Infosys: ಸಿಎಫ್ಒ ರಾಜೀನಾಮೆ ಬೆನ್ನಲ್ಲೇ ಜಾಗತಿಕ ಎಐ ಕಂಪನಿಯೊಂದರೊಂದಿಗೆ ಇನ್ಫೋಸಿಸ್ನ ಬಿಲಿಯನ್ ಡಾಲರ್ ಒಪ್ಪಂದ ರದ್ದು
ಇನ್ಫೋಸಿಸ್ ಸಂಸ್ಥೆ ಜಾಗತಿಕ ಆರ್ಟಿಫಿಶಿಯಲ್ ಕಂಪನಿಯೊಂದಿಗೆ 15 ವರ್ಷ ಅವಧಿಯ 1.5 ಬಿಲಿಯನ್ ಮೊತ್ತದ ಒಪ್ಪಂದ ರದ್ದು ಮಾಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈ ಎರಡು ಕಂಪನಿಗಳ ಜೊತೆ ಎಂಒಯು ಆಗಿತ್ತು. ಆ ಎಐ ಕಂಪನಿ ಯಾವುದು ಎಂಬುದು ಬಹಿರಂಗವಾಗಿಲ್ಲ. ಇನ್ಫೋಸಿಸ್ ಸಂಸ್ಥೆಯ ಸಿಇಒ ನೀಲಾಂಜನ್ ರಾಯ್ ಡಿಸೆಂಬರ್ 12ರಂದು ರಾಜೀನಾಮೆ ನೀಡಿದ್ದಾರೆ. ಎರಡು ವಾರದಲ್ಲಿ ಈ ಬೆಳವಣಿಗೆ ಆಗಿದೆ.
ಬೆಂಗಳೂರು, ಡಿಸೆಂಬರ್ 24: ಜಾಗತಿಕ ಎಐ ಸಂಸ್ಥೆಯೊಂದರೊಂದಿಗೆ ಮಾಡಿಕೊಂಡಿದ್ದ 1.5 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ಇನ್ಫೋಸಿಸ್ ಸಂಸ್ಥೆ ರದ್ದುಗೊಳಿಸಿದೆ. ಸುಮಾರು 12,500 ಕೋಟಿ ರೂ ಮೊತ್ತದ ಈ ಗುತ್ತಿಗೆ (1.5 Billion Dollar Deal) ಕೈಬಿಟ್ಟಿರುವುದಾಗಿ ಇನ್ಫೋಸಿಸ್ ಸಂಸ್ಥೆ ನಿನ್ನೆ (ಡಿ. 23) ತಿಳಿಸಿದೆ. ಇನ್ಫೋಸಿಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದು ಯಾವ ಎಐ ಸಂಸ್ಥೆ ಎಂಬುದು ಬಹಿರಂಗವಾಗಿಲ್ಲ. ಸೆಪ್ಟೆಂಬರ್ನಲ್ಲಿ ಎರಡೂ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿದ್ದವು. 15 ವರ್ಷಗಳಿಗೆ ಈ ಒಪ್ಪಂದವಾಗಿತ್ತು. ಪ್ರಸಕ್ತ ಔದ್ಯಮಿಕ ಅಗತ್ಯಗಳಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪರಿಹಾರಗಳನ್ನು ಅಭಿವೃದ್ಧಪಡಿಸುವುದು ಈ ಡೀಲ್ನ ಉದ್ದೇಶ ಎನ್ನಲಾಗಿತ್ತು. ಈಗ ಒಪ್ಪಂದದಿಂದ ಇನ್ಫೋಸಿಸ್ ಹಿಂತೆಗೆದುಕೊಂಡಿರುವುದು ಯಾಕೆ ಎಂಬ ಕಾರಣ ಕೂಡ ಗೊತ್ತಾಗಿಲ್ಲ.
ಕುತೂಹಲವೆಂದರೆ, ಸಿಎಫ್ಒ ನೀಲಾಂಜನ್ ರಾಯ್ ರಾಜೀನಾಮೆ ನೀಡಿದ ಎರಡು ವಾರದಲ್ಲೇ ಈ ಬೆಳವಣಿಗೆ ಆಗಿದೆ. ನೀಲಾಂಜನ್ ರಾಯ್ ಅವರು ಇನ್ಫೋಸಿಸ್ನಲ್ಲಿ ಮಾರ್ಚ್ ತಿಂಗಳವರೆಗೂ ಇರಲಿದ್ದಾರೆ. ವೃತ್ತಿ ಬೆಳವಣಿಗೆ ಉದ್ದೇಶದಿಂದ ರಾಯ್ ಡಿಸೆಂಬರ್ 12ರಂದು ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ಡೆಪ್ಯುಟಿ ಸಿಎಫ್ಒ ಮತ್ತು ವೈಸ್ ಪ್ರೆಸಿಡೆಂಟ್ ಆಗಿರುವ ಜಯೇಶ್ ಸಂಘರಾಜಕ ಅವರು ತುಂಬಲಿದ್ದಾರೆ. ನಿಲೇಶ್ ರಾಯ್ ರಾಜೀನಾಮೆ ನೀಡುತ್ತಿದ್ದಂತೆಯೇ ಇನ್ಫೋಸಿಸ್ನ ಷೇರುಬೆಲೆ ಕಡಿಮೆ ಆಗಿತ್ತು. ಅದಾದ ಬಳಿಕ ಷೇರಿಗೆ ಮತ್ತೆ ಬೇಡಿಕೆ ಬಂದಿರುವುದು ಹೌದು. ಸದ್ಯ ಅದರ ಷೇರುಬೆಲೆ 1,560.60 ರೂ ಇದೆ.
ಇದನ್ನೂ ಓದಿ: Working Hours: ಹೆಚ್ಚು ಅವಧಿ ಕೆಲಸ ಮಾಡಿ, ಜೀವನದ ಜೊತೆ ಕೆಲಸ ಮಿಳಿತಗೊಳಿಸಿ: ಉದ್ಯೋಗಿಗಳಿಗೆ ಅಮೆರಿಕನ್ ಸಿಇಒ ನೀರಜ್ ಶಾ ಕರೆ
ಯೂರೋಪ್ನ ವಾಹನ ಬಿಡಿಭಾಗ ವಿತರಕ ಸಂಸ್ಥೆ ಎಲ್ಕೆಕ್ಯೂ ಜೊತೆ ಐದು ವರ್ಷ ಕಾಲ ಐಟಿ ಸರ್ವಿಸ್ ಗುತ್ತಿಗೆ ಪಡೆದುಕೊಂಡಿರುವುದಾಗಿ ಇನ್ಫೋಸಿಸ್ ಕಳೆದ ವಾರ ಘೋಷಿಸಿತ್ತು. ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್ ಅವಧಿಯಲ್ಲಿ ಇನ್ಫೋಸಿಸ್ ಒಟ್ಟು 7.7 ಬಿಲಿಯನ್ ಡಾಲರ್ ಮೊತ್ತದ ದೊಡ್ಡ ಗುತ್ತಿಗೆಗಳನ್ನು ಗಿಟ್ಟಿಸಿತ್ತು. ಲಂಡನ್ ಮೂಲದ ಲಿಬರ್ಟಿ ಗ್ಲೋಬಲ್ ಸಂಸ್ಥೆ ಜೊತೆ 1.64 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವೂ ಇದರಲ್ಲಿ ಸೇರಿದೆ. ಈ ಕಾರಣಕ್ಕೆ ಷೇರುಮಾರುಕಟ್ಟೆಯಲ್ಲಿ ಇನ್ಫೋಸಿಸ್ ಹೆಜ್ಜೆ ಗಾಢಗೊಳ್ಳುತ್ತಾ ಹೋಗುವ ಸಾಧ್ಯತೆ ಇದೆ.
ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್ನಲ್ಲಿ ಇನ್ಫೋಸಿಸ್ ಬಿಡುಗಡೆ ಮಾಡಿದ ವರದಿ ಪ್ರಕಾರ ಅದರ ನಿವ್ವಳ ಲಾಭ 6,012 ಕೋಟಿ ರೂನಿಂದ 6,212 ಕೋಟಿ ರುಪಾಯಿಗೆ ಏರಿದೆ. ಅಂದರೆ ಶೇ. 3.17ರಷ್ಟು ನಿವ್ವಳ ಲಾಭ ಹೆಚ್ಚಾಗಿದೆ. ಆದರೆ, ಈ ಹಣಕಾಸು ವರ್ಷದಲ್ಲಿ ತನ್ನ ಆದಾಯ ಸಾಧ್ಯತೆಯನ್ನು ಇನ್ಫೋಸಿಸ್ ಕಡಿಮೆ ಮಾಡಿದ್ದು ಹೂಡಿಕೆದಾರರಿಗೆ ತುಸು ನಿರಾಸೆಗೊಳಿಸಿದೆ. ಡಿಸೆಂಬರ್ ಅಂತ್ಯದ ತ್ರೈಮಾಸಿಕದ ಲಾಭದ ವರದಿಯನ್ನು ಇನ್ಫೋಸಿಸ್ ಜನವರಿ 11ರಂದು ಘೋಷಿಸಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ