GST Collection: ಜಿಎಸ್​ಟಿ ಅಕ್ಟೋಬರ್​ ತಿಂಗಳ ಸಂಗ್ರಹ 1.30 ಲಕ್ಷ ಕೋಟಿ ರೂಪಾಯಿ; ವರ್ಷದಲ್ಲಿ ಎರಡನೇ ಗರಿಷ್ಠ

| Updated By: Srinivas Mata

Updated on: Nov 01, 2021 | 2:52 PM

2021ನೇ ಇಸವಿಯ ಅಕ್ಟೋಬರ್ ತಿಂಗಳಿಗೆ ಜಿಎಸ್​ಟಿ ಸಂಗ್ರಹವು 1.30 ಲಕ್ಷ ಕೋಟಿ ರೂಪಾಯಿ ಆಗಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡನೇ ಗರಿಷ್ಠ ಮೊತ್ತವಾಗಿದೆ.

GST Collection: ಜಿಎಸ್​ಟಿ ಅಕ್ಟೋಬರ್​ ತಿಂಗಳ ಸಂಗ್ರಹ 1.30 ಲಕ್ಷ ಕೋಟಿ ರೂಪಾಯಿ; ವರ್ಷದಲ್ಲಿ ಎರಡನೇ ಗರಿಷ್ಠ
ಸಾಂದರ್ಭಿಕ ಚಿತ್ರ
Follow us on

ಬೇಡಿಕೆ ಹೆಚ್ಚಿಸುವ ಹಬ್ಬದ ಋತುವಿನ ಆರಂಭವಾದ ಅಕ್ಟೋಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು 1.30 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಇದು ಸೆಪ್ಟೆಂಬರ್‌ನಲ್ಲಿ ಆಗಿದ್ದ 1.17 ಲಕ್ಷ ಕೋಟಿ ರೂಪಾಯಿಗೆ ಹೋಲಿಸಿದರೆ 2021-22ರ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕ ಚೇತರಿಕೆ ಇನ್ನಷ್ಟು ಗಟ್ಟಿಯಾಗಿ ಆಗಿರುವುದನ್ನು ಸೂಚಿಸುತ್ತದೆ. ಏಪ್ರಿಲ್‌ನಲ್ಲಿ ಆದ 1.41 ಲಕ್ಷ ಕೋಟಿ ರೂಪಾಯಿಗಳ ಸಂಗ್ರಹ ನಂತರ ಅಕ್ಟೋಬರ್ ಜಿಎಸ್‌ಟಿ ಸಂಗ್ರಹ ವರ್ಷದ ಎರಡನೇ ಅತಿ ಹೆಚ್ಚು ಎಂಬ ಸ್ಥಾನದಲ್ಲಿದೆ. ಅಕ್ಟೋಬರ್ ಜಿಎಸ್​ಟಿ ಸಂಗ್ರಹದೊಂದಿಗೆ ಈ ವರ್ಷದ ಇಲ್ಲಿಯವರೆಗಿನ ಸರಕು ಮತ್ತು ಸೇವಾ ತೆರಿಗೆ ಮೊತ್ತದ ಒಟ್ಟು ಸಂಗ್ರಹವು 8.12 ಲಕ್ಷ ಕೋಟಿ ರೂಪಾಯಿ ಆಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಒಂದು ತಿಂಗಳನ್ನು ಹೊರತುಪಡಿಸಿ (ಜೂನ್​ನಲ್ಲಿ ರೂ. 92,849 ಕೋಟಿ) ಉಳಿದ ಎಲ್ಲ ತಿಂಗಳಲ್ಲೂ ಆದಾಯ ರೂ. 1 ಲಕ್ಷ ಕೋಟಿ ಗಡಿ ದಾಟಿದೆ.

“ಇದು ಆರ್ಥಿಕ ಚೇತರಿಕೆಯ ಟ್ರೆಂಡ್​ಗೆ ಅನುಗುಣವಾಗಿದೆ. ಕೊರೊನಾ ಎರಡನೇ ಅಲೆಯಿಂದಾಗಿ ಪ್ರತಿ ತಿಂಗಳು ಉತ್ಪತ್ತಿಯಾಗುವ ಇ-ವೇ ಬಿಲ್‌ಗಳಲ್ಲಿನ ಟ್ರೆಂಡ್​ ಅನ್ನು ಇದು ಸ್ಪಷ್ಟಗೊಳಿಸಿದೆ,” ಎಂದು ಹಣಕಾಸು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. “ಸೆಮಿ ಕಂಡಕ್ಟರ್‌ಗಳ ಪೂರೈಕೆಯಲ್ಲಿನ ಅಡಚಣೆಯಿಂದಾಗಿ ಕಾರುಗಳು ಮತ್ತು ಇತರ ಉತ್ಪನ್ನಗಳ ಮಾರಾಟದ ಮೇಲೆ ಪರಿಣಾಮ ಬೀರದಿದ್ದರೆ ಆದಾಯವು ಇನ್ನೂ ಹೆಚ್ಚಿರುತ್ತಿತ್ತು,” ಎಂದು ಸಚಿವಾಲಯವು ಹೇಳಿದೆ.

ಮೊದಲೇ ವರದಿ ಮಾಡಿದಂತೆ, ವರ್ಷಕ್ಕೆ ನಿವ್ವಳ ತೆರಿಗೆ ಆದಾಯ (ನೇರ ಮತ್ತು ಪರೋಕ್ಷ ತೆರಿಗೆ) 15.45 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಗುರಿಯನ್ನು ಆರಾಮವಾಗಿ ದಾಟುತ್ತದೆ ಎಂದು ಸರ್ಕಾರ ವಿಶ್ವಾಸ ಹೊಂದಿದೆ. ಆದರೂ ಬಜೆಟ್ ಸಿದ್ಧತೆಗಳು ಪ್ರಾರಂಭವಾಗುತ್ತಿದ್ದಂತೆ ಹೆಚ್ಚಿನ ವೆಚ್ಚಗಳು ಸಹ ಚಿಂತೆಗೆ ಕಾರಣವಾಗಿದೆ. ಈ ಆಕ್ಟೋಬರ್​​ನಲ್ಲಿ ದೇಶದಲ್ಲಿ ಆದ 1.30 ಲಕ್ಷ ಕೋಟಿ ರೂಪಾಯಿಯನ್ನು ಕಳೆದ ವರ್ಷದ ಇದೇ ಅವಧಿಯ ಜಿಎಸ್​ಟಿ ಸಂಗ್ರಹಕ್ಕೆ ಹೋಲಿಸಿದರೆ ಶೇಕಡಾ 24ರಷ್ಟು ಹೆಚ್ಚಳವಾಗಿದೆ.

1.30 ಲಕ್ಷ ಕೋಟಿ ರೂಪಾಯಿyಲ್ಲಿ ಸಿಜಿಎಸ್‌ಟಿ 23,861 ಕೋಟಿ ರೂ., ಎಸ್‌ಜಿಎಸ್‌ಟಿ 30,421 ಕೋಟಿ ರೂ., ಐಜಿಎಸ್‌ಟಿ 67,361 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹವಾದ 32,998 ಕೋಟಿ ಸೇರಿ) ಮತ್ತು ಸೆಸ್ ₹ 8,484 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹವಾದ 699 ಕೋಟಿ ಸೇರಿ) ಆಗಿದೆ. ಸರ್ಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ 27,310 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ 22,394 ಕೋಟಿಯನ್ನು ಸಾಮಾನ್ಯ ತೀರುವಳಿಯಾಗಿ ಇತ್ಯರ್ಥಪಡಿಸಿದೆ. 2021ರ ಅಕ್ಟೋಬರ್​ನಲ್ಲಿ ನಿಯಮಿತ ತೀರುವಳಿ ನಂತರ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್​ಟಿಗಾಗಿ 51,171 ಕೋಟಿ ರೂ. ಮತ್ತು ಎಸ್​ಜಿಎಸ್​ಟಿಗಾಗಿ 52,815 ಕೋಟಿ ರೂ. ಆಗಿದೆ.

ಇದನ್ನೂ ಓದಿ: GST: ಜಿಎಸ್​ಟಿ ದರದಲ್ಲಿ ಬದಲಾವಣೆಗೆ ನಡೆದಿದೆ ಸಿದ್ಧತೆ ಎನ್ನುತ್ತಿವೆ ವರದಿ