Australia Jobs: ಕೆಲಸ ಖಾಲಿ ಇದೆ.. ಕೆಲಸ ಖಾಲಿ ಇದೆ.. ಕೆಲಸ ಖಾಲಿ ಇದೆ.. ಆದರೆ ಆಸ್ಟ್ರೇಲಿಯಾದಲ್ಲಿ
ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ಅದೇನೆಂದರೆ, ಆಸ್ಟ್ರೇಲಿಯಾದಲ್ಲಿ ಭಾರೀ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ನಿಮಗೆ ಗೊತ್ತಾಯ್ತಾ? ಆಸ್ಟ್ರೇಲಿಯಾದಲ್ಲಿ ವಿಪರೀತ ಕೆಲಸಗಳು (Jobs) ಖಾಲಿ ಇವೆಯಂತೆ. ಅದರಲ್ಲೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಉದ್ಯೋಗಿಗಳಿಗಾಗಿ ಹುಡುಕಾಟ ನಡೆದಿದೆ. ಮೇ ತ್ರೈಮಾಸಿಕದಲ್ಲಿ ಸಿಬ್ಬಂದಿಗಾಗಿ ಅಲ್ಲಿ ಕಂಡಾಪಟ್ಟೆ ಡಿಮ್ಯಾಂಡಪ್ಪೋ ಡಿಮ್ಯಾಂಡ್. 2022ರ ಮೇ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ 4,80,000 ಖಾಲಿ ಹುದ್ದೆಗಳ ಲೆಕ್ಕದ ಮುಳ್ಳು ತೂಗುತ್ತಿದೆ. ಇದೊಂದು ಹೋಲಿಕೆಗೆ ಅಂತ ನೋಡುವುದಾದರೆ, ಫೆಬ್ರವರಿಯಲ್ಲಿ ಇದ್ದುದಕ್ಕಿಂತ 58 ಸಾವಿರ ಹೆಚ್ಚಿಗೆ ಎಂಬುದನ್ನು ಆಸ್ಟ್ರೇಲಿಯನ್ ಬ್ಯುರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಅಂಕಿ-ಅಂಶಗಳು ತೋರಿಸುತ್ತಿವೆ. ಇನ್ನೊಂದು ಎರಡು ವರ್ಷದ ಹಿಂದಿನ ಅಂಕಿ-ಅಂಶಗಳ ಕಡೆಗೆ ನೋಡಿದರೆ, ಅಂದರೆ 2020ರಲ್ಲಿನ 2,27,000 ಹುದ್ದೆಗೆ ಹೋಲಿಸಿದರೆ ಡಬಲ್ಗೂ ಹೆಚ್ಚಾಗಿದೆ ಬೇಡಿಕೆ.
ದತ್ತಾಂಶಗಳು ತೋರಿಸಿರುವಂತೆ, ಖಾಸಗಿ ವಲಯದಲ್ಲಿ 4,39,100 ಹುದ್ದೆಗಳು ಖಾಲಿ ಇವೆ. ಅಂದರೆ ಇದೇ ವರ್ಷದ ಫೆಬ್ರವರಿಗೆ ಹೋಲಿಸಿದಲ್ಲಿ ಶೇ 14..2ರಷ್ಟು ಹೆಚ್ಚು. ಇನ್ನು ಸರ್ಕಾರಿ ವಲಯದಲ್ಲಿನ ಹುದ್ದೆಗಳ ಸಂಖ್ಯೆ 41,000. ಫೆಬ್ರವರಿಗೆ ಹೋಲಿಸಿದರೆ ಶೇ 9.4ರಷ್ಟು ಹೆಚ್ಚು. ಕಾರ್ಮಿಕರ ಅಂಕಿ-ಅಂಶಗಳನ್ನು ನೋಡಿಕೊಳ್ಳುವ ಮುಖ್ಯಸ್ಥರು ಹೇಳುವಂತೆ, ಕಳೆದ ಮೂರು ತಿಂಗಳಲ್ಲಿ ಖಾಲಿ ಹುದ್ದೆಗಳ ಪ್ರಮಾಣ 2022ರ ಮೇ ಹೊತ್ತಿಗೆ ಶೇ 14ರಷ್ಟು ಹೆಚ್ಚಾಗಿದ್ದು, ಹತ್ತಿರ ಹತ್ತಿರ ಅರ್ಧ ಮಿಲಿಯನ್ಗೆ ತಲುಪಿದೆ. ಇದರಿಂದಾಗಿ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಾಗಿದೆ, ಅದರಲ್ಲೂ ಗ್ರಾಹಕರಿಗೆ ನೇರಾ ನೇರ ಎದುರಾಗುವ ಸಿಬ್ಬಂದಿಗೆ ಬೇಡಿಕೆ ಹೆಚ್ಚಾಗಿದೆ. ಹೀಗೇ ಮುಂದುವರಿದರೆ ಉದ್ಯಮದ ಕಾರ್ಯ ನಿರ್ವಹಣೆಗೆ ಅಡೆತಡೆ ಆಗಬಹುದು ಎನ್ನುತ್ತಾರೆ.
ಎಷ್ಟು ಉದ್ಯೋಗ ಬರಬಹುದು ಎಂಬ ಅಂದಾಜಿತ್ತೋ ಅವೆಲ್ಲವನ್ನೂ ಆಸ್ಟ್ರೇಲಿಯಾ ತಲೆಕೆಳಗು ಮಾಡಿದೆ. ಏಕೆಂದರೆ ಅಲ್ಲಿನ ನಿರುದ್ಯೋಗ ಪ್ರಮಾಣ 50 ವರ್ಷಗಳಲ್ಲೇ ಕನಿಷ್ಠ ಮಟ್ಟವಾದ ಶೇ 3.9ಕ್ಕೆ ಕುಸಿದಿದೆ. ಇನ್ನು ಯಾವ ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಖಾಲಿ ಇವೆ ಅಂತ ನೋಡಿದರೆ, ಅದು ವಿಕ್ಟೋರಿಯಾ. ಅಲ್ಲಿ ಈ ವರ್ಷದ ಫೆಬ್ರವರಿಯಿಂದ ಮೇ ತಿಂಗಳಿಗೆ ಶೇ 18ರಷ್ಟು ಹೆಚ್ಚಾಗಿದೆ. ಆ ನಂತರದ ಸ್ಥಾನ ನ್ಯೂ ಸೌತ್ ವೇಲ್ಸ್. ಅಲ್ಲಿ ಶೇ 12ರಷ್ಟು. ಕೊರೊನಾಗೆ ಮುಂಚೆ ಇದ್ದ ಬೇಡಿಕೆಗಿಂತ ಎಲ್ಲ ಉದ್ಯಮದಲ್ಲೂ ಈಗ ಹೆಚ್ಚಾಗಿದೆ. ಆದರೆ ತ್ರೈಮಾಸಿಕದ ದೃಷ್ಟಿಯಿಂದ ಒಂದು ವಲಯಕ್ಕಿಂತ ಮತ್ತೊಂದರಲ್ಲಿ ಬೇರೆ ಆಗಿದೆ.
ಆದರೂ ವಲಯವಾರು ಗಮನಿಸಿದಾಗ ಬೇಡಿಕೆ ವ್ಯತ್ಯಾಸಗಳು ಇರಲೇಬೇಕಲ್ಲವಾ? ರೀಟೇಲ್ ಟ್ರೇಡ್ನಲ್ಲಿ (ಶೇ 38) ಅತಿ ಹೆಚ್ಚು. ಆ ನಂತರ ಮಾಹಿತಿ ಮಾಧ್ಯಮ ಮತ್ತು ದೂರಸಂಪರ್ಕ ಸೇವೆಗಳು (ಶೇ 18) ಹಾಗೂ ಅದರ ನಂತರದಲ್ಲಿ ಕಲೆಗಳು ಮತ್ತು ರಿಕ್ರಿಯೇಷನ್ ಸೇವೆಗಳು (ಶೇ 16) ಇವೆ. ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ (RBA) ಬಡ್ಡಿ ದರವನ್ನು ಮೇ ತಿಂಗಳಿಂದ ಎರಡು ಸಲ ಶೇ 0.85ಕ್ಕೆ ಏರಿಸಲು ಇದೂ ಒಂದು ಕಾರಣ. ಇದು ಜುಲೈ ನೀತಿ ಸಭೆಯಲ್ಲಿ ಮತ್ತೆ 50 ಬೇಸಿಸ್ ಪಾಯಿಂಟ್ ಏರುವ ನಿರೀಕ್ಷೆ ಇದೆ.
ಇದನ್ನೂ ಓದಿ: IKEA Recruitment 2022: ಬೆಂಗಳೂರು ಐಕಿಯದಲ್ಲಿದೆ ಸ್ಥಳೀಯರಿಗೆ ಉದ್ಯೋಗಾವಕಾಶ