ರೆಡ್ಡಿ ಸರ್ಕಾರದಲ್ಲಿ ಆಂಧ್ರ ಸಾವಾಸ ಬೇಡವೆಂದು ಹೋಗಿದ್ದ ಲುಲು ಗ್ರೂಪ್ ಮತ್ತೆ ವಾಪಸ್

Lulu Group may re-inter Andhra: 2019ರಲ್ಲಿ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಆಡಳಿತ ಇದ್ದಾಗ ಆಂಧ್ರ ಸಹವಾಸ ಸಾಕು, ಮತ್ತೆಂದೂ ಇಲ್ಲಿಗೆ ಬರೋದಿಲ್ಲ ಎಂದು ಹೋಗಿದ್ದ ಲುಲು ಗ್ರೂಪ್ ಈಗ ಮತ್ತೆ ರಾಜ್ಯಕ್ಕೆ ಕಾಲಿಡುವ ಸುಳಿವು ಸಿಕ್ಕಿದೆ. ಆಂದ್ರದ ಹೊಸ ಸಿಎಂ ಚಂದ್ರಬಾಬು ನಾಯ್ಡು ಮತ್ತು ಲುಲು ಗ್ರೂಪ್ ಇಂಟರ್ನ್ಯಾಷನಲ್ ಛೇರ್ಮನ್ ಯೂಸುಫ್ ಅಲಿ ನಡುವಿನ ಭೇಟಿ ಹಳೆಯ ಯೋಜನೆಗಳನ್ನು ಜೀವಂತವಾಗಿರಿಸಿದೆ.

ರೆಡ್ಡಿ ಸರ್ಕಾರದಲ್ಲಿ ಆಂಧ್ರ ಸಾವಾಸ ಬೇಡವೆಂದು ಹೋಗಿದ್ದ ಲುಲು ಗ್ರೂಪ್ ಮತ್ತೆ ವಾಪಸ್
ಲುಲು ಮಾಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 29, 2024 | 1:45 PM

ವಿಜಯವಾಡ, ಸೆಪ್ಟೆಂಬರ್ 29: ಜಗನ್ಮೋಹನ್ ರೆಡ್ಡಿ ಸಿಎಂ ಆಗಿದ್ದ ಅವಧಿಯಲ್ಲಿ ಆಂಧ್ರದಿಂದ ಹೊರಹೋಗಿದ್ದ ಯುಎಐ ಮೂಲದ ಲುಲು ಗ್ರೂಪ್ ಇಂಟರ್ನ್ಯಾಷನಲ್ ಸಂಸ್ಥೆ ಮತ್ತೆ ಮರಳುವ ಪ್ರಯತ್ನ ಮಾಡುತ್ತಿದೆ. ಲುಲು ಗ್ರೂಪ್ ಮುಖ್ಯಸ್ಥರಾದ ಯೂಸುಫ್ ಅಲಿ ಅವರು ಶನಿವಾರ ರಾಜಧಾನಿ ಅಮರಾವತಿಯಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದರು. ಈ ಮೂಲಕ ಐದು ವರ್ಷದ ಬಳಿಕ ಲುಲು ಇಂಟರ್ನ್ಯಾಷನಲ್ ಆಂಧ್ರಕ್ಕೆ ಬರುವ ಸಾಧ್ಯತೆ ಗರಿಗೆದರಿದೆ.

ಆಂಧ್ರದಲ್ಲಿ ಸಾವಿರಾರು ಕೋಟಿ ರೂ ಹೂಡಿಕೆ ಮಾಡಲು ಉದ್ದೇಶಿಸಿದ್ದ ಲುಲು ಗ್ರೂಪ್ ಇಂಟರ್ನ್ಯಾಷನಲ್ 2019ರಲ್ಲಿ ತನ್ನ ಪ್ಲಾನ್ ಕೈಬಿಟ್ಟಿತು. ಟಿಡಿಪಿ ಸರ್ಕಾರದ ಅವಧಿಯಲ್ಲಿ ಲುಲು ಗ್ರೂಪ್​ಗೆ ವಿಶಾಖಪಟ್ಟಣಂನಲ್ಲಿ ಅಲಾಟ್ ಮಾಡಲಾಗಿದ್ದ ಭೂಮಿಯನ್ನು ಜಗನ್ಮೋನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ಹಿಂಪಡೆಯಲಾಗಿತ್ತು. ಇದಾದ ಬಳಿಕ ಆಂಧ್ರದಲ್ಲಿ ಮತ್ತೆಂದೂ ಹೂಡಿಕೆ ಮಾಡುವುದಿಲ್ಲ ಎಂದು ಲುಲು ಗ್ರೂಪ್ ಹೇಳಿತ್ತು. ಈಗ ರೆಡ್ಡಿ ಸರ್ಕಾರ ನಿರ್ಗಮಿಸಿ ಮತ್ತೆ ಟಿಡಿಪಿಯೇ ಅಧಿಕಾರಕ್ಕೆ ಮರಳಿದೆ. ಹೀಗಾಗಿ, ಲುಲು ಗ್ರೂಪ್ ಆಂಧ್ರದಲ್ಲಿ ಹೂಡಿಕೆ ಮಾಡುವ ಯೋಜನೆ ಜೀವಂತಗೊಂಡಂತಾಗಿದೆ.

ಇದನ್ನೂ ಓದಿ: Asia Power Index: ಏಷ್ಯಾದಲ್ಲಿ ಅತಿಪ್ರಭಾವಶಾಲಿ ದೇಶಗಳು: ಅಮೆರಿಕ, ಚೀನಾ ನಂತರದ ಸ್ಥಾನ ಭಾರತಕ್ಕೆ

2014ರಿಂದ 2019ರವರೆಗೂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ಅಧಿಕಾರದಲ್ಲಿತ್ತು. ಆಗ ವಿಶಾಖಪಟ್ಟಣಂನಲ್ಲಿ ಶಾಪಿಂಗ್ ಮಾಲ್, ಲಕ್ಷುರಿ ಹೋಟೆಲ್, ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಅನ್ನು ನಿರ್ಮಿಸಲು ಲುಲು ಗ್ರೂಪ್ ಒಪ್ಪಂದ ಮಾಡಿಕೊಂಡಿತ್ತು. ಈ ಯೋಜನೆಗೆ 2,200 ಕೋಟಿ ರೂ ಹೂಡಿಕೆ ಮಾಡುವ ಉದ್ದೇಶ ಇತ್ತು. ಆದರೆ, ಚುನಾವಣೆಯಲ್ಲಿ ಟಿಡಿಪಿ ಸೋತು ವೈಎಸ್ಸಾರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಜಗನ್ಮೋಹನ್ ರೆಡ್ಡಿ ಸಿಎಂ ಆದರು. ಹಿಂದಿನ ಸರ್ಕಾರದ ಕೆಲ ಪ್ರಮುಖ ಯೋಜನೆಗಳನ್ನು ಮರುಪರಿಶೀಲಿಸಲಾಯಿತು. ಲುಲು ಗ್ರೂಪ್​ಗೆ ಅಲಾಟ್ ಮಾಡಲಾಗಿದ್ದ ಭೂಮಿಯನ್ನು ಹಿಂಪಡೆಯಲಾಗಿತ್ತು.

ಇದೀಗ ಚಂದ್ರಬಾಬು ನಾಯ್ಡು ಮತ್ತು ಯೂಸುಫ್ ಅಲಿ ಭೇಟಿ ಆಗಿರುವುದು ಹೊಸ ಕುತೂಹಲ ಹುಟ್ಟುಹಾಕಿದೆ. ವೈಜಾಗ್​ನಲ್ಲಿ ಒಂದು ಮಾಲ್ ಮತ್ತು ಮಲ್ಟಿಪ್ಲೆಕ್ಸ್ ನಿರ್ಮಿಸುವುದು; ವಿಜಯವಾಡ ಮತ್ತು ತಿರುಪತಿಯಲ್ಲಿ ಹೈಪರ್​ಮಾರ್ಕೆಟ್ ಮತ್ತು ಮಲ್ಟಿಪ್ಲೆಕ್ಸ್​ಗಳನ್ನು ನಿರ್ಮಿಸುವ ಯೋಜನೆಗಳನ್ನು ಚರ್ಚಿಸಿದೆವು ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಇದನ್ನೂ ಓದಿ: ಸೆಬಿ ಸೂಚನೆ ಬಳಿಕ ಟ್ರಾನ್ಸಾಕ್ಷನ್ ಶುಲ್ಕ ಪರಿಷ್ಕರಿಸಿದ ಬಿಎಸ್​ಇ, ಎನ್​ಎಸ್​ಇ; ಹೊಸ ದರಗಳ ವಿವರ ಇಲ್ಲಿದೆ

ಅಬುಧಾಬಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ಲುಲು ಗ್ರೂಪ್ ವರ್ಷಕ್ಕೆ ಎಂಟು ಬಿಲಿಯನ್ ಡಾಲರ್ (ಸುಮಾರು 67,000 ಕೋಟಿ ರೂ) ವಾರ್ಷಿಕ ವಹಿವಾಟು ಹೊಂದಿದೆ. ಜಾಗತಿಕವಾಗಿ 70,000 ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಅದರ ಹೈಪರ್​ಮಾರ್ಕೆಟ್, ಮಾಲ್ ಇತ್ಯಾದಿ ಬಿಸಿನೆಸ್ ಇದೆ. ಬೆಂಗಳೂರು ಸೇರಿದಂತೆ ಭಾರತದಲ್ಲೂ ಕೆಲವೆಡೆ ಲುಲು ಮಾಲ್​ಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Sun, 29 September 24