Forex: ಭಾರತದ ಫೋರೆಕ್ಸ್ ನಿಧಿ 48 ಲಕ್ಷ ಕೋಟಿಗೆ ಏರಿಕೆ; ಆರ್ಥಿಕತೆ ಶೇ. 7ರಷ್ಟು ವೃದ್ಧಿ ಎಂದು ಹಣಕಾಸು ಸಚಿವೆ ನಿರೀಕ್ಷೆ
Indian Economy Growth: ಭಾರತದ ಆರ್ಥಿಕತೆ 2022-23ರಲ್ಲಿ ಶೇ. 7ರ ದರದಲ್ಲಿ ಬೆಳೆಯಬಹುದು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಭಾರತದ ಫಾರೆಕ್ಸ್ ಮೀಸಲು ನಿಧಿ ಏಪ್ರಿಲ್ ಮೊದಲ ವಾರದಲ್ಲಿ 6.3 ಬಿಲಿಯನ್ ಡಾಲರ್ನಷ್ಟು ಹೆಚ್ಚಿದೆ.
ನವದೆಹಲಿ: ಈ ಹಿಂದಿನ ಹಣಕಾಸು ವರ್ಷದಲ್ಲಿ (2022-23) ಭಾರತದ ಆರ್ಥಿಕತೆ (India Economy) ಶೇ. 7ರಷ್ಟು ಬೆಳೆಯಬಹುದು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ವಿಶ್ವದ ಪ್ರಮುಖ ಆರ್ಥಿಕತೆಯ ದೇಶಗಳ ಪೈಕಿ ಭಾರತ ಈ ವರ್ಷ ಅತಿವೇಗವಾಗಿ ಬೆಳೆಯಲಿದೆ ಎಂದು ಐಎಂಎಫ್ ಮತ್ತು ವಿಶ್ವಬ್ಯಾಂಕ್ (World Bank) ಅಂದಾಜು ಮಾಡಿವೆ. ಭಾರತ 2022-23ರಲ್ಲಿ ಶೇ. 6.8ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದು ಐಎಂಎಫ್ (IMF) ಈ ಹಿಂದೆ ಲೆಕ್ಕಾಚಾರ ಹಾಕಿತ್ತು. ವಿಶ್ವಬ್ಯಾಂಕ್ ಅಂದಾಜು ಪ್ರಕಾರ ಜಿಡಿಪಿ ವೃದ್ಧಿ ಶೇ. 6.9ರಷ್ಟು ಇರಬಹುದು. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಹೆಚ್ಚೂಕಡಿಮೆ ಇಷ್ಟೇ ವೇಗದಲ್ಲಿ ಆರ್ಥಿಕತೆ ವೃದ್ಧಿಸಬಹುದು ಎಂದು ಅಂದಾಜು ಮಾಡಿದೆ. ಭಾರತದ ಆರ್ಥಿಕತೆಯ ಬೆಳವಣಿಗೆ ದರದ ಬಗ್ಗೆ ಐಎಂಎಫ್ ಮತ್ತು ವರ್ಲ್ಡ್ ಬ್ಯಾಂಕ್ ಮಾಡಿರುವ ಅಂದಾಜು ಬಹುತೇಕ ಸರಿ ಇರಬಹುದು ಎಂದು ಹೇಳಿರುವ ನಿರ್ಮಲಾ ಸೀತಾರಾಮನ್, 2022-23ರ ಆರ್ಥಿಕ ಸಮೀಕ್ಷೆ ಪ್ರಕಾರ ಜಿಡಿಪಿ ಶೇ. 7ರಷ್ಟು ಹಿಗ್ಗುವ ಅಂದಾಜಿದೆ ಎಂದಿದ್ದಾರೆ.
ಭಾರತದ ಫೋರೆಕ್ಸ್ ಮೀಸಲು ನಿಧಿ 6.306 ಬಿಲಿಯನ್ ಡಾಲರ್ನಷ್ಟು ಏರಿಕೆ
ಇತ್ತೀಚಿನ ಆರ್ಬಿಐ ಮಾಹಿತಿ ಪ್ರಕಾರ ಏಪ್ರಿಲ್ 7ರಂದು ಅತ್ಯಗೊಂಡ ವಾರದಲ್ಲಿ ಭಾರತದ ವಿದೇಶ ವಿನಿಮಯ ಮೀಸಲು ನಿಧಿಗೆ ಹೆಚ್ಚು ಹಣ ಸೇರ್ಪಡೆಯಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಫೋರೆಕ್ಸ್ ನಿಧಿ 584.755 ಬಿಲಿಯನ್ ಡಾಲರ್ (ಸುಮಾರು 47.86 ಲಕ್ಷ ಕೋಟಿ ರುಪಾಯಿ) ಮೊತ್ತ ತಲುಪಿದೆ. ಒಟ್ಟು 6.306 ಬಿಲಿಯನ್ ಡಾಲರ್ (ಸುಮಾರು 51,611 ಕೋಟಿ ರುಪಾಯಿ) ಮೊತ್ತದಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: ಸಾಲ ಪಡೆದು ಷೇರು ಮಾರುಕಟ್ಟೆಗೆ ಹೂಡಿಕೆ ಮಾಡುವುದು ಒಳ್ಳೆಯದೇ? ಈ ಅಪಾಯಗಳ ಬಗ್ಗೆ ಇರಲಿ ಎಚ್ಚರಿಕೆ
ನಾಲ್ಕು ವಾರದಲ್ಲಿ ಮೂರು ಬಾರಿ ಭಾರತದ ಫೋರೆಕ್ಸ್ ಹೆಚ್ಚಳವಾಗಿರುವುದು ಗಮನಾರ್ಹ. ಮಾರ್ಚ್ 31ಕ್ಕೆ ಅಂತ್ಯಗೊಂಡ ವಾರದಲ್ಲಿ ಫೋರೆಕ್ಸ್ ನಿಧಿ 329 ಮಿಲಿಯನ್ ಡಾಲರ್ನಷ್ಟು ಕಡಿಮೆ ಆಗಿತ್ತು. ಅದು ಬಿಟ್ಟರೆ ನಾಲ್ಕು ವಾರದಲ್ಲಿ ಮೂರು ಬಾರಿ ಫೋರೆಕ್ಸ್ ಹೆಚ್ಚಾಗಿದೆ. ಆದರೆ, 2021ರ ಅಕ್ಟೋಬರ್ನಲ್ಲಿ ಭಾರತದ ಫೋರೆಕ್ಸ್ ಖಜಾನೆ ಬರೋಬ್ಬರಿ 645 ಬಿಲಿಯನ್ ಡಾಲರ್ (ಸುಮಾರು 52.8 ಲಕ್ಷ ಕೋಟಿ ರುಪಾಯಿ) ಮುಟ್ಟಿತ್ತು. ಅದು ಸಾರ್ವಕಾಲಿಕ ದಾಖಲೆಯಾಗಿ ಈಗಲೂ ಉಳಿದಿದೆ. ಆ ಮಟ್ಟ ಮುಟ್ಟಲು ಇನ್ನೂ 59 ಬಿಲಿಯನ್ ಡಾಲರ್ ಶೇಖರಣೆ ಬೇಕಾಗುತ್ತದೆ.
ಭಾರತದ ಫೋರೆಕ್ಸ್ ರಿಸರ್ವ್ಸ್ನಲ್ಲಿ ಏನೆಲ್ಲಾ ಏರಿಕೆ?
ಫೋರೆಕ್ಸ್ ರಿಸರ್ವ್ ಎಂದರೆ ಒಂದು ದೇಶದ ಸೆಂಟ್ರಲ್ ಬ್ಯಾಂಕ್ನಲ್ಲಿ ಇರುವ ವಿದೇಶೀ ಕರೆನ್ಸಿ ಆಸ್ತಿಗಳ ಸಂಗ್ರಹ. ಇದರಲ್ಲಿ ಫಾರೀನ್ ಮಾರ್ಕೆಟಬಲ್ ಸೆಕ್ಯೂರಿಟೀಸ್, ಚಿನ್ನದ ಮೀಸಲು, ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (SDR) ಮತ್ತು ಐಎಂಎಫ್ನೊಂದಿಗಿನ ಮೀಸಲು ನಿಧಿ ಇವೆಲ್ಲವೂ ಒಳಗೊಂಡಿರುತ್ತದೆ. ಭಾರತದ ಫಾರೆಕ್ಸ್ ರಿಸರ್ವ್ಸ್ ವಿಶ್ವದಲ್ಲೇ ನಾಲ್ಕನೇ ಗರಿಷ್ಠದ್ದಾಗಿದೆ. ಚೀನಾ, ಜಪಾನ್, ಸ್ವಿಟ್ಜರ್ಲೆಂಡ್ ಬಿಟ್ಟರೆ ಭಾರತವೇ ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವುದು.
ಇನ್ನು, ಭಾರತದಲ್ಲಿರುವ ಫಾರೆಕ್ಸ್ ರಿಸರ್ವ್ಸ್ ನಿಧಿಯಲ್ಲಿ ಗೋಲ್ಡ್ ರಿಸರ್ವ್ಸ್ ಸೇರಿದಂತೆ ಎಲ್ಲಾ ಒಳಾಂಶಗಳೂ ಏರಿವೆ. ಗೋಲ್ಡ್ ರಿಸರ್ವ್ಸ್ 46.696 ಬಿಲಿಯನ್ ಡಾಲರ್ಗೆ ಏರಿದೆ. ಎಸ್ಡಿಆರ್ 18.45 ಬಿಲಿಯನ್ ಡಾಲರ್ ಮುಟ್ಟಿದೆ. ಐಎಂಎಫ್ ಜೊತೆಗಿನ ಮೀಸಲು ನಿಧಿ 5.178 ಬಿಲಿಯನ್ ಡಾಲರ್ಗೆ ಏರಿದೆ ಎಂಬುದು ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬರುತ್ತದೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:24 am, Sun, 16 April 23