ಬೆಂಗಳೂರು, ಸೆಪ್ಟೆಂಬರ್ 28: ಹೊಸ ಕಾವೇರಿ ತಂತ್ರಾಂಶ ಅಳವಡಿಕೆ ಬಳಿಕ ರಾಜ್ಯದ ನೊಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ (Department of Stamp and Registration) ಸ್ವತ್ತುಗಳ ನೊಂದಣಿ ವ್ಯವಸ್ಥೆ ಬಲಗೊಂಡಿದೆ. ಭರಪೂರವಾಗಿ ದಸ್ತವೇಜುಗಳ ನೊಂದಣಿ (Documents registration) ಕಾರ್ಯ ನಡೆಯುತ್ತಿದೆ. ಕಾವೇರಿ ತಂತ್ರಾಂಶದ (Kavery 2.0 software) ಸಹಾಯದಿಂದ ರಾಜ್ಯದಲ್ಲಿ ಒಂದೇ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ದಸ್ತಾವೇಜುಗಳ ನೊಂದಣಿ ಆಗಿದೆಯಂತೆ. ಹಾಗಂತ ಸಚಿವರು ಮಾಹಿತಿ ನೀಡಿದ್ದಾರೆ. ಕಂದಾಯ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು ಒಂದೇ ದಿನದಲ್ಲಿ (ಸೆಪ್ಟೆಂಬರ್ 27) ನೊಂದಣಿ ಮತ್ತು ಮುದ್ರಾಂಕ ಇಲಾಖೆ 312 ಕೋಟಿ ರೂ ಲಾಭ ಮಾಡಿರುವ ಸಂಗತಿ ತಿಳಿಸಿದ್ದಾರೆ.
‘ಕಾವೇರಿ 2 ದೆಸೆಯಿಂದಾಗಿ ಇವತ್ತು ದಾಖಲೆಯ 26,058 ದಸ್ತಾವೇಜುಗಳ ನೋಂದಣಿ ಮಾಡಿದ್ದೇವೆ. 312 ಕೋಟಿ ರೂನಷ್ಟು ಆದಾಯ ಬಂದಿದೆ. ಕಾವೇರಿ 2ಗೆ ನಾವು ಬೆಂಬಲ ನೀಡಿದ್ದು ಸರಿ ಎಂದು ಸಾಬೀತಾಗಿದೆ. ತಂತ್ರಜ್ಞಾನ ಅಳವಡಿಕೆಯಿಂದಾಗಿಯೇ ಈ ದಾಖಲೆ ಸಾಧ್ಯವಾಗಿರುವುದು. ಈ ವ್ಯವಸ್ಥೆ ಬಹಳ ದೊಡ್ಡ ಲೋಡ್ ನಿರ್ವಹಿಸಬಲ್ಲುದು. ನಮ್ಮ ಸಿಬ್ಬಂದಿಗೆ ಧನ್ಯವಾದ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಟ್ವೀಟ್ ಮಾಡಿದ್ದಾರೆ.
Thanks to Kavery 2, we have registered a record 26058 documents today. An unprecedented and unparalleled achievement. Revenue of ₹312 cr.
Our support for Kavery 2 has proven right. This record was only possible because of adoption of technology. The system can handle this… pic.twitter.com/gxxGvRFObn— Krishna Byre Gowda (@krishnabgowda) September 27, 2023
ಸಚಿವರ ಈ ಟ್ವೀಟ್ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಹೊಸ ಆವೃತ್ತಿಯ ಕಾವೇರಿ ತಂತ್ರಾಂಶ ಬಂದ ಬಳಿಕ ವ್ಯವಸ್ಥೆ ಸುಧಾರಿಸಿದೆ ಎಂದು ಕೆಲವರು ಹೇಳಿದ್ದಾರೆ. ಆದರೆ, ರೈತರಿಗೆ ಖಾತೆ ಬದಲಾವಣೆ ಇತ್ಯಾದಿ ಸಮಸ್ಯೆ ನಿವಾರಣೆ ಆಗಿಲ್ಲ ಎಂದು ಒಂದಿಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಟೆಕ್ ಸಿಟಿ ಬೆಂಗಳೂರಲ್ಲಿ ತಾಂತ್ರಿಕ ತೊಂದರೆಯಿಂದ ಕಾಮಿಡಿಯನ್ ಟ್ರೆವೊರ್ ನೋವಾ ಶೋ ರದ್ದು; ಮಜುಮ್ದಾರ್ ಷಾ ರಿಯಾಕ್ಷನ್ ಹೀಗಿತ್ತು
ರಾಜ್ಯದಲ್ಲಿ 6,500 ಕೋಟಿ ರೂ ಮೌಲ್ಯದ ಆಸ್ತಿಗಳು ಅಧಿಕೃತವಾಗಿ ಒಂದೇ ದಿನದಲ್ಲಿ ವಹಿವಾಟಾಗಿವೆ. ಒಂದು ಆಸ್ತಿಗೆ ಸರಾಸರಿಯಾಗಿ 1.25 ಲಕ್ಷ ರೂನಷ್ಟು ಮುದ್ರಾಂಕ ಶುಲ್ಕ ಸಿಕ್ಕಿದೆ ಎಂದು ಒಬ್ಬರು ಅಂದಾಜು ಮಾಡಿದ್ದಾರೆ.
ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕಾವೇರಿ ತಂತ್ರಾಂಶ 2.0 ಅನ್ನು ರೂಪಿಸಲಾಗಿದೆ. ನೊಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸ್ವತ್ತುಗಳ ನೊಂದಣಿ ಕಾರ್ಯವನ್ನು ಸುಗಮಗೊಳಿಸಲು ಮತ್ತು ಉಪನೊಂದಣಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಈ ಹೊಸ ತಂತ್ರಾಂಶ ಸಹಾಯಕವಾಗಿದೆ.
ವಿಶೇಷ ಎಂದರೆ ಇಡೀ ರಾಜ್ಯಕ್ಕೆ ಒಂದೇ ಸರ್ವರ್ ಇರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಸರ್ವರ್ ಕೈಕೊಡುವ ಪ್ರಮೇಯ ಇರುವುದಿಲ್ಲ. ಕೆಲ ತಿಂಗಳ ಹಿಂದೆ ರಾಜ್ಯದ ಎಲ್ಲಾ 256 ಉಪನೊಂದಣಿ ಕಚೇರಿಗಳಲ್ಲಿ ಕಾವೇರಿ 2.0 ಸಾಫ್ಟ್ವೇರ್ ಅನ್ನು ಅಳವಡಿಸಲಾಗಿದೆ. ಹಿಂದೆ ಒಂದು ಉಪನೊಂದಣಿ ಕಚೇರಿಯಲ್ಲಿ 40 ದಾಖಲೆಗಳ ನೊಂದಣಿ ಆಗುತ್ತಿತ್ತು. ಈಗ ಕಾವೇರಿ 2.0 ಬಂದ ಬಳಿಕ ಒಂದು ಕಚೇರಿಯಲ್ಲಿ 150ಕ್ಕೂ ಹೆಚ್ಚು ದಾಖಲೆಗಳ ನೊಂದಣಿ ಆಗುತ್ತಿದೆಯಂತೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾವೇರಿ 2.0 ಜಾರಿ, ಆಸ್ತಿ ನೋಂದಾಣಿ ಸರಳ: ಇದು ಹೇಗೆ ಕಾರ್ಯನಿರ್ವಹಿಸುತ್ತೆ? ಇದರ ಅನುಕೂಲಗಳೇನು?
ಮೂರು ಹಂತದಲ್ಲಿ ಆಸ್ತಿಗಳ ನೊಂದಣಿ ನಡೆಯುತ್ತದೆ. ನೊಂದಣಿ ಪೂರ್ವ, ನೊಂದಣಿ ಮತ್ತು ನೊಂದಣಿ ನಂತರ, ಹೀಗೆ ಮೂರು ಹಂತಗಳ ಪ್ರಕ್ರಿಯೆ ಇರುತ್ತದೆ. ನೊಂದಣಿ ಪೂರ್ವ ಹಂತದಲ್ಲಿ, ನಾಗರಿಕರೇ ಆನ್ಲೈನ್ ಮೂಲಕ ದಾಖಲೆಗಳನ್ನು ಅಪ್ಲೋಡ್ ಮಾಡುತ್ತಾರೆ. ಅದನ್ನು ಉಪನೋಂದಣಾಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಅದಾದ ಬಳಿಕ ನಾಗರಿಕರು ಶುಲ್ಕ ಪಾವತಿಸಬೇಕು. ಶುಲ್ಕ ಕಟ್ಟಿದ ಬಳಿಕ ನೊಂದಣಿ ಸಮಯ ನಿಗದಿ ಮಾಡಿಕೊಳ್ಳಬಹುದು.
ಇದಾದ ಬಳಿಕ ನೊಂದಣಿ ಹಂತರ ಇರುತ್ತದೆ. ಉಪನೊಂದಣಿ ಕಚೇರಿಗೆ ಹೋಗಿ ಭಾವಚಿತ್ರ ಮತ್ತು ಹೆಬ್ಬೆಟ್ಟು ಗುರುತನ್ನು ನೀಡಬೇಕು. ಇಲ್ಲಿಗೆ ಬಹುತೇಕ ಮುಗಿಯುತ್ತದೆ.
ಮೂರನೇ ಹಂತದಲ್ಲಿ, ಡಿಜಿಟಲ್ ಸಹಿ ಆಗಿರುವ ದಸ್ತಾವೇಜನ್ನು ನಾಗರಿಕರ ಡಿಜಿಲಾಕರ್ ಖಾತೆಗೆ ಅಥವಾ ಬೇರೆ ಸಂಪರ್ಕ ಪ್ಲಾಟ್ಫಾರ್ಮ್ಗೆ ಕಳುಹಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ