ಸರ್ಕಾರದ ಮತ್ತೊಂದು ಕಂಪನಿ ಷೇರುಪೇಟೆಗೆ: ಐಪಿಒ ಬಿಡುಗಡೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ECGC: ಕಂಪನಿಯನ್ನು ಷೇರುಪೇಟೆಯಲ್ಲಿ ಲಿಸ್ಟ್ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿರುವ ಬಗ್ಗೆ ಸಚಿವ ಪಿಯೂಷ್ ಗೋಯಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು
ದೆಹಲಿ: ಕೇಂದ್ರ ಸರ್ಕಾರವು ಆರಂಭಿಕ ಸಾರ್ವಜನಿಕ ಕೊಡುಗೆ (Intial Public Offering – IPO) ಮೂಲಕ ಬಂಡವಾಳ ಹಿಂಪಡೆಯಲು ತೀರ್ಮಾನಿಸಿದೆ. ಎಕ್ಸ್ಪೋರ್ಟ್ ಕ್ರೆಡಿಟ್ ಕಾರ್ಪೊರೇಷನ್ ಕಂಪನಿಯನ್ನು ಷೇರುಪೇಟೆಯಲ್ಲಿ ಲಿಸ್ಟ್ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿರುವ ಬಗ್ಗೆ ಸಚಿವ ಪಿಯೂಷ್ ಗೋಯಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಈ ಐಪಿಒ ಮೂಲಕ ₹ 4,400 ಕೋಟಿ ಬಂಡವಾಳ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರದಿಂದ ಸುಮಾರು 59 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಪೈಕಿ 2.9 ಲಕ್ಷ ಉದ್ಯೋಗಗಳು ಸಂಘಟಿತ ವಲಯದಲ್ಲಿ, ಉಳಿದವರು ಅಸಂಘಟಿತ ವಲಯಗಳಲ್ಲಿ ರೂಪುಗೊಳ್ಳಬಹುದು ಎಂದು ಆಶಿಸಲಾಗಿದೆ.
ಮುಂದಿನ ಹಣಕಾಸು ವರ್ಷದಲ್ಲಿ ಈ ಕಂಪನಿಯು ಷೇರುಪೇಟೆಯಲ್ಲಿ ವಹಿವಾಟು ಆರಂಭಿಸುವ ಸಾಧ್ಯತೆಯಿದೆ ಎಂದು ಪಿಯೂಷ್ ಗೋಯೆಲ್ ಹೇಳಿದರು. 2021-26ರ ಅವಧಿಯಲ್ಲಿ ಎಕ್ಸ್ಪೋರ್ಟ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ಗೆ ₹ 4,400 ಕೋಟಿ ಬಂಡವಾಳ ಮರುಪೂರಣ ಮಾಡಲು ಸರ್ಕಾರ ನಿರ್ಧರಿಸಿದೆ. ಕಾರ್ಮಿಕ ಆಧರಿತ ಕೈಗಾರಿಕೆಗಳಲ್ಲಿ ರಫ್ತು ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. 2020-21ರಲ್ಲಿ ₹ 6.02 ಲಕ್ಷ ಕೋಟಿ ಮೊತ್ತದ ವಸ್ತುಗಳನ್ನು ರಫ್ತು ಮಾಡಲು ಸಂಸ್ಥೆಯು ಬೆಂಬಲ ನೀಡಿದೆ. ಎಕ್ಸ್ಪೋರ್ಟ್ ಕ್ರೆಡಿಟ್ ಪೈಕಿ ಅರ್ಧದಷ್ಟು ಹಣಕ್ಕೆ ಇನ್ಷುರೆನ್ಸ್ ಇರುತ್ತದೆ ಎಂದು ವಿವರಿಸಿದರು.
ಎಕ್ಸ್ಪೋರ್ಟ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಕಂಪನಿಯು ಸದೃಢಗೊಳ್ಳುವುದರಿಂದ ರಫ್ತುದಾರರಿಗೆ, ಬ್ಯಾಂಕ್ಗಳಿಗೆ ಅಗತ್ಯ ಬೆಂಬಲ ಸಿಗಲಿದೆ. ಸಂಘಟಿತ ವಲಯದಲ್ಲಿ 2.6 ಲಕ್ಷ ಉದ್ಯೋಗ ಸೇರಿದಂತೆ 59 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಚೀನಾದಿಂದ ಆಮದಾಗುವ ಸೇಬಿನ ಮೇಲಿನ ಸುಂಕವನ್ನು ಕಡಿಮೆ ಮಾಡಿಲ್ಲ. ಸುಂಕ ಕಡಿಮೆ ಮಾಡಿದ್ದೇವೆ ಎನ್ನುವುದು ಆಧಾರ ರಹಿತ ಹೇಳಿಕೆ. ಆರ್ಥಿಕ ಮುನ್ನಡೆ ಸಾಧಿಸಲು, ಚಟುವಟಿಕೆಗಳನ್ನು ವಿಸ್ತರಿಸಲು ಭಾರತಕ್ಕೆ ಈಗ ಸಾಕಷ್ಟು ಅವಕಾಶಗಳಿವೆ. ಇದನ್ನು ಬಳಸಿಕೊಂಡು ಆರ್ಥಿಕ ಚಟುವಟಿಕೆ ವಿಸ್ತರಿಸಲು ಯತ್ನಿಸುತ್ತೇವೆ ಎಂದು ಹೇಳಿದರು.
ಬಿಸಿಯೂಟ ಯೋಜನೆಯ ಹೆಸರು ಬದಲಾವಣೆ ಪಿಎಂ ಪೋಷಣ್ ಯೋಜನೆ ಜಾರಿಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರಗಳ ಸಹಕಾರದಿಂದ ಎಲ್ಲ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸಲಾಗುವುದು. ಇದಕ್ಕಾಗಿ ₹ 1.31 ಲಕ್ಷ ಕೋಟಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಪಿಎಂ ಪೋಷಣ್ ಯೋಜನೆಯು ಐದು ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆಯಿಂದ ಮಕ್ಕಳ ಹಾಜರಾತಿ ಹೆಚ್ಚಾಗುತ್ತದೆ. ಪ್ರಸ್ತುತ ಜಾರಿಯಲ್ಲಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಇದೀಗ ಪಿಎಂ ಪೋಷಣ್ ಯೋಜನೆ ಎಂಬ ಹೊಸ ಹೆಸರಿನಿಂದ ಕರೆಯಲಾಗುತ್ತಿದೆ ಎಂದು ನುಡಿದರು.
Union Cabinet also approves listing of Export Credit Guarantee Corporation (ECGC) Ltd. through the Initial Public Offer (IPO) on the stock exchange: Union Minister Piyush Goyal pic.twitter.com/6g61m2KRv2
— ANI (@ANI) September 29, 2021
(Union Cabinet Approves Listing of Export Credit Guarantee Corporation Ltd)
ಇದನ್ನೂ ಓದಿ: LIC IPO: ಎಲ್ಐಸಿ ಐಪಿಒದಿಂದ ಉದ್ಯೋಗ ನಷ್ಟ, ಸಾಮಾಜಿಕ ವೆಚ್ಚ ಎಂದು ಎಚ್ಚರಿಸಿದ ಕಾರ್ಮಿಕ ಒಕ್ಕೂಟ
ಇದನ್ನೂ ಓದಿ: Paytm IPO: ಪೇಟಿಎಂ ಐಪಿಒಗೆ ತಡೆ ನೀಡುವಂತೆ ಮಾಜಿ ನಿರ್ದೇಶಕರಿಂದ ಒತ್ತಾಯ; ಒತ್ತಡದಲ್ಲಿ ಸಿಲುಕಿಕೊಂಡ ಕಂಪೆನಿ
Published On - 3:52 pm, Wed, 29 September 21