
ಮುಂಬೈ, ಆಗಸ್ಟ್ 13: ದಕ್ಷಿಣ ಭಾರತದ ಖ್ಯಾತ ಆಭರಣ ಸಂಸ್ಥೆಯಾದ ‘ಲಲಿತಾ ಜ್ಯುವೆಲ್ಲರಿ ಮಾರ್ಟ್ ಲಿಮಿಟೆಡ್’ (Lalithaa Jewellery Mart Limited) ತನ್ನ ಐಪಿಒ (IPO- ಆರಂಭಿಕ ಸಾರ್ವಜನಿಕ ಕೊಡುಗೆ) ದಿನಾಂಕ ಮತ್ತು ಶೇರು ದರವನ್ನು ಅಧಿಕೃತವಾಗಿ ಘೋಷಿಸಿದೆ. ಲಲಿತಾ ಜ್ಯುವೆಲರಿ ಕಂಪನಿಯ ಐಪಿಒ ಆಗಸ್ಟ್ 17ರಂದು ಆರಂಭಗೊಂಡು ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ.
ಇದರಲ್ಲಿ ಹೂಡಿಕೆ ಮಾಡಬೇಕೆನ್ನುವವರು ಕನಿಷ್ಠ 74 ಶೇರುಗಳನ್ನು ಖರೀದಿಸಬೇಕು. ಸುಮಾರು ₹14,060 ರಿಂದ ₹14,874 ಹೂಡಿಕೆ ಮಾಡಬೇಕು. ಅದಕ್ಕೂ ಹೆಚ್ಚು ಹೂಡಿಕೆ ಮಾಡಬೇಕೆನ್ನುವವರು ಇನ್ನೂ 74 ಶೇರುಗಳನ್ನು ಖರೀದಿಸಬೇಕು. ಹೀಗೆ 74 ಗುಣಕಗಳಲ್ಲಿ ಶೇರುಗಳನ್ನು ಖರೀದಿಸುತ್ತಾ ಹೋಗಬಹುದು.
ಇದನ್ನೂ ಓದಿ: ಸ್ಮಾಲ್ ಫೈನಾನ್ಸ್ ಬ್ಯಾಂಕ್ vs ಕಾರ್ಪೊರೇಟ್ ಎಫ್ಡಿ, ಎರಡರಲ್ಲೂ ಶೇ. 8ಕ್ಕಿಂತ ಹೆಚ್ಚು ಬಡ್ಡಿ; ಯಾವುದರಲ್ಲಿ ಹೂಡಿಕೆ ಸೂಕ್ತ?
ಒಟ್ಟು ಐಪಿಒ ಮೊತ್ತ: ₹1,200 ಕೋಟಿಯ ಹೊಸ ಶೇರುಗಳ ವಿತರಣೆ (Fresh Issue) ಹಾಗೂ ಕಂಪನಿಯ ಪ್ರವರ್ತಕರಾದ (ಪ್ರೊಮೋಟರ್) ಎಂ. ಕಿರಣ್ ಕುಮಾರ್ ಜೈನ್ ಅವರಿಂದ ₹500 ಕೋಟಿ ಮೌಲ್ಯದ ಶೇರುಗಳ ಮಾರಾಟ (Offer-for-Sale) ಒಳಗೊಂಡಿದೆ.
ಲಲಿತಾ ಜ್ಯುವೆಲ್ಲರಿ ಭಾರತದ ದಕ್ಷಿಣ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪುದುಚೇರಿಯಲ್ಲಿ ಒಟ್ಟು 61 ಮಳಿಗೆಗಳನ್ನು ಹೊಂದಿದೆ. ಸಂಸ್ಥೆಯು ಶೇ.60 ಕ್ಕಿಂತ ಹೆಚ್ಚು ಆದಾಯವನ್ನು ಟೈಯರ್-2 ಮತ್ತು ಟೈಯರ್-3 ನಗರಗಳಿಂದ ಪಡೆಯುತ್ತಿದೆ.
ಆರ್ಥಿಕ ವರ್ಷ 2026 ರಲ್ಲಿ ಕಂಪನಿಯು ₹25,023.93 ಕೋಟಿ ಕಾರ್ಯಾಚರಣೆ ಆದಾಯ ಹಾಗೂ ₹1,009.82 ಕೋಟಿ ನಿವ್ವಳ ಲಾಭ ದಾಖಲಿಸಿದೆ.
ಇದನ್ನೂ ಓದಿ: ಸರ್ಕಾರದ ಈ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ಕಾರ್ಡ್ ಅಗತ್ಯ, ಹೀಗೆ ಅರ್ಜಿ ಸಲ್ಲಿಸಿ
ಈ ಕೊಡುಗೆಯಲ್ಲಿ ದೊಡ್ಡ ಸಾಂಸ್ಥಿಕ ಹೂಡಿಕೆದಾರರಿಗೆ (QIB) ಶೇ 50 ಕ್ಕಿಂತ ಹೆಚ್ಚು ಶೇರು ಲಭ್ಯವಿರುವುದಿಲ್ಲ. ಸಾಂಸ್ಥಿಕೇತರ ಹೂಡಿಕೆದಾರರಿಗೆ (NII) ಕನಿಷ್ಠ ಶೇ. 15 ಮತ್ತು ರೀಟೇಲ್ ಹೂಡಿಕೆದಾರರಿಗೆ (Retail) ಕನಿಷ್ಠ ಶೇ. 35 ರಷ್ಟು ಶೇರುಗಳನ್ನು ಕಾಯ್ದಿರಿಸಲಾಗಿದೆ.
ಆನಂದ್ ರಾಠಿ ಅಡ್ವೈಸರ್ಸ್ ಲಿಮಿಟೆಡ್ ಮತ್ತು ಈಕ್ವಿರಸ್ ಕ್ಯಾಪಿಟಲ್ ಲಿಮಿಟೆಡ್ ಸಂಸ್ಥೆಗಳು ಈ ಐಪಿಒಗೆ ಬುಕ್-ರನ್ನಿಂಗ್ ಲೀಡ್ ಮ್ಯಾನೇಜರ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ