ನವದೆಹಲಿ: ಟ್ವಿಟ್ಟರ್ ನಂತರ ವಿಶ್ವದ ಅತಿದೊಡ್ಡ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಎನಿಸಿದ ಕೂ (Koo App) ಇತ್ತೀಚಿನ ದಿನಗಳಿಂದ ಒಟ್ಟು ಸುಮಾರು 250-300 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದೆ. ನಷ್ಟ ಹೆಚ್ಚುತ್ತಿರುವುದು, ಆ್ಯಟಿವ್ ಯೂಸರ್ಗಳ ಸಂಖ್ಯೆ ಕಡಿಮೆ ಆಗಿರುವುದು, ಜಾಗತಿಕ ಆರ್ಥಿಕತೆಯ ಹಿಂಜರಿತ ಇರುವುದು ಕೂ ಕಂಪನಿಯ ಜಾಬ್ ಕಟ್ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಭಾರತೀಯರೇ ಆರಂಭಿಸಿರುವ ಕೂ ಆ್ಯಪ್ ಬಳಿ ಸಾಕಷ್ಟು ಫಂಡಿಂಗ್ ಇಲ್ಲದಿರುವುದೂ ಮತ್ತೊಂದು ಕಾರಣ ಎಂದು ಕೆಲ ವರದಿಗಳು ಹೇಳುತ್ತಿವೆ. ಆದರೆ, ಕೂ ಸಂಸ್ಥೆ ಇತ್ತೀಚೆಗಷ್ಟೇ 10 ಮಿಲಿಯನ್ ಡಾಲರ್ (ಸುಮಾರು 82 ಕೋಟಿ ರುಪಾಯಿ) ಮೊತ್ತದಷ್ಟು ಫಂಡಿಂಗ್ ಕಲೆಹಾಕಿತ್ತು. ತನ್ನ ಬಳಿ ಸಾಕಷ್ಟು ಫಂಡ್ ಇದೆ ಎಂದು ಕೂ ವಕ್ತಾರರು ಹೇಳಿದ್ದಾರೆ.
2022 ಸೆಪ್ಟೆಂಬರ್ನಿಂದ 2023 ಮಾರ್ಚ್ವರೆಗೂ ಎರಡು ಹಂತಗಳಲ್ಲಿ ಕೂ ತನ್ನ ಉದ್ಯೋಗಿಗಳನ್ನು ಲೇ ಆಫ್ ಮಾಡಿರುವುದು ತಿಳಿದುಬಂದಿದೆ. ಸೆಪ್ಟಂಬರ್ ತಿಂಗಳಲ್ಲಿ ಸಂಸ್ಥೆಯ ಅಪರೇಷನ್ಸ್ ಮತ್ತು ಬ್ಯಾಕ್ಎಂಡ್ನ 15 ಮಂದಿ ಸೇರಿದಂತೆ ಒಟ್ಟು 90 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ನಂತರದ ತಿಂಗಳಲ್ಲಿ ಇನ್ನೂ ಬಹಳ ಮಂದಿಯನ್ನು ಮನೆಗೆ ಕಳುಹಿಸಲಾಗಿದೆ. ಒಟ್ಟು ಹತ್ತಿರಹತ್ತಿರ 300 ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಅಂದರೆ ಕೂ ಸಂಸ್ಥೆಯಲ್ಲಿನ ಶೇ. 30ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ.
ಬೆಂಗಳೂರು ಮೂಲದ ಬೊಂಬಿನಾಟೆ ಟೆಕ್ನಾಲಜೀಸ್ ಸಂಸ್ಥೆಯಿಂದ 2020ರಲ್ಲಿ ಆರಂಭವಾಗಿದ್ದು ಕೂ. ಕನ್ನಡಿಗ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಂಕ್ ಬಿದವಟ್ಕ ಅವರು ಕೂ ಸ್ಥಾಪಕರು. ಕೂ ಬಿಡುಗಡೆಗೆ ಮುನ್ನ ಮಂಡ್ಯದಲ್ಲಿ ಕನ್ನಡದಲ್ಲಿ ಕೂ ಮೂಲಕ ಪ್ರಾಯೋಗಿಕ ಆರಂಭ ಪಡೆದಿತ್ತು. ಆ ಬಳಿಕ ಹಿಂದಿಯಲ್ಲಿ ಇದರ ಚಾಲನೆ ಆಯಿತು.
ಇದನ್ನೂ ಓದಿ: Meta Layoffs: ವಾಟ್ಸಾಪ್, ಫೇಸ್ಬುಕ್ನಿಂದ 3ನೇ ಸುತ್ತಿನ ಲೇ ಆಫ್; ತಲೆ ಮೇಲೆ ಕೈಹೊತ್ತ ಮೆಟಾ ಉದ್ಯೋಗಿಗಳು
ಸಂಪೂರ್ಣ ದೇಶೀಯವಾಗಿಯೇ ತಯಾರಾದ, ಮತ್ತು ದೇಶೀಯ ಭಾಷೆಯಲ್ಲಿ ಅಭಿವ್ಯಕ್ತಪಡಿಸಲು ಸೂಕ್ತ ವೇದಿಕೆ ಎಂದೇ ಬಿಂಬಿಸುತ್ತಾ ಜಾಹೀರುಗೊಂಡ ಕೂ ಕೇಂದ್ರ ಸರ್ಕಾರದ ಆತ್ಮನಿರ್ಭರ್ ಆ್ಯಪ್ ಇನೋವೇಶನ್ ಚಾಲೆಂಜ್ನಲ್ಲಿ ಅತ್ಯುತ್ತಮ ಆ್ಯಪ್ ಎಂದು ಶಹಬಾಜ್ಗಿರಿ ಪಡೆಯಿತು. ಈ ಸ್ಪರ್ಧೆಯಲ್ಲಿ ಸುಮಾರು 7,000 ಆ್ಯಪ್ಗಳು ಸರ್ಕಾರದ ಗಮನ ಸೆಳೆಯಲು ಸ್ಪರ್ಧೆ ಮಾಡಿದ್ದವು.
ಕೂ ಮೈಕ್ರೋಬ್ಲಾಗಿಂಗ್ ಆ್ಯಪ್ 3 ವರ್ಷದಲ್ಲಿ 6 ಕೋಟಿ ಡೌನ್ಲೋಡ್ ಆಗಿದೆ. 2021 ಮತ್ತು 2022ರಲ್ಲಿ ಇದರ ಡೌಲ್ಲೋಡ್ ಪ್ರಮಾಣ ಬಹಳ ಹೆಚ್ಚಾಗಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಮತ್ತು ಟ್ವಿಟ್ಟರ್ ನಡುವಿನ ತಿಕ್ಕಾಟ ಎನ್ನಲಾಗಿದೆ. ಸರ್ಕಾರದ ಹೇಳಿದ ವ್ಯಕ್ತಿ ಮತ್ತು ಸಂಸ್ಥೆಗಳ ಖಾತೆಗಳನ್ನು ಮತ್ತು ಟ್ವೀಟ್ಗಳನ್ನು ಅಳಿಸಲು ಟ್ವಿಟ್ಟರ್ ನಿರಾಕರಿಸಿತ್ತು. ಆಗ ಸರ್ಕಾರ ಟ್ವಿಟ್ಟರ್ ಅನ್ನು ನಿರ್ಲಕ್ಷಿಸಿ, ಕೂ ಆ್ಯಪ್ ಅನ್ನು ಹೆಚ್ಚೆಚ್ಚು ಪ್ರೊಮೋಟ್ ಮಾಡಲು ಅರಂಭಿಸಿತು. ಸರ್ಕಾರದ ಅಧಿಕೃತ ಹೇಳಿಕೆಗಳು ಟ್ವಿಟ್ಟರ್ ಬದಲು ಕೂ ಅ್ಯಪ್ನಲ್ಲಿ ಮೊದಲು ಪ್ರಕಟವಾಗುತ್ತಿದ್ದವು. ಈ ಆ ಹಂತದಲ್ಲಿ ಕೂ ಅ್ಯಪ್ ಅತಿ ಹೆಚ್ಚು ಡೌನ್ಲೋಡ್ ಕಂಡು, ಹೆಚ್ಚು ಮಂದಿ ಸಕ್ರಿಯ ಬಳಕೆದಾರರು ಸೃಷ್ಟಿಯಾಗಿದ್ದರು.
ಕೂ ಆ್ಯಪ್ ಹಲವಾರು ಕಾರ್ಪೊರೇಟ್ ಕಂಪನಿಗಳ ಜಾಹೀರಾತುಗಳನ್ನು ತನ್ನ ಆ್ಯಪ್ನಲ್ಲಿ ಕ್ರೋಢೀಕರಿಸಲು ಯಶಸ್ವಿಯಾದರೂ ಅದರ ಆದಾಯದಲ್ಲಿ ನಿರೀಕ್ಷಿತ ಬೆಳವಣಿಗೆ ಆಗಿಲ್ಲ. 2021-22ರ ಹಣಕಾಸು ವರ್ಷದಲ್ಲಿ ಕೂ ಆದಾಯ 8 ಲಕ್ಷದಿಂದ 14 ಲಕ್ಷಕ್ಕೆ ಏರಿತು. ಆದರೆ, ಇದೇ ಅವಧಿಯಲ್ಲಿ ಅದರ ನಷ್ಟ 35 ಕೋಟಿಯಿಂದ 197 ಕೋಟಿ ರೂಪಾಯಿಗೆ ಹೆಚ್ಚಾಗಿರುವುದು ತಿಳಿದುಬಂದಿದೆ.
ಇನ್ನು, ಕೂ ಆ್ಯಪ್ 6 ಕೋಟಿಯಷ್ಟು ಡೌನ್ಲೋಡ್ ಅದರೂ ಆ್ಯಕ್ಟಿವ್ ಯೂಸರ್ಸ್ ಬಹಳ ಕಡಿಮೆ. 2022 ಜುಲೈ ತಿಂಗಳಲ್ಲಿ 94 ಲಕ್ಷ ಮಂದಿ ಸಕ್ರಿಯ ಬಳಕೆದಾರರಿದ್ದರು. ಅದೇ ಗರಿಷ್ಠ ಮಟ್ಟ. ಇದೀಗ ಆ್ಯಕ್ಟಿವ್ ಯೂಸರ್ಸ್ ಸಂಖ್ಯೆ 40 ಲಕ್ಷ ಇರಬಹುದು ಎಂದು ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಬ್ಲೂಮ್ ವೆಂಚರ್ಸ್, ಆ್ಯಕ್ಸಲ್, ಕಲಾರಿ ಕ್ಯಾಪಿಟಲ್, 3ಒನ್4 ಕ್ಯಾಪಿಟಲ್ ಮೊದಲಾದ ಕಂಪನಿಗಳಿಂದ ಕೂ ಒಟ್ಟು 70 ಮಿಲಿಯನ್ ಡಾಲರ್ (ಸುಮಾರು 580 ಕೋಟಿ ರೂ) ಹೂಡಿಕೆ ಪಡೆದಿದೆ. ಮತ್ತೆ ಹೂಡಿಕೆ ಪಡೆಯುವುದಿಲ್ಲ ಎಂದು ಕೂ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ದೊಡ್ಡ ದೊಡ್ಡ ಲಾಭ ಪಡೆಯುವ ಕಂಪನಿಗಳೇ ಈಗ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿವೆ. ತಾನು ಈ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಕೂ ತನ್ನ ಜಾಬ್ ಕಟ್ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.