
ನವದೆಹಲಿ, ಆಗಸ್ಟ್ 31: ಬಹಳ ಜನರು ಹಣ ಉಳಿಸಲು ಬಹಳ ಪರದಾಡುತ್ತಾರೆ. ಶೇ. 10ರಷ್ಟು ಹಣ ಉಳಿಸಿ, ಅದನ್ನು ಹೂಡಿಕೆ ಮಾಡಲೂ ಸಾಧ್ಯವಿಲ್ಲದೆ ಹತಾಶರಾಗುವುದುಂಟು. ಆದರೆ, ಎಡಲ್‌ವೀಸ್ ಮ್ಯೂಚುವಲ್ ಫಂಡ್‌ನ (Edelweiss Mutual Fund) ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ರಾಧಿಕಾ ಗುಪ್ತಾ (Radhika Gupta) ಅವರು ತಮ್ಮ ಶೇ. 90ರಷ್ಟು ಆದಾಯವನ್ನು ಮ್ಯೂಚುವಲ್ ಫಂಡ್ ಎಸ್ಐಪಿಗಳಲ್ಲಿ ನಿಯಮಿತವಾಗಿ ಹೂಡಿಕೆ ಮಾಡುತ್ತಿದ್ದಾರಂತೆ. ಹಾಗಂತ ಅವರು ಪಾಡ್ಕ್ಯಾಸ್ಟ್ವೊಂದರಲ್ಲಿ ಹೇಳಿಕೊಂಡಿದ್ದಾರೆ.
ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ತಾವು ಯಾವುದೇ ಉಳಿತಾಯ ಅಥವಾ ಹೂಡಿಕೆ ಮಾಡುತ್ತಿರಲಿಲ್ಲ ಎಂದು ಅವರು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಕಾಲಕ್ರಮೇಣ ಅನುಭವದೊಂದಿಗೆ ಶಿಸ್ತಾಗಿ ಹೂಡಿಕೆ ಮಾಡುವುದನ್ನು ಕಲಿತಿದ್ದಾರೆ.
ರಾಧಿಕಾ ಗುಪ್ತ ಅವರು ತಮ್ಮ ಆದಾಯದ ಸಿಂಹಪಾಲು (ಶೇ. 90) ಹಣವನ್ನು ಮ್ಯೂಚುವಲ್ ಫಂಡ್‌ಗಳು, ಈಕ್ವಿಟಿಗಳು ಹಾಗೂ ಡೆಟ್ಗಳಲ್ಲಿ ನಿಯೋಜಿಸುತ್ತಾರೆ. ಉಳಿದ ಶೇ. 10 ರಷ್ಟು ಹಣವನ್ನು ಮಾತ್ರ ತಮ್ಮ ದೈನಂದಿನ ವೆಚ್ಚಗಳು ಮತ್ತು ವೈಯಕ್ತಿಕ ಅಗತ್ಯಗಳಿಗಾಗಿ ಬಳಸುತ್ತಾರೆ.
ಇದನ್ನೂ ಓದಿ: 40ರ ವರ್ಷ ವಯಸ್ಸು ದಾಟಿದ ಬಳಿಕ ಹಣದ ಬಳಕೆ ಹೇಗಿರಬೇಕು? ತಜ್ಞರ ಅನಿಸಿಕೆ ಇದು…
ವ್ಯಕ್ತಿಗತ ಹಣಕಾಸು ನಿರ್ವಹಣೆಯಲ್ಲಿ ಶಿಸ್ತು ಎಷ್ಟೊಂದು ಪ್ರಮುಖ ಎಂಬುವುದಕ್ಕೆ ರಾಧಿಕಾ ಗುಪ್ತಾ ಅವರ ಈ ಪಯಣ ಮತ್ತು ಶೇ. 90 ರಷ್ಟು ಹೂಡಿಕೆ ಸೂತ್ರವು ಸಾಕ್ಷಿಯಾಗಿದೆ. ಆದರೆ, ಎಲ್ಲರಿಂದಲೂ ನೂರಕ್ಕೆ ತೊಂಬತ್ತು ಹಣ ಉಳಿಸಲು ಆಗುವುದಿಲ್ಲ. ಅದಕ್ಕೆ ಹಣಕಾಸು ತಜ್ಞರು 50-30-20 ಸೂತ್ರ ಮುಂದಿಡುತ್ತಾರೆ. ಇಲ್ಲಿ ದಿನಸಿ, ವಿವಿಧ ಬಿಲ್ಗಳು, ಮನೆ ಬಾಡಿಗೆ, ಆಸ್ಪತ್ರೆ, ಔಷಧ, ಸಾಲದ ಕಂತು ಇತ್ಯಾದಿ ಅಗತ್ಯ ವೆಚ್ಚಗಳು ನಿಮ್ಮ ಆದಾಯದ ಶೇ. 50 ಅನ್ನು ಮೀರುವಂತಿಲ್ಲ. ಮನರಂಜನೆ, ಪ್ರವಾಸ ಇತ್ಯಾದಿ ಐಷಾರಾಮಿ ಎನಿಸುವ, ಅಗತ್ಯ ಇಲ್ಲದ ಆಸೆ ಬಯಕೆಗಳಿಗೆ ಮಾಡುವ ವೆಚ್ಚ ಶೇ. 30ಕ್ಕಿಂತ ಹೆಚ್ಚಿರಬಾರದು. ಇವುಗಳ ಮಧ್ಯೆ ಶೇ. 20ರಷ್ಟು ಆದಾಯವನ್ನು ಕಟ್ಟುನಿಟ್ಟಾಗಿ ಉಳಿಸಿ, ಹೂಡಿಕೆಗೆ ಬಳಸಬೇಕು.
ಇದನ್ನೂ ಓದಿ: ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಷ್ಟಿರಲೇಬೇಕು
ನಿಮಗೆ ಕೈ ಸೇರುವ ಸಂಬಳ 50,000 ರೂ ಇದ್ದರೆ 10,000 ರೂನಷ್ಟಾದರೂ ನೀವು ಉಳಿಸಿ ಹೂಡಿಕೆ ಮಾಡಬೇಕು. ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಿ ಆ ಹಣವನ್ನೂ ಹೂಡಿಕೆಗೆ ಬಳಸುವ ಶಿಸ್ತನ್ನು ನೀವು ರೂಢಿಸಿಕೊಂಡರೆ ದೀರ್ಘಾವಧಿಯಲ್ಲಿ ಉತ್ತಮ ಸಂಪತ್ತು ಸೃಷ್ಟಿಸಲು ಸಾಧ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ