Inspiring Mappillai: ಬಲೂನು ಮಾರುತ್ತಿದ್ದ ವ್ಯಕ್ತಿ ವಿಶ್ವಪ್ರಸಿದ್ಧ ಎಂಆರ್​ಎಫ್ ಒಡೆಯರಾದ ರೋಚಕ ಮತ್ತು ಹೃದಯಸ್ಪರ್ಶಿ ಕಥೆ

|

Updated on: May 08, 2023 | 7:15 PM

Man Behind MRF: ಮಮ್ಮನ್ ಮಾಪಿಳ್ಳೈ ಬದುಕು ಬಡತನದ ಸುಳಿಗೆ ಸಿಕ್ಕು ತತ್ತರಿಸಿಹೋಗುವ ಸಂದರ್ಭ ಬಂದಾಗ ಎದೆಗುಂದದೆ ಪಾರಾಗಿ ಬಂದು ಸಾವಿರಾರು ಕೋಟಿ ರೂ ಮೌಲ್ಯದ ವಿಶ್ವಶ್ರೇಷ್ಠ ಎಂಆರ್​ಎಫ್ ಕಂಪನಿಯ ಒಡೆಯರಾದ ಕಥೆ ರಣರೋಚಕ. ಎಂಆರ್​ಎಫ್ ಹುಟ್ಟಿನ ಹಿಂದಿನ ಕತೆ ತಿಳಿಯಬಯಸುವಿರಾದರೆ ತಪ್ಪದೇ ಈ ಸ್ಟೋರಿ ಓದಿ.

Inspiring Mappillai: ಬಲೂನು ಮಾರುತ್ತಿದ್ದ ವ್ಯಕ್ತಿ ವಿಶ್ವಪ್ರಸಿದ್ಧ ಎಂಆರ್​ಎಫ್ ಒಡೆಯರಾದ ರೋಚಕ ಮತ್ತು ಹೃದಯಸ್ಪರ್ಶಿ ಕಥೆ
ಮಮ್ಮನ್ ಮಾಪಿಳ್ಳೈ
Follow us on

ಮನಸಿದ್ದರೆ ಮಾರ್ಗ ಎಂದು ಹಿರಿಯರು ತಿಳಿಹೇಳುವುದಿದೆ. ನಮ್ಮ ಜೀವನದ ಅಷ್ಟೂ ಶ್ರಮ ವ್ಯರ್ಥವಾಗಿ, ಇನ್ನೇನು ನಶ್ವರ ಬದುಕು ಎನಿಸಿದಾಗ ಈ ಮಾತು ಒಂದು ರೀತಿಯಲ್ಲಿ ಉತ್ಸಾಹದ ಸಿಂಚನ ತರಬಹುದು. ಎಂಆರ್​ಎಫ್ ಟಯರ್ ಕಂಪನಿಯ ಮಾಲೀಕರ ಕಥೆ ಕೇಳಿದವರಿಗೂ ಇದೇ ಜೀವನಸ್ಫೂರ್ತಿ ಸಿಗಬಹುದು. ಮದ್ರಾಸ್ ಟಯರ್ ಫ್ಯಾಕ್ಟರಿ (MRF) ಸಂಸ್ಥಾಪಕ ಕಂಡತ್ತಿಲ್ ಮಮ್ಮೆನ್ ಮಾಪಿಳ್ಳೈ (KM Mappillai) ಒಂದೊಮ್ಮೆ ರಸ್ತೆಗಳಲ್ಲಿ ಬಲೂನು ಮಾರಿಕೊಂಡು ಜೀವನ ನಡೆಸುತ್ತಿದ್ದವರು. ಬಡತನದ ಬದುಕು ಅವರದ್ದಲ್ಲದಿದ್ದರೂ ಅಪ್ಪನ ಸಿರಿತನವೆಲ್ಲವೂ ನಶಿಸಿದಾಗ ಜೀವನದ ಕಷ್ಟಗಳನ್ನು ಗಟ್ಟಿಯಾಗಿ ಎದುರಿಸಿ ನಿಂತ ಛಲಗಾರ ಮಾಪಿಳ್ಳೈ ಅವರು. ಬದುಕು ಬಡತನದ ಸುಳಿಗೆ ಸಿಕ್ಕು ತತ್ತರಿಸಿಹೋಗುವ ಸಂದರ್ಭ ಬಂದಾಗ ಎದೆಗುಂದದೆ ಅವರು ಪಾರಾಗಿ ಬಂದು ಈಗ ಸಾವಿರಾರು ಕೋಟಿ ರೂ ಮೌಲ್ಯದ ವಿಶ್ವಶ್ರೇಷ್ಠ ಎಂಆರ್​ಎಫ್ ಕಂಪನಿಯ ಒಡೆಯರಾದ ಕಥೆ ರಣರೋಚಕ. ಎಂಆರ್​ಎಫ್ ಹುಟ್ಟಿನ ಹಿಂದಿನ ಕತೆ ತಿಳಿಯಬಯಸುವಿರಾದರೆ ತಪ್ಪದೇ ಈ ಸ್ಟೋರಿ ಓದಿ.

ಕೆ ಮಮ್ಮನ್ ಮಾಪಿಳ್ಳೈ ತಂದೆಯ ಎಲ್ಲಾ ಆಸ್ತಿ ಹೋಗಿ, ಬಂಧನವಾದಾಗ

ಕಂಡತ್ತಿಲ್ ಮಮ್ಮನ್ ಮಾಪಿಳ್ಳೈ ಅವರದ್ದು ಕೇರಳ ಮೂಲದ ಕುಟುಂಬ. ಇವರ ತಂದೆ ಒಂದು ಬ್ಯಾಂಕ್​ನ ಮಾಲೀಕರಾಗಿದ್ದರು. ಮಲಯಾಳ ಮನೋರಮ ಪತ್ರಿಕೆಯನ್ನೂ ನಡೆಸುತ್ತಿದ್ದರು. ಆಗ ಕಂಡತ್ತಿಲ್ ಮಮ್ಮನ್ ಮಾಪಿಳ್ಳೈ ಅವರು ಈಗಿನ ಚೆನ್ನೈನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಓದುತ್ತಿದ್ದರು. ಅದಿನ್ನೂ ಸ್ವಾತಂತ್ರ್ಯಪೂರ್ವದ ಕಾಲ. ಟ್ರಾವೆನ್​ಕೋರ್ ಸಂಸ್ಥಾನದ ಆಡಳಿತ ಇತ್ತು. ಮಾಪಿಳ್ಳೈ ಅವರ ತಂದೆಯನ್ನು ಅಂದಿನ ಆಡಳಿತವು ಬಂಧಿಸಿ ಎರಡು ವರ್ಷ ಜೈಲಿನಲ್ಲಿಟ್ಟಿತ್ತು. ಅವರ ಬ್ಯಾಂಕ್, ಪತ್ರಿಕೆ ಎಲ್ಲವನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ಇದನ್ನೂ ಓದಿONDC: ಕಡಿಮೆ ಬೆಲೆಗೆ ಊಟ ಸಿಗುತ್ತೆ; ಆದ್ರೆ ಟೈಮಿಗೆ ಸರಿಯಾಗಿ ಬರುತ್ತಾ? ಸ್ವಿಗ್ಗಿ, ಜೊಮಾಟೋಗಳ ಅಖಾಡಕ್ಕೆ ಒಎನ್​ಡಿಸಿ

ಇನ್ನೂ ವಿದ್ಯೆ ಕಲಿಯುತ್ತಿದ್ದ ತರುಣನಿಗೆ ಇಂಥ ಬೆಳವಣಿಗೆ ಎಂಥ ಘಾಸಿ ತರಬಹುದು ಊಹಿಸಿ..! ತಂದೆ ಬಂಧನವಾದ ಬಳಿಕ ಏನೂ ಗತಿ ಇಲ್ಲದಂತಾದ ಕೆಎಂ ಮಮ್ಮನ್ ಮಾಪಿಳ್ಳೈ ಮನೆ ಬಾಡಿಗೆ ಕಟ್ಟಲಾಗದೇ ಮದ್ರಾಸ್​ನ ಸೇಂಟ್ ಥಾಮಸ್ ಹಾಲ್​ನ ನೆಲದಲ್ಲಿ ಮಲಗುತ್ತಿದ್ದರು. ಜೀವನ ನಡೆಸಲು ಬಲೂನು ತಯಾರಿಸಿ ರಸ್ತೆ ರಸ್ತೆಗಳಲ್ಲಿ ತಾವೇ ಖುದ್ದಾಗಿ ಮಾರಿ ಹಣ ಸಂಪಾದನೆ ಮಾಡುತ್ತಿದ್ದರು.

ಎಂಆರ್​ಎಫ್ ಕಂಪನಿ ಸ್ಥಾಪನೆಯಾದ ವಿಸ್ಮಯಕಾರಿ ಕಥೆ

ಬಲೂನು ಮಾರುತ್ತಿದ್ದ ಮಮ್ಮನ್ ಮಾಪಿಳ್ಳೈ ಅವರಿಗೆ 1952ರಲ್ಲಿ ಒಂದು ಬೆಳವಣಿಗೆ ಗಮನ ಸೆಳೆಯಿತು. ಭಾರತದಲ್ಲಿ ರಿಟ್ರೀಡಿಂಗ್ ಘಟಕವೊಂದಕ್ಕೆ (Tyre Retreading Unit) ವಿದೇಶೀ ಕಂಪನಿಯಿಂದ ಟ್ರೇಡ್ ರಬ್ಬರ್ ಸರಬರಾಜಾಗುತ್ತಿದೆ ಎಂಬ ಸುದ್ದಿ ಮಾಪಿಳ್ಳೈ ಕಿವಿಗೆ ಬಿದ್ದಿತು. ಇಲ್ಲಿ ರಿಟ್ರೀಡಿಂಗ್ ಎಂದರೆ ಹಳೆಯ ಟಯರ್ ಅನ್ನು ಬಳಕೆಗೆ ಅರ್ಹವಾಗುವಂತೆ ಮಾರ್ಪಡಿಸುವುದು. ಇಂಥ ಕೆಲಸವನ್ನು ತಾನು ಮಾಡಬಲ್ಲೆ ಎಂದು ಕಂಡತ್ತಿಲ್ ಮಮ್ಮನ್ ಮಾಪಿಳ್ಳೆಗೆ ಅನಿಸಿತು.

ಅನಿಸಿ ಸುಮ್ಮನೆ ಕನಸು ಕಾಣುತ್ತಾ ಕೂರುವ ಜಾಯಮಾನದವರಲ್ಲ ಆ ಮಾಪಿಳ್ಳೈ. ತಾನು ಆವರೆಗೂ ಬಲೂನು ಮಾರಾಟದಿಂದ ಸಂಪಾದಿಸಿದ್ದ ಅಷ್ಟೂ ಹಣವನ್ನು ಟಯರ್ ರಿಟ್ರೀಡಿಂಗ್ ಬ್ಯುಸಿನೆಸ್​ಗೆ ಹಾಕಿದರು. ಕಂಪನಿಯ ಹೆಸರನ್ನು ಮದ್ರಾಸ್ ರಬ್ಬರ್ ಫ್ಯಾಕ್ಟರಿ ಎಂದಿಟ್ಟರು. ಅವರ ಅದೃಷ್ಟಕ್ಕೆ ಟಯರ್ ರಿಟ್ರೀಡಿಂಗ್ ತಯಾರಿಕೆಯಲ್ಲಿ ಆಗ ಒಂದೂ ಭಾರತೀಯ ಕಂಪನಿ ಇರಲಿಲ್ಲ. ಇದ್ದವೆಲ್ಲವೂ ವಿದೇಶೀಯವೇ. ಹೀಗಾಗಿ, ಮಾಪಿಳ್ಳೈಗೆ ಈ ಕ್ಷೇತ್ರದಲ್ಲಿ ಅಡಿ ಇಡಲು ಅನುಕೂಲವಾಯಿತು. ಕೇವಲ 4 ವರ್ಷದಲ್ಲಿ ಎಂಆರ್​ಎಫ್ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾಯಿತು.

ಅಮೆರಿಕ ಕಂಪನಿ ಜೊತೆ ಸೇರಿ ಹೊಸ ಟಯರ್ ಉತ್ಪಾದನೆ

ಈ ಹಂತದಲ್ಲಿ ಮಮ್ಮೆನ್ ಮಾಪಿಳ್ಳೈ ಸಂತೃಪ್ತ ಸ್ಥಿತಿಗೆ ಹೋಗಲಿಲ್ಲ. ಆವರೆಗೂ ಅವರು ಮಾಡಿದ್ದು ಟಯರ್ ರಿಟ್ರೀಡಿಂಗ್ ತಯಾರಿಕೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಟಯರ್ ತಯಾರಿಸುವ ಫ್ಯಾಕ್ಟರಿ ನಿರ್ಮಿಸುವ ಆಲೋಚನೆ ಮಾಡಿದರು. ಅದು 1961ರಲ್ಲಿ ಆಯಿತು. ಆದರೆ ಟಯರ್ ಫ್ಯಾಕ್ಟರಿ ಸ್ಥಾಪಿಸುವುದು ಸುಲಭವಾಗಿರಲಿಲ್ಲ. ಅದರ ತಂತ್ರಜ್ಞಾನದ ಪರಿಣಿತಿ ಇವರ ಕಂಪನಿಗೆ ಇರಲಿಲ್ಲ. ಆಗ ಅಮೆರಿಕದ ಮ್ಯಾನ್ಸ್​ಫೀಲ್ಡ್ ಟಯರ್ ಅಂಡ್ ರಬ್ಬರ್ ಮತ್ತು ಎಂಆರ್​ಎಫ್ ಮಧ್ಯೆ ಜಂಟಿ ಒಪ್ಪಂದದ ಪ್ರಕಾರ ಟಯರ್ ತಯಾರಿಕೆಯ ಫ್ಯಾಕ್ಟರಿ 1961ರಲ್ಲಿ ಶುರುವಾಯಿತು.

ಇದನ್ನೂ ಓದಿTenant Rights: ಮನೆ ಓನರ್ ಕಿರಿಕ್ ಮಾಡುತ್ತಾರಾ? ಬಾಡಿಗೆದಾರರಿಗಿರುವ 10 ಹಕ್ಕುಗಳ ಬಗ್ಗೆ ತಿಳಿದಿರಿ

ಸರ್ಕಾರದಿಂದಲೂ ಎಂಆರ್​ಎಫ್​ಗೆ ಸಿಕ್ಕಿತ್ತು ಉತ್ತೇಜನ

ಎಂಆರ್​ಎಫ್​ನ ಟಯರ್ ಫ್ಯಾಕ್ಟರಿ ಶುರುವಾದ ವರ್ಷವೇ, ಅಂದರೆ 1961ರಲ್ಲಿ ಅದು ಅಂದಿನ ಮದ್ರಾಸ್ ಸ್ಟಾಕ್ ಎಕ್ಸ್​ಚೇಂಜ್ ಮಾರುಕಟ್ಟೆಯಲ್ಲಿ ಲಿಸ್ಟ್ ಆಯಿತು. ಅಂದಿನ ಸರ್ಕಾರ ದೇಶೀಯ ಉದ್ಯಮಗಳಿಗೆ ಪೂರ್ಣ ಬೆಂಬಲ ನೀಡುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಟೆಂಡರ್​ಗಳಿಗೆ ಎಂಆರ್​ಎಫ್ ಪ್ರಯತ್ನಿಸತೊಡಗಿತು. 1963ರಷ್ಟರಲ್ಲಿ ಎಂಆರ್​ಎಫ್ ಜನಪ್ರಿಯತೆ ಬಹಳ ಹೆಚ್ಚಿತ್ತು.

ಎಂಆರ್​ಎಫ್ ಮಸಲ್ ಮ್ಯಾನ್ ರಚನೆಯಾದ ಕಥೆ

ಎಂಆರ್​ಎಫ್ ದಿನೇ ದಿನೇ ಗಟ್ಟಿಯಾಗಿ ಬೆಳೆಯತೊಡಗಿತ್ತು. ಆದರೆ, ಮೂಲ ವಾಹನಗಳಿಗೆ ಹಾಕುವ ಟಯರ್​ಗೆ ಎಂಆರ್​ಎಫ್ ಬಳಕೆ ಆಗುತ್ತಿರಲಿಲ್ಲ. ಗುಡ್ ಇಯರ್, ಡನ್​ಲೋಪ್ ಇತ್ಯಾದಿ ಬೇರೆ ಕಂಪನಿಯ ಟಯರ್​ಗಳು ಈ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದವು. ಈ ಹಿನ್ನೆಲೆಯಲ್ಲಿ ಕಂಡತ್ತಿಲ್ ಮಮ್ಮನ್ ಮಾಪಿಳ್ಳೈ ಅವರು ಎಂಆರ್​ಎಫ್ ಟಯರ್​ಗಳನ್ನು ನೇರವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದರು. ಅದಕ್ಕಾಗಿ ಆಕರ್ಷಕ ಜಾಹೀರಾತು ನಿರ್ಮಿಸಲು ಅಂದಿನ ಆ್ಯಡ್ ಗುರು ಆಲಿಖಿ ಪದಮ್​​ಸೀ ಅವರಿಗೆ ಜವಾಬ್ದಾರಿ ಕೊಟ್ಟರು.

ಆಗ ಹೊರಬಂದಿದ್ದೇ ಬಹಳ ಜನಪ್ರಿಯವಾದ ಮಸಲ್ ಮ್ಯಾನ್ ಇಮೇಜ್. ಹಿಂದಿನ ದಶಕಗಳ ಎಂಆರ್​ಎಫ್ ಜಾಹೀರಾತು ನೋಡಿದವರಿಗೆ ಈ ಮಸಲ್ ಮ್ಯಾನ್ ಪರಿಚಯ ಇರುತ್ತದೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದ ಹೀರೋ ಶಿವಲಿಂಗವನ್ನು ಎತ್ತುವ ದೃಶ್ಯದಂತೆ.

ಇದನ್ನೂ ಓದಿSuccess Story ಕರ್ನಾಟಕದಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ಆರ್​ಎಸ್ ಕಾಮತ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಬ್ರ್ಯಾಂಡ್ ಕಟ್ಟಿದ ಕಥೆ

ಈ ಎಂಆರ್​ಎಫ್ ಮಸಲ್ ಮ್ಯಾನ್ ಜಾಹೀರಾತು ಬಹಳ ಜನಪ್ರಿಯವಾಗಿದ್ದು ಹೌದು. ಮುಂದೆ ಸಚಿನ್, ಲಾರಾ ಮೊದಲಾದವರು ಎಂಆರ್​ಎಫ್​ಗೆ ಬ್ರ್ಯಾಂಡ್ ಅಂಬಾಸಡರ್ ಆದರು. ಎಂಆರ್​ಎಫ್ ವಿಶ್ವದ ಅತ್ಯಂತ ಪ್ರಬಲ ಟಯರ್ ಕಂಪನಿಗಳ ಸಾಲಿಗೆ ಸೇರಿಕೊಂಡಿತು. 2022ರಲ್ಲಿ ಎಂಆರ್​ಎಫ್​ನ ಆದಾಯ ಹತ್ತಿರಹತ್ತಿರ 20,000 ಕೋಟಿ ರೂನಷ್ಟಿತ್ತು. ಷೇರುಸಂಪತ್ತು 36,000 ಕೋಟಿ ರೂನಷ್ಟಿದೆ. ಇದರಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸಂಖ್ಯೆ 18,000. ಎಷ್ಟು ಅಗಾಧ ಅಲ್ಲವಾ?

ಇಂಥ ದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ ಹುಟ್ಟುಹಾಕಿದ ಕಲ್ಲತ್ತಿಲ್ ಮಮ್ಮನ್ ಮಾಪಿಳ್ಳೈ ಅವರು 2003ರಲ್ಲಿ 81ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಅವರದ್ದು ದೊಡ್ಡ ಕುಟುಂಬವಾಗಿದ್ದು ಎಂಆರ್​ಎಫ್ ವ್ಯವಹಾರವನ್ನು ಅವರ ಸಹೋದರರು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಮಲಯಾಳ ಮನೋರಮ ಪತ್ರಿಕೆಯನ್ನೂ ಅವರ ಕುಟುಂಬದವರೇ ನಿರ್ವಹಿಸುತ್ತಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ