Honda Cars: ಜನವರಿಯಿಂದ ಹೋಂಡಾ ಕಾರುಗಳು 30,000 ರೂ.ವರೆಗೆ ದುಬಾರಿ
ಒಟ್ಟಾರೆಯಾಗಿ 30,000 ರೂ.ವರೆಗೆ ದರ ಹೆಚ್ಚಾಗಲಿದೆ. ವಿವಿಧ ಮಾದರಿಗಳಿಗೆ ಅನುಗುಣವಾಗಿ ದರ ಏರಿಕೆ ವ್ಯತ್ಯಾಸವಾಗಲಿದೆ’ ಎಂದು ಹೋಂಡಾ ಕಾರ್ಸ್ ಇಂಡಿಯಾ ಉಪಾಧ್ಯಕ್ಷ (ಮಾರಾಟ ಮತ್ತು ಮಾರ್ಕೆಟಿಂಗ್) ಕುನಲ್ ಬೆಹ್ಲ್ ತಿಳಿಸಿದ್ದಾರೆ.
ನವದೆಹಲಿ: ಜನವರಿಯಿಂದ ವಿವಿಧ ಮಾದರಿಯ ಕಾರುಗಳ ಬೆಲೆ 30,000 ರೂ. ವರೆಗೆ (Car Price Hike) ಹೆಚ್ಚಳ ಮಾಡುವುದಾಗಿ ಜಪಾನ್ ಮೂಲದ ಕಾರು ತಯಾರಿಕಾ ಕಂಪನಿ ಹೋಂಡಾ (Honda Cars India) ತಿಳಿಸಿದೆ. ವೆಚ್ಚದಲ್ಲಿ ಏರಿಕೆ ಮತ್ತು ಮುಂಬರುವ ಕಠಿಣ ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ವಾಹನ ತಯಾರಿಸಲು ಹೆಚ್ಚು ಖರ್ಚಾಗುವುದರಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಕಂಪನಿ ತಿಳಿಸಿದೆ. ಇದರೊಂದಿಗೆ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟರ್ಸ್ ಹಾಗೂ ಇತರ ಕಂಪನಿಗಳ ಸಾಲಿಗೆ ಸೇರಿದೆ ಹೋಂಡಾ. ‘ಇನ್ಪುಟ್ ವೆಚ್ಚದಲ್ಲಿ ಹೆಚ್ಚಳ, ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ, ಮುಂಬರುವ ಮಾಲಿನ್ಯ ನೀತಿಗಳಿಗೆ ಅನುಗುಣವಾಗಿ ವಾಹನಗಳನ್ನು ಸಿದ್ಧಪಡಿಸಬೇಕಾದ ಅನಿವಾರ್ಯತೆ ಮತ್ತು ಇತರ ಎಲ್ಲ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು 2023ರ ಜನವರಿಯಿಂದ ದರ ಹೆಚ್ಚಿಸಲು ನಿರ್ಧರಿಸಲಾಗಿದೆ. ಒಟ್ಟಾರೆಯಾಗಿ 30,000 ರೂ.ವರೆಗೆ ದರ ಹೆಚ್ಚಾಗಲಿದೆ. ವಿವಿಧ ಮಾದರಿಗಳಿಗೆ ಅನುಗುಣವಾಗಿ ದರ ಏರಿಕೆ ವ್ಯತ್ಯಾಸವಾಗಲಿದೆ’ ಎಂದು ಹೋಂಡಾ ಕಾರ್ಸ್ ಇಂಡಿಯಾ ಉಪಾಧ್ಯಕ್ಷ (ಮಾರಾಟ ಮತ್ತು ಮಾರ್ಕೆಟಿಂಗ್) ಕುನಲ್ ಬೆಹ್ಲ್ ತಿಳಿಸಿದ್ದಾರೆ.
ಎರಡನೇ ಹಂತದ ಬಿಎಸ್-VI ಮಾಲಿನ್ಯ ನಿಯಮಗಳು 2023ರ ಏಪ್ರಿಲ್ನಿಂದ ಜಾರಿಗೆ ಬರಲಿವೆ. ಈ ನಿಯಮದ ಅನ್ವಯ, ರಿಯಲ್ಟೈಮ್ ಮಾಲಿನ್ಯ ಮಟ್ಟ ನಿಯಂತ್ರಣಕ್ಕೆ ವಾಹನಗಳು ಸಾಧನಗಳನ್ನು ಅಳವಡಿಸಬೇಕಿದೆ. ಸಾಧನವು ಹೊಗೆ ಸೂಸುವಿಕೆ ಪ್ರಮಾಣದ ಮೇಲೆ ನಿರಂತರ ನಿಗಾ ಇಡಲಿವೆ. ಜತೆಗೆ, ಆಕ್ಸಿಜನ್ ಸೆನ್ಸರ್ಗಳನ್ನು ಒಳಗೊಂಡಿರಲಿದೆ. ಇಂಧನ ಉರಿಯುವಿಕೆ ಕಡಿಮೆ ಮಾಡಲು ವಾಹನಗಳಲ್ಲಿ ಪ್ರೋಗ್ರಾಮ್ಡ್ ಫ್ಯುಯೆಲ್ ಇಂಜಕ್ಷನ್ಸ್ ಅನ್ನೂ ಅಳವಡಿಸಬೇಕಾಗುತ್ತದೆ. ಇದು ಪೆಟ್ರೋಲ್ ಎಂಜಿನ್ಗೆ ಪ್ರವಹಿಸುವ ಇಂಧನದ ಪ್ರಮಾಣವನ್ನು ನಿಯಂತ್ರಿಸಲಿದೆ. ವಾಹನಗಳಲ್ಲಿ ಬಳಸುವ ಸೆಮಿ ಕಂಡಕ್ಟರ್ಗಳನ್ನೂ ಮೇಲ್ದರ್ಜೆಗೇರಿಸಬೇಕಿದೆ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: Car Prices Hike: ಜನವರಿಯಿಂದ ದುಬಾರಿಯಾಗಲಿವೆ ಈ ಕಾರುಗಳು
ಟಾಟಾ, ರೆನಾಲ್ಟ್, ಕಿಯಾ ಇಂಡಿಯಾ, ಮಾರುತಿ ಸುಜುಕಿ ಜನವರಿಯಿಂದ ಕಾರುಗಳ ಬೆಲೆ ಹೆಚ್ಚಳ ಮಾಡುವುದಾಗಿ ಇತ್ತೀಚೆಗೆ ತಿಳಿಸಿದ್ದವು. ಜನವರಿಯಿಂದ ಕಾರುಗಳ ಬೆಲೆಯಲ್ಲಿ ಶೇಕಡಾ 1.7ರಷ್ಟು ಹೆಚ್ಚಳ ಮಾಡುವುದಾಗಿ ಆಡಿ ಇಂಡಿಯಾ ಇತ್ತೀಚೆಗೆ ತಿಳಿಸಿತ್ತು. ಸರಕುಗಳ ಬೆಲೆ ಏರಿಕೆ, ವಿದೇಶಿ ವಿನಿಮಯ ದರಗಳಲ್ಲಿನ ಏರಿಳಿತ, ಹಣದುಬ್ಬರ, ಕಠಿಣ ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಹೊಸ ವಾಹನಗಳನ್ನು ಸಿದ್ಧಪಡಿಸಬೇಕಿರುವುದು ಮತ್ತು ಇತರ ಕಾರಣಗಳಿಂದಾಗಿ ವೆಚ್ಚ ನಿರಂತರ ಹೆಚ್ಚಳವಾಗಿದೆ. ಇದನ್ನು ಭಾಗಶಃ ಸರಿದೂಗಿಸುವುದಕ್ಕಾಗಿ ಬೆಲೆ ಹೆಚ್ಚಳ ಮಾಡಲಾಗುವುದು ಎಂದು ಕಂಪನಿಗಳು ತಿಳಿಸಿದ್ದವು. ಜನವರಿಯಿಂದ ವಾಣಿಜ್ಯ ವಾಹನಗಳ ಬೆಲೆಯನ್ನೂ ಶೇಕಡಾ 2ರಷ್ಟು ಹೆಚ್ಚಿಸುವುದಾಗಿ ಟಾಟಾ ಮೋಟರ್ಸ್ ಇತ್ತೀಚೆಗೆ ತಿಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ