
ನವದೆಹಲಿ, ಮೇ 17: ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ (west asia conflict) ಭಾರತದ ವಿದೇಶಿ ವ್ಯಾಪಾರ ವಲಯದಲ್ಲಿ ಮಹತ್ವದ ಬದಲಾವಣೆಯಾಗಿದೆ. ಮಾಧ್ಯಮ ವರದಿಯ ಪ್ರಕಾರ, ಯುಎಇ (UAE) ದೇಶವನ್ನು ಹಿಂದಿಕ್ಕಿ ಸಿಂಗಾಪುರವು ಈಗ ಭಾರತದ ಎರಡನೇ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿ ಹೊರಹೊಮ್ಮಿದೆ.
ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಯುದ್ಧದ ಪರಿಸ್ಥಿತಿ ಮತ್ತು ಮಾರ್ಚ್ ತಿಂಗಳಿನಿಂದ ಹಾರ್ಮುಜ್ ಜಲಸಂಧಿ (Strait of Hormuz) ಬಹುತೇಕ ಮುಚ್ಚಿರುವುದು ಜಾಗತಿಕ ಇಂಧನ ಮತ್ತು ಸರಕು ಸಾಗಣೆಗೆ ಭಾರಿ ಹೊಡೆತ ನೀಡಿದೆ. ಇರಾನ್ ಮತ್ತು ಒಮಾನ್ ನಡುವೆ ಇರುವ ಈ ಕಿರಿದಾದ ಸಮುದ್ರ ಮಾರ್ಗವು ಜಾಗತಿಕ ತೈಲ ಸಾಗಣೆಯ ಐದನೇ ಒಂದು ಭಾಗವನ್ನು ನಿಯಂತ್ರಿಸುತ್ತದೆ. ಆದರೆ ಯುದ್ಧದ ಕಾರಣದಿಂದಾಗಿ ಈ ಮಾರ್ಗದ ಮೂಲಕ ಹಡಗುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಈ ಬಿಕ್ಕಟ್ಟಿನಿಂದಾಗಿ ಪಶ್ಚಿಮ ಏಷ್ಯಾದ ದೇಶಗಳೊಂದಿಗೆ ವ್ಯಾಪಾರ ನಡೆಸಲು ತೊಂದರೆಯಾಗುತ್ತಿರುವುದರಿಂದ, ಭಾರತೀಯ ರಫ್ತುದಾರರು ಪರ್ಯಾಯ ಮಾರ್ಗಗಳನ್ನು ಹುಡುಕಲಾರಂಭಿಸಿದ್ದಾರೆ. ಇದರ ನೇರ ಪರಿಣಾಮವಾಗಿ ಭಾರತವು ಮುಕ್ತ ವ್ಯಾಪಾರ ಒಪ್ಪಂದ (FTA) ಹೊಂದಿರುವ ಎರಡು ಪ್ರಮುಖ ಸಾರಿಗೆ ಹಬ್‌ಗಳಾದ ಯುಎಇ ಮತ್ತು ಸಿಂಗಾಪುರ ನಡುವಿನ ವ್ಯಾಪಾರದ ಹರಿವಿನಲ್ಲಿ ಭಾರಿ ಪಲ್ಲಟವಾಗಿದೆ.
ಏಪ್ರಿಲ್ ತಿಂಗಳಿನಲ್ಲಿ ಭಾರತದಿಂದ ಸಿಂಗಾಪುರಕ್ಕೆ ನಡೆದ ರಫ್ತು ಪ್ರಮಾಣವು ಶೇಕಡಾ 180 ರಷ್ಟು ಭಾರಿ ಜಿಗಿತ ಕಂಡಿದ್ದು, 3.20 ಬಿಲಿಯನ್ ಡಾಲರ್ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು ಕೇವಲ 1.14 ಬಿಲಿಯನ್ ಡಾಲರ್ ಆಗಿತ್ತು. ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಸಿಂಗಾಪುರದ ರಫ್ತು ಮಾರುಕಟ್ಟೆಯಲ್ಲಿ ಬರೋಬ್ಬರಿ ಐದು ಪಟ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: ದಿ ಹೇಗ್‌ನಲ್ಲಿ 16 ಡಚ್ ಸಿಇಒಗಳನ್ನು ಭೇಟಿಯಾದ ಪ್ರಧಾನಿ ಮೋದಿ: ಏನಿದು ಒಪ್ಪಂದ? ಏನು ಚರ್ಚೆಯಾಯಿತು?
ಮತ್ತೊಂದೆಡೆ, ಯುಎಇ ದೇಶಕ್ಕೆ ಆಗುತ್ತಿದ್ದ ಭಾರತದ ರಫ್ತು ಪ್ರಮಾಣವು ಶೇಕಡಾ 36 ರಷ್ಟು ಕುಸಿದಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 3.43 ಬಿಲಿಯನ್ ಡಾಲರ್ ಇದ್ದ ರಫ್ತು, ಈ ಬಾರಿ 2.18 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿದೆ.
ಇದೇ ವೇಳೆ, ಭಾರತದ ಅತಿ ದೊಡ್ಡ ರಫ್ತು ದೇಶವಾಗಿ ಅಮೆರಿಕ (USA) ಎಂದಿನಂತೆ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.
ಸಾಂಪ್ರದಾಯಿಕ ಇಂಧನ ಪೂರೈಕೆ ಮಾರ್ಗಗಳು ಮುಚ್ಚಿ ಹೋಗಿರುವುದರಿಂದ ಭಾರತವು ಆಮದಿಗಾಗಿ ಬೇರೆ ಬೇರೆ ಮಾರುಕಟ್ಟೆಗಳನ್ನು ಶೋಧಿಸುತ್ತಿದೆ.
ಇಂಧನ ರಫ್ತು ಮಾಡುವ ದೇಶಗಳಾದ ಒಮಾನ್, ಪೆರು ಮತ್ತು ನೈಜೀರಿಯಾ ದೇಶಗಳು ಭಾರತದ ಟಾಪ್ 20 ಆಮದು ಮೂಲಗಳ ಪಟ್ಟಿಗೆ ಲಗ್ಗೆ ಇಟ್ಟಿವೆ. ಒಮಾನ್‌ನಿಂದ ಭಾರತಕ್ಕೆ ಆಗುವ ಆಮದು ಏಪ್ರಿಲ್‌ನಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, 1.48 ಬಿಲಿಯನ್ ಡಾಲರ್‌ಗೆ ತಲುಪಿದೆ.
ಕತಾರ್‌ನಿಂದ ಆಗುತ್ತಿದ್ದ ಆಮದು ಶೇಕಡಾ 47 ರಷ್ಟು ಕುಸಿದಿದ್ದರೆ, ಸೌದಿ ಅರೇಬಿಯಾದಿಂದ ಆಗುವ ಆಮದು ಏಪ್ರಿಲ್‌ನಲ್ಲಿ ಚೇತರಿಕೆ ಕಂಡು 3.85 ಬಿಲಿಯನ್ ಡಾಲರ್‌ಗೆ ತಲುಪಿದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯ ತಲೆನೋವೇ ಬೇಡ; ಆಯಿಲ್ ಪೈಪ್ಲೈನ್ ಯೋಜನೆ ಜಾರಿಗೆ ಯುಎಇ ಮುಂದು
ಮಧ್ಯಪ್ರಾಚ್ಯ ಯುದ್ಧದಿಂದಾಗಿ ಜಾಗತಿಕವಾಗಿ ಇಂಧನ ಬೆಲೆಗಳು ಗಗನಕ್ಕೇರಿವೆ. ಇದು ಭಾರತದ ಆಮದು ವೆಚ್ಚವನ್ನು ಹೆಚ್ಚಿಸಿದೆ ಮತ್ತು ರಫ್ತು ವಲಯದಲ್ಲಿ ಅನಿಶ್ಚಿತತೆ ಮೂಡಿಸಿದೆ. ಇದರ ನೇರ ಪರಿಣಾಮವಾಗಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಫೆಬ್ರವರಿ ಕೊನೆಯಿಂದ ರೂಪಾಯಿ ಮೌಲ್ಯವು ಶೇಕಡಾ 5.2 ರಷ್ಟು ಕುಸಿದಿದೆ.
ವಿದೇಶಿ ವಿನಿಮಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಇಂಧನ ಬಳಕೆಯನ್ನು ನಿಯಂತ್ರಿಸಲು ಭಾರತ ಸರ್ಕಾರವು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇತ್ತೀಚೆಗೆ ಚಿನ್ನ ಸೇರಿದಂತೆ ಅಮೂಲ್ಯ ಲೋಹಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ ಮತ್ತು ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಏರಿಕೆ ಮಾಡಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ