
ನವದೆಹಲಿ, ಸೆಪ್ಟೆಂಬರ್ 23: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಅವರ ಕುಟುಂಬವು M3M ಹುರುನ್ ಇಂಡಿಯಾ ರಿಚ್ ಲಿಸ್ಟ್ 2026ರಲ್ಲಿ ಅಗ್ರಸ್ಥಾನ ಪಡೆದಿದೆ. 9.23 ಲಕ್ಷ ಕೋಟಿ ನಿವ್ವಳ ಸಂಪತ್ತಿನೊಂದಿಗೆ ಅದಾನಿ ಕುಟುಂಬವು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬವನ್ನು ಹಿಂದಿಕ್ಕಿದೆ. ಮುಕೇಶ್ ಅಂಬಾನಿ ಹಾಗೂ ಕುಟುಂಬವು 8.64 ಲಕ್ಷ ಕೋಟಿ ನಿವ್ವಳ ಸಂಪತ್ತಿನೊಂದಿಗೆ ಎರಡನೇ ಸ್ಥಾನದಲ್ಲಿದೆ. ಆರ್ಸೆಲರ್ ಮಿತ್ತಲ್‌ನ ಎಲ್.ಎನ್. ಮಿತ್ತಲ್ ಹಾಗೂ ಕುಟುಂಬವು 3.40 ಲಕ್ಷ ಕೋಟಿ ಸಂಪತ್ತಿನೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ.
ವರದಿಯ ಪ್ರಕಾರ, ಅದಾನಿ ಕುಟುಂಬದ ಸಂಪತ್ತು 13% ಹೆಚ್ಚಳ ಕಂಡಿದ್ದರೆ, ಅಂಬಾನಿ ಕುಟುಂಬದ ಸಂಪತ್ತು 10% ಇಳಿಕೆಯಾಗಿದೆ. 93% ಸಂಪತ್ತು ಹೆಚ್ಚಳದೊಂದಿಗೆ ಎಂಟು ಸ್ಥಾನಗಳಷ್ಟು ಮೇಲೇರಿರುವ ಮಿತ್ತಲ್ ಕುಟುಂಬ ಮೂರನೇ ಸ್ಥಾನಕ್ಕೇರಿದೆ. ಯುರೋಪ್‌ನಲ್ಲಿ ಉಕ್ಕಿನ ವ್ಯಾಪಾರದ ಮೇಲಿನ ಕಠಿಣ ನಿಯಮಗಳು ಹಾಗೂ ಬೆಲೆ ನಿಗದಿ ನೀತಿಗಳು ಈ ಏರಿಕೆಗೆ ಕಾರಣವೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಭಾರತದ ಜಿಡಿಪಿ ಬೆಳವಣಿಗೆ ಬಗ್ಗೆ ಹೆಚ್ಚಿದ ಭರವಸೆ; ಫಿಚ್ ಶೇ. 6.9, ಎಸ್&ಪಿ ಶೇ 7, ಒಇಸಿಡಿ ಶೇ. 7.1 ವೃದ್ಧಿಯ ಅಂದಾಜು
ಹುರುನ್ ವರದಿಯನ್ನು 1999ರಲ್ಲಿ ಲಂಡನ್‌ನಲ್ಲಿ ಸಂಶೋಧನೆ, ಐಷಾರಾಮಿ ಪ್ರಕಾಶನ ಮತ್ತು ಜಾಗತಿಕವಾಗಿ ಕಾರ್ಯನಿರ್ವಹಿಸುವ ಕಾರ್ಯಕ್ರಮಗಳ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಅನಾಸ್ ರಹಮಾನ್ ಜುನೈದ್ ನೇತೃತ್ವದಲ್ಲಿ 2012ರಲ್ಲಿ ಹುರುನ್ ಇಂಡಿಯಾ ಆರಂಭಗೊಂಡಿದ್ದು, ‘ಇಂಡಿಯಾ ರಿಚ್ ಲಿಸ್ಟ್’ ಮತ್ತು ‘ಇಂಡಿಯಾ 500’ ಸೇರಿದಂತೆ ವಿವಿಧ ಪಟ್ಟಿಗಳ ಮೂಲಕ ಸಂಪತ್ತು ಸೃಷ್ಟಿ, ನಾವೀನ್ಯತೆ ಮತ್ತು ಸಮಾಜಸೇವೆಯನ್ನು ಗುರುತಿಸುವ ಉದ್ದೇಶವನ್ನು ಇದು ಹೊಂದಿದೆ. ಇಂಡಿಯಾ ರಿಚ್ ಲಿಸ್ಟ್ 2026ರಲ್ಲಿ 1,000 ಕೋಟಿಗೂ ಅಧಿಕ ಸಂಪತ್ತು ಹೊಂದಿರುವ 1,810 ಮಂದಿ ಸ್ಥಾನ ಪಡೆದಿದ್ದಾರೆ. ಇವರ ಒಟ್ಟು ಸಂಪತ್ತು ವರ್ಷದಿಂದ ವರ್ಷಕ್ಕೆ 12.8% ಹೆಚ್ಚಳವಾಗಿ 187.5 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:16 pm, Wed, 23 September 26