
ನವದೆಹಲಿ, ಮೇ 19: ದೇವಸ್ಥಾನದಲ್ಲಿರುವ ಚಿನ್ನವನ್ನು ನಗದೀಕರಣಗೊಳಿಸಲು (Gold Monetisation scheme) ಸರ್ಕಾರ ಯೋಜಿಸುತ್ತಿದೆ ಎಂಬಂತಹ ಕೆಲ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. “ಕೇಂದ್ರ ಸರ್ಕಾರವು ದೇಶದ ದೇವಸ್ಥಾನಗಳಿಗಾಗಿ ಹೊಸ ‘ಚಿನ್ನದ ಬಾಂಡ್ ಯೋಜನೆ’ (Gold Bond Scheme) ಯನ್ನು ಜಾರಿಗೊಳಿಸಲು ಮತ್ತು ದೇವಸ್ಥಾನದ ಗೋಪುರ ಇತ್ಯಾದಿ ಕಟ್ಟಡಗಳಲ್ಲಿ ಹಾಕಲಾಗಿರುವ ಗೋಲ್ಡ್ ಪ್ಲೇಟ್ ಇತ್ಯಾದಿ ಚಿನ್ನವನ್ನು ದೇಶದ ಸ್ಟ್ರಾಟಿಜಿಕ್ ರಿಸರ್ವ್ ಎಂದು ಪರಿಗಣಿಸಲು ಯೋಜಿಸುತ್ತಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಯನ್ನು ಭಾರತ ಸರ್ಕಾರ ಅಧಿಕೃತವಾಗಿ ನಿರಾಕರಿಸಿದೆ ಮತ್ತು ಇದು ಸಂಪೂರ್ಣವಾಗಿ ಸುಳ್ಳು ಎಂದು ಸ್ಪಷ್ಟಪಡಿಸಿದೆ.
ಸುದ್ದಿಯ ಮುಖ್ಯಾಂಶಗಳು
ಇದನ್ನೂ ಓದಿ: ಮೇ 20ಕ್ಕೆ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರ; ಬಂದ್ ಆಗಲಿವೆ ಮೆಡಿಕಲ್ ಸ್ಟೋರ್ಗಳು; ಯಾಕಿದು ಪ್ರತಿಭಟನೆ?
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ವರದಿಗಳಲ್ಲಿ ಕೇಂದ್ರ ಸರ್ಕಾರವು ದೇವಸ್ಥಾನಗಳ ಬಳಿ ಇರುವ ಹೆಚ್ಚುವರಿ ಚಿನ್ನವನ್ನು ಬ್ಯಾಂಕುಗಳಲ್ಲಿ ಇಟ್ಟು ಅದರ ಮೂಲಕ ಬಾಂಡ್ಗಳನ್ನು ವಿತರಿಸುವ ಹೊಸ ಚಿನ್ನದ ನಗದೀಕರಣ ಯೋಜನೆಯನ್ನು (Gold Monetisation Scheme) ಜಾರಿಗೆ ತರುತ್ತಿದೆ ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು. ಇದರಿಂದಾಗಿ ದೇವಸ್ಥಾನಗಳ ಒಡೆತನದ ಚಿನ್ನದ ಮೇಲೆ ಸರ್ಕಾರದ ನಿಯಂತ್ರಣ ಬರಲಿದೆ ಎಂಬಂತಹ ಚರ್ಚೆಗಳು ಶುರುವಾಗಿದ್ದವು.
ಈ ಸುದ್ದಿ ತೀವ್ರವಾಗಿ ಹರಡುತ್ತಿದ್ದಂತೆ, ಸರ್ಕಾರದ ಅಧಿಕೃತ ಮಾಹಿತಿ ಸಂಸ್ಥೆಯಾದ ಪಿಐಬಿ ಫ್ಯಾಕ್ಟ್ ಚೆಕ್ (PIB Fact Check) ಈ ಬಗ್ಗೆ ತನಿಖೆ ನಡೆಸಿ ಸ್ಪಷ್ಟನೆ ನೀಡಿದೆ. ಸರ್ಕಾರವು ದೇವಸ್ಥಾನಗಳಿಗಾಗಿ ಇಂತಹ ಯಾವುದೇ ಹೊಸ ಚಿನ್ನದ ಬಾಂಡ್ ಯೋಜನೆಯನ್ನು ಘೋಷಿಸಿಲ್ಲ ಅಥವಾ ಜಾರಿಗೆ ತರುತ್ತಿಲ್ಲ ಎಂದು ಪಿಐಬಿ ಖಚಿತಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆ ಸುದ್ಧಿ ಕೇವಲ ವದಂತಿ ಮತ್ತು ಸುಳ್ಳು (Fake News) ಎಂದು ಸರ್ಕಾರ ಹೇಳಿದೆ.
ಸರ್ಕಾರ ಚಿನ್ನಕ್ಕೆ ಸಂಬಂಧಿಸಿದ ಕೆಲ ಯೋಜನೆಗಳನ್ನು ಮತ್ತು ಸ್ಕೀಮ್ಗಳನ್ನು ಜಾರಿಗೊಳಿಸಿದೆ. ಸಾವರೀನ್ ಗೋಲ್ಡ್ ಬಾಂಡ್ ಮತ್ತು ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, ಇವು ಪ್ರಮುಖವಾದುವು. ಸಾವರಿನ್ ಗೋಲ್ಡ್ ಬಾಂಡ್ 2015ರಲ್ಲಿ ಆರಂಭವಾಗಿದೆ. ಆದರೆ, ಕಳೆದ ಒಂದು ವರ್ಷದಿಂದ ಹೊಸ ಸರಣಿಯ ಬಾಂಡ್ಗಳನ್ನು ಬಿಡುಗಡೆ ಮಾಡಲಾಗಿಲ್ಲ. ಇನ್ನು, ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ನಲ್ಲಿ ಅಲ್ಪಾವಧಿ ಪ್ಲಾನ್ ಅನ್ನು ಮಾತ್ರ ಮುಂದುವರಿಸಲಾಗಿದೆ. 3 ವರ್ಷ ಮೇಲ್ಪಟ್ಟ ಅವಧಿಯ ಪ್ಲಾನ್ಗಳನ್ನು ನಿಲ್ಲಿಸಲಾಗಿದೆ. ಗೋಲ್ಡ್ ಮಾನಿಟೈಸೇಶನ್ನಲ್ಲಿ ನೀವು ಬಳಸದೇ ಇರುವ ಚಿನ್ನವನ್ನು ಡೆಪಾಸಿಟ್ ಆಗಿ ಇಟ್ಟು ಅದರಿಂದ ಬಡ್ಡಿ ಪಡೆಯುವ ಅವಕಾಶ ಇರುತ್ತದೆ. 1ರಿಂದ 3 ವರ್ಷದ ಡೆಪಾಸಿಟ್ಗೆ ಅವಕಾಶ ಇದೆ. ಬಡ್ಡಿ ಶೇ. 1ಕ್ಕಿಂತಲೂ ಕಡಿಮೆ ಇರುವುದರಿಂದ ಈ ಸ್ಕೀಮ್ ಹೆಚ್ಚು ಜನಪ್ರಿಯತೆ ಪಡೆದಿಲ್ಲ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್ಗಳು
ಇದೇ ಮಾದರಿಯ ಮಾನಿಟೈಸೇಶನ್ ಸ್ಕೀಮ್ ಅನ್ನು ದೇವಸ್ಥಾನಗಳಿಗೆ ತರಲು ಹೊರಟಿದೆ ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಸರ್ಕಾರ ಈ ಸುದ್ದಿಯನ್ನು ಅಲ್ಲಗಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ (WhatsApp, Facebook, X) ಇಂತಹ ಸೂಕ್ಷ್ಮ ವಿಷಯಗಳ ಕುರಿತು ಬರುವ ಅನಧಿಕೃತ ಸುದ್ದಿಗಳನ್ನು ನಂಬಬೇಡಿ ಮತ್ತು ಅವುಗಳನ್ನು ಇತರರಿಗೆ ಶೇರ್ ಮಾಡುವ ಮುನ್ನ ಸರ್ಕಾರದ ಅಧಿಕೃತ ಮೂಲಗಳಿಂದ ಪರಿಶೀಲಿಸಿಕೊಳ್ಳಿ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಜನರಲ್ಲಿ ಮನವಿ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ