ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ (MeitY) ಸಚಿವಾಲಯವು ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ (DIC) ಅಡಿ 2015ನೇ ಇಸವಿಯಲ್ಲಿ ಡಿಜಿಲಾಕರ್ (DigiLocker) ಆರಂಭಿಸಿತು. ಇದೊಂದು ಡಿಜಿಟಲ್ ಪ್ಲಾಟ್ಫಾರ್ಮ್ ಆಗಿದ್ದು, ಇದರಲ್ಲಿ ಜನರು ತಮ್ಮ ಎಲೆಕ್ಟ್ರಾನಿಕ್ ದಾಖಲಾತಿಗಳಾದ ಆಧಾರ್, ಪ್ಯಾನ್ನಂಥದ್ದರ ನಕಲನ್ನು ಇರಿಸಬಹುದು. ಭೌತಿಕ ದಾಖಲಾತಿಗಳ ಬಳಕೆಯನ್ನು ಕಡಿತಗೊಳಿಸಬೇಕು ಹಾಗೂ ಎಲೆಕ್ಟ್ರಾನಿಕ್ ದಾಖಲಾತಿಗಳ ಸಂಗ್ರಹ ಉತ್ತೇಜಿಸಬೇಕು ಎಂಬ ಗುರಿಯೊಂದಿಗೆ ಇದನ್ನು ಆರಂಭಿಸಲಾಯಿತು. ಡಿಜಿಲಾಕರ್ನಲ್ಲಿ ಸಂಗ್ರಹ ಆಗುವ ದಾಖಲಾತಿಗಳು ಭೌತಿಕ ದಾಖಲೆಗಳಂತೆಯೇ ಮಾನ್ಯ ಎಂಬುದನ್ನು ಇಲ್ಲಿ ಗಮನಿಸಬೇಕು. ಇದೀಗ ಯುಐಡಿಎಐ ಜತೆಗೆ ಕೈಜೋಡಿಸಿದೆ. 12 ಅಂಕಿಯ ವಿಶಿಷ್ಟ ಸಂಖ್ಯೆಯ ಆಧಾರ್ ಅನ್ನು ವಿತರಿಸುವ ಸಂಸ್ಥೆ ಇದು. ಸಹಭಾಗಿತ್ವ ವಹಿಸಿಕೊಳ್ಳುವ ಮೂಲಕ ಏನು ಗುರಿ ಅಂದರೆ, ಬಳಕೆದಾರರು ತಮ್ಮ ಡಿಜಿಲಾಕರ್ ಖಾತೆಗೆ ಆಧಾರ್ ಜೋಡಣೆ ಒಂದು ಸಲ ಮಾಡಿದರೆ ಸಾಕಾಗುತ್ತದೆ. ಡಿಜಿಟಲ್ ಆಧಾರ್ ಸಿಗುತ್ತದೆ. ಈ ಮೂಲಕ ಡಿಜಿಲಾಕರ್ ಬಳಸಿ ಜನರು ಯಾವುದೇ ಸಂಸ್ಥೆಯ ತಮ್ಮ ದಾಖಲೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸುಲಭವಾಗಿ ಹಂಚಿಕೊಳ್ಳಬಹುದು. ಇದು ಹೇಗೆ ಅಂದರೆ, ಗೂಗಲ್ ಕ್ಲೌಡ್ನಲ್ಲಿ ಡೇಟಾ ಸಂಗ್ರಹಿಸಿ, ಹಂಚಿಕೊಂಡಂತೆ.
ಡಿಜಿಲಾಕರ್ಗೆ ಸೈನ್ ಅಪ್ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ
ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಸೈನ್-ಅಪ್ ಮೇಲೆ ಕ್ಲಿಕ್ ಮಾಡಿ ಹಾಗೂ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತಿತರ ಮಾಹಿತಿಗಳನ್ನು ನಮೂದಿಸಿ. ಒಟಿಪಿ ಮತ್ತು ಅದರ ಬೆನ್ನಿಗೆ ಎರಡು ಹಂತದ ದೃಢೀಕರಣಕ್ಕೆ ಭದ್ರತಾ ಪಿನ್ (PIN) ಕಳುಹಿಸುವ ಮೂಲಕ ಸಂಖ್ಯೆಯನ್ನು ದೃಢೀಕರಿಸಬೇಕು. ಇದು ನಿಮ್ಮ ಡಿಜಿಲಾಕರ್ ಖಾತೆಯನ್ನು ಸೃಷ್ಟಿಸುತ್ತದೆ.
ಡಿಜಿಲಾಕರ್ ಜತೆಗೆ ಆಧಾರ್ ಜೋಡಣೆ ಮಾಡುವ ಹಂತಗಳು
ಹಂತ 1: ನಿಮ್ಮ ಡಿಜಿಟಲ್ ಖಾತೆಗೆ ಲಾಗ್ ಇನ್ ಆಗಬೇಕು
ಹಂತ 2: ಡ್ಯಾಶ್ಬೋರ್ಡ್ನಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಜೋಡಣೆ ಮಾಡುವುದಕ್ಕೆ ಆಯ್ಕೆ ಕಾಣಿಸಿಕೊಳ್ಳುತ್ತದೆ. ಆಧಾರ್ ಸಂಖ್ಯೆಯನ್ನು ನಮೂದಿಸಿದ ಮೇಲೆ ಚೆಕ್ ಬಾಕ್ಸ್ ಆರಿಸಿಕೊಳ್ಳಬೇಕು.
ಹಂತ 3: “Link Now” ಬಟನ್ ಮೇಲೆ ಕ್ಲಿಕ್ ಮಾಡಬೇಕು
ಹಂತ 4: ನಿಮ್ಮ ಮೊಬೈಲ್ನಲ್ಲಿ ಪಡೆದ ಒಟಿಪಿ ನಮೂದಿಸಬೇಕು
ಹಂತ 5: “Verify” ಬಟನ್ ಮೇಲೆ ಕ್ಲಿಕ್ ಮಾಡಬೇಕು
ಆಧಾರ್ ಕಾರ್ಡ್ ಜತೆಗೆ ನಿಮ್ಮ ಮೊಬೈಲ್ ಸಂಖ್ಯೆ ಜೋಡಣೆ ಆಗಿಲ್ಲ ಅಂತಾದಲ್ಲಿ ನಿಮ್ಮ ಆಧಾರ್ ಅನ್ನು ಡಿಜಿಲಾಕರ್ ಜತೆಗೆ ಜೋಡಣೆ ಮಾಡುವುದಕ್ಕೆ ಸಾಧ್ಯವಿಲ್ಲ.
ನಿಮ್ಮ ಡಿಜಿಲಾಕರ್ ಖಾತೆಯು ಆಧಾರ್ ಜತೆಗೆ ಯಶಸ್ವಿಯಾಗಿ ಜೋಡಣೆ ಆಗುತ್ತದೆ. ಯಶಸ್ವಿಯಾಗಿ ಆಧಾರ್ ಜೋಡಣೆ ಆದ ಮೇಲೆ ಡಿಜಿಲಾಕರ್ ಪ್ರೊಫೈಲ್ ವಿಭಾಗದಲ್ಲಿ ನಿಮ್ಮ ಆಧಾರ್ ಪ್ರೊಫೈಲ್ ಅನ್ನು ನೋಡಲು ಸಾಧ್ಯ.
ಒಂದು ಸಲ ಆಧಾರ್ ಜೋಡಣೆ ಆದ ಮೇಲೆ ವಿತರಣೆಯಾದ ದಾಖಲೆಯಾದ ವಿಭಾಗದಲ್ಲಿ ಆಧಾರ್ ಕಾರ್ಡ್ ನೋಡಬಹುದು. ಪಿಡಿಎಫ್ ಐಕಾನ್ ಅನ್ನು ಯಾವುದೇ ಸಮಯದಲ್ಲಿ ಕ್ಲಿಕ್ ಮಾಡಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದು.
ಇದನ್ನೂ ಓದಿ: PAN Card: ಡಿಜಿಲಾಕರ್ನಲ್ಲಿ PAN ಕಾರ್ಡ್ ಸ್ಟೋರ್ ಹೇಗೆ?