Great Comeback: 40 ವರ್ಷಕ್ಕೆ ನಿವೃತ್ತರಾಗಿ ಸ್ಪಾನಲ್ಲಿ ಕೆಲಸ ಮಾಡಿದ ಕೊನೇರು ಸುಧೀರ್ ಈಗ 12,000 ಕೋಟಿ ರೂ ಕಂಪನಿಯ ಒಡೆಯ
Koneru Sudheer's Inspiring Story: ಮೈಕ್ರೋಸಾಫ್ಟ್ನಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿ ಎರಡು ಕಂಪನಿ ಕಟ್ಟಿ 40 ವರ್ಷಕ್ಕೆ ನಿವೃತ್ತರಾಗಿದ್ದ ಕೊನೇರು ಸುಧೀರ್, 2 ವರ್ಷ ಜಿಮ್ ಮತ್ತು ಸ್ಪಾ ಸಮೂಹದ ಕಂಪನಿಯಲ್ಲಿ ಕೆಲಸ ಮಾಡಿದರು. ಈ ಕ್ಷೇತ್ರದ ಉದ್ಯಮಕ್ಕೆ ಅನುಕೂಲವಾಗುವಂತಹ ಸಾಫ್ಟ್ವೇರ್ ಬಿಡುಗಡೆ ಮಾಡಿ ದೊಡ್ಡದಾಗಿ ವ್ಯವಹಾರ ಬೆಳೆಸಿದ್ದಾರೆ ಕೊನೇರು.
40 ವರ್ಷ ದಾಟಿದ ವೃತ್ತಿಪರರು ಸಾಮಾನ್ಯವಾಗಿ ತಾವು ಕೆಲಸ ಮಾಡುವ ಕಂಪನಿಯಲ್ಲಿ ಉನ್ನತ ಸ್ತರಕ್ಕೆ ಏರಲು ಪ್ರಯತ್ನಿಸಬಹುದು, ತಮ್ಮ ನಿವೃತ್ತಿ ಜೀವನಕ್ಕೆ ಹಣಕಾಸು ಭದ್ರತೆ ಹೇಗೆ ಒದಗಿಸಬಹುದು ಎಂಬುದರತ್ತ ಹೆಚ್ಚು ಗಮನ ಹರಿಸಬಹುದು. ಸ್ವಂತ ಉದ್ಯಮಕ್ಕೆ ಕೈಹಾಕುವವರ ಸಂಖ್ಯೆ ಕಡಿಮೆ. ಸ್ವಂತ ವ್ಯವಹಾರ ಶುರು ಮಾಡಿದರೂ ದೊಡ್ಡ ಸ್ತರದಲ್ಲಂತೂ ಇರುವುದಿಲ್ಲ. ಬಾಳಿನ ಬಂಡಿ ನಡೆಸಲು ಆಗುವಷ್ಟು ಮಟ್ಟದ ಬ್ಯುಸಿನೆಸ್ ಸ್ಥಾಪನೆಗೆ ಆಲೋಚನೆ ಸೀಮಿತವಾಗಿರುತ್ತದೆ. ಆದರೆ, ಆಂಧ್ರ ಮೂಲದ ಸುಧೀರ್ ಕೊನೇರು (Koneru Sudheer) ಅವರು ತುಸು ವಿಭಿನ್ನ. ಕೇವಲ 40 ವರ್ಷ ವಯಸ್ಸಿಗೆ ದೊಡ್ಡ ಕೆಲಸದಿಂದ ನಿವೃತ್ತರಾಗಿ, ಬಳಿಕ 3 ಕಂಪನಿಗಳನ್ನು ಸ್ಥಾಪಿಸಿಕ ಯಶಸ್ವಿಯಾದ ಅವರ ಕತೆ ನಿಜಕ್ಕೂ ಇಂಟರೆಸ್ಟಿಂಗ್ ಎನಿಸಿದೆ. ಜಿಮ್ ಮತ್ತು ಸ್ಪಾ ಸೇವೆ ನೀಡುವ ಕಂಪನಿಯೊಂದರಲ್ಲಿ (Gym and Spa Chain) ಕೆಲಸ ಮಾಡುತ್ತಿದ್ದಾಗ ಸಿಕ್ಕ ಒಂದು ಐಡಿಯಾ ಈಗ ಅವರನ್ನು 12,000 ಕೋಟಿ ರೂ ಮೌಲ್ಯದ ಕಂಪನಿಯ ಒಡೆಯನನ್ನಾಗಿಸಿದೆ.
ಐಐಟಿ ಪದವೀಧರ, ಮೈಕ್ರೋಸಾಫ್ಟ್ನಲ್ಲಿ ಸುದೀರ್ಘ ಅನುಭವ
ಕೊನೇರು ಸುಧೀರ್ ಐಐಟಿ ಮದ್ರಾಸ್ನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡಿ, ಬಳಿಕ ಅಮೆರಿಕದ ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ಮಾಸ್ಟರ್ಸ್ ಪಡೆದರು. ಮೈಕ್ರೋಸಾಫ್ಟ್ನಲ್ಲಿ ವೃತ್ತಿಜೀವನ ಆರಂಬಿಸಿದ ಅವರು ನಿರ್ದೇಶಕ ಸ್ಥಾನದವರೆಗೂ ಬೆಳೆದಿದ್ದರು.
ಆ ಬಳಿಕ ಅವರಲ್ಲೊಬ್ಬ ಉದ್ಯಮಿ ಮನೋಭಾವ ಬೆಳೆದುನಿಂತಿತ್ತು. ಮೈಕ್ರೋಸಾಫ್ಟ್ ಬಿಟ್ಟ ಬಳಿಕ ಅವರು ಇಂಟೆಲಿಪ್ರಿಪ್ ಟೆಕ್ನಾಲಜೀಸ್ (IntelliPrep Technologies) ಎಂಬ ಕಂಪನಿಯನ್ನು ಸ್ಥಾಪಿಸಿದರು. ಬಿಲ್ ಗೇಟ್ಸ್ ಜೊತೆ ಮೈಕ್ರೋಸಾಫ್ಟ್ನ ಸಹ–ಸಂಸ್ಥಾಪಕರಾದ ಪೌಲ್ ಅಲನ್ ಅವರು ಸ್ಥಾಪಿಸಿದ್ದ ಕ್ಲಿಕ್2ಲರ್ನ್ ಎಂಬ ಕಂಪನಿ ಜೊತೆ ಕೊನೇರು ಸುಧೀರ್ ಅವರ ಇಂಟೆಲಿಪ್ರೆಪ್ ವಿಲೀನಗೊಂಡಿತು.
ಇದಾದ ಬಳಿಕ ಸುಧೀರ್ ಕೊನೇರು ಅವರು ಸಮ್ಟೋಟಲ್ (SumTotal) ಎಂಬ ಕಂಪನಿ ಹುಟ್ಟುಹಾಕಿದರು. ಇದು ವರ್ಷಕ್ಕೆ 100 ಮಿಲಿಯನ್ ಡಾಲರ್ (ಸುಮಾರು 800 ಕೋಟಿ ರೂ) ಮೊತ್ತದ ಆದಾಯ ತರುವ ಕಂಪನಿಯಾಗಿ ಬೆಳೆಯಿತು. ಆದರೆ, 2007ರಲ್ಲಿ ಇವರು ತಾವೇ ಸ್ಥಾಪಿಸಿದ್ದ ಸಮ್ ಟೋಟಲ್ ಕಂಪನಿಯಿಂದ ಹೊರಬಂದರು. 2008ರಲ್ಲಿ ನಿವೃತ್ತಿ ಪಡೆದುಕೊಂಡರು. ಆಗ ಅವರ ವಯಸ್ಸು 40 ವರ್ಷ.
ಸ್ಪಾ ಮತ್ತು ಜಿಮ್ ಸಮೂಹದ ಕಂಪನಿಲ್ಲಿ ಕೆಲಸ ಮಾಡುತ್ತಾ ಸಿಕ್ತು ಐಡಿಯಾ
2008ರಲ್ಲಿ ಕೊನೇರು ಸುಧೀರ್ ನಿವೃತ್ತಿ ಪಡೆದುಕೊಂಡರು ಎನ್ನುವುದಕ್ಕಿಂತ ಹೆಚ್ಚಾಗಿ ಐಟಿ ಕ್ಷೇತ್ರದಿಂದ ವಿಮುಖರಾಗುವಂತಹ ಬ್ರೇಕ್ ತೆಗೆದುಕೊಂಡರು ಎನ್ನಲಡ್ಡಿ ಇಲ್ಲ. ಎರಡು ವರ್ಷ ಕಾಲ ಅವರು ಹೈದರಾಬಾದ್ನ ಸ್ಪಾ ಮತ್ತು ಜಿಮ್ ಸಮೂಹದ ಕಂಪನಿಯೊಂದರಲ್ಲಿ ಕೆಲಸ ಮಾಡಿದರು. ಆಗ ಅವರಿಗೆ ಈ ಉದ್ಯಮದಲ್ಲಿರುವ ಅಗಾಧ ಸಾಧ್ಯತೆಯ ಅರಿವಾಯಿತು. ಸ್ಪಾ, ಸಲೂನ್ ಇತ್ಯಾದಿ ಸೇವೆಗೆ ಅನುಕೂಲವಾಗುವಂತಹ ಮ್ಯಾನೇಜ್ಮೈಸ್ಪಾ (ManageMySpa) ಎಂಬ ಸಾಫ್ಟ್ವೇರ್ ಅನ್ನು ಬಿಡುಗಡೆ ಮಾಡಿದರು. 2015ರಲ್ಲಿ ಅವರು ತಮ್ಮ ಹೊಸ ಕಂಪನಿಯ ಹೆಸರನ್ನು ಝೆನೋಟಿ (Zenoti) ಎಂದು ಬದಲಿಸಿದರು.
ಇದನ್ನೂ ಓದಿ: Inspiring: ಅಪ್ಪನ ಆಸ್ತಿ ಇಲ್ಲ; ಓದೋದು ಬಿಟ್ಟು ಕೇವಲ 23ರ ವಯಸ್ಸಿಗೆ 100 ಕೋಟಿ ಒಡೆಯನಾದ ಸಂಕರ್ಷ್
2020ರಲ್ಲಿ ಝೆನೋಟಿ ಕಂಪನಿಗೆ ಒಳ್ಳೆಯ ಫಂಡಿಂಗ್ ಸಿಕ್ಕು ಅದರ ಮೌಲ್ಯ 1 ಬಿಲಿಯನ್ ಡಾಲರ್ಗಿಂತ ಹೆಚ್ಚಾಗಿ ಹೋಯಿತು. ಈ ಮೂಲಕ ಅವರ ಸ್ಟಾರ್ಟಪ್ ಒಂದು ಯೂನಿಕಾರ್ನ್ ಕಂಪನಿ ಎನಿಸಿತು. ಸೌಂದರ್ಯ ಮತ್ತು ಆರೋಗ್ಯಕಾಳಜಿ ಉದ್ಯಮದ ಒಂದು ಸ್ಟಾರ್ಟಪ್ ಯೂನಿಕಾರ್ನ್ ಎನಿಸಿದ್ದು ಅದೇ ಮೊದಲು.
ಕೊನೇರು ಸುಧೀರ್ ಸ್ಥಾಪಿಸಿದ ಝೆನೋಟಿ ಕಂಪನಿಯ ಉತ್ಪನ್ನ 50 ದೇಶಗಳ ಮಾರುಕಟ್ಟೆಯಲ್ಲಿ ಬಿಕರಿ ಆಗಿದೆ. 12,000ಕ್ಕೂ ಹೆಚ್ಚು ಉದ್ಯಮಗಳು ಈ ಉತ್ಪನ್ನ ಬಳಕೆ ಮಾಡುತ್ತಿವೆ. ಮುಂಬರುವ ವರ್ಷಗಳಲ್ಲಿ ಇವರು ಝೆನೋಟಿಯನ್ನು ಷೇರುಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಇರಾದೆಯಲ್ಲಿದ್ದಾರೆ.