ನವದೆಹಲಿ, ಮಾರ್ಚ್ 18: ಸತತ ಐದು ತಿಂಗಳು ಕುಸಿಯುತ್ತಾ ಬಂದಿರುವ ಭಾರತದ ಷೇರು ಮಾರುಕಟ್ಟೆ ಅಪರೂಪಕ್ಕೊಮ್ಮೆ ಏರಿಕೆ ಕಾಣುವಂತಾಗಿದೆ. ಅಂತಹ ಒಂದು ದಿನ ಇವತ್ತಿನದ್ದಾಗಿದ್ದು, ಪ್ರಮುಖ ಸೂಚ್ಯಂಕಗಳು ಲಾಭ ಮಾಡಿವೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಸೂಚ್ಯಂಕ (sensex index) ಇಂದು ಮಂಗಳವಾರ 900ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿ 75,000 ಅಂಕಗಳ ಗಡಿ ದಾಟಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ ಸೂಚ್ಯಂಕ 267 ಅಂಕ ಗಳಿಸಿ 22,776 ಮಟ್ಟ ಮುಟ್ಟಿದೆ. ಬಿಎಸ್ಇನಲ್ಲಿರುವ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ 4 ಲಕ್ಷ ಕೋಟಿ ರೂನಷ್ಟು ಹೆಚ್ಚಳವಾಗಿದೆ.
ಭಾರತದ ಷೇರು ಮಾರುಕಟ್ಟೆ ಇವತ್ತು ಮಂಗಳವಾರ ಗರಿಗೆದರಲು ಏನು? ಈ ಏರಿಕೆಯ ಹಾದಿ ಇನ್ಮುಂದೆ ಸ್ಥಿರವಾಗಿರುತ್ತದಾ? ಸತತ ಐದು ತಿಂಗಳು ಋಣಾತ್ಮಕವಾಗಿ ಅಂತ್ಯಗೊಂಡಿರುವ ನಿಫ್ಟಿ ಸೂಚ್ಯಂಕ, ಆರನೇ ತಿಂಗಳಲ್ಲಿ ಕರಡಿ ಹಿಡಿತದಿಂದ ತಪ್ಪಿಸಿಕೊಂಡು ಗೂಳಿ ಕಡೆಗೆ ಹೋಗುತ್ತಾ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಸದ್ಯಕ್ಕೆ ಕಷ್ಟ. ಇವತ್ತು ಷೇರು ಮಾರುಕಟ್ಟೆ ಗರಿಗೆದರಲು ಕೆಲ ಪ್ರಮುಖ ಕಾರಣಗಳನ್ನಂತೂ ಗುರುತಿಸಬಹುದು.
ಅಮೆರಿಕದ ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳು ಪ್ರಬಲವಾಗಿ ಬೆಳೆದಿವೆ. ಚೀನಾ, ಹಾಂಕಾಂಗ್, ಕೊರಿಯಾ, ಜಪಾನ್, ಆಸ್ಟ್ರೇಲಿಯಾ, ತೈವಾನ್ನ ಮಾರುಕಟ್ಟೆ ಇಂದು ಪಾಸಿಟಿವ್ ಆಗಿವೆ. ಭಾರತೀಯ ಮಾರುಕಟ್ಟೆಗೂ ಈ ಪಾಸಿಟಿವ್ ವೈಬ್ರೇಶನ್ ತಾಕಿರಬಹುದು.
ಇದನ್ನೂ ಓದಿ: ಸರ್ಕಾರಕ್ಕೆ ತೆರಿಗೆ ಸುಗ್ಗಿ; ನೇರ ತೆರಿಗೆ ಸಂಗ್ರಹ ಶೇ. 16.2 ಏರಿಕೆ; ಎಸ್ಟಿಟಿಯಲ್ಲೂ ಹೈಜಂಪ್
ಅಮೆರಿಕದ ಡಾಲರ್ ಕರೆನ್ಸಿ ಬಲ ತುಸು ಕುಂದಿದೆ. ಯೂರೋ ಹಾಗೂ ಇತರ ಪ್ರಮುಖ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಕಡಿಮೆ ಆಗಿದೆ. ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಮೌಲ್ಯ ಇಳಿದಿದೆ. ಕೆಲ ದಿನಗಳ ಹಿಂದೆ 110.17 ಇದ್ದ ಡಾಲರ್ ಇಂಡೆಕ್ಸ್ ಈಗ 103.44ಕ್ಕೆ ಇಳಿದಿದೆ. ಇದೇ ವೇಳೆ, ಇವತ್ತು ಭಾರತೀಯ ರುಪಾಯಿ ಮೌಲ್ಯ ಡಾಲರ್ ಎದುರು ತುಸು ಏರಿಕೆ ಕಂಡಿದೆ.
ಭಾರತದ ಷೇರು ಮಾರುಕಟ್ಟೆ ಸತತ ಐದು ತಿಂಗಳು ಕುಸಿದ ಪರಿಣಾಮ ಬಹಳ ಒಳ್ಳೆಯ ಷೇರುಗಳ ಬೆಲೆ ಕಡಿಮೆ ಆಗಿ, ಈಗ ಉತ್ತಮ ಮೌಲ್ಯದ ಸ್ಥಿತಿಯಲ್ಲಿವೆ. ಅದರಲ್ಲೂ ಲಾರ್ಕ್ ಕ್ಯಾಪ್ ಷೇರುಗಳು ಆಕರ್ಷಕ ಸ್ಥಿತಿಯಲ್ಲಿವೆ. ಮಾರುಕಟ್ಟೆಯಲ್ಲಿ ಹೂಡಿಕೆಗೆ ಇದು ಪ್ರಶಸ್ತ ಸಮಯ ಎನ್ನುತ್ತಾರೆ ತಜ್ಞರು.
ಅಭೂತಪೂರ್ವ ರೀತಿಯಲ್ಲಿ ತೆರಿಗೆ ಸಂಗ್ರಹ ಆಗಿರುವುದು, ಹಣದುಬ್ಬರ ಕಡಿಮೆ ಆಗಿರುವುದು, ಆರ್ಬಿಐಗೆ ರಿಪೋ ದರ ಕಡಿತಗೊಳಿಸುವ ಸಾಧ್ಯತೆ ಇರುವುದು, ಈ ಅಂಶಗಳು ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಿಸಿವೆ.
ಇದನ್ನೂ ಓದಿ: ಭಾರತೀಯ ರೈಲ್ವೆ ಗರಿಮೆ; ಯೂರೋಪ್, ಆಸ್ಟ್ರೇಲಿಯಾ, ಸೌದಿಗೆ ಭಾರತದಿಂದ ರೈಲ್ವೆ ಉಪಕರಣಗಳ ರಫ್ತು: ಅಶ್ವಿನಿ ವೈಷ್ಣವ್
ಪರಿಣಿತರೊಬ್ಬರು ನಿಫ್ಟಿಯ ತಾಂತ್ರಿಕ ಅಂಶವನ್ನು ಎತ್ತಿ ತೋರಿಸಿ, ಇದು ಮಾರುಕಟ್ಟೆ ಏರಿಕೆಯಾಗುವ ಸೂಚನೆ ಎಂದಿದ್ದಾರೆ. ಅವರ ಪ್ರಕಾರ, ನಿಫ್ಟಿ 22,350 ಹಾಗು ಸೆನ್ಸೆಕ್ಸ್ 73,800 ಅಂಕಗಳ ಮಟ್ಟಕ್ಕಿಂತ ಮೇಲೆಯೇ ಇದ್ದಲ್ಲಿ ಮಾರುಕಟ್ಟೆ ಮೇಲ್ಮುಖವಾಗಿ ಚಲಿಸುವ ಸಾಧ್ಯತೆ ದಟ್ಟವಾಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Tue, 18 March 25