Recurring Deposit: ರೆಕರಿಂಗ್ ಡೆಪಾಸಿಟ್ ಮೇಲೆ ಉತ್ತಮ ಬಡ್ಡಿ ಸಿಗುವ ನಾಲ್ಕು ಖಾಸಗಿ ಬ್ಯಾಂಕ್ಗಳಿವು
ರೆಕರಿಂಗ್ ಡೆಪಾಸಿಟ್ ಮೇಲೆ ಉತ್ತಮ ಬಡ್ಡಿ ದರ ನೀಡುವ ನಾಲ್ಕು ಖಾಸಗಿ ಬ್ಯಾಂಕ್ಗಳ ಮಾಹಿತಿ ಇಲ್ಲಿದೆ. ವಿವಿಧ ಅವಧಿಗೆ ಸಾಮಾನ್ಯರಿಗೆ, ಹಿರಿಯ ನಾಗರಿಕರಿಗೆ ನೀಡುವ ರಿಟರ್ನ್ಸ್ ಎಷ್ಟು ಎಂಬ ಮಾಹಿತಿ ಇಲ್ಲಿದೆ.
ರೆಕರಿಂಗ್ ಡೆಪಾಸಿಟ್ (Recurring Deposit) ಅಥವಾ ಸಂಚಿತ ನಿಧಿ ಎಂಬುದು ಬಹಳ ಹೆಸರಾಂತ ಉಳಿತಾಯ ಇನ್ಸ್ಟ್ರುಮೆಂಟ್. ಭವಿಷ್ಯದ ಗುರಿಯೊಂದಿಗೆ ದೊಡ್ಡ ಮೊತ್ತವನ್ನು ಉಳಿತಾಯ ಮಾಡಲು ಸಣ್ಣ ಹೂಡಿಕೆದಾರರಿಗೆ ಇರುವ ಉತ್ತಮ ಮಾರ್ಗ. ಈ ಹೂಡಿಕೆಯಲ್ಲಿ ಅಪಾಯ ಇಲ್ಲ. ಜತೆಗೆ ನಿಶ್ಚಿತ ರಿಟರ್ನ್ ಕೂಡ ಬರುತ್ತದೆ. ಇದರ ಮೂಲಕ ಸಣ್ಣ ಹೂಡಿಕೆದಾರರು ಭವಿಷ್ಯದ ಖರ್ಚನ್ನು ನಿಭಾಯಿಸಬಹುದು ಎಂಬ ಉದ್ದೇಶ ಇರಿಸಿಕೊಂಡಿರುತ್ತಾರೆ. ಇನ್ನು ಈ ರೆಕರಿಂಗ್ ಡೆಪಾಸಿಟ್ಗೆ ತಿಂಗಳು ತಿಂಗಳು ಠೇವಣಿ ಮಾಡಬಹುದು. ಹಾಗೆ ಠೇವಣಿ ಇಡುತ್ತಾ ಹೋದಂತೆ ಆ ಅವಧಿಯ ಉದ್ದಕ್ಕೂ ಬಡ್ಡಿ ಸೇರ್ಪಡೆ ಆಗುತ್ತಾ ಹೋಗುತ್ತದೆ. ಯಾರಿಗೆ ಮ್ಯೂಚುವಲ್ ಫಂಡ್ನಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಮೂಲಕ ಹೂಡಿಕೆ ಮಾಡುವುದು ಹಾಗೂ ಅಪಾಯ ತೆಗೆದುಕೊಳ್ಳುವುದು ಇಷ್ಟವಿರುವುದಿಲ್ಲವೋ ಅಂಥವರಿಗೆ ಈ ರೆಕರಿಂಗ್ ಡೆಪಾಸಿಟ್ ಸೂಕ್ತವಾಗುತ್ತದೆ. ಆರ್.ಡಿ.ಯಲ್ಲಿ ರಿಟರ್ನ್ ಎಂಬುದು ಆಯಾ ಬ್ಯಾಂಕ್ಗಳಲ್ಲಿ ನೀಡುವ ಬಡ್ಡಿ ದರದ ಮೇಲೆ ನಿರ್ಧಾರ ಆಗುತ್ತದೆ. ಹೆಚ್ಚಿನ ಬಡ್ಡಿ ದರ ಇರುವ ಕಡೆ ಆರ್ಡಿಗೆ ಹೆಚ್ಚಿನ ರಿಟರ್ನ್ಸ್ ಸಿಗುತ್ತದೆ. ಆಕರ್ಷಕ ಬಡ್ಡಿ ದರ ನೀಡುವ ನಾಲ್ಕು ಖಾಸಗಿ ಬ್ಯಾಂಕ್ಗಳ ವಿವರ ಇಲ್ಲಿದೆ:
ಯೆಸ್ ಬ್ಯಾಂಕ್ 6 ತಿಂಗಳಿಂದ 10 ವರ್ಷದ ಅವಧಿಗೆ ಯೆಸ್ ಬ್ಯಾಂಕ್ನಲ್ಲಿ ಆರ್ಡಿ ಖಾತೆ ತೆರೆಯಬಹುದು. ಶೇ 5ರಿಂದ ಶೇ 6.50 ತನಕ ಎಷ್ಟು ಅವಧಿಯದು ಎಂಬ ಆಧಾರದಲ್ಲಿ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ 50 ಬಿಪಿಎಸ್ನಿಂದ 75 ಬಿಪಿಎಸ್ ಹೆಚ್ಚಿನ ಬಡ್ಡಿ ದರ ಸಿಗುತ್ತದೆ. 33 ತಿಂಗಳ ಅವಧಿವರೆಗೆ 50 ಬಿಪಿಎಸ್ ಹೆಚ್ಚುವರಿ ಬಡ್ಡಿ ಸಿಗುತ್ತದೆ. 36 ತಿಂಗಳಿಂದ 10 ವರ್ಷದ ತನಕ ಹಿರಿಯ ನಾಗರಿಕರಿಗೆ 75 ಬಿಪಿಎಸ್ ಹೆಚ್ಚಿನ ಬಡ್ಡಿ ಸಿಗುತ್ತದೆ (60 ವರ್ಷದೊಳಗಿನವರಿಗಿಂತ). ಕನಿಷ್ಠ 6 ತಿಂಗಳ ಅವಧಿಗೆ ಸಾಮಾನ್ಯರಿಗೆ ಶೇ 5ರ ವಾರ್ಷಿಕ ದರ, ಹಿರಿಯ ನಾಗರಿಕರಿಗೆ ಶೇ 5.50 ದರ ಸಿಗುತ್ತದೆ. 5 ವರ್ಷದಿಂದ 10 ವರ್ಷದ ತನಕದ ಅವಧಿಗೆ ಸಾಮಾನ್ಯರಿಗೆ ಶೇ 6.50 ಹಾಗೂ ಹಿರಿಯ ನಾಗರಿಕರಿಗೆ ಶೇ 7.25ರ ಬಡ್ಡಿ ಸಿಗುತ್ತದೆ.
ಆರ್ಬಿಎಲ್ ಬ್ಯಾಂಕ್ ಆರ್ಬಿಎಲ್ ಬ್ಯಾಂಕ್ನಿಂದ 6 ತಿಂಗಳಿಂದ 10 ವರ್ಷದ ಅವಧಿಗೆ ಆರ್.ಡಿ. ಖಾತೆ ತೆರೆಯಲಾಗುತ್ತದೆ. ಈ ಅವಧಿಗೆ ಶೇ 5.25ರಿಂದ ಶೇ 6.75ರ ತನಕ ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ 50 ಬಿಪಿಎಸ್ ಬಡ್ಡಿ ದರ ನೀಡುತ್ತದೆ. ಕನಿಷ್ಠ ತಿಂಗಳಿಗೆ 1000 ರೂಪಾಯಿ ಠೇವಣಿ ಮಾಡುವುದರೊಂದಿಗೆ ಆರ್ಡಿ ಖಾತೆಯನ್ನು ತೆರೆಯಬಹುದು. ಸೆಪ್ಟೆಂಬರ್ 1, 2021ರಿಂದ ಅನ್ವಯ ಆಗುವಂತೆ ಬಡ್ಡಿ ದರವನ್ನು ಪರಿಷ್ಕರಣೆ ಮಾಡಲಾಗಿದೆ.
ಆಕ್ಸಿಸ್ ಬ್ಯಾಂಕ್ ಈ ಬ್ಯಾಂಕ್ನಲ್ಲಿ ಖಾತೆದಾರರು ನೆಟ್ ಬ್ಯಾಂಕಿಂಗ್ ಮೂಲಕವಾಗಿ ಆನ್ಲೈನ್ನಲ್ಲಿ ಖಾತೆ ತೆರೆಯಬಹುದು. ತಿಂಗಳಿಗೆ ಕನಿಷ್ಠ 500 ರೂಪಾಯಿ ಮೊತ್ತದೊಂದಿಗೆ ಆರಂಭಿಸುವುದಕ್ಕೆ ಅವಕಾಶ ಇದೆ. ಇನ್ನು ಅವಧಿಯು 6 ತಿಂಗಳಿಂದ 10 ವರ್ಷದ ತನಕ ಇರುತ್ತದೆ. ಸೆಪ್ಟೆಂಬರ್ 23, 2021ರಿಂದ ಅನ್ವಯ ಆಗುವಂತೆ ಬಡ್ಡಿ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಮೊತ್ತ, ಅವಧಿಯ ಆಧಾರದಲ್ಲಿ ಕನಿಷ್ಠ ಶೇ 2.50ರಿಂದ ಆರಂಭವಾಗಿ ಗರಿಷ್ಠ ಶೇ 5.75 ತನಕ ಬಡ್ಡಿ ಸಿಗುತ್ತದೆ.
ಐಡಿಎಫ್ಸಿ ಫಸ್ಟ್ ಬ್ಯಾಂಕ್ ಈ ಬ್ಯಾಂಕ್ನಲ್ಲಿ ತಿಂಗಳಿಗೆ ಕನಿಷ್ಠ 100 ರೂಪಾಯಿ ಕಟ್ಟುವುದರೊಂದಿಗೆ ಆರ್ಡಿ ಖಾತೆ ತೆರೆಯಬಹುದು. ಒಂದು ತಿಂಗಳಿಗೆ ಗರಿಷ್ಠ 75 ಸಾವಿರ ರೂಪಾಯಿ ಠೇವಣಿ ಮಾಡಬಹುದು. 6 ತಿಂಗಳಿಂದ 10 ವರ್ಷದ ಅವಧಿ ತನಕ ಆರ್.ಡಿ. ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ. ಬಡ್ಡಿ ದರವು ಶೇ 5ರಿಂದ ಶೇ 6ರಷ್ಟಿದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ 50 ಬೇಸಿಸ್ ಪಾಯಿಂಟ್ ಬಡ್ಡಿ ದರ ದೊರೆಯುತ್ತದೆ.
ಇದನ್ನೂ ಓದಿ: TDS: ಬ್ಯಾಂಕ್ ಠೇವಣಿ ಮೇಲೆ ಬರುವ ಬಡ್ಡಿಗೆ ಪರಿಶಿಷ್ಟ ಪಂಗಡವರಿಗೆ ಟಿಡಿಎಸ್ ಕಡಿತವಿಲ್ಲ; ಕೇಂದ್ರದ ಅಧಿಸೂಚನೆ