
ನವದೆಹಲಿ, ಆಗಸ್ಟ್ 14: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬುಧವಾರ ತೈವಾನ್ ಮೂಲದ ಹೋನ್ ಹಾಯ್ ಟೆಕ್ನಾಲಜಿ ಗ್ರೂಪ್ ಸಂಸ್ಥೆಯ ಛೇರ್ಮನ್ ಯಂಗ್ ಲಿಯು ಅವರನ್ನು ಭೇಟಿ ಮಾಡಿದರು. ಫಾಕ್ಸ್ಕಾನ್ ಎಂದೇ ಖ್ಯಾತವಾಗಿರುವ ವಿಶ್ವದ ಅತಿದೊಡ್ಡ ಗುತ್ತಿಗೆ ಆಧಾರಿತ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಕ ಸಂಸ್ಥೆಯ ಮುಖ್ಯಸ್ಥರ ಜೊತೆ ಪ್ರಧಾನಿ ಮೋದಿ ಹೂಡಿಕೆ ವಿಚಾರಗಳ ಬಗ್ಗೆ ಚರ್ಚೆ ನಡೆಸಿರುವುದು ತಿಳಿದುಬಂದಿದೆ. ಪ್ರಧಾನಿಗಳು ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಒಂದು ಪೋಸ್ಟ್ ಹಾಕಿ ವಿವರಿಸಿದ್ದಾರೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಫಾಕ್ಸ್ಕಾನ್ ಮಾಡಬೇಕೆಂದಿರುವ ಹೂಡಿಕೆ ಯೋಜನೆಗಳ ಬಗ್ಗೆ ತಾನು ಚರ್ಚೆ ನಡೆಸಿದ್ದಾಗಿ ನರೇಂದ್ರ ಮೋದಿ ಹೇಳಿದ್ದಾರೆ.
‘ಹೋನ್ ಹಾಯ್ ಟೆಕ್ನಾಲಜಿ ಗ್ರೂಪ್ನ (ಫಾಕ್ಸ್ಕಾನ್) ಛೇರ್ಮನ್ ಯಂಗ್ ಲಿಯು ಅವರನ್ನು ಭೇಟಿ ಮಾಡಿದ್ದು ಖುಷಿಯಾಯಿತು. ಭವಿಷ್ಯಾತ್ಮಕ ವಲಯಗಳಲ್ಲಿ ಇರುವ ಅವಕಾಶಗಳನ್ನು ಎತ್ತಿತೋರಿಸಿರುವೆ. ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಅವರ ಹೂಡಿಕೆ ಯೋಜನೆಗಳ ಬಗ್ಗೆ ನಾವು ಚರ್ಚೆ ನಡೆಸಿದೆವು’ ಎಂದು ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಫಾಕ್ಸ್ಕಾನ್ ಚೆನ್ನೈನ ಶ್ರೀ ಪೆರಂಬುದೂರಿನಲ್ಲಿ ಐಫೋನ್ ಅಸೆಂಬ್ಲಿಂಗ್ ಘಟಕ ಹೊಂದಿದೆ. ಕರ್ನಾಟಕ, ಆಂಧ್ರದಲ್ಲೂ ತನ್ನ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿದೆ. ಚೆನ್ನೈನಲ್ಲಿ ಅದು ಐಫೋನ್ಗಳ ಅಸೆಂಬ್ಲಿಂಗ್ ಮಾಡುತ್ತದೆ. ಗೂಗಲ್ನ ಪಿಕ್ಸೆಲ್ ಫೋನ್ಗಳನ್ನು ತಯಾರಿಸಲೂ ಫಾಕ್ಸ್ಕಾನ್ ಗುತ್ತಿಗೆ ಪಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ತೆರಿಗೆ ಹೇರುವ ಆಸೆ ನಂಗೂ ಇಲ್ಲ, ಆದರೆ ಸರ್ಕಾರ ನಡೆಸಲು ಹಣ ಬೇಕಲ್ಲ: ನಿರ್ಮಲಾ ಸೀತಾರಾಮನ್
ತೈವಾನ್ ಮೂಲದ ಫಾಕ್ಸ್ಕಾನ್ ಸಂಸ್ಥೆ ತನ್ನದೇ ಬ್ರ್ಯಾಂಡ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಹೊಂದಿಲ್ಲ. ಆ್ಯಪಲ್ ಇತ್ಯಾದಿ ಎಲೆಕ್ಟ್ರಾನಿಕ್ಸ್ ಕಂಪನಿಗಳ ಉತ್ಪನ್ನಗಳನ್ನು ಗುತ್ತಿಗೆ ಆಧಾರದಲ್ಲಿ ತಯಾರಿಸಿಕೊಡುತ್ತದೆ. ಈ ರೀತಿಯಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆಯಲ್ಲಿ ವಿಶ್ವದ ಅತಿದೊಡ್ಡ ಕಂಪನಿ ಎನಿಸಿದೆ ಫಾಕ್ಸ್ಕಾನ್.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ