ಕಾರವಾರ ಕೇಣಿ ಬೇಲೆಕೇರಿ ಬಂದರು; ಅದಾನಿ ಕಂಪನಿ ಹಿಂದಿಕ್ಕಿದ ಜೆಎಸ್ಡಬ್ಲ್ಯುಗೆ ಪೋರ್ಟ್ ಪ್ರಾಜೆಕ್ಟ್
Keni Belekeri Port Development Project: ಕೇಣಿ ಬೇಲೆಕೇರಿ ಬಂದರು ಯೋಜನೆಯ ಗುತ್ತಿಗೆ ಜೆಎಎಸ್ಡಬ್ಲ್ಯು ಇನ್ಫ್ರಾಸ್ಟ್ರಕ್ಚರ್ ಪಾಲಾಗಿದೆ. 4,119 ಕೋಟಿ ರೂ ಮೊತ್ತದ ಈ ಯೋಜನೆ ತನಗೆ ಸಿಕ್ಕಿರುವ ವಿಚಾರವನ್ನು ಜೆಎಸ್ಡಬ್ಲ್ಯು ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಬಹಿರಂಗಪಡಿಸಿದೆ. ಕೇಣಿ ಬೇಲೆಕೇರಿ ಪೋರ್ಟ್ಗಾಗಿ ಜೆಎಸ್ಡಬ್ಲ್ಯು ಜೊತೆ ಅದಾನಿ ಪೋರ್ಟ್ಸ್ ಸಂಸ್ಥೆ ತೀವ್ರ ಪೈಪೋಟಿ ನೀಡಿತ್ತು. ಅಂತಿಮವಾಗಿ, ಜೆಎಸ್ಡಬ್ಲ್ಯುಗೆ ಈ ಪೋರ್ಟ್ ಗುತ್ತಿಗೆ ಸಿಕ್ಕಿದೆ.
ನವದೆಹಲಿ, ನವೆಂಬರ್ 17: ಕಾರವಾರದ ಅಂಕೋಲದಲ್ಲಿ ಪ್ರಸ್ತಾಪಿತ ಕೇಣಿ ಬೇಲೆಕೇರಿ ಬಂದರು (Keni Port) ಯೋಜನೆಯ ಗುತ್ತಿಗೆ ಜೆಎಎಸ್ಡಬ್ಲ್ಯು ಇನ್ಫ್ರಾಸ್ಟ್ರಕ್ಚರ್ ಪಾಲಾಗಿದೆ. 4,119 ಕೋಟಿ ರೂ ಮೊತ್ತದ ಈ ಯೋಜನೆ ತನಗೆ ಸಿಕ್ಕಿರುವ ವಿಚಾರವನ್ನು ಜೆಎಸ್ಡಬ್ಲ್ಯು ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಬಹಿರಂಗಪಡಿಸಿದೆ. ವರ್ಷಕ್ಕೆ 3 ಕೋಟಿ ಟನ್ಗಳ (30 ಮಿಲಿಯನ್ ಟನ್) ಸರಕು ಸಾಗಣೆ ಸಾಮರ್ಥ್ಯ ಇರುವಷ್ಟು ಬಂದರು ಅಭಿವೃದ್ಧಿಗೆ ಈ ಗುತ್ತಿಗೆ ಸಿಕ್ಕಿದೆ. ಮುಂದೆ ಈ ಪೋರ್ಟ್ ಸಾಮರ್ಥ್ಯ ಇನ್ನಷ್ಟು ಏರಿಸುವ ಇರಾದೆ ಇದೆ.
ಕೇಣಿ ಬೇಲೆಕೇರಿ ಪೋರ್ಟ್ಗಾಗಿ ಜೆಎಸ್ಡಬ್ಲ್ಯು ಜೊತೆ ಅದಾನಿ ಪೋರ್ಟ್ಸ್ ಸಂಸ್ಥೆ ತೀವ್ರ ಪೈಪೋಟಿ ನೀಡಿತ್ತು. ಮೊದಲಿಗೆ ಬಿಡ್ಗೆ ಪೂರ್ವಭಾವಿಯಾಗಿ ಈ ಯೋಜನೆಗೆ ಜೆಎಸ್ಡಬ್ಲ್ಯು ಇನ್ಫ್ರಾಸ್ಟ್ರಕ್ಚರ್ ಮತ್ತು ಅದಾನಿ ಪೋರ್ಟ್ಸ್ ಜೊತೆಗೆ ನವಯುಗ ಎಂಜಿನಿಯರಿಂಗ್ ಮತ್ತು ವಿಶ್ವ ಸಮುದ್ರ ಕಂಪನಿಗಳೂ ಆಸಕ್ತಿ ತೋರಿದ್ದವು. ಬಳಿಕ ಜೆಎಸ್ಡಬ್ಲ್ಯು ಮತ್ತು ಅದಾನಿ ಪೋರ್ಟ್ಸ್ ಸಂಸ್ಥೆಗಳಿಂದ ಮಾತ್ರ ಬಿಡ್ ಸಲ್ಲಿಕೆ ಆಗಿತ್ತು. ಅಂತಿಮವಾಗಿ, ಜೆಎಸ್ಡಬ್ಲ್ಯು ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಈ ಪೋರ್ಟ್ ಅಭಿವೃದ್ಧಿ ಗುತ್ತಿಗೆ ಸಿಕ್ಕಿತು.
ಇದನ್ನೂ ಓದಿ: LPG Cylinder Price: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ; ಬೆಂಗಳೂರಿನಲ್ಲಿ ಈಗೆಷ್ಟಿದೆ ಗ್ಯಾಸ್ ಬೆಲೆ?
ಜೆಎಸ್ಡಬ್ಲ್ಯು ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಬಂದರು ಕ್ಷೇತ್ರಕ್ಕೆ ಹೊಸದೇನಲ್ಲ. ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳಲ್ಲಿ ಒಟ್ಟು 9 ಬಂದುರಗಳನ್ನು ಅದು ನಿರ್ವಹಿಸುತ್ತಿದೆ. ಅಷ್ಟೂ ಕಡೆಯಿಂದ ಒಟ್ಟು 153 ಮಿಲಿಯನ್ ಟನ್ (ಎಂಟಿಪಿಎ) ಸಾಮರ್ಥ್ಯ ಹೊಂದಿದೆ. 2030ರಷ್ಟರಲ್ಲಿ ಇದು 300 ಎಂಟಿಪಿಎಗೆ ಹೆಚ್ಚಿಸುವ ಗುರಿ ಅದರದ್ದು.
ಕರ್ನಾಟಕದ ವಾಣಿಜ್ಯ ಚಟುವಟಿಕೆಗೆ ಪುಷ್ಟಿ
ಕೇಣಿ ಬೇಲಕೇರಿ ಬಂದರು ಕಾರವಾರದ ಅಂಕೋಲದಲ್ಲಿ ನಿರ್ಮಾಣ ಆಗಲಿದೆ. ಇದರ ಉತ್ತರಕ್ಕೆ ಗೋವಾದ ಮರ್ಮುಗೋವಾ ಪೋರ್ಟ್ ಇದೆ. ದಕ್ಷಿಣಕ್ಕೆ ನ್ಯೂ ಮಂಗಳೂರು ಪೋರ್ಟ್ ಇದೆ. ಕೇಣಿ ಬಂದರಿಗೆ ರೈಲು ಸಂಪರ್ಕ ಕೂಡ ನಡೆಯಲಿದೆ. ಕೊಂಕಣ ರೈಲು ಮಾರ್ಗದಿಂದ ಕೇಣಿ ಬಂದರಿಗೆ 8 ಕಿಮೀ ಉದ್ದದ ರೈಲು ಸಂಪರ್ಕ ಮಾರ್ಗ ಸಿದ್ಧವಾಗಲಿದೆ.
ಇದನ್ನೂ ಓದಿ: RBI: ಬಿಗಿಗೊಂಡ ಆರ್ಬಿಐ ನಿಯಮಗಳು; ಸಾಲಕ್ಕೆ ಬಡ್ಡಿದರ ಹೆಚ್ಚಳವಾಗುವ ಸಾಧ್ಯತೆ
ಕೇಣಿ ಬೇಲೆಕೇರಿ ಬಂದರು ಅಭಿವೃದ್ಧಿಯಿಂದ ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ, ಕಲಬುರ್ಗಿ ಮೊದಲಾದ ಪ್ರದೇಶಗಳಲ್ಲಿರುವ ಕೈಗಾರಿಕೆಗಳಿಗೆ ಪುಷ್ಟಿ ಸಿಗುತ್ತದೆ. ಕಲ್ಲಿದ್ದಲು, ಅದಿರು ಮತ್ತಿತರ ಕಚ್ಛಾ ವಸ್ತುಗಳ ಸಾಗಾಣಿಕೆಗೆ ಕೇಣಿ ಬಂದರು ಸಹಾಯವಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ