ಗೂಗಲ್ ಟ್ಯಾಕ್ಸ್ ರದ್ದು ಮಾಡಲಿರುವ ಭಾರತ; ತಣ್ಣಗಾಗುವುದೇ ಟ್ರಂಪ್ ತಾಪ?
India removes 6% Google tax: ವಿದೇಶೀ ಟೆಕ್ ಕಂಪನಿಗಳ ಆನ್ಲೈನ್ ಜಾಹೀರಾತು ಸೇವೆಗಳಿಗೆ ವಿಧಿಸಲಾಗುವ ಶೇ. 6ರ ಈಕ್ವಲೈಸೇಶನ್ ಟ್ಯಾಕ್ಸ್ ಅನ್ನು ಭಾರತ ರದ್ದು ಮಾಡುತ್ತಿದೆ. ಹಣಕಾಸು ತಿದ್ದುಪಡಿ ಕಾಯ್ದೆಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಏಪ್ರಿಲ್ 1ರಿಂದ ಈಕ್ವಲೈಸೇಶನ್ ಟ್ಯಾಕ್ಸ್ ಇರುವುದಿಲ್ಲ. ಪ್ರತಿಸುಂಕದ ಭರಾಟೆಯಲ್ಲಿರುವ ಅಮೆರಿಕ ಭಾರತದ ಬಗ್ಗೆ ಮೃದುಧೋರಣೆ ತಾಳುತ್ತಾ ನೋಡಬೇಕು.

ನವದೆಹಲಿ, ಮಾರ್ಚ್ 25: ಗೂಗಲ್, ಮೆಟಾ ಇತ್ಯಾದಿ ಕಂಪನಿಗಳ ಆನ್ಲೈನ್ ಜಾಹೀರಾತು ಸೇವೆಗಳಿಗೆ ವಿಧಿಸಲಾಗುತ್ತಿರುವ ಶೇ. 6ರ ಈಕ್ವಲೈಸೇಶನ್ ಟ್ಯಾಕ್ಸ್ (Equalisation Levy) ಅನ್ನು ಹಿಂಪಡೆಯಲು ಭಾರತ ಯೋಜಿಸಿದೆ. ಗೂಗಲ್ ಟ್ಯಾಕ್ಸ್ ಎಂದೇ ಜನಪ್ರಿಯವಾಗಿರುವ ಈ ತೆರಿಗೆಯನ್ನು ಏಪ್ರಿಲ್ 1ರಿಂದ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಸಂಸತ್ತಿನಲ್ಲಿ ಮಂಡಿಸಿದ ಹಣಕಾಸು ತಿದ್ದುಪಡಿ ಮಸೂದೆಯಲ್ಲಿ ಮಾಡಲಾಗಿರುವ 59 ತಿದ್ದುಪಡಿಗಳಲ್ಲಿ (Amendments to Finance Bill) ಗೂಗಲ್ ಟ್ಯಾಕ್ಸ್ ರದ್ದತಿಯೂ ಒಂದು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬೇರೆ ಬೇರೆ ದೇಶಗಳು ಅಮೆರಿಕದ ಮೇಲೆ ಅಸಾಧಾರಣ ರೀತಿಯಲ್ಲಿ ತೆರಿಗೆಗಳನ್ನು ಹೇರುತ್ತಿವೆ ಎಂದು ಆರೋಪಿಸುತ್ತಿದ್ದಾರೆ. ಭಾರತವೂ ಸೇರಿದಂತೆ ವಿವಿಧ ದೇಶಗಳ ಹೆಸರನ್ನು ಅವರು ನೇರವಾಗಿ ಪ್ರಸ್ತಾಪಿಸಿ ಕುಟುಕಿದ್ಧಾರೆ. ಏಪ್ರಿಲ್ 2ರಿಂದ ಭಾರತವನ್ನೂ ಒಳಗೊಂಡಂತೆ ಎಲ್ಲಾ ದೇಶಗಳ ಮೇಲೆ ಪ್ರತಿಸುಂಕ ಹೇರುವ ಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಟ್ರಂಪ್ ಅವರ ಕೋಪ ತಣ್ಣಗೆ ಮಾಡಲು ಭಾರತ ಪ್ರಯತ್ನಗಳನ್ನು ಮಾಡುತ್ತಿದೆ. ಗೂಗಲ್ ಟ್ಯಾಕ್ಸ್ ತೆಗೆದುಹಾಕುವ ಕ್ರಮ ಇದೇ ಪ್ರಯತ್ನದ ಭಾಗವಾಗಿರಬಹುದು.
ಇದನ್ನೂ ಓದಿ: ವೆನುಜುವೇಲಾದಿಂದ ಯಾರೇ ತೈಲ ಖರೀದಿಸಿದರೂ ಅವರಿಗೆ ಶೇ. 25 ಸುಂಕ: ಅಮೆರಿಕ ಅಧ್ಯಕ್ಷ ಘೋಷಣೆ; ಟ್ರಂಪ್ ಕೋಪಕ್ಕೆ ಏನು ಕಾರಣ?
2016ರಲ್ಲಿ ಗೂಗಲ್ ಟ್ಯಾಕ್ಸ್ ಜಾರಿ
ವಿದೇಶಗಳ ಮೂಲದ ಕಂಪನಿಗಳು ನಡೆಸುವ ಆನ್ಲೈನ್ ಜಾಹೀರಾತು ಸೇವೆ, ಡಿಜಿಟಲ್ ಆ್ಯಡ್ ಹಾಗೂ ಸಂಬಂಧಿತ ಸೇವೆಗಳಿಗೆ ಈಕ್ವಲೈಸೇಶನ್ ಟ್ಯಾಕ್ಸ್ ಹಾಕುವ ಕ್ರಮ 2016ರ ಜೂನ್ 1ರಿಂದ ಜಾರಿಗೆ ಬಂದಿತ್ತು. ಈಗ ಹಣಕಾಸು ಕಾಯ್ದೆಯ ಸೆಕ್ಷನ್ 163 ಅನ್ನು ತಿದ್ದುಪಡಿ ಮಾಡಲಾಗಿದೆ. ಗೂಗಲ್, ಮೆಟಾ ಇತ್ಯಾದಿ ಕಂಪನಿಗಳಿಗೆ ಈಕ್ವಲೈಸೇಶನ್ ಟ್ಯಾಕ್ಸ್ ಅನ್ವಯ ಆಗುವುದಿಲ್ಲ.
2020ರ ಹಣಕಾಸು ಕಾಯ್ದೆಯಲ್ಲಿ ಇಕಾಮರ್ಸ್ ವಹಿವಾಟುಗಳಿಗೆ ಟ್ಯಾಕ್ಸ್ ವಿಸ್ತರಿಸಲಾಗಿತ್ತು. ಶೇ. 2ರಷ್ಟು ಟ್ಯಾಕ್ಸ್ ಹಾಕಲಾಗಿತ್ತು. ಆದರೆ, 2024ರ ಆಗಸ್ಟ್ 1ರಂದು ಆ ತೆರಿಗೆಯನ್ನು ರದ್ದು ಮಾಡಲಾಗಿತ್ತು.
ಗೂಗಲ್ ಟ್ಯಾಕ್ಸ್ ಹಿಂಪಡೆಯುವುದರಿಂದ ಭಾರತಕ್ಕೆ ಇಲ್ಲ ನಷ್ಟ
ಈಕ್ವಲೈಸೇಶನ್ ಟ್ಯಾಕ್ಸ್ ಅಥವಾ ಡಿಜಿಟಲ್ ಟ್ಯಾಕ್ಸ್ ಅನ್ನು ರದ್ದು ಮಾಡಲು ಭಾರತ ಮಾತ್ರವಲ್ಲ, ಬ್ರಿಟನ್ ಮೊದಲಾದ ದೇಶಗಳೂ ಮುಂದಾಗಿವೆ. ಹೀಗಾಗಿ, ಭಾರತದ ನಡೆಯೇನೂ ಅಚ್ಚರಿ ತರುವುದಿಲ್ಲ. ಕೆಲ ತಜ್ಞರ ಪ್ರಕಾರ, ಭಾರತ ಸರ್ಕಾರದ ಈ ನಡೆ ಸದ್ಯದ ಸಂದರ್ಭದಲ್ಲಿ ಜಾಣತನದ ನಡೆಯಾಗಿದೆ.
ಇದನ್ನೂ ಓದಿ: ಸಣ್ಣ ಸಾಲಗಳಿಗೆ ಹೆಚ್ಚುವರಿ ಶುಲ್ಕ ಬೇಡ; ಪಿಎಸ್ಎಲ್ ಗುರಿ ಮುಟ್ಟಬೇಕು: ಬ್ಯಾಂಕುಗಳಿಗೆ ಆರ್ಬಿಐ ತಾಕೀತು
ಯಾಕೆಂದರೆ, ಗೂಗಲ್, ಮೆಟಾ ಸಂಸ್ಥೆಗಳು ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಜಾಹೀರಾತು ಆದಾಯವೇನೂ ಮಾಡುತ್ತಿಲ್ಲ. ಅವುಗಳಿಂದ ಭಾರತಕ್ಕೆ ಹೆಚ್ಚೇನೂ ತೆರಿಗೆ ಸಿಗುತ್ತಿಲ್ಲ. ಈ ಟ್ಯಾಕ್ಸ್ ಹಿಂಪಡೆದರೆ ಭಾರತಕ್ಕೇನೂ ಹೆಚ್ಚಿನ ನಷ್ಟ ಆಗುವುದಿಲ್ಲ. ಇನ್ನೊಂದೆಡೆ, ಈ ಟ್ಯಾಕ್ಸ್ ಹಿಂಪಡೆಯುವ ಕ್ರಮದಿಂದ ಅಮೆರಿಕ ಸರ್ಕಾರದ ಮೇಲೆ ಭಾರತ ಸಕಾರಾತ್ಮಕವಾಗಿ ಪ್ರಭಾವ ಬೀರಲು ನೆರವಾಗಬಹುದು. ವ್ಯಾಪಾರ ಸಂಧಾನಗಳಲ್ಲಿ ಭಾರತ ಹೆಚ್ಚು ಬಲಯುತವಾಗಿ ಮಾತನಾಡಲು ಸಾಧ್ಯವಾಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ