ಸಂಪೂರ್ಣ ಎಥನಾಲ್ ಇಂಧನದಲ್ಲಿ ಓಡಬಲ್ಲ ಭಾರತದ ಮೊದಲ ಪ್ಯಾಸೆಂಜರ್ ಕಾರು ಬಿಡುಗಡೆ
Maruti Suzuki WagonR, India's First Passenger Car Capable of Running on 100pc Ethanol: ಮಾರುತಿ ಸುಜುಕಿ ದೇಶದ ಮೊದಲ 100% ಎಥನಾಲ್ ಆಧಾರಿತ 'ವ್ಯಾಗನ್ಆರ್ ಫ್ಲೆಕ್ಸ್-ಫ್ಯುಯೆಲ್' ಕಾರನ್ನು ಬಿಡುಗಡೆ ಮಾಡಿದೆ. ಇದು ಪರಿಸರ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡುವುದಲ್ಲದೆ, ಕಚ್ಚಾ ತೈಲ ಆಮದು ವೆಚ್ಚವನ್ನು ಉಳಿಸಲಿದೆ. ಕಬ್ಬು ಮತ್ತು ಕೃಷಿ ತ್ಯಾಜ್ಯದಿಂದ ತಯಾರಾಗುವ ಎಥನಾಲ್ ಬಳಕೆಯಿಂದ ಭಾರತದ ರೈತರ ಆದಾಯಕ್ಕೂ ದೊಡ್ಡ ಬಲ ಸಿಗಲಿದ್ದು, ಆಟೋಮೊಬೈಲ್ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ.

ನವದೆಹಲಿ, ಜೂನ್ 4: ಭಾರತದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ (Maruti Suzuki), ದೇಶದ ಮೊದಲ 100% ಎಥನಾಲ್ ಆಧಾರಿತ ‘ಫ್ಲೆಕ್ಸ್ ಫ್ಯುಯೆಲ್’ (Flex-Fuel) ಕಾರು ವ್ಯಾಗನ್ಆರ್ (WagonR) ಅನ್ನು ಬಿಡುಗಡೆ ಮಾಡಿದೆ. ಇದು ಭಾರತದ ಆಟೋಮೊಬೈಲ್ ಇತಿಹಾಸದಲ್ಲೇ 100% ಶುದ್ಧ ಎಥನಾಲ್ (E100) ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸಬಲ್ಲ ಸಾಮರ್ಥ್ಯ ಹೊಂದಿರುವ ಮೊದಲ ಮಾಸ್-ಮಾರ್ಕೆಟ್ (ಸಾಮಾನ್ಯ ಜನರಿಗಾಗಿ ಬಿಡುಗಡೆಯಾದ) ಪ್ಯಾಸೆಂಜರ್ ಕಾರ್ ಆಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಸಮ್ಮುಖದಲ್ಲಿ ಈ ಕಾರನ್ನು ಅನಾವರಣಗೊಳಿಸಲಾಯಿತು. ಈ ಫ್ಲೆಕ್ಸ್ ಫ್ಯುಯೆಲ್ ಇಂಜಿನ್ ಅನ್ನು ಶೇ. 20 ರಿಂದ ಹಿಡಿದು ಶೇ. 100 ರಷ್ಟು ಎಥನಾಲ್ ಮಿಶ್ರಣದ ಇಂಧನದಲ್ಲೂ ಸುಲಭವಾಗಿ ಚಲಿಸುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ಇಂಜಿನ್‌ನ ಫ್ಯುಯೆಲ್ ಲೈನ್‌ಗಳು, ಇಂಜೆಕ್ಟರ್‌ಗಳು ಮತ್ತು ಸೀಲ್‌ಗಳನ್ನು ತುಕ್ಕು ನಿರೋಧಕವಾಗಿ (Corrosion-resistant) ಮಾರ್ಪಡಿಸಲಾಗಿದೆ.
ಇದನ್ನೂ ಓದಿ: ಅಮೆರಿಕಕ್ಕೆ ಹೋಗಿ ದೊಡ್ಡ ಉದ್ಯಮಗಳನ್ನು ಕಟ್ಟಿದ ವಲಸಿಗರಲ್ಲಿ ಭಾರತೀಯರೇ ಅತಿಹೆಚ್ಚು
ಸಾಮಾನ್ಯ ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಈ ಫ್ಲೆಕ್ಸ್ ಫ್ಯುಯೆಲ್ ಕಾರುಗಳ ತಯಾರಿಕಾ ವೆಚ್ಚ ಸುಮಾರು ₹40,000 ದಿಂದ ₹50,000 ದಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಫ್ಲೆಕ್ಸ್ ಫುಯೆಲ್ ಕಾರಿನಿಂದ ಲಾಭಗಳೇನು?
- ಮಾಲಿನ್ಯ ಇಳಿಕೆ: ಎಥನಾಲ್ ಪರಿಸರಸ್ನೇಹಿ ಇಂಧನವಾಗಿದ್ದು, ಇದು ಪೆಟ್ರೋಲ್‌ಗಿಂತ ಅತ್ಯಂತ ಕಡಿಮೆ ಪ್ರಮಾಣದ ಇಂಗಾಲದ ಹೊರಸೂಸುವಿಕೆಯನ್ನು (Carbon emissions) ಹೊಂದಿರುತ್ತದೆ. ಇದರಿಂದ ಮಹಾನಗರಗಳಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗುತ್ತದೆ.
- ಆಮದು ವೆಚ್ಚದ ಉಳಿತಾಯ: ಪ್ರಸ್ತುತ ಭಾರತವು ತನ್ನ ತೈಲ ಅಗತ್ಯದ 87% ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ದೇಶೀಯವಾಗಿ ಎಥನಾಲ್ ಬಳಕೆ ಹೆಚ್ಚಾದಂತೆ ಕಚ್ಚಾ ತೈಲದ ಆಮದು ಕಡಿಮೆಯಾಗಿ, ದೇಶದ ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ.
- ರೈತರಿಗೆ ಆರ್ಥಿಕ ಬಲ: ಎಥನಾಲ್ ಅನ್ನು ಕಬ್ಬಿನ ಕಾಕಂಬಿ (Molasses), ಜೋಳ, ನುಚ್ಚಕ್ಕಿ ಮತ್ತು ಕೃಷಿ ತ್ಯಾಜ್ಯಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ ಈ ತಂತ್ರಜ್ಞಾನದಿಂದ ದೇಶದ ರೈತರ ಆದಾಯ ಹೆಚ್ಚಾಗಲಿದ್ದು, ಗ್ರಾಮೀಣ ಆರ್ಥಿಕತೆಗೆ ದೊಡ್ಡ ಬಲ ಸಿಗಲಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಯೊಂದಿಗೆ ವೆನಿಜುವೆಲಾ ಅಧ್ಯಕ್ಷೆ ಮಾತುಕತೆ; ಪ್ರಸ್ತಾಪಿತ ಇಂಧನ ಒಪ್ಪಂದದಿಂದ ಭಾರತಕ್ಕೇನು ಲಾಭ?
ಇಂಧನ ಲಭ್ಯತೆಯ ಸವಾಲು
ಪ್ರಸ್ತುತ ಮಾರುಕಟ್ಟೆಯಲ್ಲಿ ತಂತ್ರಜ್ಞಾನ ಸಿದ್ಧವಾಗಿದ್ದರೂ, ದೇಶಾದ್ಯಂತ 100% ಎಥನಾಲ್ ಇಂಧನ ಸಿಗುವ ಪಂಪ್‌ಗಳ ಕೊರತೆಯಿದೆ. ಸದ್ಯಕ್ಕೆ ದೆಹಲಿ ಮತ್ತು ಮುಂಬೈ-ನಾಗ್ಪುರ ಕಾರಿಡಾರ್‌ಗಳಲ್ಲಿ ಕೇವಲ 50 ರಿಂದ 100 ಬಂಕುಗಳಲ್ಲಿ ಮಾತ್ರ ಇಂತಹ ಇಂಧನ ಲಭ್ಯವಿದೆ. ಆದರೆ, ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ ಇಂತಹ ಸುಮಾರು 5,000 ಫುಯೆಲ್ ಸೆಂಟರ್ಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




