ಇನ್ಫೋಸಿಸ್​ನಿಂದ 32,403 ಕೋಟಿ ರೂ ಜಿಎಸ್​ಟಿ ಬಾಕಿ ಇದೆಯಾ? ಇಲ್ಲ ಎನ್ನುತ್ತಿದೆ ಐಟಿ ಸಂಸ್ಥೆ; ಯಾತಕ್ಕಾಗಿ ಈ ತೆರಿಗೆ?

Infosys and GST authorities controversy: ಇನ್ಫೋಸಿಸ್​ನಿಂದ ಐದು ವರ್ಷದಲ್ಲಿ 32,403 ಕೋಟಿ ರೂ ಐಜಿಎಸ್​ಟಿ ತೆರಿಗೆ ಪಾವತಿ ಬಾಕಿ ಇದೆ ಎಂದು ಬೆಂಗಳೂರಿನ ಜಿಎಸ್​ಟಿ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ. ವಿದೇಶಗಳಲ್ಲಿರುವ ಅದರ ಶಾಖಾ ಕಚೇರಿಗಳಿಂದ ಪಡೆದ ಸೇವೆಗೆ ಪಾವತಿಸಿದ ಹಣಕ್ಕೆ ಐಜಿಎಸ್​ಟಿ ಕಟ್ಟಿಲ್ಲ ಎಂಬುದು ಆರೋಪ. ಇನ್ಫೋಸಿಸ್ ಸಂಸ್ಥೆ ತಾನು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ವಾದಿಸಿದೆ.

ಇನ್ಫೋಸಿಸ್​ನಿಂದ 32,403 ಕೋಟಿ ರೂ ಜಿಎಸ್​ಟಿ ಬಾಕಿ ಇದೆಯಾ? ಇಲ್ಲ ಎನ್ನುತ್ತಿದೆ ಐಟಿ ಸಂಸ್ಥೆ; ಯಾತಕ್ಕಾಗಿ ಈ ತೆರಿಗೆ?
ಇನ್ಫೋಸಿಸ್

Updated on: Aug 01, 2024 | 10:47 AM

ಬೆಂಗಳೂರು, ಆಗಸ್ಟ್ 1: ವಿದೇಶಗಳಲ್ಲಿರುವ ತನ್ನ ಶಾಖಾ ಘಟಕಗಳಿಂದ ಸೇವೆ ಪಡೆದದ್ದಕ್ಕೆ ಇನ್ಫೋಸಿಸ್ ಜಿಎಸ್​ಟಿ ಪಾವತಿಸಿಲ್ಲ ಎಂದು ತೆರಿಗೆ ಇಲಾಖೆ ಆರೋಪಿಸಿದೆ. 2017ರಿಂದ 2022ರವರೆಗೆ ಐದು ವರ್ಷದಲ್ಲಿ ಬರೋಬ್ಬರಿ 32,403.46 ಕೋಟಿ ರೂ ಮೊತ್ತದ ಐಜಿಎಸ್​ಟಿ ಪಾವತಿಸಬೇಕು ಎಂದು ಇನ್ಫೋಸಿಸ್​ಗೆ ಬೆಂಗಳೂರಿನ ಜಿಎಸ್​ಟಿ ಅಧಿಕಾರಿಗಳು ನೋಟೀಸ್ ಕೊಟ್ಟಿದ್ದಾರೆ. ಕುತೂಹಲ ಎಂದರೆ ಬಾಕಿ ಇದೆ ಎನ್ನಲಾದ ಇಷ್ಟು ಐಜಿಎಸ್​ಟಿ ಹಣವು ಇನ್ಫೋಸಿಸ್​ನ ಐದು ವರ್ಷದ ಲಾಭಕ್ಕೆ ಸಮ ಎನ್ನಲಾಗಿದೆ. ಇನ್ಫೋಸಿಸ್ ಸಂಸ್ಥೆ ಜಿಎಸ್​ಟಿ ಪ್ರಾಧಿಕಾರದ ಈ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಬಗ್ಗೆ ಪ್ರತಿಕ್ರಿಯಿಸಿದ್ದು, ತಾನು ಯಾವುದೇ ತೆರಿಗೆ ನಿಯಮ ಉಲ್ಲಂಘಿಸಿಲ್ಲ, ಅಥವಾ ಬಾಕಿ ಉಳಿಸಿಕೊಂಡಿಲ್ಲ ಎಂದು ಷೇರು ವಿನಿಯಮ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್​ನಲ್ಲಿ ತಿಳಿಸಿದೆ.

ಇನ್ಫೋಸಿಸ್ ವಿದೇಶಗಳಲ್ಲಿ ಬ್ರ್ಯಾಂಚ್ ಆಫೀಸ್​ಗಳನ್ನು ಸ್ಥಾಪಿಸಿದೆ. ಆ ಶಾಖಾ ಕಚೇರಿಗಳಿಂದ ಪಡೆದ ಸರಬರಾಜುಗಳಿಗೆ ಸಂಸ್ಥೆ ಹಣ ಪಾವತಿಸಿದೆ. 2017ರ ಜುಲೈನಿಂದ ಆರಂಭವಾಗಿ 2021-22ರ ಹಣಕಾಸು ವರ್ಷದವರೆಗೆ ರಿವರ್ಸ್ ಚಾರ್ಜ್ ಮೆಕ್ಯಾನಿಸಂ ಅಡಿಯಲ್ಲಿ ಇನ್ಫೋಸಿಸ್ ಸಂಸ್ಥೆ 32,403.46 ಕೋಟಿ ರೂ ಐಜಿಎಸ್​ಟಿ ಪಾವತಿಸಬೇಕಿತ್ತು… ಇನ್ಫೋಸಿಸ್ ಸಂಸ್ಥೆ ತನ್ನ ಎಕ್ಸ್​ಪೋರ್ಟ್ ಇನ್ವಾಯ್ಸ್ ಅಡಿಯಲ್ಲಿ ಆ ವೆಚ್ಚಗಳನ್ನು ತೋರಿಸಿದೆ ಎಂದು ಕರ್ನಾಟಕ ರಾಜ್ಯ ಜಿಎಸ್​ಟಿ ಪ್ರಾಧಿಕಾರ ತನ್ನ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್​ನಲ್ಲಿ ತಿಳಿಸಿದೆ.

ಈ ವೆಚ್ಚಗಳಿಗೆ ಜಿಎಸ್​ಟಿ ಅನ್ವಯ ಆಗಲ್ಲ ಎಂದ ಇನ್ಫೋಸಿಸ್

‘ವಿದೇಶಗಳಲ್ಲಿನ ಶಾಖಾ ಕಚೇರಿಗಳಿಂದ ಆದ ವೆಚ್ಚಕ್ಕೆ 32,403 ಕೋಟಿ ರೂ ಮೊತ್ತದ ಜಿಎಸ್​ಟಿ ಪಾವತಿ ಇದೆ ಎಂದು ಜಿಎಸ್​ಟಿ ಅಧಿಕಾರಿಗಳು ಪೂರ್ವಬಾವಿ ಶೋಕಾಸ್ ನೋಟೀಸ್ ನೀಡಿದ್ದಾರೆ. ಅದಕ್ಕೆ ಕಂಪನಿ ಸ್ಪಂದಿಸಿದೆ. ನಿಯಮಗಳ ಪ್ರಕಾರ ಈ ವೆಚ್ಚಗಳಿಗೆ ಜಿಎಸ್​ಟಿ ಅನ್ವಯ ಆಗಲ್ಲ. ಜಿಎಸ್​ಟಿ ಕೌನ್ಸಿಲ್​ನ ಶಿಫಾರಸುಗಳ ಮೇಲೆ ಸಿಬಿಡಿಟಿ ಮತ್ತು ಸುಂಕ ಇಲಾಖೆ 2024ರ ಜೂನ್ 26ರಂದು ಹೊರಡಿಸಿದ ಸುತ್ತೋಲೆ ಪ್ರಕಾರ, ಭಾರತೀಯ ಸಂಸ್ಥೆಯ ವಿದೇಶೀ ಶಾಖೆಗಳಿಂದ ನೀಡಲಾದ ಸೇವೆಗಳಿಗೆ ಜಿಎಸ್​ಟಿ ಅನ್ವಯ ಆಗಲ್ಲ ಎಂದಿದೆ’ ಎಂದು ಇನ್ಫೋಸಿಸ್​ನ ಕಂಪನಿ ಸೆಕ್ರೆಟರಿ ಮಣಿಕಂಠ ತಿಳಿಸಿದ್ದಾರೆ.

ಇದನ್ನೂ ಓದಿ: ಜೀವ ಮತ್ತು ವೈದ್ಯಕೀಯ ವಿಮೆ ಮೇಲಿನ ಶೇ.18ರಷ್ಟು GST ತೆಗೆದುಹಾಕಿ, ವಿತ್ತ ಸಚಿವೆಗೆ ಗಡ್ಕರಿ ಪತ್ರ

ಜಿಎಸ್​ಟಿ ಪಾವತಿಗಳು ಐಟಿ ಸರ್ವಿಸ್​ಗಳ ರಫ್ತಿಗೆ ಬದಲಾಗಿ ಕ್ರೆಡಿಟ್ ಅಥವಾ ರೀಫಂಡ್ ಪಡೆಯಲು ಅರ್ಹವಾಗಿರುತ್ತವೆ. ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾನೂನುಗಳಿಗೆ ಇನ್ಫೋಸಿಸ್ ಬದ್ಧವಾಗಿದ್ದು ಎಲ್ಲಾ ಜಿಎಸ್​ಟಿ ಬಾಕಿಯನ್ನು ಪಾವತಿಸಿದೆ ಎಂದೂ ಇನ್ಫೋಸಿಸ್ ಸಂಸ್ಥೆ ಸ್ಪಷ್ಟಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us