ಆಮದು ಸುಂಕ ವಂಚನೆ ಆರೋಪ; 653 ಕೋಟಿ ರೂಪಾಯಿ ಪಾವತಿಗೆ ಶಿಯೋಮಿ ಇಂಡಿಯಾ ಘಟಕಕ್ಕೆ ನೋಟಿಸ್

ಆಮದು ಸುಂಕ ವಂಚನೆ ಆರೋಪ; 653 ಕೋಟಿ ರೂಪಾಯಿ ಪಾವತಿಗೆ ಶಿಯೋಮಿ ಇಂಡಿಯಾ ಘಟಕಕ್ಕೆ ನೋಟಿಸ್
ಸಾಂದರ್ಭಿಕ ಚಿತ್ರ

ಆಮದು ಸುಂಕ ವಂಚಿಸಿದ ಆರೋಪದಲ್ಲಿ ಶಿಯೋಮಿ ಇಂಡಿಯಾ ಘಟಕಕ್ಕೆ 653 ಕೋಟಿ ರೂಪಾಯಿ ವಿಧಿಸಲಾಗಿದೆ. ಈ ಬಗ್ಗೆ ಇನ್ನಷ್ಟು ವಿವರ ಈ ಲೇಖನದಲ್ಲಿದೆ.

TV9kannada Web Team

| Edited By: Srinivas Mata

Jan 06, 2022 | 8:38 AM

ಆಮದು ಸುಂಕವನ್ನು ವಂಚಿಸಿದ ಆರೋಪದ ಮೇಲೆ ಚೀನಾದ ಫೋನ್ ತಯಾರಕ ಶಿಯೋಮಿಯ ಭಾರತ ಘಟಕಕ್ಕೆ 653 ಕೋಟಿ ರೂಪಾಯಿ ನೋಟಿಸ್ ನೀಡಲಾಗಿದೆ ಎಂದು ಅಧಿಕೃತ ಹೇಳಿಕೆಯ ಪ್ರಕಾರ ತಿಳಿಸಲಾಗಿದೆ. ಅಮೆರಿಕ ಮತ್ತು ಚೈನೀಸ್ ಸಂಸ್ಥೆಗಳಿಗೆ ರಾಯಲ್ಟಿ ಮತ್ತು ಪರವಾನಗಿ ಶುಲ್ಕವನ್ನು ಒಪ್ಪಂದದ ಬಾಧ್ಯತೆಗಳ ಅಡಿಯಲ್ಲಿ ರವಾನೆ ಮಾಡಿರುವುದನ್ನು ಸೂಚಿಸುವ ದಾಖಲೆಗಳನ್ನು ಅದರ ಆವರಣದಲ್ಲಿ ಶೋಧಿಸಿದಾಗ ವಶಪಡಿಸಿಕೊಂಡ ನಂತರ ಶಿಯೋಮಿ ಇಂಡಿಯಾಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ. ಇಮೇಲ್ ಪ್ರಶ್ನೆಗೆ ಉತ್ತರಿಸಿದ ಶಿಯೋಮಿ ವಕ್ತಾರರು, “ಶಿಯೋಮಿ ಇಂಡಿಯಾದಲ್ಲಿ ನಾವು ಎಲ್ಲ ಭಾರತೀಯ ಕಾನೂನುಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಪ್ರಾಮುಖ್ಯ ನೀಡುತ್ತೇವೆ. ಪ್ರಸ್ತುತ ಸೂಚನೆಯನ್ನು ವಿವರವಾಗಿ ಪರಿಶೀಲಿಸುತ್ತಿದ್ದೇವೆ. ಜವಾಬ್ದಾರಿಯುತ ಕಂಪೆನಿಯಾಗಿ, ನಾವು ಎಲ್ಲ ಅಗತ್ಯ ದಾಖಲೆಯೊಂದಿಗೆ ಅಧಿಕಾರಿಗಳನ್ನು ಬೆಂಬಲಿಸುತ್ತೇವೆ,” ಎಂದಿದ್ದಾರೆ.

ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಪುರಾವೆಗಳ ಪ್ರಕಾರ, ಶಿಯೋಮಿ ಇಂಡಿಯಾ ಆಗಲೀ ಅಥವಾ ಅದರ ಗುತ್ತಿಗೆ ತಯಾರಕರಾಗಲೀ ಆಮದು ಮಾಡಿಕೊಂಡ ಸರಕುಗಳ ಮೌಲ್ಯಮಾಪನ ಮೌಲ್ಯದಲ್ಲಿ ರಾಯಲ್ಟಿ ಮೊತ್ತವನ್ನು ಒಳಗೊಂಡಿಲ್ಲ ಎಂದು ಸೂಚಿಸಿದ್ದಾರೆ. ಈ ವಿಚಾರದಲ್ಲಿ ಕಸ್ಟಮ್ಸ್ ಕಾನೂನನ್ನು ಉಲ್ಲಂಘಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ವಹಿವಾಟಿನ ಮೌಲ್ಯದಲ್ಲಿ “ರಾಯಲ್ಟಿ ಮತ್ತು ಪರವಾನಗಿ ಶುಲ್ಕ” ಸೇರಿಸದೆ, ಶಿಯೋಮಿ ಇಂಡಿಯಾ ಆಮದು ಮಾಡಿಕೊಂಡ ಮೊಬೈಲ್ ಫೋನ್‌ಗಳು, ಅದರ ಭಾಗಗಳು ಮತ್ತು ಘಟಕಗಳ ಲಾಭದಾಯಕ ಮಾಲೀಕರಾಗಿದ್ದು, ಕಸ್ಟಮ್ಸ್ ಸುಂಕವನ್ನು ತಪ್ಪಿಸುತ್ತಿದೆ ಎಂದು ಅದು ಸೇರಿಸಿದೆ.

“ಡಿಆರ್​ಐ ತನಿಖೆಯನ್ನು ಪೂರ್ಣಗೊಳಿಸಿದ ನಂತರ, ಏಪ್ರಿಲ್ 1, 2017ರಿಂದ ಜೂನ್ 30, 2020ರ ಅವಧಿಗೆ 653 ಕೋಟಿ ರೂಪಾಯಿ ಮೊತ್ತದ ಸುಂಕದ ಬೇಡಿಕೆ ಮತ್ತು ವಸೂಲಾತಿಗಾಗಿ ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಕಸ್ಟಮ್ಸ್ ಕಾಯ್ದೆ, 1962ರ ನಿಬಂಧನೆಗಳ ಅಡಿಯಲ್ಲಿ ಮೂರು ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ,” ಎಂದು ಹಣಕಾಸು ಸಚಿವಾಲಯ ಹೇಳಿದೆ. ತನಿಖೆಯ ಸಮಯದಲ್ಲಿ ಶಿಯೋಮಿ ಇಂಡಿಯಾವು ಕ್ವಾಲ್​ಕಾಮ್ ಯುಎಸ್​ಎ ಮತ್ತು ಬೀಜಿಂಗ್ ಶಿಯೋಮಿ ಮೊಬೈಲ್ ಸಾಫ್ಟ್‌ವೇರ್ ಕಂಪೆನಿ ಲಿಮಿಟೆಡ್, ಚೀನಾ (ಶಿಯೋಮಿ ಇಂಡಿಯಾದ ಸಂಬಂಧಿತ ಪಕ್ಷ)ಗೆ ಪಾವತಿಸಿದ “ರಾಯಲ್ಟಿ ಮತ್ತು ಪರವಾನಗಿ ಶುಲ್ಕ”ವನ್ನು ಸಂಸ್ಥೆ ಮತ್ತು ಅದರ ಗುತ್ತಿಗೆ ತಯಾರಕರಿಂದ ಆಮದು ಮಾಡಿಕೊಳ್ಳುತ್ತಿರುವ ಸರಕುಗಳ ವಹಿವಾಟಿನ ಮೌಲ್ಯದಲ್ಲಿ ಸೇರಿಸಲಾಗುತ್ತಿಲ್ಲ.

ಶಿಯೋಮಿ ಇಂಡಿಯಾ MI ಬ್ರ್ಯಾಂಡ್ ಮೊಬೈಲ್ ಫೋನ್‌ಗಳ ಮಾರಾಟದಲ್ಲಿ ತೊಡಗಿಸಿಕೊಂಡಿದೆ ಮತ್ತು ಈ ಮೊಬೈಲ್ ಫೋನ್‌ಗಳನ್ನು ಕಂಪೆನಿಯಿಂದ ಆಮದು ಮಾಡಿಕೊಳ್ಳಲಾಗಿದೆ ಅಥವಾ ಶಿಯೋಮಿ ಇಂಡಿಯಾದ ಒಪ್ಪಂದದ ತಯಾರಕರಿಂದ ಮೊಬೈಲ್ ಫೋನ್‌ಗಳ ಘಟಕಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಭಾರತದಲ್ಲಿ ಜೋಡಿಸಲಾಗಿದೆ ಎಂದು ತನಿಖೆಗಳು ತೋರಿಸಿವೆ. ಗುತ್ತಿಗೆ ತಯಾರಕರು ತಯಾರಿಸಿದ MI ಬ್ರ್ಯಾಂಡ್ ಮೊಬೈಲ್ ಫೋನ್‌ಗಳನ್ನು ಗುತ್ತಿಗೆ ಒಪ್ಪಂದದ ಪ್ರಕಾರ ಶಿಯೋಮಿ ಇಂಡಿಯಾಗೆ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. Xiaomi Technology India Private Limited (Xiaomi India) ಕಡಿಮೆ ಮೌಲ್ಯಮಾಪನದ ಮೂಲಕ ಕಸ್ಟಮ್ಸ್ ಸುಂಕವನ್ನು ತಪ್ಪಿಸುತ್ತಿದೆ ಎಂದು DRI ಅಧಿಕಾರಿಗಳು ಗುಪ್ತಚರ ಮಾಹಿತಿಯನ್ನು ಪಡೆದಿದ್ದಾರೆ, ನಂತರ ಕಂಪೆನಿ ಮತ್ತು ಅದರ ಗುತ್ತಿಗೆ ತಯಾರಕರ ವಿರುದ್ಧ DRI ತನಿಖೆಯನ್ನು ಪ್ರಾರಂಭಿಸಿತು.

ತನಿಖೆಯ ಸಮಯದಲ್ಲಿ ಶಿಯೋಮಿ ಇಂಡಿಯಾದ ಆವರಣದಲ್ಲಿ DRIಯಿಂದ ಹುಡುಕಾಟಗಳನ್ನು ನಡೆಸಲಾಯಿತು ಮತ್ತು ಕ್ವಾಲ್​ಕಾಮ್ USA ಮತ್ತು ಬೀಜಿಂಗ್ ಶಿಯೋಮಿ ಮೊಬೈಲ್ ಸಾಫ್ಟ್‌ವೇರ್ ಕಂಪೆನಿ ಲಿಮಿಟೆಡ್‌ಗೆ ರಾಯಧನ ಮತ್ತು ಪರವಾನಗಿ ಶುಲ್ಕವನ್ನು ಪಾವತಿಸುವ ವಿಷಯ ಬೆಳಕಿಗೆ ಬಂದಿದೆ. ಶಿಯೋಮಿ ಇಂಡಿಯಾದ ಪ್ರಮುಖ ವ್ಯಕ್ತಿಗಳು ಮತ್ತು ಅದರ ಗುತ್ತಿಗೆ ತಯಾರಕರ ಹೇಳಿಕೆಗಳನ್ನು ದಾಖಲಿಸಲಾಗಿದೆ, ಈ ಸಮಯದಲ್ಲಿ ಶಿಯೋಮಿ ಇಂಡಿಯಾದ ನಿರ್ದೇಶಕರೊಬ್ಬರು ಈ ಪಾವತಿಗಳನ್ನು ದೃಢಪಡಿಸಿದ್ದಾರೆ ಎಂದು ಅದು ಹೇಳಿದೆ.

ಇದನ್ನೂ ಓದಿ: Tax evasion: ತೆರಿಗೆ ಕಳವಿನ ಆರೋಪದಲ್ಲಿ ಶಿಯೋಮಿ, ಒನ್​ಪ್ಲಸ್, ಒಪ್ಪೋ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

Follow us on

Related Stories

Most Read Stories

Click on your DTH Provider to Add TV9 Kannada