ಚಿನ್ನ ಭಾರತೀಯರ ಪಾಲಿಗೆ ಸಾಂಪ್ರದಾಯಿಕ ವಸ್ತು, ಪ್ರತಿಷ್ಠೆಯ ವಸ್ತು, ಕಷ್ಟಕಾಲಕ್ಕೆ ಆಗುವ ವಸ್ತು, ಸಂಪತ್ತು ವೃದ್ಧಿಸುವ ಹೂಡಿಕೆಯ ವಸ್ತು, ಹೀಗೆ ನಾನಾ ರೀತಿಯಲ್ಲಿ ಇದು ಬೇಡಿಕೆ ಪಡೆದಿದೆ. ಚಿನ್ನದ ನಾಣ್ಯ, ಡಿಜಿಟಲ್ ಚಿನ್ನ ಖರೀದಿಸುವವರಿಗಿಂತ ಚಿನ್ನಾಭರಣ ಖರೀದಿಸುವವರೇ ಹೆಚ್ಚು. ನೀವು ಖರೀದಿಸಿದ ಚಿನ್ನ ನಕಲಿಯೋ ಅಥವಾ ಅಸಲಿಯೋ ಎಂಬ ಅನುಮಾನ ಬರಬಹುದು. ಅಥವಾ ನೀವು 22 ಕ್ಯಾರಟ್ ಚಿನ್ನದ ಬದಲಿಗೆ 18 ಕ್ಯಾರಟ್ ಚಿನ್ನ ಪಡೆದಿರಬಹುದು. ಸಾಧ್ಯಾಸಾಧ್ಯತೆಗಳು ಹಲವಿರುತ್ತವೆ. ಹೀಗಾಗಿ, ಚಿನ್ನ ಅಸಲಿಯಾ, ಅದರ ಶುದ್ಧತೆ ಎಷ್ಟು ಇವೆಲ್ಲವನ್ನೂ ಸ್ವತಂತ್ರವಾಗಿ ಪರಿಶೀಲಿಸಬಹುದು.
ಸರ್ಕಾರವು ಚಿನ್ನದ ಶುದ್ಧತೆಯನ್ನು ತಿಳಿಸುವ ಹಾಲ್ಮಾರ್ಕ್ ಮುದ್ರೆಯ ವ್ಯವಸ್ಥೆ ಮಾಡಿದೆ. ಯಾವುದೇ ಚಿನ್ನ ಮತ್ತು ಬೆಳ್ಳಿಯ ವಸ್ತುವಿಗೆ ಹಾಲ್ಮಾರ್ಕ್ ಕಡ್ಡಾಯವಾಗಿರಬೇಕು. ಬಿಐಎಸ್ನ ಲೋಗೋ, ಆರು ಅಂಕಿಗಳ ಎಚ್ಯುಐಡಿ, ಮತ್ತು ಶುದ್ಧತೆ ಪ್ರಮಾಣ, ಹೀಗೆ ಮೂರು ಗುರುತುಗಳು ಹಾಲ್ಮಾರ್ಕ್ನಲ್ಲಿರುತ್ತವೆ. ಇವು ಬಹಳ ಸಣ್ಣದಾಗಿರುವುದರಿಂದ ಮೇಲ್ನೋಟಕ್ಕೆ ಸುಲಭಕ್ಕೆ ಕಣ್ಣಿಗೆ ಬೀಳುವುದಿಲ್ಲ.
ಇದನ್ನೂ ಓದಿ: ಪಿಎಂ ವಿಶ್ವಕರ್ಮ ಯೋಜನೆ; ಒಂದು ವರ್ಷದಲ್ಲಿ ಎರಡೂವರೆ ಕೋಟಿ ಅರ್ಜಿ; ನೊಂದಾಯಿತರಲ್ಲಿ ಕರ್ನಾಟಕದವರೇ ಹೆಚ್ಚು
ಹಾಲ್ಮಾರ್ಕ್ ಹಾಕುವ ವ್ಯವಸ್ಥೇ 2021ರಿಂದ ಆರಂಭವಾಗಿದೆ. ಹಿಂದೆಲ್ಲಾ ಇದು ಇರಲಿಲ್ಲ. ಆಗ ಖರೀದಿಸಿದ ಚಿನ್ನಕ್ಕೆ ಹಾಲ್ಮಾರ್ಕ್ ಇರುವುದಿಲ್ಲ. ನೀವು ಈ ಚಿನ್ನದ ಶುದ್ಧತೆಯನ್ನು ಯಾವುದಾದರೂ ಬಿಐಎಸ್ ಅನುಮೋದಿತ ಹಾಲ್ಮಾರ್ಕ್ ಕೇಂದ್ರಕ್ಕೆ ಹೋಗಿ ಪರೀಕ್ಷಿಸಬಹುದು.
ಬಿಐಎಸ್ ಅನುಮೋದಿತ ಎಎಚ್ಸಿ ಕೇಂದ್ರಗಳಲ್ಲಿ ನೀವು ಚಿನ್ನದ ವಸ್ತುವಿನ ಶುದ್ಧತೆಯನ್ನು ಪರೀಕ್ಷಿಸಬಹುದು. ನಾಲ್ಕು ಐಟಂಗಳವರೆಗಿನ ಚಿನ್ನಕ್ಕೆ 200 ರೂ ಶುಲ್ಕ ಇದೆ. ಐದು ಮತ್ತು ಹೆಚ್ಚಿನ ಐಟಂಗಳ ಪರೀಕ್ಷೆ ಮಾಡಿಸುವುದಾದರೆ ಪ್ರತಿ ಐಟಂಗೆ 45 ರೂ ಆಗುತ್ತದೆ.
ಇದನ್ನೂ ಓದಿ: ರತನ್ ಟಾಟಾ ಹಳೆಯ ಲವ್ ಸ್ಟೋರಿ; ಅಡ್ಡಿಯಾಗಿತ್ತು ಚೀನಾ ಗೋಡೆ; ಟಾಟಾ ಕೈತಪ್ಪಿದ್ದಕ್ಕೆ ಪರಿತಪಿಸಿದ್ದ ಅಮೆರಿಕನ್ ಚೆಲುವೆ
ಇಲ್ಲಿ ಗ್ರಾಹಕರ ಕಣ್ಣೆದುರೇ ಚಿನ್ನದ ಶುದ್ಧತೆಯ ಪರೀಕ್ಷೆ ಮಾಡಲಾಗುತ್ತದೆ. ಅಲ್ಲಿಯೇ ಪ್ರಮಾಣಪತ್ರ ಕೊಡಲಾಗುತ್ತದೆ. ಚಿನ್ನದ ಶುದ್ಧತೆ ಎಷ್ಟು ಕ್ಯಾರಟ್ನದ್ದು ಎಂಬುದನ್ನು ಈ ಪರೀಕ್ಷೆ ನಿಖರವಾಗಿ ತಿಳಿಸುತ್ತದೆ. ಚಿನ್ನದ ತೂಕ, ಶುದ್ಧತೆ ಇವೆಲ್ಲವೂ ತಿಳಿಯುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ