ಅತ್ಯಂತ ಕಡಿಮೆ ಬೆಲೆಗೆ ಯಾರೇ ಕೊಟ್ಟರೂ ತೈಲ ಖರೀದಿಸುತ್ತೇವೆ: ಕೇಂದ್ರ ಸಚಿವ ಹರದಿಪ್ ಸಿಂಗ್ ಪುರಿ

|

Updated on: Aug 30, 2023 | 5:27 PM

India Oil Imports: ಉಕ್ರೇನ್ ಯುದ್ಧಕ್ಕೆ ಮೊದಲು ಭಾರತಕ್ಕೆ ರಷ್ಯಾದಿಂದ ತೈಲ ಸರಬರಾಜು ಬಹಳ ಕಡಿಮೆ ಇತ್ತು. ಇದೀಗ ಅಗ್ರಸ್ಥಾನಕ್ಕೇರಿದೆ. ರಷ್ಯಾದಿಂದ ಅತಿ ಕಡಿಮೆ ಬೆಲೆಗೆ ತೈಲ ಸಿಗುತ್ತಿರುವುದರಿಂದ ಭಾರತ ಖರೀದಿಸುತ್ತಿದೆ. ರಷ್ಯಾ ಮಾತ್ರವಲ್ಲ, ಯಾರೇ ಆದರೂ ಕೂಡ ಕಡಿಮೆ ಬೆಲೆಗೆ ಕೊಡುವುದಾದರೆ ಖರೀದಿಸಲು ಸಿದ್ಧ ಎಂದು ಕೇಂದ್ರ ತೈಲ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಅತ್ಯಂತ ಕಡಿಮೆ ಬೆಲೆಗೆ ಯಾರೇ ಕೊಟ್ಟರೂ ತೈಲ ಖರೀದಿಸುತ್ತೇವೆ: ಕೇಂದ್ರ ಸಚಿವ ಹರದಿಪ್ ಸಿಂಗ್ ಪುರಿ
ತೈಲ ಮಾರಾಟ
Follow us on

ನವದೆಹಲಿ, ಆಗಸ್ಟ್ 30: ಯಾರು ಅತ್ಯಂತ ಕಡಿಮೆ ಬೆಲೆಗೆ ಕೊಡುತ್ತಾರೋ ಆ ಎಲ್ಲಾ ಮೂಲಗಳಿಂದಲೂ ಭಾರತ ತೈಲ ಖರೀದಿಸುತ್ತದೆ ಎಂದು ಕೇಂದ್ರ ತೈಲ ಸಚಿವ ಹರದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ. ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿದೆ (Oil Imports) ಎಂದು ಪಾಶ್ಚಿಮಾತ್ಯ ದೇಶಗಳಲ್ಲಿ ಅಪಸ್ವರ ಕೇಳಿಬರುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ. ‘ನಮ್ಮ ನಿಲುವಿನಲ್ಲಿ ಬಹಳ ಸ್ಪಷ್ಟತೆ ಇದೆ. ನಮ್ಮ ಬಂದರಿಗೆ ಅತ್ಯಂತ ಕಡಿಮೆ ಬೆಲೆಗೆ ತೈಲ ಸರಬರಾಜು ಮಾಡುವ ಯಾರಾದರೂ ಸರಿ ನಾವು ಖರೀದಿಸುತ್ತೇವೆ,’ ಎಂದು ಸಚಿವರು ಹೇಳಿದ್ದಾರೆ.

ಭಾರತ ವಿಶ್ವದ ಮೂರನೇ ಅತಿಹೆಚ್ಚು ತೈಲ ಆಮದುದಾರ ದೇಶವಾಗಿದೆ. ಅದರ ತೈಲ ಅಗತ್ಯತೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತದೆ. ಸದ್ಯ ಬಹಳ ಕಡಿಮೆ ಬೆಲೆಗೆ ತೈಲ ಮಾರುತ್ತಿರುವ ರಷ್ಯಾದಿಂದ ಭಾರತ ಸಾಕಷ್ಟು ತೈಲ ಆಮದು ಮಾಡಕೊಳ್ಳುತ್ತಿದೆ. ಇದರಿಂದ ಭಾರತಕ್ಕೆ ಕಡಿಮೆ ಬೆಲೆಗೆ ಹೆಚ್ಚು ತೈಲ ಸಿಗುತ್ತಿದೆ.

ಇದನ್ನೂ ಓದಿ: ಗ್ಯಾಸ್ ಬೆಲೆ ಇಳಿಕೆ ಎಲ್ಲರಿಗೂ ಅನ್ವಯ ಅಗುತ್ತಾ? ಉಜ್ವಲ ಯೋಜನೆ ಫಲಾನುಭವಿಗಳಿಗೆ ಮಾತ್ರವಾ? ಈ ಯೋಜನೆಗೆ ಯಾರು ಅರ್ಹರು? ಇಲ್ಲಿದೆ ಡೀಟೇಲ್ಸ್

ಉಕ್ರೇನ್ ಯುದ್ಧಕ್ಕೆ ಮೊದಲು ರಷ್ಯಾದಿಂದ ಭಾರತದ ತೈಲ ಆಮದು ಬಹಳ ನಗಣ್ಯ ಇತ್ತು. ಈಗ ಭಾರತಕ್ಕೆ ಅತಿಹೆಚ್ಚು ಕಚ್ಛಾ ತೈಲ ಸರಬರಾಜು ಮಾಡುವ ದೇಶವಾಗಿದೆ ರಷ್ಯಾ. ಉಕ್ರೇನ್ ಮೇಲೆ ಯುದ್ಧ ಶುರು ಮಾಡಿದ ರಷ್ಯಾ ಮೇಲೆ ಅಮೆರಿಕ, ಬ್ರಿಟನ್ ಮೊದಲಾದ ದೇಶಗಳ ಗುಂಪು ಆರ್ಥಿಕ ದಿಗ್ಬಂಧನ ವಿಧಿಸಿವೆ. ಹೀಗಾಗಿ, ರಷ್ಯಾ ಜೊತೆ ಬಹಳಷ್ಟು ದೇಶಗಳು ವ್ಯವಹಾರ ನಿಲ್ಲಿಸಿವೆ. ಇದರಿಂದ ರಷ್ಯಾ ತನ್ನ ಪ್ರಮುಖ ಸಂಪತ್ತಾದ ತೈಲವನ್ನು ಕಡಿಮೆ ಬೆಲೆಗೆ ಮಾರುವುದು ಅನಿವಾರ್ಯವಾಗಿದೆ. ಭಾರತ ಮಾತ್ರವಲ್ಲ ಚೀನಾ ಕೂಡ ಬಹಳಷ್ಟು ತೈಲವನ್ನು ರಷ್ಯಾದಿಂದ ಪಡೆಯುತ್ತಿದೆ. ಪಾಕಿಸ್ತಾನ ಮೊದಲಾದ ದೇಶಗಳೂ ಭಾರತದ ಹಾದಿ ತುಳಿದಿವೆ.

ರುಪಾಯಿಯಲ್ಲಿ ವಹಿವಾಟು

ಡಾಲರ್​ನಲ್ಲಿ ರಷ್ಯಾ ವ್ಯವಹಾರ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಭಾರತದ ಜೊತೆ ತೈಲ ವ್ಯವಹಾರದಲ್ಲಿ ರುಪಾಯಿ ಕರೆನ್ಸಿ ಬಳಕೆಗೆ ಒಪ್ಪಿತ್ತು. ಆರಂಭದಲ್ಲಿ ಇದು ನಡೆದಿತ್ತಾದರೂ ರಷ್ಯಾ ರುಪಾಯಿಯಲ್ಲಿ ವಹಿವಾಟು ನಡೆಸುವುದನ್ನು ನಿಲ್ಲಿಸಲು ನಿರ್ಧರಿಸಿತು. ಬಳಿಕ ಚೀನಾದ ಕರೆನ್ಸಿಯನ್ನು ವಹಿವಾಟಿಗೆ ಬಳಸಲಾಗುತ್ತಿದೆ.

ಇದನ್ನೂ ಓದಿ: ರಫ್ತು ನಿಷೇಧ ಸಡಿಲಿಕೆ; ಸಿಂಗಾಪುರಕ್ಕೆ ಅಕ್ಕಿ ರಫ್ತು ಮಾಡಲು ಭಾರತ ಅವಕಾಶ; ವಿಶೇಷ ಸಂಬಂಧ ಕಾರಣ

ಇನ್ನು, ಯುಎಐ ಜೊತೆಗಿನ ತೈಲ ವ್ಯವಹಾರದಲ್ಲಿ ಭಾರತ ಡಾಲರ್ ಬದಲು ರುಪಾಯಿ ಬಳಕೆ ಮಾಡುತ್ತಿದೆ. ಯುಎಇ ಜೊತೆ ಒಪ್ಪಂದವೂ ಆಗಿದೆ. ಆದರೆ, ಇದರ ವಹಿವಾಟು ಬಹಳ ಕಡಿಮೆ ಇದೆ ಎಂದು ಕೇಂದ್ರ ಸಚಿವರು ಸ್ಪಷ್ಪಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ