ಡೀಸಲ್ ಮತ್ತು ಜೆಟ್ ಇಂಧನದ ಮೇಲಿನ ರಫ್ತು ಸುಂಕ ಹೆಚ್ಚಳ; ಪೆಟ್ರೋಲ್ ರೀಟೇಲ್ ಬೆಲೆ ಮೇಲೆ ಪರಿಣಾಮ ಬೀರುತ್ತಾ?

India Hikes Diesel, ATF Export Duty: ಕೇಂದ್ರ ಸರ್ಕಾರ ಡೀಸೆಲ್ ಮತ್ತು ವಿಮಾನ ಇಂಧನ (ATF) ರಫ್ತು ಸುಂಕವನ್ನು ಹೆಚ್ಚಿಸಿದೆ. ಪೆಟ್ರೋಲ್ ಸುಂಕ ಯಥಾಸ್ಥಿತಿಯಲ್ಲಿದೆ. ಈ ಬದಲಾವಣೆಯಿಂದ ದೇಶೀಯ ಇಂಧನ ಬೆಲೆಗಳ ಮೇಲೆ ಪರಿಣಾಮವಿಲ್ಲ. ಜಾಗತಿಕ ತೈಲ ಬೆಲೆ ಏರಿಳಿತದ ಮಧ್ಯೆ, ತೈಲ ಕಂಪನಿಗಳು ದೇಶೀಯ ಮಾರುಕಟ್ಟೆಗೆ ಆದ್ಯತೆ ನೀಡಲು ಮತ್ತು ಅತಿಯಾದ ಲಾಭ ಗಳಿಸುವುದನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ. ದೇಶದಲ್ಲಿ ಇಂಧನ ಕೊರತೆ ಆಗದಂತೆ ನೋಡಿಕೊಳ್ಳುವುದು ಮುಖ್ಯ ಉದ್ದೇಶ.

ಡೀಸಲ್ ಮತ್ತು ಜೆಟ್ ಇಂಧನದ ಮೇಲಿನ ರಫ್ತು ಸುಂಕ ಹೆಚ್ಚಳ; ಪೆಟ್ರೋಲ್ ರೀಟೇಲ್ ಬೆಲೆ ಮೇಲೆ ಪರಿಣಾಮ ಬೀರುತ್ತಾ?
ಪೆಟ್ರೋಲ್ ಪಂಪ್
Image Credit source: PTI

Updated on: Jun 16, 2026 | 11:39 AM

ನವದೆಹಲಿ, ಜೂನ್ 16: ಕೇಂದ್ರ ಸರ್ಕಾರವು ಡೀಸೆಲ್ ಮತ್ತು ವಿಮಾನ ಇಂಧನ (ATF) ರಫ್ತುಗಳ ಮೇಲಿನ ಸುಂಕವನ್ನು (Export Duty) ಹೆಚ್ಚಿಸಿದೆ. ಆದರೆ ಪೆಟ್ರೋಲ್ ಮೇಲಿನ ರಫ್ತು ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಡೀಸೆಲ್ ರಫ್ತು ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (SAED) 50 ಪೈಸೆ ಏರಿಸಲಾಗಿದೆ. ಪ್ರತಿ ಲೀಟರ್‌ಗೆ 13.5 ರೂನಿಂದ 14 ರೂಗೆ ಹೆಚ್ಚಿಸಲಾಗಿದೆ . ವಿಮಾನ ಇಂಧನದ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ 3 ರೂ ಹೆಚ್ಚಿಸಲಾಗಿದೆ. 9.5 ರೂನಿಂ 12.5 ರೂಗೆ ಗಣನೀಯವಾಗಿ ಏರಿಸಲಾಗಿದೆ. ಆದರೆ, ಪೆಟ್ರೋಲ್ ರಫ್ತು ಮೇಲಿನ ಸುಂಕದಲ್ಲಿ ಬದಲಾವಣೆ ಮಾಡಲಾಗಿಲ್ಲ. ಅದರ ಪ್ರತಿ ಲೀಟರ್‌ಗೆ ಅದರ ಸುಂಕ 1.5 ರೂನಲ್ಲೇ ಮುಂದುವರಿಯಲಿದೆ.

ಸಾಮಾನ್ಯ ಗ್ರಾಹಕರ ಮೇಲೆ ಏನು ಪರಿಣಾಮ?

ಈ ತೆರಿಗೆ ಬದಲಾವಣೆಗಳು ಕೇವಲ ವಿದೇಶಗಳಿಗೆ ರಫ್ತು ಮಾಡುವ ಇಂಧನಕ್ಕೆ ಮಾತ್ರ ಅನ್ವಯಿಸುತ್ತವೆ. ದೇಶೀಯ ಮಾರುಕಟ್ಟೆಯಲ್ಲಿ (ಭಾರತದ ಒಳಗಡೆ) ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಾಗಾಗಿ ದೇಶದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ದರ ಈ ಕಾರಣಕ್ಕೆ ಏರಿಕೆಯಾಗುವುದಿಲ್ಲ, ಇಳಿಕೆಯೂ ಆಗುವುದಿಲ್ಲ.

ಇದನ್ನೂ ಓದಿ: ಇರಾನ್-ಅಮೆರಿಕ ಶಾಂತಿ ಒಪ್ಪಂದವು ಭಾರತಕ್ಕೆ ಖುಷಿ ವಿಚಾರವಲ್ಲ: ಮಾಜಿ ಇಸ್ರೇಲ್ ವಕ್ತಾರರ ಎಚ್ಚರಿಕೆ

ಸರ್ಕಾರದ ಈ ನಿರ್ಧಾರಕ್ಕೆ ಕಾರಣವೇನು?

ಪಶ್ಚಿಮ ಏಷ್ಯಾ (West Asia) ಭಾಗದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರ ಏರಿಳಿತ ಕಾಣುತ್ತಿವೆ. ಭಾರತದ ತೈಲ ಸಂಸ್ಕರಣಾ ಕಂಪನಿಗಳು (ಉದಾಹರಣೆಗೆ ರಿಲಯನ್ಸ್ ಇಂಡಸ್ಟ್ರೀಸ್ ಮುಂತಾದವು) ದೇಶದ ಒಳಗಡೆ ಇಂಧನ ಮಾರಾಟ ಮಾಡುವ ಬದಲು, ವಿದೇಶಗಳಲ್ಲಿ ಹೆಚ್ಚಿನ ಬೆಲೆಗೆ ರಫ್ತು ಮಾಡಿ ಅತಿಯಾದ ಲಾಭ ಗಳಿಸುವುದನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ದೇಶದ ಒಳಗಡೆ ಇಂಧನದ ಕೊರತೆಯಾಗದಂತೆ ನೋಡಿಕೊಳ್ಳುವುದು ಮತ್ತು ದೇಶೀಯ ಮಾರುಕಟ್ಟೆಗೆ ಮೊದಲ ಆದ್ಯತೆ ನೀಡುವಂತೆ ಕಂಪನಿಗಳನ್ನು ಪ್ರೇರೇಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಈ ಪರಿಷ್ಕೃತ ದರಗಳು ಇವತ್ತು (ಜೂನ್ 16) ಮಂಗಳವಾರದಿದಲೇ ಜಾರಿಗೆ ಬಂದಿದ್ದು, ಸರ್ಕಾರವು ಪ್ರತಿ 15 ದಿನಗಳಿಗೊಮ್ಮೆ ಜಾಗತಿಕ ತೈಲ ಬೆಲೆಗಳನ್ನು ಪರಿಶೀಲಿಸಿ ಈ ತೆರಿಗೆಯನ್ನು ಬದಲಾಯಿಸುತ್ತಿರುತ್ತದೆ. ಸದ್ಯ ಜಾಗತಿಕ ತೈಲ ಬೆಲೆಗಳು ಒಂದು ಬ್ಯಾರಲ್​ಗೆ 80 ಡಾಲರ್​ಗೆ ಇಳಿದಿವೆ. ಈ ದರ ಇನ್ನೂ ಇಳಿಕೆಯಾದಲ್ಲಿ ಪೆಟ್ರೋಲ್ ಮತ್ತು ಡೀಸಲ್ ದರಗಳೂ ಇಳಿಕೆಯಾಗಬಹುದು. ಅಥವಾ ಸರ್ಕಾರವು ಅಬಕಾರಿ ಸುಂಕ ಏರಿಸಿ, ಪೆಟ್ರೋಲ್, ಡೀಸಲ್ ದರ ಯಥಾಸ್ಥಿತಿಯಲ್ಲಿ ಮುಂದುವರಿಯುವಂತೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:28 am, Tue, 16 June 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us