಖಿಸಿಲ್ಲ.
ಈ ವಿಲಕ್ಷಣ ಅನುಭವವನ್ನು ಆ ಉದ್ಯೋಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ತಕ್ಷಣವೇ ಇದು ವೈರಲ್ ಆಗಿದೆ. ಸ್ಟಾರ್ಟ್‌ಅಪ್‌ನ ಈ ಕ್ರಮಕ್ಕೆ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ ಸುಪ್ರೀಂ ಶಾಕ್; ಶೇ 28 ಜಿಎಸ್ಟಿ ಪೂರ್ವಾನ್ವಯ ತೆರಿಗೆ ಸಿಂಧು ಎಂದು ಕೋರ್ಟ್ ತೀರ್ಪು
ಎಂಟು ವರ್ಷಗಳ ಕಾಲ ಮಾರುಕಟ್ಟೆಯಲ್ಲಿ ನೈಜ ಕೆಲಸದ ಅನುಭವ ಹೊಂದಿರುವ ಉದ್ಯೋಗಿಯ ಸಾಮರ್ಥ್ಯವನ್ನು ಅಳೆಯಲು ಹಳೆಯ ಪರೀಕ್ಷಾ ಅಂಕಗಳನ್ನು ಮಾನದಂಡವಾಗಿ ಬಳಸುವುದು ತರ್ಕಹೀನ ಎಂದು ಕೆಲವರು ಆಕ್ಷೇಪಿಸಿದ್ದಾರೆ.
“ಇಂತಹ ಸಣ್ಣ ಮನಸ್ಥಿತಿಯ ಕಂಪನಿಗೆ ಸೇರದೆ ಇರುವುದೇ ಒಳ್ಳೆಯದಾಯಿತು, ನೀವು ದೊಡ್ಡ ಅಪಾಯದಿಂದ ಪಾರಾಗಿದ್ದೀರಿ” (Dodged a bullet) ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ