
ನವದೆಹಲಿ, ಸೆಪ್ಟೆಂಬರ್ 7: ಗ್ರಾಮೀಣ ಭಾಗದ ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಮರುಪೂರಣ (Refill) ಕಾಯ್ದಿರಿಸುವಿಕೆಯ ಕನಿಷ್ಠ ಅವಧಿಯನ್ನು 45 ದಿನಗಳಿಂದ 25 ದಿನಗಳಿಗೆ ತಗ್ಗಿಸಲಾಗಿದೆ. ನಗರ ಪ್ರದೇಶದಲ್ಲಿದ್ದ ನಿಯಮವನ್ನೇ ದೇಶಾದ್ಯಂತ ಏಕರೂಪವಾಗಿ ಜಾರಿಗೊಳಿಸಲಾಗಿದೆ. ಅಂದರೆ, ಈಗ ಗ್ಯಾಸ್ ಬುಕ್ ಮಾಡಿದ ದಿನದಿಂದ 25 ದಿನಗಳಾದ ಬಳಿಕ ಮತ್ತೆ ರೀಫಿಕ್ ಮಾಡಲು ಅವಕಾಶ ಸಿಗುತ್ತದೆ. ಗ್ರಾಮೀಣ ಭಾಗದಲ್ಲಿ ಈ ಅವಧಿ 45 ದಿನ ಇತ್ತು.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಇಂಡಿಯನ್ ಆಯಿಲ್, ಬಿಪಿಸಿಎಲ್ ಮತ್ತು ಹೆಚ್‌ಪಿಸಿಎಲ್ ತೈಲ ಕಂಪನಿಗಳಿಗೆ (OMCs) ಈ ನೂತನ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ತರಲು ಆದೇಶಿಸಿದೆ.
ಇದನ್ನೂ ಓದಿ: ಕ್ವಿಕ್ ಕಾಮರ್ಸ್ನಲ್ಲಿ ಅಮೇಜಾನ್ ಹಿಂದಿಕ್ಕಿದ ಫ್ಲಿಪ್ಕಾರ್ಟ್; ಬ್ಲಿಂಕಿಟ್, ಝೆಪ್ಟೋಗಳೊಂದಿಗೆ ಈಗ ರೇಸ್
ಇನ್ಮುಂದೆ ದೇಶದ ಯಾವುದೇ ಭಾಗದ (ನಗರ ಹಾಗೂ ಗ್ರಾಮೀಣ) ಗೃಹ ಎಲ್‌ಪಿಜಿ ಬಳಕೆದಾರರು ಒಂದು ಸಿಲಿಂಡರ್ ಕಾಯ್ದಿರಿಸಿದ 25 ದಿನಗಳ ನಂತರ ಮುಂದಿನ ಸಿಲಿಂಡರ್ ರೀಫಿಲ್ ಬುಕ್ ಮಾಡಬಹುದು.
ನಿಯಮ ಸಡಿಲಿಕೆಗೆ ಕಾರಣ: ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಸಂಘರ್ಷದ ಹಿನ್ನೆಲೆಯಲ್ಲಿ ಉಂಟಾಗಿದ್ದ ಪೂರೈಕೆ ಕೊರತೆಯನ್ನು ನಿಭಾಯಿಸಲು ಸರ್ಕಾರ ಮಾರ್ಚ್ ತಿಂಗಳಲ್ಲಿ ತಾತ್ಕಾಲಿಕವಾಗಿ ನಗರ ಪ್ರದೇಶಗಳಿಗೆ 25 ದಿನ ಹಾಗೂ ಗ್ರಾಮೀಣ ಪ್ರದೇಶಗಳಿಗೆ 45 ದಿನಗಳ ಕಾಯುವಿಕೆ ಅವಧಿಯನ್ನು ನಿಗದಿಪಡಿಸಿತ್ತು.
ಪ್ರಸ್ತುತ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸ್ಥಿತಿ ಸುಧಾರಿಸಿದ್ದು, ಕಾಯುವಿಕೆ ಪಟ್ಟಿ (Backlog) ಗಮನಾರ್ಹವಾಗಿ ಕಡಿಮೆಯಾಗಿರುವುದರಿಂದ ಈ ಕಟ್ಟುನಿಟ್ಟಿನ ನಿಬಂಧನೆಯನ್ನು ಹಿಂಪಡೆಯಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ.
ಈ ನಿರ್ಧಾರದಿಂದಾಗಿ ಗ್ರಾಮೀಣ ಭಾಗದ ಲಕ್ಷಾಂತರ ಗೃಹಿಣಿಯರು ಹಾಗೂ ಕುಟುಂಬಗಳಿಗೆ ಸಿಲಿಂಡರ್ ಕೊರತೆ ಎದುರಾಗುವ ಭೀತಿ ತಪ್ಪಲಿದ್ದು, ಹೆಚ್ಚಿನ ಅನುಕೂಲವಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ