ಮೂಲಸೌಕರ್ಯ ಯೋಜನೆಗಳು
Image Credit source: PTI
ನವದೆಹಲಿ, ಸೆಪ್ಟೆಂಬರ್ 24: ಇವತ್ತು ಕನೆಕ್ಟಿವಿಟಿ ಎನ್ನುವುದು ದೂರದ ಲೆಕ್ಕಕ್ಕಿಂತ ಹೆಚ್ಚಾಗಿ ಪ್ರಯಾಣದ ಸಮಯ ಎಷ್ಟು ಎಂಬುದನ್ನು ಪರಿಗಣಿಸುವುದು ಸಮರ್ಪಕ ಎನಿಸುತ್ತದೆ. ಕೇಂದ್ರ ಸರ್ಕಾರದ ಪತ್ರಿಕಾ ಮಾಹಿತಿ ಕಾರ್ಯಾಲಯ (PIB) ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ, ದೇಶಾದ್ಯಂತ ನಿರ್ಮಿಸಲಾಗುತ್ತಿರುವ ಹೊಸ ಸೇತುವೆಗಳು, ಸುರಂಗ ಮಾರ್ಗಗಳು (Tunnels), ಎಕ್ಸ್‌ಪ್ರೆಸ್‌ವೇಗಳು ಮತ್ತು ವಂದೇ ಭಾರತ್ ರೈಲುಗಳಿಂದಾಗಿ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತಿವೆ. ಪ್ರಯಾಣದ ಸಮಯ ತಗ್ಗಿರುವುದು ಭಾರತದ ಆಧುನಿಕ ಮೂಲಸೌಕರ್ಯದ ಯಶಸ್ಸಿನ ದ್ಯೋತಕವೆನಿಸುತ್ತದೆ.
ಕೇಂದ್ರ ಸರ್ಕಾರ ಕೈಗೊಂಡಿರುವ ವಿವಿಧ ಮೂಲಸೌಕರ್ಯ ಯೋಜನೆಗಳು ಹಾಗೂ ಅವುಗಳಿಂದ ಪ್ರಯಾಣದ ಅವಧಿ ಎಷ್ಟು ಕಡಿಮೆ ಆಗಿದೆ ಅಥವಾ ಆಗಲಿದೆ, ಈ ಕುತೂಹಲಕಾರಿ ಮಾಹಿತಿ ಇಲ್ಲಿದೆ:
ಪ್ರಮುಖ ಸೇತುವೆಗಳು ಮತ್ತು ಸುರಂಗಗಳು
- ಅಟಲ್ ಸೇತು (ಮಹಾರಾಷ್ಟ್ರ): ಮುಂಬೈ ಮತ್ತು ನವಿ ಮುಂಬೈ ನಡುವಿನ ಪ್ರಯಾಣದ ಅವಧಿ 2 ಗಂಟೆಯಿಂದ ಕೇವಲ 20 ನಿಮಿಷಕ್ಕೆ ಇಳಿಕೆಯಾಗಿದೆ.
- ಭೂಪೇನ್ ಹಜಾರಿಕಾ ಸೇತು (ಅಸ್ಸಾಂ – ಅರುಣಾಚಲ ಪ್ರದೇಶ): ರೂಪಾಯಿ (Rupai) ಮತ್ತು ಮೇಕಾ/ರೋಯಿಂಗ್ ನಡುವಿನ ಪ್ರಯಾಣ ಸಮಯ ಈ ಮೊದಲು ಬರೋಬ್ಬರಿ 6 ಗಂಟೆ ಆಗುತ್ತಿತ್ತು. ಈ ಸೇತುವೆ ನಿರ್ಮಾಣವಾದ ಬಳಿಕ ಆ ಅವಧಿ 1 ಗಂಟೆಗೆ ಇಳಿಕೆಯಾಗಿದೆ. ಅಂದರೆ, ಪ್ರಯಾಣದ ಸಮಯದಲ್ಲಿ 5 ಗಂಟೆ ಉಳಿತಾಯವಾಗುತ್ತಿದೆ.
- ಕೋಸಿ ರೈಲ್ ಮಹಾಸೇತು (ಬಿಹಾರ): ನಿರ್ಮಲಿ ಮತ್ತು ಸರೈಗಢ ನಡುವಿನ ಪ್ರಯಾಣದ ಅವಧಿ ಈಗ ಕೇವಲ 30 ನಿಮಿಷ ಇದೆ. ಈ ಸೇತುವೆ ನಿರ್ಮಿಸುವ ಮೊದಲು ಈ ಮಾರ್ಗದಲ್ಲಿ ಸಂಚರಿಸಲು ಬರೋಬ್ಬರಿ 8 ಗಂಟೆ ಹಿಡಿಯುತ್ತಿತ್ತು.
- ಅಟಲ್ ಟನಲ್ (ಹಿಮಾಚಲ ಪ್ರದೇಶ): 9.02 ಕಿ.ಮೀ ಉದ್ದದ ಈ ಸುರಂಗವು ರೋಹ್ಟಂಗ್ ಪಾಸ್ ಅನ್ನು ಉಪೇಕ್ಷಿಸಿ, ಮನಾಲಿ-ಸರ್ಚು ಅಂತರವನ್ನು 46 ಕಿ.ಮೀ ನಷ್ಟು ತಗ್ಗಿಸುತ್ತದೆ. ಪ್ರಯಾಣದ ಅವಧಿಯನ್ನು 4-5 ಗಂಟೆಗಳಷ್ಟು ಕಡಿಮೆಗೊಳ್ಳುತ್ತದೆ.
ಇದನ್ನೂ ಓದಿ: ಭಾರತದ ಜಿಡಿಪಿ ಬೆಳವಣಿಗೆ ಬಗ್ಗೆ ಹೆಚ್ಚಿದ ಭರವಸೆ; ಫಿಚ್ ಶೇ. 6.9, ಎಸ್&ಪಿ ಶೇ 7, ಒಇಸಿಡಿ ಶೇ. 7.1 ವೃದ್ಧಿಯ ಅಂದಾಜು
ಎಕ್ಸ್‌ಪ್ರೆಸ್‌ವೇಗಳು ಮತ್ತು ಆರ್ಥಿಕ ಕಾರಿಡಾರ್‌ಗಳು
- ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: 118 ಕಿ.ಮೀ ಉದ್ದದ ಈ ರಸ್ತೆಯಿಂದಾಗಿ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣ ಸಮಯ ಬಹಳ ಕಡಿಮೆಯಾಗಿದೆ. ಈ ಮೊದಲು ಬೆಂಗಳೂರಿಂದ ಮೈಸೂರಿಗೆ ಹೋಗಲು 3 ಗಂಟೆ ಬೇಕಿತ್ತು. ಈ ಎಕ್ಸ್ಪ್ರೆಸ್ವೇನಲ್ಲಿ ಹೋದರೆ ಕೇವಲ 75 ನಿಮಿಷಗಳಿಗೆ ತಲುಪಬಹುದು.
- ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ: ಈ ಬೃಹತ್ ರಸ್ತೆಯು ದೆಹಲಿ ಮತ್ತು ಮುಂಬೈ ನಡುವಿನ ಪ್ರಯಾಣ ಸಮಯವನ್ನು 33 ಗಂಟೆಗಳಿಂದ ಕೇವಲ 12 ಗಂಟೆಗೆ ಇಳಿಸಲಿದೆ.
- ದೆಹಲಿ-ಮೀರಟ್ ಎಕ್ಸ್‌ಪ್ರೆಸ್‌ವೇ: 82 ಕಿ.ಮೀ ಉದ್ದದ ಯೋಜನೆಯು ದೆಹಲಿ ಮತ್ತು ಮೀರಟ್ ನಡುವಿನ ಪ್ರಯಾಣ ಸಮಯವನ್ನು 2.5 ಗಂಟೆಯಿಂದ 50 ನಿಮಿಷಕ್ಕೆ ಇಳಿಸಿದೆ.
- ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್: ದೆಹಲಿಯಿಂದ ಡೆಹ್ರಾಡೂನ್‌ಗೆ ಇದ್ದ 6 ಗಂಟೆಗಳ ಪ್ರಯಾಣ ಸಮಯ 2.5 ಗಂಟೆಗೆ ತಗ್ಗಲಿದೆ.
ಇದನ್ನೂ ಓದಿ: ಹುರುನ್ ಇಂಡಿಯಾ ರಿಚ್ ಲಿಸ್ಟ್ 2026: ಮುಕೇಶ್ ಅಂಬಾನಿ ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಗೌತಮ್ ಅದಾನಿ
ಭಾರತೀಯ ರೈಲ್ವೆ ಮತ್ತು ಹೈ-ಸ್ಪೀಡ್ ರೈಲುಗಳು
- ವಂದೇ ಭಾರತ್ ಎಕ್ಸ್‌ಪ್ರೆಸ್: ದೆಹಲಿ-ವಾರಣಾಸಿ, ಎರ್ನಾಕುಲಂ-ಬೆಂಗಳೂರು (8 ಗಂಟೆ 40 ನಿಮಿಷಗಳಲ್ಲಿ ಸಂಪರ್ಕ) ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಹಳೆಯ ರೈಲುಗಳಿಗಿಂತ 40% ರಿಂದ 50% ವೇಗವಾಗಿ ಪ್ರಯಾಣಿಕರನ್ನು ತಲುಪಿಸುತ್ತಿವೆ.
- ವಂದೇ ಭಾರತ್ ಸ್ಲೀಪರ್ (ಹೌರಾ-ಗೌಹಾಟಿ): ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು 16 ಹವಾನಿಯಂತ್ರಿತ ಬೋಗಿಗಳನ್ನು ಹೊಂದಿದ್ದು, ಪ್ರಯಾಣದ ಸಮಯದಲ್ಲಿ ಸುಮಾರು 3 ಗಂಟೆ ಉಳಿಸುತ್ತದೆ.
- ಬುಲೆಟ್ ಟ್ರೈನ್ (ಮುಂಬೈ-ಅಹಮದಾಬಾದ್): 508 ಕಿ.ಮೀ ಉದ್ದದ ಹೈ-ಸ್ಪೀಡ್ ರೈಲು ಕಾರಿಡಾರ್ ಮುಂಬೈ ಮತ್ತು ಅಹಮದಾಬಾದ್ ನಡುವಿನ 8-9 ಗಂಟೆಗಳ ರಸ್ತೆ ಪ್ರಯಾಣವನ್ನು ಕೇವಲ 1 ಗಂಟೆ 58 ನಿಮಿಷಕ್ಕೆ ತಗ್ಗಿಸಲಿದೆ. ಈ ಬುಲೆಟ್ ರೈಲು 2027ರ ಆಗಸ್ಟ್ನೊಳಗೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ.
- ಚೆನ್ನೈ-ಬೆಂಗಳೂರು ಹಾಗೂ ಬೆಂಗಳೂರು-ಹೈದರಾಬಾದ್ ಬುಲೆಟ್ ಟ್ರೈನ್ ಯೋಜನೆ: ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ನೂತನ ಹೈ-ಸ್ಪೀಡ್ ಕಾರಿಡಾರ್‌ಗಳ ಅಡಿಯಲ್ಲಿ ಚೆನ್ನೈ-ಬೆಂಗಳೂರು ನಡುವೆ ಕೇವಲ 73 ನಿಮಿಷ ಹಾಗೂ ಬೆಂಗಳೂರು-ಹೈದರಾಬಾದ್ ನಡುವೆ ಕೇವಲ 2 ಗಂಟೆಗಳಲ್ಲಿ ಪ್ರಯಾಣಿಸಬಹುದು.
ಈ ಯೋಜನೆಗಳು ಭಾರತದ ವಿವಿಧ ಪ್ರಾಂತ್ಯಗಳ ನಡುವಿನ ಅಂತರವನ್ನು ಕುಗ್ಗಿಸಿ, ಜಿಡಿಪಿ ಮತ್ತು ಆರ್ಥಿಕ ವೃದ್ಧಿಗೆ ಹೊಸ ವೇಗವನ್ನು ತಂದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ