ಬಹು ನಿರೀಕ್ಷಿತ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಐಪಿಒ ಏಪ್ರಿಲ್ ತಿಂಗಳ ಕೊನೆಯಲ್ಲಿ ಆರಂಭ ಆಗುವುದಕ್ಕೆ ಎಲ್ಲ ಸಿದ್ಧತೆ ಆಗಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರವು ಈ ಹಿಂದೆ ತಿಳಿಸಿದಂತೆ ಶೇಕಡಾ 5ರಷ್ಟು ಪಾಲನ್ನು ಮಾರಾಟ ಮಾಡುವುದಕ್ಕಿಂತ ಹೆಚ್ಚು ಮಾರಲು ಯೋಜಿಸುತ್ತಿದೆ. ರಷ್ಯಾ- ಉಕ್ರೇನ್ ಯುದ್ಧ ಮತ್ತು ದೇಶೀ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಇವೆಲ್ಲ ಸೇರಿ ಮೆಗಾ ಎಲ್ಐಸಿ ಐಪಿಒ ಗಾತ್ರವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ಶುರುವಾಗಿದೆ. ಏಪ್ರಿಲ್ 12ನೇ ತಾರೀಕಿನ ದಿನದ ಕೊನೆಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIPAM) ಮಂಗಳವಾರದಂದು ಹೂಡಿಕೆ ಬ್ಯಾಂಕರ್ಗಳನ್ನು ಭೇಟಿ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ಸಿಎನ್ಬಿಸಿ-ಟಿವಿ18ಗೆ ತಿಳಿಸಿವೆ. ಫೀಡ್ಬ್ಯಾಕ್ನ ಆಧಾರದಲ್ಲಿ ಸರ್ಕಾರವು ಅಪ್ಡೇಟೆಡ್ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಅಥವಾ ಡಿಆರ್ಎಚ್ಪಿ ಅನ್ನು ಮಾರುಕಟ್ಟೆ ನಿಯಂತ್ರಕ ಸೆಕ್ಯೂರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಬಳಿ ಬುಧವಾರ ಫೈಲ್ ಮಾಡಬಹುದು.
ಕೇಂದ್ರ ಸರ್ಕಾರವು ಶೇಕಡಾ 5ರಷ್ಟು ಪಾಲನ್ನು ಮಾರಾಟ ಮಾಡಿ, 60,000 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿದೆ. ಸರ್ಕಾರದಿಂದ ಶೇ 7.5ರಷ್ಟು ಷೇರಿನ ಪಾಲನ್ನು ಮಾರಾಟ ಮಾಡಬಹುದು. ಅದಕ್ಕೆ ಸೆಬಿಯಿಂದ ಯಾವುದೇ ವಿನಾಯಿತಿ ಕೇಳದೆ ಮಿತಿ ಹೆಚ್ಚಳ ಮಾಡಬಹುದು. ಸರ್ಕಾರದಿಂದ ತನ್ನ ಪಾಲಿನ ಎಲ್ಐಸಿ ಶೇ 5.5ರಿಂದ ಶೇ 6.5ರಷ್ಟು ಮಾರಾಟ ಮಾಡಬಹುದು. ಹೂಡಿಕೆದಾರರ ಆಸಕ್ತಿ ಮೇಲೆ ಇದು ನಿರ್ಣಯ ಆಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ. ಭಾರತದ ಬಂಡವಾಳ ಮಾರುಕಟ್ಟೆ ಇತಿಹಾಸದಲ್ಲೇ ಅತಿದೊಡ್ಡ ಸಾಋ್ವಜನಿಕ ಇಶ್ಯೂ. ಇದಕ್ಕಾಗಿ ಹೂಡಿಕೆದಾರರು ಬಹಳ ಉತ್ಸಾಹದಿಂದ ಕಾಯುತ್ತಿದ್ದಾರೆ. ಸೆಪ್ಟೆಂಬರ್ 30, 2022ಕ್ಕೆ ಎಲ್ಐಸಿಯ ಎಂಬೆಡೆಡ್ ಮೌಲ್ಯ ರೂ. 5.39 ಲಕ್ಷ ಕೋಟಿ. ಇದು ಡ್ರಾಫ್ಟ್ ಪೇಪರ್ನಿಂದ ತಿಳಿದುಬರುವ ಮಾಹಿತಿ. ಎಲ್ಐಸಿ ಐಪಿಒ ಮೌಲ್ಯಮಾಪನ ಎಂಬೆಡೆಡ್ ಮೌಲ್ಯದ ಮೂರರಿಂದ ಐದು ಪಟ್ಟು ಇರುತ್ತದೆ.
ಸರ್ಕಾರವು ಎಲ್ಐಸಿ ಐಪಿಒ ಅನ್ನು ಹಣಕಾಸು ವರ್ಷ 2022ರಲ್ಲಿ ಎಲ್ಐಸಿ ಐಪಿಒ ಆರಂಭಿಸಲು ಯೋಜಿಸಿತ್ತು. ರಷ್ಯಾ- ಉಕ್ರೇನ್ ಯುದ್ಧ ಮತ್ತು ಷೇರು ಮಾರುಕಟ್ಟೆಯಲ್ಲಿನ ಏರಿಳಿತದ ಕಾರಣಕ್ಕೆ ಅಂದುಕೊಂಡ ಸಮಯದಲ್ಲಿ ಐಪಿಒ ಬರಲಿಲ್ಲ. ಮಾರ್ಚ್ 1ನೇ ತಾರೀಕಿನಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ನಾವು ಯೋಜನೆ ಮಾಡಿದಂತೆಯೇ ಮುಂದುವರಿಯಲಿದ್ದೇವೆ. ಭಾರತೀಯ ಸನ್ನಿವೇಶವನ್ನು ಆಧರಿಸಿ ಕಳೆದ ಕೆಲ ಸಮಯದಿಂದ ಯೋಜನೆ ರೂಪಿಸಿದ್ದೇವೆ. ಅದೇ ಜಾಗತಿಕ ಸನ್ನಿವೇಶ ಅಂತ ಬಂದರೆ, ಅದನ್ನು ಗಮನಿಸಬೇಕಾಗುತ್ತದೆ. ಅದನ್ನು ಮತ್ತೊಮ್ಮೆ ಗಮನಿಸುವುದಕ್ಕೆ ಹಿಂಜರಿಯಲ್ಲ. ಯಾವಾಗ ಖಾಸಗಿ ವಲಯದ ಪ್ರವರ್ತಕರು ಈ ಕರೆಯನ್ನು ಸ್ವೀಕರಿಸುತ್ತಾರೋ ಆಗ ಅವರು ಮಾತ್ರ ಕಂಪೆನಿಯ ಮಂಡಳಿಯನ್ನು ವಿವರಿಸಬೇಕು. ಆದರೆ ನಾನು ಇಡೀ ವಿಶ್ವಕ್ಕೆ ವಿವರಿಸಲಿದ್ದೇನೆ ಎಂದಿದ್ದರು. ಮೂಲಗಳು ಖಾತ್ರಿಪಡಿಸಿರುವಂತೆ, ಏಪ್ರಿಲ್ 25ರಿಂದ 29ರ ಮಧ್ಯೆ ಎಲ್ಐಸಿ ಐಪಿಒ ಅನ್ನು ಸರ್ಕಾರ ಆರಂಭಿಸಬಹುದು.
ಸರ್ಕಾರವು ಶೇಕಡಾ 50ರಷ್ಟು ಎಲ್ಐಸಿ ಐಪಿಒ ಅನ್ನು ಕ್ವಾಲಿಫೈಡ್ ಇನ್ಸ್ಟಿಟ್ಯೂಷನಲ್ ಬೈಯರ್ಸ್ಗೆ (QIB) ಮೀಸಲಿಟ್ಟಿದೆ. ನಾನ್ ಇನ್ಸ್ಟಿಟ್ಯೂಷನಲ್ ಬೈಯರ್ಸ್ಗೆ (NII) ಶೇ 15ರಷ್ಟು ಮೀಸಲಿದೆ. ರೀಟೇಲ್ ಕೋಟಾ ಶೇ 35ರಷ್ಟು ಮೀಸಲಾಗಿದೆ. ಮೂರನೇ ಒಂದು ಭಾಗದಷ್ಟನ್ನು ದೇಶೀಯ ಮ್ಯೂಚುವಲ್ ಫಂಡ್ಸ್ಗಾಗಿ ಇದೆ. ಪಾಲಿಸಿದಾರರಿಗೂ ಮಹತ್ತರವಾದ ಪಾಲನ್ನು ನಿಗದಿ ಮಾಡಲಾಗಿದೆ. ಅದು ಸಾರ್ವಜನಿಕ ವಿತರಣೆಯ ಶೇ 10ರಷ್ಟನ್ನು ದಾಟುವುದಿಲ್ಲ. ಇನ್ನು ಶೇ 5ರಷ್ಟು ಐಪಿಒ ಉದ್ಯೋಗಿಗಳಿಗೆ ಮೀಸಲಿಡಲಾಗಿದೆ. ಪಾಲಿಸಿದಾರರು ಮತ್ತು ಉದ್ಯೋಗಿಗಳಿಗೆ ಎಲ್ಐಸಿ ಐಪಿಒ ರಿಯಾಯಿತಿ ದರದಲ್ಲಿ ದೊರೆಯುತ್ತದೆ.
ಇದನ್ನೂ ಓದಿ: LIC IPO: ಎಲ್ಐಸಿ ಐಪಿಒಗೆ ಅಪ್ಲೈ ಮಾಡೋಕೆ ಆಸೆಯಿದೆಯೇ? ಡಿಮ್ಯಾಟ್ ಅಕೌಂಟ್ ಬೇಕೇಬೇಕು: ಎಲ್ಲಿ ಓಪನ್ ಮಾಡಿದ್ರೆ ಒಳ್ಳೇದು?