Cleartrip acquisition by Flipkart: ಕ್ಲಿಯರ್ಟ್ರಿಪ್ನಲ್ಲಿ ಶೇಕಡಾ 100ರಷ್ಟು ಷೇರಿನ ಪಾಲು ಖರೀದಿ ಘೋಷಿಸಿದ ಫ್ಲಿಪ್ಕಾರ್ಟ್
ಫ್ಲಿಪ್ಕಾರ್ಟ್ ಇ ಕಾಮರ್ಸ್ ಮಾರ್ಕೆಟ್ಪ್ಲೇಸ್ನಿಂದ ಕ್ಲಿಯರ್ಟ್ರಿಪ್ನಲ್ಲಿ ಶೇಕಡಾ 100ರಷ್ಟು ಷೇರು ಪಾಲಿನ ಪ್ರಸ್ತಾವಿತ ಖರೀದಿ ಬಗ್ಗೆ ಘೋಷಣೆ ಮಾಡಲಾಗಿದೆ. ಕ್ಲಿಯರ್ಟ್ರಿಪ್ ಪ್ರತ್ಯೇಕ ಬ್ರ್ಯಾಂಡ್ ಆಗಿಯೇ ಮುಂದುವರಿಯಲಿದೆ.
ಪ್ರಮುಖ ಆನ್ಲೈನ್ ಟ್ರಾವೆಲ್ ಟೆಕ್ನಾಲಜಿ ಕಂಪೆನಿ ಕ್ಲಿಯರ್ಟ್ರಿಪ್ ಪ್ರಸ್ತಾವಿತ ಖರೀದಿ ಬಗ್ಗೆ ಏಪ್ರಿಲ್ 15, 2021ರಂದು ಭಾರತದ ದೇಶೀ ಇ- ಕಾಮರ್ಸ್ ಮಾರ್ಕೆಟ್ಪ್ಲೇಸ್ ಫ್ಲಿಪ್ಕಾರ್ಟ್ ಘೋಷಣೆ ಮಾಡಿದೆ. ಗ್ರಾಹಕರಿಗೆ ಡಿಜಿಟಲ್ ಕಾಮರ್ಸ್ ಆಫರ್ ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಂಪೆನಿಯ ಹೂಡಿಕೆ ಇನ್ನಷ್ಟು ವಿಸ್ತರಣೆ ಮಾಡುವುದಾಗಿ, ಕ್ಲಿಯರ್ಟ್ರಿಪ್ನಲ್ಲಿ ಶೇಕಡಾ 100ರಷ್ಟು ಷೇರಿನ ಪಾಲು ಖರೀದಿ ಮಾಡುವುದಾಗಿ ಘೋಷಣೆ ಮಾಡಿದೆ. ಒಪ್ಪಂದದ ಷರತ್ತಿನ ಪ್ರಕಾರ, ಕ್ಲಿಯರ್ಟ್ರಿಪ್ ಕಾರ್ಯನಿರ್ವಹಣೆಯನ್ನು ಫ್ಲಿಪ್ಕಾರ್ಟ್ ಖರೀದಿಸಲಿದೆ. ಆದರೆ ಕ್ಲಿಯರ್ಟ್ರಿಪ್ ಪ್ರತ್ಯೇಕ ಬ್ರ್ಯಾಂಡ್ ಆಗಿ ಕಾರ್ಯ ನಿರ್ವಹಿಸಲಿದೆ. ಗ್ರಾಹಕರಿಗೆ ಪ್ರವಾಸವನ್ನು ಸರಳ ಮಾಡುವ ಕಾರಣಕ್ಕೆ ಫ್ಲಿಪ್ಕಾರ್ಟ್ನಿಂದ ತಂತ್ರಜ್ಞಾನ ಅಭಿವೃದ್ಧಿ ಮಾಡಲಾಗುತ್ತದೆ ಹಾಗೂ ಎಲ್ಲ ಸಿಬ್ಬಂದಿಯನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ.
ಫ್ಲಿಪ್ಕಾರ್ಟ್ ಸಮೂಹದ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಮಾತನಾಡಿ, ಡಿಜಿಟಲ್ ಕಾಮರ್ಸ್ ಮೂಲಕ ಗ್ರಾಹಕರ ಅನುಭವವನ್ನು ಬದಲಾವಣೆ ಮಾಡುವುದಕ್ಕೆ ಫ್ಲಿಪ್ಕಾರ್ಟ್ ಬದ್ಧವಾಗಿದೆ. ಹಲವು ಗ್ರಾಹಕರಿಗೆ ಪ್ರವಾಸಕ್ಕೆ ಪರ್ಯಾಯ ಹೆಸರೇ ಕ್ಲಿಯರ್ಟ್ರಿಪ್. ನಾವು ವೈವಿಧ್ಯಪೂರ್ಣವಾಗಿದ್ದು, ಬೆಳವಣಿಗೆಯ ಹೊಸ ಸಾಧ್ಯತೆ ಕಡೆ ನೋಡುತ್ತಿದ್ದೇವೆ. ಈ ಹೂಡಿಕೆ ಮೂಲಕವಾಗಿ ನಮ್ಮ ಗ್ರಾಹಕರಿಗೆ ಅಗಾಧ ಪ್ರಮಾಣದ ಸೇವೆ ಒದಗಿಸಲು ಬಲಗೊಂಡಂತೆ ಆಗುತ್ತದೆ. ಕ್ಲಿಯರ್ಟ್ರಿಪ್ ತಂಡವನ್ನು ಅವರ ಆಳವಾದ ಜ್ಞಾನ ಹಾಗೂ ತಾಂತ್ರಿಕ ಸಾಮರ್ಥ್ಯದೊಂದಿಗೆ ಫ್ಲಿಪ್ಕಾರ್ಟ್ ಸಮೂಹಕ್ಕೆ ಸ್ವಾಗತಿಸುತ್ತೇವೆ. ನಾವ ಒಟ್ಟಾಗಿ ಗ್ರಾಹಕರಿಗೆ ಉತ್ತಮ ಮೌಲ್ಯ ಹಾಗೂ ಪ್ರಯಾಣದ ಅನುಭವ ಒದಗಿಸಲು ಎದುರು ನೋಡುತ್ತೇವೆ ಎಂದಿದ್ದಾರೆ.
ಕ್ಲಿಯರ್ಟ್ರಿಪ್ ಸಹ- ಸಂಸ್ಥಾಪಕ ಮತ್ತು ಸಿಇಒ ಸ್ಟುವರ್ಟ್ ಕ್ರಿಗ್ಟನ್ ಮಾತನಾಡಿ, ನಮ್ಮ ಗ್ರಾಹಕರಿಗೆ ತಂತ್ರಜ್ಞಾನದ ಸಹಾಯದ ಮೂಲಕ ಪ್ರವಾಸ ಅನುಭವವನ್ನು ಸರಳಗೊಳಿಸುವಲ್ಲಿ ಕ್ಲಿಯರ್ಟ್ರಿಪ್ ಮುಂಚೂಣಿಯಲ್ಲಿದೆ. ಈ ರೀತಿ ಪ್ರಾಡಕ್ಟ್ ಆಧಾರಿತ ಗಮನವು ಗ್ರಾಹಕರಿಗೆ ನಮ್ಮನ್ನು ಆದ್ಯತೆಯ ಪ್ರಯಾಣ ಸಹಭಾಗಿಗಳಾಗಿ ಮಾಡುತ್ತದೆ. ಫ್ಲಿಪ್ಕಾರ್ಟ್ ಕುಟುಂಬದ ಭಾಗಿಗಳಾಗಿರುವುದಕ್ಕೆ ನಮಗೆ ಸಂತೋಷವಾಗಿದೆ. ಈಗಿನ ಸಹಭಾಗಿತ್ವದಿಂದ ನಮ್ಮ ಗ್ರಾಹಕರು ಮತ್ತು ಪ್ರವಾಸ ವಲಯದಲ್ಲಿ ಆಗುವ ಒಟ್ಟಾರೆ ಸಕಾರಾತ್ಮಕ ಬದಲಾವಣೆ ಬಗ್ಗೆ ಸಂಭ್ರಮದಿಂದ ಇದ್ದೇವೆ ಎಂದಿದ್ದಾರೆ.
ಅಂದಹಾಗೆ, ಫ್ಲಿಪ್ಕಾರ್ಟ್ ಮತ್ತು ಕ್ಲಿಯರ್ಟ್ರಿಪ್ ಮಧ್ಯದ ವ್ಯವಹಾರವು ನಿಯಂತ್ರಕರ ಅನುಮತಿ ಮೇಲೆ ಅವಲಂಬಿತವಾಗಿದೆ.
ಇದನ್ನೂ ಓದಿ: ಭಾರತದ ಈ ಇಬ್ಬರು ಶ್ರೀಮಂತರು ಒಂದೇ ದಿನದಲ್ಲಿ ಕಳೆದುಕೊಂಡಿದ್ದು ಕರ್ನಾಟಕ ಬಜೆಟ್ ಗಾತ್ರದ ಎರಡು ಪಟ್ಟಿನ ಮೊತ್ತ
(Flipkart announced 100% share purchase in Cleartrip on April 15, 2021.)