Domestic Crude: ದೇಶೀಯ ಕಚ್ಚಾ ತೈಲದ ಹೆಚ್ಚುವರಿ ಅಬಕಾರಿ ಸುಂಕದಲ್ಲಿ ಭಾರೀ ಕಡಿತ; ಪೆಟ್ರೋಲ್, ಡೀಸೆಲ್ ದರದ ಮೇಲೂ ಪರಿಣಾಮ

ದೇಶೀಯ ಕಚ್ಚಾ ತೈಲದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಭಾರೀ ಕಡಿತ ಮಾಡಿರುವುದು ಪೆಟ್ರೋಲ್, ಡೀಸೆಲ್ ದರದ ಮೇಲೆ ಪರೋಕ್ಷವಾಗಿ ಪರಿಣಾಮ ಬೀರಬಹುದು.

Domestic Crude: ದೇಶೀಯ ಕಚ್ಚಾ ತೈಲದ ಹೆಚ್ಚುವರಿ ಅಬಕಾರಿ ಸುಂಕದಲ್ಲಿ ಭಾರೀ ಕಡಿತ; ಪೆಟ್ರೋಲ್, ಡೀಸೆಲ್ ದರದ ಮೇಲೂ ಪರಿಣಾಮ
ಸಾಂದರ್ಭಿಕ ಚಿತ್ರImage Credit source: PTI
Follow us
| Updated By: ಗಣಪತಿ ಶರ್ಮ

Updated on:Dec 16, 2022 | 10:41 AM

ನವದೆಹಲಿ: ದೇಶೀಯ ಕಚ್ಚಾ ತೈಲದ (Domestic Crude Oil) ಮೇಲಿನ ಹೆಚ್ಚುವರಿ ಅಬಕಾರಿ ಅಥವಾ ಕಸ್ಟಮ್ಸ್ ಸುಂಕದಲ್ಲಿ (Windfall tax) ಕೇಂದ್ರ ಸರ್ಕಾರ ಭಾರೀ ಕಡಿತ ಮಾಡಿದೆ. ಪರಿಷ್ಕೃತ ತೆರಿಗೆ ಇಂದಿನಿಂದಲೇ (December 16) ಜಾರಿಗೆ ಬರುತ್ತಿದೆ. ಸರ್ಕಾರಿ ಸ್ವಾಮ್ಯದ ಒಎನ್​ಜಿಸಿಯಂಥ (ONGC) ಸಂಸ್ಥೆಗಳು ಉತ್ಪಾದಿಸುವ ಕಚ್ಚಾ ತೈಲದ ಮೇಲೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಟನ್​ಗೆ 4,900 ರೂ.ನಿಂದ 1,700 ರೂ.ಗೆ ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಡೀಸೆಲ್ ರಫ್ತಿನ ಮೇಲಿನ ತೆರಿಗೆಯನ್ನೂ ಪ್ರತಿ ಲೀಟರ್​ಗೆ 8 ರೂ.ನಿಂದ 5 ರೂ.ಗೆ ಇಳಿಕೆ ಮಾಡಲಾಗಿದೆ.

ವಿಮಾನ ಇಂಧನ ಎಟಿಎಫ್​​ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್​ಗೆ 5 ರೂ.ನಿಂದ 1.5 ರೂ.ಗೆ ಇಳಿಕೆ ಮಾಡಲಾಗಿದೆ ಎಂದೂ ಅಧಿಸೂಚನೆ ತಿಳಿಸಿದೆ. ಕೇಂದ್ರ ಸರ್ಕಾರವು ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಣೆ ಮಾಡುತ್ತದೆ. ಜುಲೈ 1ರಂದು ಈ ತೆರಿಗೆ ಅಸ್ತಿತ್ವಕ್ಕೆ ಬಂದಿತ್ತು. ಪ್ರಾರಂಭದಲ್ಲಿ ಪೆಟ್ರೋಲ್, ಎಟಿಎಫ್​ ಮೇಲೆ ಪ್ರತಿ ಲೀಟರ್​ಗೆ 6 ರೂ. ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗುತ್ತಿತ್ತು. ಡೀಸೆಲ್ ಮೇಲೆ ಪ್ರತಿ ಲೀಟರ್​​ಗೆ 13 ರೂ. ವಿಧಿಸಲಾಗುತ್ತಿತ್ತು. ಹೆಚ್ಚುವರಿ ಅಬಕಾರಿ ಸುಂಕದಲ್ಲಿ ಈಗ ಮಾಡಿರುವ ಕಡಿತವು ಶೇಕಡಾ 65ರಷ್ಟಾಗಿದೆ.

ಇದನ್ನೂ ಓದಿ: Petrol Price On December 16: ಬೆಂಗಳೂರು, ದೆಹಲಿ, ಚೆನ್ನೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೀಗಿದೆ

ಏನಿದು ಹೆಚ್ಚುವರಿ ಅಬಕಾರಿ ಸುಂಕ?

ಕಚ್ಚಾ ತೈಲ ಉತ್ಪಾದನೆ, ಮಾರಾಟದಿಂದ ತೈಲ ಕಂಪನಿಗಳು ನಿಗದಿತ ಮಿತಿಗಿಂತ ಹೆಚ್ಚುವರಿಯಾಗಿ ಪಡೆಯುವ ಲಾಭದ ಮೇಲೆ ವಿಧಿಸುವ ತೆರಿಗೆಯೇ ಹೆಚ್ಚುವರಿ ಅಬಕಾರಿ ಸುಂಕ ಅಥವಾ ವಿಂಡ್​​ಫಾಲ್ ಟ್ಯಾಕ್ಸ್. ಉದಾಹರಣೆಗೆ; ತೈಲ ಕಂಪನಿಯೊಂದಕ್ಕೆ 100 ರೂ. ಲಾಭ ಈ ತಿಂಗಳು ಬರಬಹುದು ಎಂದು ನಿರೀಕ್ಷೆ ಮಾಡಿದ್ದರೆ 150 ರೂ. ಲಾಭ ಬಂದಿರುತ್ತದೆ! ಈ ಹೆಚ್ಚುವರಿ ಲಾಭಕ್ಕೆ ಹೆಚ್ಚುವರಿಯಾಗಿ ತೆರಿಗೆ ವಿಧಿಸಲಾಗುತ್ತದೆ. ಹೆಚ್ಚಾಗಿ ಸಾಗರೋತ್ತರ ಸಾಗಟ ಮತ್ತು ಮಾರಾಟದಿಂದ ತೈಲ ಸಂಸ್ಕರಣಾಗಾರಗಳು ಮತ್ತು ಕಂಪನಿಗಳು ಪಡೆಯುವ ಹೆಚ್ಚುವರಿ ಲಾಭದ ಮೇಲೆ ಈ ತೆರಿಗೆ ವಿಧಿಸಲಾಗುತ್ತದೆ.

ಪೆಟ್ರೋಲ್, ಡೀಸೆಲ್ ದರದ ಮೇಲೆ ಪರಿಣಾಮ

ದೇಶೀಯ ಕಚ್ಚಾ ತೈಲದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಭಾರೀ ಕಡಿತ ಮಾಡಿರುವುದು ಪೆಟ್ರೋಲ್, ಡೀಸೆಲ್ ದರದ ಮೇಲೆ ನೇರವಾಗಿ ಪರಿಣಾಮ ಬೀರದು. ಆದರೆ, ಹೆಚ್ಚುವರಿ ಲಾಭಾಂಶಕ್ಕೆ ಕಂಪನಿಗಳು ಪಾವತಿಸಬೇಕಾದ ತೆರಿಗೆ ಪ್ರಮಾಣ ಕಡಿಮೆಯಾಗಿರುವುದರಿಂದ ಪರೋಕ್ಷವಾಗಿ ಪೆಟ್ರೋಲ್, ಡೀಸೆಲ್ ದರದ ಮೇಲೆ ಪರಿಣಾಮವಾಗುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:29 am, Fri, 16 December 22