Indigo Fuel Charge: ಅಗ್ಗದ ವಿಮಾನ ಪ್ರಯಾಣ ಸೇವೆ ನೀಡುವ ಇಂಡಿಗೋದಲ್ಲಿ ಟಿಕೆಟ್ ಬೆಲೆ ಇನ್ನು ದುಬಾರಿ; ಇಲ್ಲಿದೆ ನೂತನ ದರಗಳು
Indigo Airlines flight ticket price: ಭಾರತದ ಬಜೆಟ್ ಏರ್ಲೈನ್ಸ್ ಎನಿಸಿರುವ ಇಂಡಿಗೋ ಏರ್ಲೈನ್ಸ್ ತನ್ನ ಪ್ರಯಾಣಿಕರಿಗೆ 1,000 ರೂವರೆಗೆ ಇಂಧನ ಶುಲ್ಕ ವಿಧಿಸುತ್ತಿದೆ. ಎಟಿಎಫ್ ಬೆಲೆಗಳು ಕಳೆದ ಮೂರು ತಿಂಗಳಿಂದ ಸತತವಾಗಿ ಹೆಚ್ಚಿರುವುದರಿಂದ ಅನಿವಾರ್ಯವಾಗಿ ಫುಯೆಲ್ ಚಾರ್ಜ್ ಹೇರಲಾಗುತ್ತಿದೆ. ಇದರಿಂದ ಇಂಡಿಗೋ ಏರ್ಲೈನ್ಸ್ ಪ್ರಯಾಣಿಕರಿಗೆ ಟಿಕೆಟ್ ಬೆಲೆ 1,000 ರೂವರೆಗೂ ಹೆಚ್ಚಾಗಿದೆ. ಹಬ್ಬದ ಸೀಸನ್ನಲ್ಲಿ ವಿಮಾನ ಪ್ರಯಾಣಿಕರಿಗೆ ಸಿಕ್ಕ ಶಾಕಿಂಗ್ ಸುದ್ದಿ ಇದು.
ನವದೆಹಲಿ, ಅಕ್ಟೋಬರ್ 6: ಹಬ್ಬದ ಸೀಸನ್ನಲ್ಲಿ ವಿಮಾನ ಪ್ರಯಾಣಿಕರಿಗೆ ಕಹಿ ಸುದ್ದಿ ಸಿಕ್ಕಿದೆ. ಕಡಿಮೆ ಬೆಲೆಗೆ ವಿಮಾನ ಸೇವೆ ಒದಗಿಸುವ ಇಂಡಿಗೋ ಏರ್ಲೈನ್ಸ್ ಸಂಸ್ಥೆಯ (Indigo Airlines) ಎಲ್ಲಾ ಮಾರ್ಗಗಳಿಗೂ ಪ್ರಯಾಣ ಟಿಕೆಟ್ ಬೆಲೆ ಹೆಚ್ಚಳವಾಗಿದೆ. ಸಂಸ್ಥೆಯು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನ ಟಿಕೆಟ್ ಮೇಲೆ ಇಂಧನ ಶುಲ್ಕ (Fuel Charge) ಜಾರಿಗೆ ತಂದಿದೆ. ನಿನ್ನೆ ಈ ಬಗ್ಗೆ ಘೋಷಣೆ ಬಂದಿದ್ದು, ಇಂದು (ಅಕ್ಟೋಬರ್ 6) ಹೊಸ ದರಗಳು ಜಾರಿಗೆ ಬಂದಿವೆ.
ಇಂಧನ ಶುಲ್ಕ ವಿಧಿಸುತ್ತಿರುವ ಕಾರಣಕ್ಕೆ ಇಂಡಿಗೋ ಏರ್ಲೈನ್ಸ್ನ ವಿಮಾನ ಪ್ರಯಾಣದ ಟಿಕೆಟ್ ಬೆಲೆ 300 ರೂನಿಂದ ಆರಂಭವಾಗಿ 1,000 ರೂವರೆಗೂ ಹೆಚ್ಚಿದೆ. ವಿಮಾನಕ್ಕೆ ಬಳಸುವ ಎಟಿಎಫ್ ಇಂಧನದ ಬೆಲೆ ಇತ್ತೀಚೆಗೆ ಬಹಳ ದೊಡ್ಡ ಪ್ರಮಾಣದಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ ಇಂಡಿಗೋ ಏರ್ಲೈನ್ಸ್ ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ. ಕಳೆದ ಮೂರು ತಿಂಗಳಲ್ಲಿ ಸತತವಾಗಿ ಜೆಟ್ ಇಂಧನ (ಎಟಿಎಫ್) ಬೆಲೆ ಏರಿಕೆ ಆಗಿದೆ.
ಯಾವುದೇ ಏರ್ಲೈನ್ಸ್ನ ವಿಮಾನ ವೆಚ್ಚದಲ್ಲಿ ಬಹುಪಾಲು ಇಂಧನಕ್ಕೇ ವ್ಯಯವಾಗುತ್ತದೆ. ಈ ಕಾರಣಕ್ಕೆ ಏರ್ಲೈನ್ಸ್ ಕಂಪನಿಗಳು ದರ ಹೆಚ್ಚಿಸುವುದು ಅನಿರೀಕ್ಷಿತವೇನಲ್ಲ.
ಇಂಡಿಗೋ ಏರ್ಲೈನ್ಸ್ ವಿಮಾನ ಪ್ರಯಾಣಿಕರಿಗೆ ಇಂಧನ ಶುಲ್ಕ
500 ಕಿಮೀವರೆಗೂ: 300 ರೂ
501ರಿಂದ 1,000 ಕಿಮೀ: 400 ರೂ
1,001ರಿಂದ 1,500 ಕಿಮೀ: 550 ರೂ
1,501ರಿಂದ 2,500 ಕಿಮೀ: 650 ರೂ
2,501ರಿಂದ 3,500 ಕಿಮೀ: 800 ರೂ
3,501 ಕಿಮೀಗಿಂತ ದೂರ: 1,000 ರೂ
ಇದನ್ನೂ ಓದಿ: ಪಿಐಡಿ ಫಂಡ್ ಸ್ಕೀಮ್ ಅಡಿಯಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಒಳಗೊಳ್ಳಲು ಆರ್ಬಿಐ ನಿರ್ಧಾರ; ಸ್ಕೀಮ್ ಅವಧಿ 2 ವರ್ಷ ವಿಸ್ತರಣೆ
500 ಕಿಮೀವರೆಗಿನ ದೂರದ ಸ್ಥಳಕ್ಕೆ ಪ್ರಯಾಣಿಸುವವರಿಗೆ ಫುಯೆಲ್ ಚಾರ್ಜ್ ಕನಿಷ್ಠ ಇಂಧನ ಶುಲ್ಕ ಇರುತ್ತದೆ. 3,500 ಕಿಮೀ ಮೇಲ್ಪಟ್ಟ ದೂರದ ಪ್ರಯಾಣಕ್ಕೆ ಗರಿಷ್ಠ 1,000 ರೂ ಶುಲ್ಕ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ