
ನವದೆಹಲಿ, ಫೆಬ್ರುವರಿ 6: ಅಮೆರಿಕದ ಜೊತೆ ಮಾಡಿಕೊಳ್ಳಲಾಗುತ್ತಿರುವ ವ್ಯಾಪಾರ ಒಪ್ಪಂದದಲ್ಲಿ (India US trade deal) ಕೃಷಿ ಮತ್ತು ಆಹಾರ ಮಾರುಕಟ್ಟೆಯನ್ನು ರಕ್ಷಿಸಲಾಗುವುದು ಎಂದು ಸರ್ಕಾರದ ಮೂಲಗಳು ಹೇಳುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಮೆರಿಕ ಹಾಗೂ ಯೂರೋಪ್ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡು ಭಾರತ ತನ್ನ ಮಾರುಕಟ್ಟೆಯನ್ನು ಬಲಿಕೊಡುತ್ತಿದೆ ಎನ್ನುವ ವಿಪಕ್ಷಗಳ ಆರೋಪಗಳ ನಡುವೆ ಈ ಸ್ಪಷ್ಟನೆಗಳು ಬಂದಿವೆ.
ಅಕ್ಕಿ, ಗೋಧಿ, ಸೋಯಾಬೀನ್, ಜೋಳ, ಡೈರಿ ಉತ್ಪನ್ನಗಳು, ಸಕ್ಕರೆ ಇತ್ಯಾದಿ ಆಹಾರವಸ್ತುಗಳನ್ನು ಒಪ್ಪಂದದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ರೈತರ ಹಿತಾಸಕ್ತಿ ಮತ್ತು ಆಹಾರ ಭದ್ರತೆಗೆ ಚ್ಯುತಿ ಬರುವಂತಹ ಯಾವುದೇ ಅಂಶವನ್ನೂ ಒಪ್ಪಂದದಲ್ಲಿ ಒಳಗೊಳ್ಳಲಾಗುತ್ತಿಲ್ಲ ಎಂದು ಮೂಲಗಳು ಹೇಳಿವೆ.
ಭಾರತದ ಕೃಷಿ ಸೆಕ್ಟರ್ನಲ್ಲಿ ರೈತರು ಹೆಚ್ಚು ಬೆಳೆಯದ ಕೃಷಿ ವಸ್ತುಗಳನ್ನು ಮಾತ್ರ ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಬಲ್ಲಂತಹ, ಮತ್ತು ಅಧಿಕ ಜನರು ಬಳಸುವ ಆಹಾರವಸ್ತುಗಳ ಆಮದಿಗೆ ಅವಕಾಶ ಕೊಡಲಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ವಾಣಿಜ್ಯಾತ್ಮಕವಾಗಿ ಲಾಭವಿದ್ದರೆ ವೆನೆಜುವೆಲಾದಿಂದಲೂ ತೈಲ ಪಡೆಯುತ್ತೇವೆ: ಭಾರತ ಸರ್ಕಾರದ ಹೇಳಿಕೆ
ಅಮೆರಿಕದ ವಾಲ್ನಟ್, ಪಿಸ್ಟಾ ಇತ್ಯಾದಿ ಕೆಲ ಆಯ್ದ ಡ್ರೈಫ್ರೂಟ್ಗಳನ್ನು ಆಮದು ಮಾಡಿಕೊಳ್ಳಬಹುದು. ಒಟ್ಟಾರೆ ಉನ್ನತ ಮಟ್ಟದ ಆಹಾರ ವಸ್ತುಗಳಿಗೆ ಮಾತ್ರ ಅವಕಾಶ ಇರುತ್ತದೆ. ಇನ್ನುಳಿದಂತೆ ಭಾರತೀಯ ಕೃಷಿಕರು ಉತ್ಪಾದಿಸುವ ಬಹುತೇಕ ಎಲ್ಲಾ ಆಹಾರವಸ್ತುಗಳಿಗೆ ಹೊರಗಿನಿಂದ ಪ್ರತಿಸ್ಪರ್ಧೆ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಅಮೆರಿಕದೊಂದಿಗಿನ ಒಪ್ಪಂದ ಮಾತ್ರವಲ್ಲ, ಈ ಹಿಂದೆ ಮಾಡಿಕೊಂಡಿರುವ ಯೂರೋಪಿಯನ್ ಯೂನಿಯನ್ ಸೇರಿದಂತೆ ವಿವಿಧ ದೇಶಗಳೊಂದಿಗಿನ ಒಪ್ಪಂದದಲ್ಲೂ ಕೃಷಿ ಕ್ಷೇತ್ರವನ್ನು ಹೊರಗಿಡಲಾಗಿದೆ. ಅತಿಹೆಚ್ಚು ಜನರ ಬದುಕಿಗೆ ಆಧಾರವಾಗಿರುವ ಕೃಷಿ ಹಾಗೂ ರೈತರನ್ನು ರಕ್ಷಿಸುವ ವಿಚಾರದಲ್ಲಿ ಸರ್ಕಾರ ಯಾವುದೇ ರಾಜಿ ಆಗಿಲ್ಲ. ಇದು ಖಾತ್ರಿ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ.
ಇದನ್ನೂ ಓದಿ: ಬದಲಾಗುತ್ತಿರುವ ವಿಶ್ವ ಶ್ರೇಣಿಯಲ್ಲಿ ಜಾಗತಿಕ ಶಕ್ತಿಯಾಗುತ್ತಿರುವ ಭಾರತ: ನರೇಂದ್ರ ಮೋದಿ ಹೇಳಿಕೆ
ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಟ್ಟಿದ್ದು, 2-3 ದಿನಗಳಲ್ಲಿ ಎರಡೂ ದೇಶಗಳಿಂದ ಜಂಟಿ ಹೇಳಿಕೆ ಪ್ರಕಟವಾಗಬಹುದು. ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಮೊನ್ನೆ ಈ ಸಂಗತಿ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ