ಯುಪಿಐ, ಪೇನೌ ಶೀಘ್ರ ಲಿಂಕ್; ಭಾರತ, ಸಿಂಗಾಪುರ ಮಧ್ಯೆ ಹಣ ವರ್ಗಾವಣೆ ಇನ್ನಷ್ಟು ಸುಲಭ
ಪೇನೌ ಎಂಬುದು ಭಾರತದ ರೂಪೇ ಕಾರ್ಡ್ ಪಾವತಿ ವ್ಯವಸ್ಥೆಗೆ ಸಮನಾಗಿ ಸಿಂಗಾಪುರದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದೆ. ಯುಪಿಐ ಜತೆ ಲಿಂಕ್ ಮಾಡುವುದರಿಂದ ಭಾರತೀಯರನ್ನೂ ಬೆಸೆಯಲಿದೆ ಎಂದು ಹೈಕಮಿಷನರ್ಗೆ ತಿಳಿಸಿದ್ದಾರೆ.
ನವದೆಹಲಿ: ಭಾರತ ಮತ್ತು ಸಿಂಗಾಪುರದ ಪಾವತಿ ವ್ಯವಸ್ಥೆ ಯುಪಿಐ (UPI) ಮತ್ತು ಪೇನೌ (PayNow) ಅನ್ನು ಲಿಂಕ್ ಮಾಡಲು ಉಭಯ ದೇಶಗಳು ಮುಂದಾಗಿವೆ. ಇದರಿಂದಾಗಿ ಎರಡೂ ದೇಶಗಳ ನಡುವಣ ಹಣ ವರ್ಗಾವಣೆ ಇನ್ನಷ್ಟು ಸುಲಭ ಮತ್ತು ಸರಳವಾಗಲಿವೆ. ಜತೆಗೆ, ಅತಿ ಕಡಿಮೆ ವೆಚ್ಚದಲ್ಲಿ ಹಣ ವರ್ಗಾವಣೆ ಮಾಡಬಹುದಾಗಿದೆ ಎಂದು ಸಿಂಗಾಪುರದಲ್ಲಿರುವ ಭಾರತದ ಹೈಕಮಿಷನರ್ ಪಿ. ಕುಮಾರನ್ ತಿಳಿಸಿದ್ದಾರೆ. ಮೊಬೈಲ್ ಫೋನ್ ಸಂಖ್ಯೆ ಮೂಲಕ ಭಾರತದಿಂದ ಸಿಂಗಾಪುರಕ್ಕೆ ಹಾಗೂ ಸಿಂಗಾಪುರದಿಂದ ಭಾರತಕ್ಕೆ ಯುಪಿಐ ಪಾವತಿ ವ್ಯವಸ್ಥೆ ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದೆ. ಉಭಯ ಪಾವತಿ ವ್ಯವಸ್ಥೆಗಳ ಲಿಂಕಿಂಗ್ಗೆ ವಿಪಿಎ (VPA) ಎಂದು ಹೆಸರಿಸಲಾಗಿದೆ ಎಂಬುದಾಗಿ ‘ಎಎನ್ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆರ್ಬಿಐ ಮತ್ತು ಮಾನಿಟರಿ ಅಥಾರಿಟಿ ಆಫ್ ಸಿಂಗಾಪುರ (ಎಂಎಎಸ್) ಸಹಯೋಗದಲ್ಲಿ ಪಾವತಿ ವ್ಯವಸ್ಥೆಗಳನ್ನು ಲಿಂಕ್ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ವರದಿ ತಿಳಿಸಿದೆ.
ಕೆಲವೇ ತಿಂಗಳುಗಳಲ್ಲಿನ ಚಾಲನೆ
‘ಭಾರತದ ಯುಪಿಐ ಜತೆ ಪೇನೌ ಅನ್ನು ಲಿಂಕ್ ಮಾಡಲು ಸಿಂಗಾಪುರ ಬಯಸಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಈ ಯೋಜನೆ ಸಾಕಾರಗೊಳ್ಳಲಿದೆ. ಈ ಮೂಲಕ ಸಿಂಗಾಪುರದಲ್ಲಿ ಕುಳಿತುಕೊಂಡು ಭಾರತದಲ್ಲಿರುವ ತಮ್ಮ ಕುಟುಂಬದವರಿಗೆ ಹಣ ಕಳುಹಿಸುವುದು ಭಾರತೀಯರಿಗೆ ಸುಲಭವಾಗಲಿದೆ’ ಎಂದು ಹೈಕಮಿಷನರ್ ಪಿ. ಕುಮಾರನ್ ಹೇಳಿದ್ದಾರೆ.
ಏನಿದು ಪೇನೌ?
ಪೇನೌ ಎಂಬುದು ಭಾರತದ ರೂಪೇ ಕಾರ್ಡ್ ಪಾವತಿ ವ್ಯವಸ್ಥೆಗೆ ಸಮನಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದೆ. ಇದು ಏಷ್ಯಾದ ದೇಶಗಳ ಜತೆ ಲಿಂಕ್ ಆಗಿದೆ. ಯುಪಿಐ ಜತೆ ಲಿಂಕ್ ಮಾಡುವುದರಿಂದ ಭಾರತೀಯರನ್ನೂ ಬೆಸೆಯಲಿದೆ ಎಂದು ಹೈಕಮಿಷನರ್ಗೆ ತಿಳಿಸಿದ್ದಾರೆ.
ಭಾರತೀಯರಿಗೆ ಈಗೇಕೆ ಸಮಸ್ಯೆ?
ಸಿಂಗಾಪುರಕ್ಕೆ ಬರುವ ಅನೇಕ ಭಾರತೀಯರು ರುಪೇ ಕಾರ್ಡ್ ಹೊಂದಿರುವುದಿಲ್ಲ. ಒಂದು ವೇಳೆ ಹೊಂದಿದ್ದರೂ ದೇಶೀಯ ಕಾರ್ಡ್ ಮಾತ್ರ ಇರುತ್ತದೆ. ಡಿಜಿಟಲೈಸೇಷನ್ ಪರಿಣಾಮವಾಗಿ ಭವಿಷ್ಯದಲ್ಲಿ ಹೆಚ್ಚಿನ ಪ್ರವಾಸಿಗರು ನಗದಿಗಿಂತ ಡಿಜಿಟಲ್ ರೂಪದಲ್ಲಿಯೇ ಹಣ ಇಟ್ಟುಕೊಳ್ಳಲಿದ್ದಾರೆ. ಆಗ ಅವರು ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಬಳಸಿದರೆ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಯುಪಿಐ ಹಾಗೂ ಪೇನೌ ಲಿಂಕ್ ಮಾಡುವುದರಿಂದ ಅತಿ ಕಡಿಮೆ ಶುಲ್ಕದಲ್ಲಿ ಹಣ ವರ್ಗಾವಣೆ ಸಾಧ್ಯ ಎಂದು ಹೈಕಮಿಷನರ್ ತಿಳಿಸಿದ್ದಾರೆ.
ವಲಸೆ ಕಾರ್ಮಿಕರಿಗೆ ಪ್ರಯೋಜನ
ಸದ್ಯ ಸಿಂಗಾಪುರಕ್ಕೆ ಬರುವ ಭಾರತದ ವಲಸೆ ಕಾರ್ಮಿಕರು ಹಣ ಕಳುಹಿಸಲು ಸುಮಾರು ಶೇಕಡಾ 10ರ ವರೆಗೆ ಬ್ಯಾಂಕ್ಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ಯುಪಿಐ-ಪೇನೌ ಲಿಂಕ್ ಮಾಡುವುದರಿಂದ ಅವರಿಗೆ ಪ್ರಯೋಜನವಾಗಲಿದೆ. ಬಹು ಕಡಿಮೆ ವೆಚ್ಚದಲ್ಲಿ ಹಣ ವರ್ಗಾವಣೆ ಮಾಡಬಹುದಾಗಿದೆ ಎಂದು ಪಿ. ಕುಮಾರನ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:22 am, Fri, 11 November 22