
ನವದೆಹಲಿ, ಏಪ್ರಿಲ್ 14: ಹಾಲಿವುಡ್ನ ಸ್ಟಾರ್ ವಾರ್ ಸರಣಿಯ ಸಿನಿಮಾಗಳನ್ನು (Star War movies) ನೀವು ನೋಡಿರಬಹುದು. ಅದರಲ್ಲಿ ಲೇಸರ್ ಬಳಸಿ ಪ್ರಹಾರ ಮಾಡುವ ದೃಶ್ಯಗಳು ಸರ್ವೇಸಾಮಾನ್ಯ. ಭವಿಷ್ಯದಲ್ಲಿ ಮನುಷ್ಯನ ಯುದ್ಧಾಸ್ತ್ರಗಳು ಹೇಗಿರುತ್ತವೆ ಎಂಬ ಕಲ್ಪನೆಗಳನ್ನು ಸ್ಟಾರ್ ವಾರ್ ಸಿನಿಮಾಗಳಲ್ಲಿ ಕಾಣುತ್ತೇವೆ. ಈಗ ಮನುಷ್ಯರು ಆ ಕಲ್ಪನೆಯನ್ನು ನಿಜಗೊಳಿಸುತ್ತಿದ್ದಾರೆ. ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳ ಸೇನೆಗಳ ಬಳಿ ಲೇಸರ್ ವೆಪನ್ಗಳಿವೆ. ಇವು ಮೇಲೆ ಹಾರಾಡುವ ಡ್ರೋನ್ಗಳನ್ನು ಕ್ಷಣ ಮಾತ್ರದಲ್ಲಿ ನಿಷ್ಕ್ರಿಯಗೊಳಿಸಬಲ್ಲುವು. ಈ ಲೇಸರ್ ಶಕ್ತ ಮಿಲಿಟರಿಗಳ ಸಾಲಿಗೆ ಭಾರತವೂ ಸೇರ್ಪಡೆಯಾಗುತ್ತಿದೆ. ನಿನ್ನೆ ಭಾನುವಾರ ಭಾರತವು ಲೇಸರ್ ಶಕ್ತ ವೆಪನ್ ಸಿಸ್ಟಂ (Laser based weapon system) ಅನ್ನು ಯಶಸ್ವಿಯಾಗಿ ಪ್ರಯೋಗ ಮಾಡಿದೆ. ಇದು ವೇಗವಾಗಿ ದಾಳಿ ಮಾಡಬಲ್ಲ ಸ್ವಾರ್ಮ್ ಡ್ರೋನ್ಗಳನ್ನು ನಿಷ್ಕ್ರಿಯಗೊಳಿಸಬಲ್ಲುದು ಎಂದು ಹೇಳಲಾಗುತ್ತಿದೆ.
ಹೈದರಾಬಾದ್ನಲ್ಲಿರುವ ಡಿಆರ್ಡಿಒನ ಹೈ ಎನರ್ಜಿ ಸಿಸ್ಟಮ್ಸ್ ಅಂಡ್ ಸೈನ್ಸಸ್ (ಚೆಸ್) ಈ ಲೇಸರ್ ಆಧಾರಿತ ಶಸ್ತ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ಕಾರ್ಯದಲ್ಲಿ ಭಾರತದ ಹಲವು ಶಿಕ್ಷಣ ಸಂಸ್ಥೆಗಳು ಹಾಗು ಉದ್ದಿಮೆಗಳು ನೆರವಾಗಿವೆ. ಇದು Mk-II(A) ಲೇಸರ್- ಡೈರೆಕ್ಟೆಡ್ ಎನರ್ಜಿ ವೆಪನ್ (DEW) ಸಿಸ್ಟಂ. ಆಂಧ್ರದ ಕರ್ನೂಲ್ನಲ್ಲಿರುವ ನ್ಯಾಷನಲ್ ಓಪನ್ ಏರ್ ರೇಂಜ್ನಲ್ಲಿ ಭಾನುವಾರ ಸಂಜೆ ಮೊದಲ ಪ್ರಯೋಗ ಮಾಡಿದ್ದು, ಅದು ಯಶಸ್ವಿಯಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಸ್ವಂತವಾಗಿ 25 ಚಿಪ್ಸೆಟ್ಗಳ ತಯಾರಿಕೆ; ಸರ್ವಿಸ್ನಿಂದ ಪ್ರಾಡಕ್ಟ್ ದೇಶವಾಗಿ ಬದಲಾಗುತ್ತಿರುವ ಭಾರತ
ಈ ಲೇಸರ್ ವೆಪನ್ ಸಿಸ್ಟಂ ಕೇವಲ ಡ್ರೋನ್ ಅಲ್ಲ, ಕ್ಷಿಪಣಿ, ಫಿಕ್ಸೆಡ್ ವಿಂಗ್ ಏರ್ಕ್ರಾಫ್ಟ್ ಇತ್ಯಾದಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಡಿಆರ್ಡಿಒ ಛೇರ್ಮನ್ ಸಮೀರ್ ವಿ ಕಾಮತ್ ಪ್ರಕಾರ, ಈ ರೀತಿಯ ಲೇಸರ್ ವೆಪನ್ ಸಿಸ್ಟಂ ಹೊಂದಿರುವುದು ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರವಂತೆ. ಇಸ್ರೇಲ್ ಕೂಡ ಇಂಥದ್ದನ್ನು ಅಭಿವೃದ್ಧಿಪಡಿಸುತ್ತಿದೆ. ಇಡೀ ವಿಶ್ವದಲ್ಲಿ ಭಾರತವೂ ಸೇರಿದಂತೆ ಈ ವೆಪನ್ ಸಿಸ್ಟಂ ಹೊಂದಿರುವುದು ನಾಲ್ಕೈದು ದೇಶಗಳು ಮಾತ್ರವೇ.
ಲೇಸರ್ ಆಧಾರಿತ ಅಸ್ತ್ರ ವ್ಯವಸ್ಥೆಯು ಹೊಸ ಹೈ ಎನರ್ಜಿ ಸಿಸ್ಟಂಗಳಲ್ಲಿ ಮೊದಲ ಹಂತ ಮಾತ್ರವೇ. ಡಿಆರ್ಡಿಒ ಇನ್ನೂ ಬೇರೆ ಬೇರೆ ವಿಧದ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ. ಹೈ ಎನರ್ಜಿ ಮೈಕ್ರೋವೇವ್, ಎಲೆಕ್ಟ್ರೋ ಮ್ಯಾಗ್ನೆಟಿಕ್ ಪಲ್ಸ್ ಇತ್ಯಾದಿ ಶಸ್ತ್ರಾಸ್ತ್ರಗಳನ್ನು ಡಿಆರ್ಡಿಒ ತಯಾರಿಸುತ್ತಿದೆ. ಡಿಆರ್ಡಿಒ ಛೇರ್ಮನ್ ಪ್ರಕಾರ, ಹಲವು ತಂತ್ರಜ್ಞಾನಗಳನ್ನು ಭಾರತದಲ್ಲಿ ಸಂಶೋಧಿಸಲಾಗುತ್ತಿದ್ದು, ಇವುಗಳಿಂದ ಭಾರತಕ್ಕೆ ಸ್ಟಾರ್ ವಾರ್ಸ್ ಸಾಮರ್ಥ್ಯ ಸಿಗುತ್ತದಂತೆ.
ಇದನ್ನೂ ಓದಿ: ಬೆಲ್ಜಿಯಂನಲ್ಲಿ ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬಂಧನ
ಡಿಆರ್ಡಿಒ ಅಭಿವೃದ್ಧಿಪಡಿಸಿದ ಲೇಸರ್ ಡಿವ್ ಸಿಸ್ಟಂನಲ್ಲಿ ರಾಡಾರ್ ಅಥವಾ ಅಂತರ್ಗವಾದ ಎಲೆಕ್ಟ್ರೋ ಆಪ್ಟಿಕ್ ಸಿಸ್ಟಂ ಇತುತ್ತದೆ. ಇದು ಡ್ರೋನ್ ಮೇಲೆ ಪ್ರಬಲವಾದ ಲೇಸರ್ ಕಿರಣಗಳನ್ನು ಹಾಯಿಸುತ್ತದೆ. ಡ್ರೋನ್ಗಳ ಸೆನ್ಸಾರ್ ಮತ್ತು ಆಂಟೆನಾಗಳನ್ನು ಈ ಲೇಸರ್ ಬೀಮ್ ನಿಷ್ಕ್ರಿಯಗೊಳಿಸುತ್ತದೆ. ಈ ಮೂಲಕ ಡ್ರೋನ್ ತನ್ನ ಗುರಿ ಕಳೆದುಕೊಳ್ಳುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:43 am, Mon, 14 April 25