
ನವದೆಹಲಿ, ಸೆಪ್ಟೆಂಬರ್ 29: ಪ್ರಯಾಣ ದಟ್ಟಣೆ ಇರುವ ಅಕ್ಟೋಬರ್ ತಿಂಗಳಲ್ಲಿ ರೈಲು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ಟಿಕೆಟ್ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಭಾರತೀಯ ರೈಲ್ವೆ ಸ್ಪೆಷಲ್ ಡ್ರೈವ್ ನಡೆಸುತ್ತಿದೆ. ಪ್ರಯಾಣಿಕರ ಟಿಕೆಟ್ ಹಾಗೂ ಅವರ ಗುರುತಿನ ಐಡಿ ಪರಿಶೀಲಿಸುವ ಕಾರ್ಯ ಮಾಡಲಾಗುತ್ತದೆ. 2026ರ ಅಕ್ಟೋಬರ್ 1ರಿಂದ 31ರವರೆಗೆ ಟಿಕೆಟ್ ಪರಿಶೀಲನೆಯ ಕಾರ್ಯವನ್ನು ರೈಲ್ವೆ ಕೈಗೆತ್ತಿಕೊಂಡಿದೆ. ಈ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ರಿಯಾಯಿತಿ, ನಿರ್ದಿಷ್ಟಪಡಿಸಿದ ರಿಸರ್ವೇಶನ್ ಕೋಟಾ ಮತ್ತು ರೈಲ್ವೆ ಪಾಸ್ಗಳನ್ನು ಹೊಂದಿರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತದೆ. ಈ ಹೊಸ ನಿಯಮಗಳ ಪ್ರಕಾರ, ಪ್ರಯಾಣಿಕರು ಅನುಸರಿಸಬೇಕಾದ ಪ್ರಮುಖ ಅಂಶಗಳ ವಿವರ ಇಲ್ಲಿದೆ:
ಕಡ್ಡಾಯ ಅಸಲಿ ಗುರುತಿನ ಚೀಟಿ: ರೈಲಿನಲ್ಲಿ ರಿಯಾಯಿತಿ ಅಥವಾ ರಿಸರ್ವೇಶನ್ ಕೋಟಾದಲ್ಲಿ ಪ್ರಯಾಣಿಸುವಾಗ ಪ್ರತಿಯೊಬ್ಬ ಪ್ರಯಾಣಿಕರು ಅಸಲಿ ಗುರುತಿನ ಚೀಟಿಯನ್ನು (ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಪಾನ್ ಕಾರ್ಡ್, ಇತ್ಯಾದಿ) ಕಡ್ಡಾಯವಾಗಿ ಕೊಂಡೊಯ್ಯಬೇಕು. ಫೋಟೋ ಕಾಪಿ ಅಥವಾ ಮಾನ್ಯವಲ್ಲದ ಡಿಜಿಟಲ್ ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ. ಒಬ್ಬರಿಗಿಂತ ಹೆಚ್ಚು ಮಂದಿ ಸೇರಿ ಒಂದೇ ಟಿಕೆಟ್ ಪಡೆದಿದ್ದರೆ ಆಗ ಆ ಗುಂಪಿನಲ್ಲಿ ಎಲ್ಲರ ಗುರುತಿನ ಐಡಿ ಬೇಕಾಗುವುದಿಲ್ಲ. ಒಬ್ಬರ ಬಳಿ ಅಸಲಿ ಗುರುತಿನ ಚೀಟಿ ಇದ್ದರೆ ಸಾಕು.
ಇದನ್ನೂ ಓದಿ: ಲಂಗು ಲಗಾಮು ತಪ್ಪಿದ ಎಐ ಏಜೆಂಟ್‌ಗಳು; ಸರ್ಕಾರಿ ವೆಬ್ಸೈಟ್ಗಳ ಮೇಲೆಯೇ ದಾಳಿ; ಕಂಗೆಟ್ಟ ಓಪನ್ಎಐ
ಟಿಕೆಟ್ ಕಾಯ್ದಿರಿಸಿದ ಹೆಸರಿಗೆ ಸೂಕ್ತ ಮತ್ತು ಮಾನ್ಯವಾದ ಗುರುತಿನ ಚೀಟಿಯನ್ನು ತೋರಿಸಲು ವಿಫಲವಾದರೆ, ಆ ಪ್ರಯಾಣಿಕನನ್ನು ಟಿಕೆಟ್ ಇಲ್ಲದ ಪ್ರಯಾಣ (Without Ticket) ಎಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ರೈಲ್ವೆ ನಿಯಮಾವಳಿಗಳ ಪ್ರಕಾರ ಪೂರ್ಣ ಪ್ರಯಾಣ ದರ ಹಾಗೂ ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ.
ಇಲ್ಲಿ ಟಿಟಿಇಗಳು ರೈಲ್ವೆ ಪಾಸ್, ರಿಸರ್ವೇಶನ್ ಕೋಟಾ ಬಳಸಿದ ಪ್ರಯಾಣಿಕರ ಟಿಕೆಟ್ ವಿವರ ತಪಾಸಿಸಲು ಆದ್ಯತೆ ಕೊಡುತ್ತಾರಾದರೂ, ಅಗತ್ಯಬಿದ್ದರೆ ಎಲ್ಲಾ ಪ್ರಯಾಣಿಕರಿಗೂ ಇದು ಅನ್ವಯ ಆಗುತ್ತದೆ. ಅಂದರೆ, ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಕೂಡ ತಮ್ಮ ಮೂಲ ಗುರುತಿನ ದಾಖಲೆಯನ್ನೂ ಜೊತೆಯಲ್ಲಿ ಕೊಂಡೊಯ್ಯುವುದು ಅವಶ್ಯಕವಾಗುತ್ತದೆ.
ತಟಿಟಿಇ (TTE) ತಪಾಸಣೆ ಪ್ರಕ್ರಿಯೆಯನ್ನು ಮತ್ತಷ್ಟು ಕಟ್ಟುನಿಟ್ಟಗೊಳಿಸಲಾಗಿದ್ದು, ಡಿಜಿಟಲ್ ಪರಿಶೀಲನಾ ಸಾಧನಗಳ ಮೂಲಕ ಪ್ರಯಾಣಿಕರ ವಿವರಗಳನ್ನು ಕ್ಷಣಾರ್ಧದಲ್ಲಿ ತಾಳೆ ನೋಡಲಾಗುತ್ತದೆ.
ಇದನ್ನೂ ಓದಿ: ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಸ್ಟೀಲ್ ಫ್ಯಾಕ್ಟರಿ; ಇದು ನಿರ್ಮಿಸುತ್ತಿರೋದು ಭಾರತೀಯ ಕಂಪನಿ
ಏಜೆಂಟ್ ಟಿಕೆಟ್ ದುರ್ಬಳಕೆಗೆ ತಡೆ: ಅನಧಿಕೃತ ಏಜೆಂಟ್‌ಗಳು ಅಥವಾ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳನ್ನು ಬಳಸಿ ಪ್ರಯಾಣಿಸುವುದನ್ನು ಸಂಪೂರ್ಣವಾಗಿ ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಪ್ರಯಾಣಿಕರು ಯಾವುದೇ ಕಿರಿಕಿರಿ ಅಥವಾ ದಂಡದ ತೊಂದರೆಯಿಂದ ಪಾರಾಗಲು ಪ್ರಯಾಣದ ಸಮಯದಲ್ಲಿ ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ಜೊತೆಯಲ್ಲಿಟ್ಟುಕೊಳ್ಳುವುದು ಅತ್ಯಗತ್ಯ.
ಭಾರತೀಯ ರೈಲ್ವೆ ಹೊಸ ಟಿಕೆಟ್ ನಿಯಮಗಳನ್ನು ರೂಪಿಸಿದೆಯಾ?
ಹೌದು, ಹಬ್ಬದ ಸೀಸನ್ ಎನ್ನಲಾದ ಅಕ್ಟೋಬರ್ ತಿಂಗಳಲ್ಲಿ ಟಿಕೆಟ್ ಚೆಕಿಂಗ್ ಅಭಿಯಾನ ಕೈಗೊಳ್ಳಲಾಗಿದೆ. ಪ್ರಯಾಣಿಕರ ಟಿಕೆಟ್ನ ಅಸಲಿಯತ್ತು ತಿಳಿಯಲು ಈ ಅಭಿಯಾನ ನಡೆಯುತ್ತಿದೆ.
ರೈಲ್ವೇಸ್ ಯಾವ ಟಿಕೆಟ್ ನಿಯಮಗಳನ್ನು ರೂಪಿಸಿದೆ?
ಪ್ರಯಾಣಿಕರು ಟಿಕೆಟ್ ಜೊತೆಗೆ ತಮ್ಮ ಆಧಾರ್ ಇತ್ಯಾದಿ ಯಾವುದಾದರೂ ಒಂದು ಅಸಲಿ ಗುರುತಿನ ಐಡಿ ಹೊಂದಿರಬೇಕು. ಅದರಲ್ಲೂ ರಿಯಾಯಿತಿ, ರಿಸರ್ವೇಶನ್ ಕೋಟಾ ಮತ್ತು ರೈಲ್ವೆ ಪಾಸ್ನಲ್ಲಿ ಪ್ರಯಾಣಿಸುವವರಿಗೆ ಇದು ಕಡ್ಡಾಯ.
ರೈಲ್ವೇಸ್ನ ಈ ನಿಯಮಗಳು ಯಾವಾಗ ಜಾರಿ?
ಅಕ್ಟೋಬರ್ 1ರಿಂದ 31ರವರೆಗೆ ಸ್ಪೆಷಲ್ ಡ್ರೈವ್ ಇರುತ್ತದೆ. ಅದಾದ ಬಳಿಕವೂ ನಿಯಮ ಮುಂದುವರಿಯುವ ಸಾಧ್ಯತೆ ಇಲ್ಲದಿಲ್ಲ.