Business Cycle Fund: ಬ್ಯುಸಿನೆಸ್ ಸೈಕಲ್ ಫಂಡ್ ಆರಂಭಿಸಿದ ಕೋಟಕ್; ಹೂಡಿಕೆಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಈ ಮಾಹಿತಿ ತಿಳಿದುಕೊಳ್ಳಿ
ಉದ್ಯಮ ವಲಯದ ಏರಿಳಿತಗಳಿಗೆ ಅನುಗುಣವಾಗಿ ಈ ಫಂಡ್ಗಳಲ್ಲಿ ಫಂಡ್ ಮ್ಯಾನೇಜರ್ಗಳು ಹೂಡಿಕೆ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಬೆಂಗಳೂರು: ಜನಪ್ರಿಯ ಮ್ಯೂಚುವಲ್ ಫಂಡ್ ಕಂಪನಿ ‘ಕೋಟಕ್ ಮ್ಯೂಚುವಲ್ ಫಂಡ್’ (Kotak Mutual Fund) ಇದೀಗ ‘ಕೋಟಕ್ ಬ್ಯುಸಿನೆಸ್ ಸೈಕಲ್ ಫಂಡ್’ಗೆ (Kotak Business Cycle Fund – KBCF) ಎನ್ಎಫ್ಒ (New Fund Offer – NFO) ಘೋಷಿಸಿದೆ. ಉದ್ಯಮ ವಲಯದ ಏರಿಳಿತಗಳಿಗೆ ಅನುಗುಣವಾಗಿ ಈ ಫಂಡ್ಗಳಲ್ಲಿ ಫಂಡ್ ಮ್ಯಾನೇಜರ್ಗಳು ಹೂಡಿಕೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸೆ 7ರಿಂದ ಆರಂಭವಾಗಿರುವ ಎನ್ಎಫ್ಒ ಸಂಗ್ರಹ ಸೆ 21ರವರೆಗೆ ಮುಂದುವರಿಯಲಿದೆ.
ಹೇಗೆ ಕೆಲಸ ಮಾಡುತ್ತದೆ?
ಒಂದು ನಿರ್ದಿಷ್ಟ ಸಂದರ್ಭದಲ್ಲಿ ನಿರ್ದಿಷ್ಟ ವಲಯಗಳು ಉತ್ತಮ ಸಾಧನೆ ತೋರುವುದು ಸಾಮಾನ್ಯ. ಈ ನಿಯಮ ಆಧರಿಸಿಯೇ ‘ಕೋಟಕ್ ಬ್ಯುಸಿನೆಸ್ ಸೈಕಲ್ ಫಂಡ್’ ರೂಪಿಸಲಾಗಿದೆ. ಚಾಲ್ತಿಯಲ್ಲಿರುವ ಬ್ಯುಸಿನೆಸ್ ಮೂಡ್ಗೆ ಅನುಗುಣವಾಗಿ ಲಾಭ ಗಳಿಕೆಯ ಸಾಧ್ಯತೆ ಹೆಚ್ಚಾಗಿರುವ ಉದ್ಯಮಗಳಲ್ಲಿ ಈ ಫಂಡ್ ಮೂಲಕ ಹೂಡಿಕೆ ಮಾಡುತ್ತದೆ.
ಉದಾಹರಣೆಗೆ ಆರ್ಥಿಕತೆಯ ವಿಸ್ತರಣೆಯ ಹಂತದಲ್ಲಿ ವಿವಿಧ ಸೂಚ್ಯಂಕಗಳ ಪ್ರಭಾವಕ್ಕೆ ಒಳಗಾಗುವ ವಲಯಗಳು ಹೆಚ್ಚು ಲಾಭ ಗಳಿಸುತ್ತವೆ. ಲೋಹ, ವಿದ್ಯುತ್, ಮೂಲಸೌಕರ್ಯ ಮತ್ತು ಸಾಲ ಸೌಲಭ್ಯ ಒದಗಿಸುವ ಕಂಪನಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಆರ್ಥಿಕತೆಯು ಸ್ಥಿರತೆಯತ್ತ ಮುಖ ಮಾಡಿದಾಗ ವಿದ್ಯುತ್, ಬ್ಯಾಂಕಿಂಗ್ ಮತ್ತು ಕೈಗಾರಿಕೆಗಳು ಉತ್ತಮ ಲಾಭ ಮಾಡುತ್ತವೆ. ಆರ್ಥಿಕತೆಯು ಒಂದು ಹಂತದಲ್ಲಿ ಸ್ಥಿರತೆ ಸಾಧಿಸಿದಾಗ ಗ್ರಾಹಕ ವಲಯ (FMCG), ಐಟಿ, ಔಷಧ ವಲಯದ ಕಂಪನಿಗಳು ಹೆಚ್ಚು ಲಾಭ ಮಾಡುತ್ತವೆ. ಯಾವುದೇ ದೇಶದ ಆರ್ಥಿಕತೆಯ ಚಕ್ರವು ಮೂರು ಹಂತಗಳನ್ನು ಸದಾ ಸುತ್ತುತ್ತಿರುತ್ತದೆ. ಈ ಸೂತ್ರದ ಆಧಾರದ ಮೇಲೆಯೇ ಬ್ಯುಸಿನೆಸ್ ಸೈಕಲ್ ಫಂಡ್ ಹೂಡಿಕೆಗೆ ಕಂಪನಿಗಳನ್ನು ಆರಿಸಿಕೊಳ್ಳುತ್ತದೆ.
ಟಾಪ್-ಡೌನ್ ಮತ್ತು ಬಾಟಮ್-ಅಪ್ ಸಂಯೋಜನೆಯ ಲೆಕ್ಕಾಚಾರದಲ್ಲಿ ಹೂಡಿಕೆಗೆ ಆರಿಸಿಕೊಳ್ಳುವ ಕಂಪನಿಗಳ ಷೇರುಮೌಲ್ಯವನ್ನು ಗುರುತಿಸಲಾಗುತ್ತದೆ. ಪ್ರತಿ ವಲಯದಲ್ಲಿ ಬಲಿಷ್ಠವಾಗಿರುವ ಕಂಪನಿಗಳನ್ನು ಗುರುತಿಸಿ ಹೂಡಿಕೆ ಮಾಡಲಾಗುವುದು ಎಂದು ಕೋಟಕ್ ಮ್ಯೂಚುವಲ್ ಫಂಡ್ನ ಉಪಾಧ್ಯಕ್ಷ ಪಂಕಜ್ ಟಿಬ್ರೆವಾಲ್ ಹೇಳಿದ್ದಾರೆ.
ವೈಶಿಷ್ಟ್ಯವೇನು?
ಈ ಫಂಡ್ನಲ್ಲಿ ಸಂಗ್ರಹವಾಗುವ ಮೊತ್ತದ ಶೇ 80ರಷ್ಟನ್ನು ವಲಯವಾರು ಹೂಡಿಕೆಗೆ ಬಳಸಲಾಗುತ್ತದೆ. ಹಾಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ಉತ್ತಮವಾಗಿ ಲಾಭ ಮಾಡುತ್ತಿರುವ ವಲಯಗಳನ್ನು ಗುರುತಿಸಿ ಹಣವನ್ನು ಫಂಡ್ ಮ್ಯಾನೇಜರ್ಗಳು ಹೂಡಿಕೆ ಮಾಡುತ್ತಾರೆ. ದೇಶೀಯ ಮತ್ತು ಜಾಗತಿಕ ಅರ್ಥಿಕ ವ್ಯವಸ್ಥೆಯ ಪರಿಸ್ಥಿತಿಗೆ ಅನುಗುಣವಾಗಿ ಹೂಡಿಕೆಯ ನಿರ್ಧಾರವನ್ನು ತೆಗೆದುಕೊಳ್ಳಲು ಫಂಡ್ ಮ್ಯಾನೇಜರ್ಗೆ ಮುಕ್ತ ಅವಕಾಶ ಇರುತ್ತದೆ. ಉತ್ತಮ ವಲಯಗಳನ್ನು ಗುರುತಿಸಲು ಹಲವು ಜಾಗತಿಕ ಸೂಚ್ಯಂಕಗಳನ್ನು ಫಂಡ್ ಮ್ಯಾನೇಜರ್ಗಳು ಬಳಸಿಕೊಳ್ಳುತ್ತಾರೆ.
ಒಂದಿಷ್ಟು ಸಮಸ್ಯೆಗಳೂ ಇವೆ
ಆರ್ಥಿಕತೆಯಲ್ಲಿ ಬದಲಾವಣೆಗಳಿಗೆ ಹಲವು ಕಾರಣಗಳಿರುತ್ತವೆ. ನಿರ್ದಿಷ್ಟ ವಲಯವು ಯಾವ ದಿನಾಂಕದಿಂದ ಉತ್ತಮ ಸಾಧನೆ ಮಾಡುತ್ತದೆ ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಕೆಲವೊಮ್ಮೆ ಏರಿಕೆಯ ಅವಧಿ ಮತ್ತು ಏರಿಕೆಯಾಗಿರುವ ದರವು ಕೆಲವೇ ದಿನಗಳಲ್ಲಿ ಬದಲಾಗಬಹುದು. ಅಂಥ ಬೆಳವಣಿಗೆಯನ್ನು ಫಂಡ್ ಮ್ಯಾನೇಜರ್ ಹೇಗೆ ಗುರುತಿಸಿ, ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಬಹಳ ಮುಖ್ಯವಾಗುತ್ತದೆ.
‘ಸಂಗ್ರಹವಾಗುವ ನಿಧಿಯಲ್ಲಿ ಶೇ 80ರಷ್ಟನ್ನು ಮಾತ್ರವೇ ಷೇರುಪೇಟೆಯಲ್ಲಿ ಹೂಡಿಕೆ ಮಾಡಿ, ಉಳಿದ ಶೇ 20ರಷ್ಟನ್ನು ರಿಸ್ಕ್ ಮ್ಯಾನೇಜ್ಮೆಂಟ್ಗಾಗಿ ಉಳಿಸಿಕೊಳ್ಳುತ್ತೇವೆ. ಆರ್ಥಿಯತೆಯಲ್ಲಿ ವಲಯಗಳ ಏರಿಳಿತದ (Sector Linked Volatility) ಆತಂಕವನ್ನು ಸಮರ್ಪಕವಾಗಿ ನಿರ್ವಹಿಸುವಷ್ಟು ಚಾಕಚಕ್ಯತೆ ಫಂಡ್ ಮ್ಯಾನೇಜರ್ಗಳಿಗೆ ಇರುತ್ತದೆ’ ಎಂದು ಕೋಟಕ್ ಕಂಪನಿಯ ಪಂಕಜ್ ಟಿಬ್ರೆವಾಲ್ ಹೇಳುತ್ತಾರೆ.
‘ಬೇರೆ ಮ್ಯೂಚವಲ್ ಫಂಡ್ಗಳಿಗೆ ಬ್ಯುಸಿನೆಸ್ ಸೈಕಲ್ ಫಂಡ್ಗೂ ಸಾಕಷ್ಟು ವ್ಯತ್ಯಾಸಗಳಿವೆ. ಹೂಡಿಕೆದಾರರು ಅದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ವಲಯವಾರು ಏರಿಳಿತವನ್ನು ಸಮರ್ಪಕವಾಗಿ ಅರ್ಥೈಸಿಕೊಂಡು ಫಂಡ್ ಮ್ಯಾನೇಜರ್ ನಿರ್ಧಾರ ತೆಗೆದುಕೊಂಡರೆ ಮಾತ್ರ ಹೂಡಿಕೆದಾರರಿಗೆ ಲಾಭವಾಗುತ್ತದೆ. ಸಕಾಲದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಪ್ರತಿಫಲ ಕಡಿಮೆಯಾಗಬಹುದು’ ಎನ್ನುವ ಪ್ಲಾನ್ ರುಪಿ ಇನ್ವೆಸ್ಟ್ಮೆಂಟ್ ಸರ್ವಿಸಸ್ನ ಅಮೊಲ್ ಜೋಶಿ ಎಚ್ಚರಿಕೆಯನ್ನು ‘ಮನಿಕಂಟ್ರೋಲ್ ಡಾಟ್ ಕಾಮ್’ ಜಾಲತಾಣ ವರದಿ ಮಾಡಿದೆ.
ಹೂಡಿಕೆ ಮಾಡಬೇಕೆ?
ಭಾರತದ ಮ್ಯೂಚುವಲ್ ಫಂಡ್ ಕ್ಷೇತ್ರಕ್ಕೆ ಬ್ಯುಸಿನೆಸ್ ಸೈಕಲ್ ಫಂಡ್ ಇನ್ನೂ ಹೊಸತು. ಐಸಿಐಸಿಐ ಮತ್ತು ಟಾಟಾ ಕಂಪನಿಗಳ ಬ್ಯುಸಿನೆಸ್ ಸೈಕಲ್ ಫಂಡ್ಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಎರಡೂ ಫಂಡ್ಗಳು ಒಂದು ವರ್ಷಕ್ಕೆ ಸರಾಸರಿ ಶೇ 13.5ರಷ್ಟು ಪ್ರತಿಫಲ ತಂದುಕೊಟ್ಟಿವೆ. ಬದಲಾಗುವ ಪರಿಸ್ಥಿತಿಗೆ ಚುರುಕಾಗಿ ಸ್ಪಂದಿಸಲು ಫಂಡ್ ಮ್ಯಾನೇಜರ್ಗಳಿಗೆ ಬ್ಯುಸಿನೆಸ್ ಸೈಕಲ್ ಫಂಡ್ಗಳು ಮುಕ್ತ ಅವಕಾಶ ಕೊಡುತ್ತವೆ. ಇದೇ ಕಾರಣಕ್ಕೆ ಲಾಭಗಳಿಕೆ ಸಾಧ್ಯತೆಯೂ ಹೆಚ್ಚು. ಆದರೆ ಫಂಡ್ ಮ್ಯಾನೇಜರ್ಗಳ ಲೆಕ್ಕಾಚಾರ ತುಸು ಏರುಪೇರಾಗಿ ಮಾರುಕಟ್ಟೆ ಪರಿಸ್ಥಿತಿ ಬದಲಾದರೆ ಈ ಫಂಡ್ಗಳು ನೆಗೆಟಿವ್ ರಿಟರ್ನ್ಸ್ ಕೊಡಬಹುದು. ಈ ಎಚ್ಚರಿಕೆಯೊಂದಿಗೆ ಹೂಡಿಕೆದಾರರು ಮುಂದಿನ ಹೆಜ್ಜೆ ಇಡಬೇಕಿದೆ.
(ಸ್ಪಷ್ಟನೆ: ಈ ಲೇಖನದ ಮೂಲಕ ಯಾವುದೇ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಬೇಕು ಎಂದು ‘ಟಿವಿ9 ಕನ್ನಡ ಡಿಜಿಟಲ್’ ಶಿಫಾರಸು ಮಾಡುತ್ತಿಲ್ಲ. ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆಯು ಮಾರುಕಟ್ಟೆಯ ಪರಿಸ್ಥಿತಿಯಿಂದ ಪ್ರಭಾವಿತವಾಗುತ್ತವೆ. ಹೂಡಿಕೆದಾರರಿಗೆ ಲಾಭದ ಅವಕಾಶದೊಂದಿಗೆ ನಷ್ಟ ಅನುಭವಿಸುವ ಅಪಾಯವೂ ಇರುತ್ತದೆ)
Published On - 2:48 pm, Fri, 9 September 22