ಸಾಲ ಪಡೆದು ಷೇರು ಮಾರುಕಟ್ಟೆಗೆ ಹೂಡಿಕೆ ಮಾಡುವುದು ಒಳ್ಳೆಯದೇ? ಈ ಅಪಾಯಗಳ ಬಗ್ಗೆ ಇರಲಿ ಎಚ್ಚರಿಕೆ
ಹೆಚ್ಚು ಲಾಭ ಪಡೆಯುವುದಕ್ಕಾಗಿ ಸಾಲ ಮಾಡಿ ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೋ? ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದು ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹು ದೊಡ್ಡ ಆರ್ಥಿಕ ಗಂಡಾಂತರವನ್ನು ಮೈಮೇಲೆ ಎಳೆದುಕೊಂಡಂತಾದೀತು.
ಷೇರು ಮಾರುಕಟ್ಟೆಯಲ್ಲಿ (Stock Market) ಹೂಡಿಕೆ (Investment) ಮಾಡಿ ಹೆಚ್ಚು ರಿಟರ್ನ್ಸ್ ಗಳಿಸಬೇಕೆಂಬ ಆಶೆ ಯಾರಿಗೆ ಇರುವುದಿಲ್ಲ. ಆದರೆ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧ ಇರುವವರಿಗಷ್ಟೇ ಬೇಗನೇ ಅತಿಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂಬುದು ಸಾಮಾನ್ಯ ಸಂಗತಿ. ಹೀಗಿರುವಾಗ ಹೆಚ್ಚು ಲಾಭ ಪಡೆಯುವುದಕ್ಕಾಗಿ ಸಾಲ ಮಾಡಿ ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೋ? ವೈಯಕ್ತಿಕ ಸಾಲ (Personal Loan) ಅಥವಾ ಪರ್ಸನಲ್ ಲೋನ್ ಪಡೆದು ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹು ದೊಡ್ಡ ಆರ್ಥಿಕ ಗಂಡಾಂತರವನ್ನು ಮೈಮೇಲೆ ಎಳೆದುಕೊಂಡಂತಾದೀತು. ಅದೂ ಕೂಡಾ, ಷೇರುಮಾರುಕಟ್ಟೆ ದಾಖಲೆಯ ಗರಿಷ್ಠ ಮಟ್ಟದಲ್ಲಿದ್ದಾಗ ಸಾಲ ಪಡೆದು ಹೂಡಿಕೆ ಮಾಡುವುದು ಮೂರ್ಖತನವೇ ಸರಿ. ಹೆಚ್ಚು ರಿಸ್ಕ್ನ ಹೂಡಿಕೆಯಾಗಿದ್ದರಂತೂ ಕೈಸುಟ್ಟುಕೊಂಡಂತೆಯೇ.
ಕಳೆದ ವರ್ಷ ಹೇಗಿತ್ತು ಷೇರು ಮಾರುಕಟ್ಟೆ ವಹಿವಾಟು?
2022ರಲ್ಲಿ ಸೆನ್ಸೆಕ್ಸ್ ಕೇವಲ ಶೇ 4.4ರಷ್ಟು ಪ್ರತಿಫಲ ಕೊಟ್ಟಿತ್ತು. ಕಳೆದ ಕೆಲ ವರ್ಷಗಳಲ್ಲಿ ಸೆನ್ಸೆಕ್ಸ್ ಅತ್ಯುತ್ತಮ ಪ್ರತಿಫಲ ಕೊಟ್ಟಿದ್ದರೂ, ನಿಗದಿತ ಪ್ರತಿಫಲಗಳ ಖಾತರಿ ಇರಲಿಲ್ಲ. ಪರ್ಸನಲ್ ಲೋನ್ ಮೇಲಿನ ಬಡ್ಡಿ ಸಾಮಾನ್ಯವಾಗಿ ಶೇ 11ರಿಂದ ಶೇ 24ರವರೆಗೆ ಇರುತ್ತದೆ. ಕ್ರೆಡಿಟ್ ಕಾರ್ಡ್ ಸಾಲದ ಮೇಲೆ ಶೇ 48ರವರೆಗೆ ಬಡ್ಡಿ ವಿಧಿಸುತ್ತಾರೆ. ನೀವು ಈ ಸಾಲ ಪಡೆದಿದ್ದಕ್ಕೆ ತೆರುವ ಬಡ್ಡಿಗಿಂತಲೂ ಹೆಚ್ಚಿನ ಪ್ರತಿಫಲ ನಿಮ್ಮ ಹೂಡಿಕೆಯಿಂದ ಬಂದರೆ ಪರವಾಗಿಲ್ಲ. ಆದರೆ, ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲೆಂದೇ ದುಬಾರಿ ಬಡ್ಡಿ ದರದ ಸಾಲ ಮಾಡುತ್ತೀರಿ ಅಂದರೆ, ನಿಮಗೆ ಅದರಿಂದ ಬರುವ ಪ್ರತಿಫಲ ಮತ್ತು ದುಬಾರಿ ಬಡ್ಡಿಗಳ ನಡುವೆ ಹೊಂದಾಣಿಕೆ ಇರದು ಎಂಬ ವಿಷಯವೇ ತಿಳಿದಿಲ್ಲ ಎನ್ನಬಹುದು.
ಹೆಚ್ಚಾಗುತ್ತಲೇ ಇದೆ ಪರ್ಸನಲ್ ಲೋನ್ ಪ್ರಮಾಣ
ಆನ್ಲೈನ್ ಹಣಕಾಸು ಸೇವೆಗಳನ್ನು ಒದಗಿಸುವ ‘ಬ್ಯಾಂಕ್ ಬಜಾರ್’ ವರದಿಯ ಪ್ರಕಾರ, ಬಡ್ಡಿ ದರಗಳು ಹೆಚ್ಚಾಗುತ್ತಾ ಇದ್ದರೂ, ಪರ್ಸನಲ್ ಲೋನ್ಗಳಿಗೆ ತೀವ್ರಗತಿಯಲ್ಲಿ ಬೇಡಿಕೆ ಹೆಚ್ಚುತ್ತಲೇ ಇದೆ. ಅಕ್ಟೋಬರ್ 2022ರಲ್ಲಿ, ಮಂಜೂರಾದ ಪರ್ಸನಲ್ ಲೋನ್ಗಳ ಒಟ್ಟು ಮೊತ್ತ ₹37.70 ಲಕ್ಷ ಕೋಟಿಗೆ ಏರಿಕೆ ಆಗಿತ್ತು. ಇದು ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ, ಶೇ 20ರಷ್ಟು ಏರಿಕೆ ಆಗಿತ್ತು. ಸ್ಪಷ್ಟವಾಗಿ ಹೇಳಬೇಕೆಂದರೆ, ಜನ ಭಯ ಹುಟ್ಟಿಸುವ ರೀತಿಯಲ್ಲಿ ಪರ್ಸನಲ್ ಲೋನ್ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅನಿರೀಕ್ಷಿತ ಹಾಗೂ ತುರ್ತು ಹಣದ ಅವಶ್ಯಕತೆ ಇದ್ದರೆ, ವೈಯಕ್ತಿಕ ಸಾಲ ತೆಗೆದುಕೊಳ್ಳುವುದು ಒಂದು ಉತ್ತಮ ಆಯ್ಕೆ. ಆದರೆ, ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ವೈಯಕ್ತಿಕ ಸಾಲ ತೆಗೆದುಕೊಳ್ಳುವುದು ಒಂದು ದೊಡ್ಡ ಆರ್ಥಿಕ ಪ್ರಮಾದವೇ ಸರಿ.
ಸಾಲ ಪಡೆದು ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೀಗಾಗಬಹುದು ನೋಡಿ
ಉದಾಹರಣೆಗೆ; ವ್ಯಕ್ತಿಯೊಬ್ಬರು ಶೇ 15ರ ಬಡ್ಡಿ ದರದಲ್ಲಿ ಸಾಲ ತೆಗೆದುಕೊಂಡು, ಶೇ 15ರ ಲಾಭ ನಿರೀಕ್ಷೆ ಮಾಡುತ್ತಿದ್ದಾರೆ ಅಂತ eಂದುಕೊಳ್ಳೋಣ. ಆಗ, ಅವರು ಶೇ 30ರಷ್ಟು ಆದಾಯದ ಗುರಿ ಹೊಂದಿದ್ದಾರೆ ಎಂದೇ ಆರ್ಥ. ಸಾಲದ ಮೇಲೆ ಶೇ 15ರಷ್ಟು ಬಡ್ಡಿ ಪಾವತಿಸಬೇಕು, ಹೂಡಿಕೆಯಿಂದ ಶೇ 15ರಷ್ಟು ಲಾಭ ಬರಬೇಕು ಎಂಬ ಯೋಚನೆ ಇದ್ದರೆ ಅದು ನಿಜಕ್ಕೂ ಅಪಾಯಕಾರಿ. ಇದು ಹೂಡಿಕೆ ಆಗಲಾರದು. ಬದಲಿಗೆ ಒಂದು ಬಗೆಯ ಜೂಜು ಆಗಬಹುದು ಅಷ್ಟೇ. ಅವರಿಗೆ ಶೇ 30ರಷ್ಟು ಆದಾಯ ಬಂದರೆ ಸರಿ, ಇಲ್ಲದಿದ್ದರೆ, ಅವರ ಮೂಲ ಹೂಡಿಕೆಯ ಒಂದು ಭಾಗವೂ ನಷ್ಟ ಆಗಿಬಿಡುತ್ತದೆ.
ಷೇರು ಮಾರುಕಟ್ಟೆಯಲ್ಲಿ ಈ ತಪ್ಪು ಮಾಡಬೇಡಿ
ಷೇರು ಮಾರುಕಟ್ಟೆಯಲ್ಲಿ ಕೇವಲ ಒಂದೆರಡು ವರ್ಷ ಹೂಡಿಕೆ ಮಾಡಿ ದೊಡ್ಡ ಲಾಭ ಪಡೆಯುತ್ತೇನೆ ಎಂದು ಮೇಲಿನ ಉದಾಹರಣೆಯಂತೆ ನೀವೂ ತಪ್ಪು ಮಾಡಬೇಡಿ. ಅಲ್ಪಾವಧಿಯಲ್ಲಿ ಮಾರುಕಟ್ಟೆಯ ಪ್ರವೃತ್ತಿ ಹೀಗೇ ಇರುತ್ತದೆ ಎಂದು ಮೊದಲೇ ಹೇಳಲಾಗದು. ಹೊಸ ಹೂಡಿಕೆದಾರರು ಮಾರುಕಟ್ಟೆ ಗರಿಷ್ಠ ಮಟ್ಟದಲ್ಲಿದ್ದಾಗ ಹೂಡಿಕೆ ಮಾಡುತ್ತಾರೆ. ಮಾರುಕಟ್ಟೆ ಮಗುಚಿ ಬೀಳುತ್ತಿದ್ದಂತೆ, ಅವರು ಆತುರದಿಂದ ತಮ್ಮ ಹೂಡಿಕೆಯನ್ನು ಉಳಿಸಿಕೊಳ್ಳಲು ಷೇರುಗಳನ್ನು ಮಾರಲು ಶುರು ಮಾಡ್ತಾರೆ. ಇದರಿಂದ ಅವರ ನಷ್ಟ ಹೆಚ್ಚಾಗುತ್ತಾ ಹೋಗುತ್ತದೆ. ಮಾರುಕಟ್ಟೆಯ ಏಳು-ಬೀಳುಗಳ ಸಮಯದಲ್ಲಿ, ಹೂಡಿಕೆದಾರನು ದೀರ್ಘಾವಧಿಗೆ ತನ್ನ ಹೂಡಿಕೆಯನ್ನು ಮುಂದುವರೆಸಬೇಕು. ನಮ್ಮ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಮಾತ್ರವೇ ಸಾಲ ಮಾಡಬೇಕೇ ವಿನಃ ಹೂಡಿಕೆ ಮಾಡಲು ಅಲ್ಲ ಎನ್ನುವುದು ಗಮನದಲ್ಲಿರಬೇಕು.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:00 am, Sun, 16 April 23