Malabar Gold And Diamonds: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ನಿಂದ 9,860 ಕೋಟಿ ರೂಪಾಯಿ ಹೂಡಿಕೆ
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ನಿಂದ 9860 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಈಚೆಗೆ ಘೋಷಣೆ ಮಾಡಲಾಗಿದೆ.
ಬೆಂಗಳೂರು: ವಿಶ್ವದ ಅತಿ ದೊಡ್ಡ ಆಭರಣ ರೀಟೇಲ್ ಸರಪಳಿಗಳಲ್ಲಿ ಒಂದು ಎನಿಸಿಕೊಂಡಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ (Malabar Gold And Diamonds) ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ 9,860 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಸಭೆಯಲ್ಲಿ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ. ಅಹಮ್ಮದ್ ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಆಪರೇಷನ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಒ. ಅಶರ್ ಜಂಟಿಯಾಗಿ ಘೋಷಣೆ ಮಾಡಿದರು. ಈ ವೇಳೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಮತ್ತು ಕೈಗಾರಿಕೆ ಖಾತೆ ರಾಜ್ಯ ಸಚಿವ ಪಿ.ರಾಜೀವ್ ಇದ್ದರು. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಟ್ರೆಷರಿ ಹಾಗೂ ಬುಲಿಯನ್ ಮುಖ್ಯಸ್ಥ ದಿಲೀಪ್ ನಾರಾಯಣ್ ಕೂಡ ಹಾಜರಿದ್ದರು.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ತನ್ನ ಮೇಕ್ ಇನ್ ಇಂಡಿಯಾ, ಮಾರ್ಕೆಟ್ ಟು ದಿ ವರ್ಲ್ಡ್ ಉಪಕ್ರಮ ವೃದ್ಧಿಗೆ ತನ್ನ ಹೂಡಿಕೆಯನ್ನು ದ್ವಿಗುಣಗೊಳಿಸುತ್ತಿದೆ. 2025ನೇ ಇಸವಿ ಹೊತ್ತಿಗೆ 500 ಹೊಸ ಶೋರೂಮ್ಗಳನ್ನು ತೆರೆಯುವುದಕ್ಕೆ ಸಂಸ್ಥೆಯು ಯೋಜಿಸುತ್ತಿದೆ. ಈ ನಡೆಯಿಂದ 11 ಸಾವಿರ ಮಂದಿಗೆ ಉದ್ಯೋಗಾವಕಾಶ ಸೃಷ್ಟಿ ಆಗಲಿವೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ ಹೂಡಿಕೆದಾರರ ದುಂಡು ಮೇಜಿನ ಪರಿಷತ್ತನ್ನು ಆಯೋಜಿಸಲಾಗಿತ್ತು. ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮ ಉತ್ತೇಜಿಸುವಲ್ಲಿ ಹಾಗೂ ವಿಸ್ತರಣಾ ಯೋಜನೆಗಳ ಮೂಲಕ ಸಾಮೂಹಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕಂಪೆನಿಯ ಅನುಕರಣೀಯ ಪ್ರಯತ್ನಗಳನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಶ್ಲಾಘನೆ ಮಾಡಿದರು. ಜತೆಗೆ ಕಂಪೆನಿಯ ಪ್ರಯತ್ನಕ್ಕೆ ಸರ್ಕಾರದ ಬೆಂಬಲ ಇರುವುದಾಗಿ ಹೇಳಿದರು.
ಸದ್ಯಕ್ಕೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ 10 ದೇಶಗಳಲ್ಲಿ 280ಕ್ಕೂ ಹೆಚ್ಚು ಶೋರೂಮ್ಗಳನ್ನು, 5 ದೇಶಗಳಲ್ಲಿ 14 ಉತ್ಪಾದನಾ ಘಟಕಗಳನ್ನು ಹೊಂದಿದೆ. ಜತೆಗೆ 4092 ಹೂಡಿಕೆದಾರರು ಮತ್ತು 14169 ನಿರ್ವಹಣಾ ಸಿಬ್ಬಂದಿ ಇದ್ದಾರೆ. 2022-23ರ ಹಣಕಾಸು ವರ್ಷದಲ್ಲಿ ಕಂಪೆನಿಯು ಒಟ್ಟು 45,000 ಕೋಟಿ ರೂಪಾಯಿ ವ್ಯವಹಾರ ನಡೆಸುವ ಗುರಿ ಇರಿಸಿಕೊಂಡಿದೆ. ಕಂಪೆನಿಯು ತನ್ನ ವ್ಯಾಪಾರದ ಮಾದರಿ ಪರಿವರ್ತಿಸುವುದಕ್ಕೆ ಮೈಕ್ರೋಸಾಫ್ಟ್, ಐಬಿಎಂ, ಆಕ್ಸೆಂಚರ್, ಇ ಅಂಡ್ ವೈ, ಡೆಲಾಯಿಟ್ ಮುಂತಾದ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳ ಸೇವೆಗಳನ್ನು ಬಳಸಿಕೊಳ್ಳುತ್ತಿದೆ.
ಯೋಜನೆಗಳನ್ನು ಅನುಷ್ಠಾನ ಮಾಡುವಾಗ ಪರಿಸರ ಸಾಮಾಜಿಕ ಮತ್ತು ಆಡಳಿತ (ಇಎಸ್ಜಿ) ಮಾನದಂಡಗಳಿಗೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸ್ಥಿರವಾಗಿ ಅಂಟಿಕೊಳ್ಳುತ್ತದೆ. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಾಮಾಜಿಕವಾಗಿ ಜವಾಬ್ದಾರಿಯುತ ಕಂಪೆನಿ ಆಗಿದ್ದು, ಸಾಮಾಜಿಕ ಉದ್ದೇಶಗಳಿಗಾಗಿ ಲಾಭದ ಶೇ 5ರಷ್ಟನ್ನು ಮೀಸಲಿಡುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿ ಇಲ್ಲಿ ಕ್ಲಿಕ್ ಮಾಡಿ
Published On - 7:42 pm, Wed, 15 June 22