ಅಮೆರಿಕದ ನಾಸ್ಡಾಕ್ ಅನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಲಿಸ್ಟೆಡ್ ಎಕ್ಸ್​ಚೇಂಜ್ ಆಪರೇಟರ್ ಆದ ಎನ್​ಎಸ್​ಇ

ಭಾರತದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ಮಾರುಕಟ್ಟೆ ಬಂಡವಾಳದ (Market Cap) ಆಧಾರದಲ್ಲಿ ನಾಸ್ಡಾಕ್ ಮತ್ತು ಹಾಂಕಾಂಗ್ ಎಕ್ಸ್‌ಚೇಂಜ್‌ಗಳನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಲಿಸ್ಟೆಡ್ ಸ್ಟಾಕ್ ಎಕ್ಸ್‌ಚೇಂಜ್ ಆಪರೇಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಿಸ್ಟೆಡ್ ಎಕ್ಸ್‌ಚೇಂಜ್ ಆಪರೇಟರ್ ಮತ್ತು ಒಟ್ಟಾರೆ ಷೇರುಪೇಟೆಗಳ ನಡುವಿನ ವ್ಯತ್ಯಾಸ ಹಾಗೂ ವಿಶ್ವದ ಪ್ರಮುಖ ಷೇರುಪೇಟೆಗಳ ಪಟ್ಟಿ ಇಲ್ಲಿದೆ.

ಅಮೆರಿಕದ ನಾಸ್ಡಾಕ್ ಅನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಲಿಸ್ಟೆಡ್ ಎಕ್ಸ್​ಚೇಂಜ್ ಆಪರೇಟರ್ ಆದ ಎನ್​ಎಸ್​ಇ
ಷೇರು ವಿನಿಮಯ ಕೇಂದ್ರ
Image Credit source: Getty Images

Updated on: Nov 20, 2026 | 7:30 PM

ನವದೆಹಲಿ, ನವೆಂಬರ್ 20: ಭಾರತದ ಪ್ರಮುಖ ಷೇರು ವಿನಿಮಯ ಕೇಂದ್ರವಾದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE), ತನ್ನ ಸ್ವಂತ ಮಾರುಕಟ್ಟೆ ಬಂಡವಾಳದ (Market Capitalisation) ಆಧಾರದಲ್ಲಿ ವಿಶ್ವದ 5ನೇ ಅತಿದೊಡ್ಡ ಲಿಸ್ಟೆಡ್ ಸ್ಟಾಕ್ ಎಕ್ಸ್‌ಚೇಂಜ್ ಆಪರೇಟರ್ ಆಗಿ ಹೊರಹೊಮ್ಮಿದೆ. ಈ ಮೂಲಕ ಎನ್‌ಎಸ್‌ಇ ಅಮೆರಿಕದ ಪ್ರಸಿದ್ಧ ನಾಸ್ಡಾಕ್ (Nasdaq), ಹಾಂಕಾಂಗ್ ಎಕ್ಸ್‌ಚೇಂಜ್ ಮತ್ತು ಕ್ಲಿಯರಿಂಗ್ (HKEX) ಹಾಗೂ ಜಪಾನ್ ಎಕ್ಸ್‌ಚೇಂಜ್ ಗ್ರೂಪ್ (JPX) ಸೇರಿದಂತೆ ಹಲವು ಜಾಗತಿಕ ದಿಗ್ಗಜ ಷೇರುಪೇಟೆ ನಿರ್ವಾಹಕ ಸಂಸ್ಥೆಗಳನ್ನು ಹಿಂದಿಕ್ಕಿದೆ.

ಎನ್​ಎಸ್​ಇ ಷೇರುಮೌಲ್ಯ ಹೆಚ್ಚಿಸಲು ಕಾರಣಗಳಿವು: ಭಾರತೀಯ ಬಂಡವಾಳ ಮಾರುಕಟ್ಟೆಯಲ್ಲಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು (DII) ಮತ್ತು ಚಿಲ್ಲರೆ ಹೂಡಿಕೆದಾರರ (Retail Investors) ಭಾಗವಹಿಸುವಿಕೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿರುವುದು ಎನ್‌ಎಸ್‌ಇ ವಹಿವಾಟು ಮತ್ತು ಮೌಲ್ಯವರ್ಧನೆಗೆ ದೊಡ್ಡ ಬಲ ನೀಡಿದೆ.

Loading...

ಐಪಿಒ (IPO) ಮಾರುಕಟ್ಟೆಯ ಚುರುಕುತನ, ಡೆರಿವೇಟಿವ್ಸ್ ವಹಿವಾಟು ಮತ್ತು ಡಿಜಿಟಲ್ ಹೂಡಿಕೆ ವ್ಯವಸ್ಥೆಯ ವಿಸ್ತರಣೆಯು ಎನ್‌ಎಸ್‌ಇಯನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ತಂದಿದೆ.

ಇದನ್ನೂ ಓದಿ: ಬಳಸಿದ ಅಡುಗೆ ಎಣ್ಣೆಗೂ ಇದೆ ಒಳ್ಳೆಯ ಮೌಲ್ಯ; ಸುಸ್ಥಿತ ವಿಮಾನ ಇಂಧನವಾಗಿ ಬಳಕೆ; ಇಂಡಿಯನ್ ಆಯಿಲ್​ನಿಂದ ಮೊದಲ ಬ್ಯಾಚ್ ಶುರು

‘ಲಿಸ್ಟೆಡ್ ಎಕ್ಸ್‌ಚೇಂಜ್ ಆಪರೇಟರ್’ vs ‘ವಿಶ್ವದ ಅತಿದೊಡ್ಡ ಷೇರುಪೇಟೆ’

ಹೂಡಿಕೆದಾರರಲ್ಲಿ ಸಾಮಾನ್ಯವಾಗಿ ಈ ಎರಡು ಪದಗಳ ನಡುವೆ ಗೊಂದಲ ಉಂಟಾಗಬಹುದು. ಅವುಗಳ ನಡುವಿನ ವ್ಯತ್ಯಾಸವನ್ನು ಸರಳವಾಗಿ ಹೀಗೆ ಅರ್ಥಮಾಡಿಕೊಳ್ಳಬಹುದು:

ಲಿಸ್ಟೆಡ್ ಸ್ಟಾಕ್ ಎಕ್ಸ್‌ಚೇಂಜ್ ಆಪರೇಟರ್ ಎಂದರೆ ಯಾವುದು?

ಇದು ಆ ಷೇರು ವಿನಿಮಯ ಕೇಂದ್ರವನ್ನು ನಡೆಸುವ ಒಂದು ಕಂಪನಿಯ ಸ್ವಂತ ಷೇರುಗಳ ಒಟ್ಟು ಮೌಲ್ಯ (Market Cap). ಉದಾಹರಣೆಗೆ, ಎನ್‌ಎಸ್‌ಇ (NSE) ಅಥವಾ ನಾಸ್ಡಾಕ್ (Nasdaq) ಒಂದು ಕಂಪನಿಯಾಗಿ ತನ್ನದೇ ಆದ ಎಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ ಎಂಬುದನ್ನು ಇದು ಸೂಚಿಸುತ್ತದೆ. ಈ ಪಟ್ಟಿಯಲ್ಲಿ ಎನ್‌ಎಸ್‌ಇ 5ನೇ ಸ್ಥಾನಕ್ಕೇರಿದೆ.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಸ್ಮಾರ್ಟ್​ಫೋನ್ ಮಾರಾಟ ಶೇ. 22 ಕುಸಿತ; ಹೆಚ್ಚು ಮೊಬೈಲ್ ಮಾರಿದ ಬ್ರ್ಯಾಂಡ್ ಸ್ಯಾಮ್​ಸಂಗ್

ವಿಶ್ವದ ಅತಿದೊಡ್ಡ ಷೇರು ವಿನಿಮಯ ಕೇಂದ್ರಗಳೆಂದರೆ ಯಾವುವು?

ಇದು ಆ ಷೇರು ವಿನಿಮಯ ಕೇಂದ್ರದಲ್ಲಿ ನೋಂದಾಯಿತವಾಗಿರುವ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಆಗುತ್ತದೆ. ಉದಾಹರಣೆಗೆ ಎನ್‌ಎಸ್‌ಇಯಲ್ಲಿ ಲಿಸ್ಟ್ ಆಗಿರುವ ರಿಲಯನ್ಸ್, ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಇತ್ಯಾದಿ ಎಲ್ಲಾ ಕಂಪನಿಗಳ ಒಟ್ಟು ಮೌಲ್ಯ.

ವಿಶ್ವದ ಅತಿದೊಡ್ಡ ಷೇರು ವಿನಿಮಯ ಕೇಂದ್ರಗಳ ಪಟ್ಟಿ (ಒಟ್ಟೂ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ)

  1. ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ (NYSE), ಅಮೆರಿಕ
  2. ನಾಸ್ಡಾಕ್ (Nasdaq), ಅಮೆರಿಕ
  3. ಯುರೋನೆಕ್ಸ್ಟ್, ಯುರೋಪ್
  4. ಶಾಂಘೈ ಸ್ಟಾಕ್ ಎಕ್ಸ್‌ಚೇಂಜ್, ಚೀನಾ
  5. ಜಪಾನ್ ಎಕ್ಸ್‌ಚೇಂಜ್ ಗ್ರೂಪ್ (JPX), ಜಪಾನ್
  6. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE), ಭಾರತ
  7. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE), ಭಾರತ
  8. ಶೆನ್‌ಜೆನ್ ಸ್ಟಾಕ್ ಎಕ್ಸ್‌ಚೇಂಜ್ (SZSE), ಚೀನಾ
  9. ಹಾಂಗ್ ಕಾಂಗ್ ಸ್ಟಾಕ್ ಎಕ್ಸ್‌ಚೇಂಜ್ (HKEX), ಹಾಂಗ್ ಕಾಂಗ್
  10. ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಗ್ರೂಪ್ (LSEG), ಯುನೈಟೆಡ್ ಕಿಂಗ್‌ಡಮ್ (UK)

ಇದನ್ನೂ ಓದಿ: ವಿಶ್ವ ದಾಖಲೆಯ ಐಪಿಒ ಬಳಿಕ ಆಂಥ್ರೋಪಿಕ್​ನ ಶೇ. 96 ಉದ್ಯೋಗಿಗಳು ಈಗ ಮಿಲಿಯನೈರ್​ಗಳು

ವಿಶ್ವದ ಅಗ್ರ ಲಿಸ್ಟೆಡ್ ಎಕ್ಸ್‌ಚೇಂಜ್ ಆಪರೇಟರ್‌ಗಳು

  1. CME ಗ್ರೂಪ್ (CME Group), ಅಮೆರಿಕ
  2. ಇಂಟರ್‌ಕಾಂಟಿನೆಂಟಲ್ ಎಕ್ಸ್‌ಚೇಂಜ್, ಅಮೆರಿಕ
  3. ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಗ್ರೂಪ್ (LSEG), ಯುಕೆ
  4. ಡಾಯ್ಚ ಬೋರ್ಸ್ (Deutsche Börse), ಜರ್ಮನಿ
  5. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE), ಭಾರತ

ಗಮನಿಸಬೇಕಾದ ಸಂಗತಿ ಎಂದರೆ, ಶಾಂಘೈ ಮತ್ತು ಶೆನ್‌ಜೆನ್ ಷೇರುಪೇಟೆಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿರುವುದರಿಂದ ಅವು ಲಿಸ್ಟೆಡ್ ಕಂಪನಿಗಳಲ್ಲ; ಹೀಗಾಗಿ ಲಿಸ್ಟೆಡ್ ಆಪರೇಟರ್‌ಗಳ ಪಟ್ಟಿಯಲ್ಲಿ ಅವು ಬರುವುದಿಲ್ಲ. ಈ ರೀತಿ ಇನ್ನೂ ಹಲವಾರು ಷೇರು ವಿನಿಮಯ ಕೇಂದ್ರಗಳು ಲಿಸ್ಟ್ ಆಗಿಲ್ಲ.

ಇನ್ನು, ಎನ್​ಎಸ್​ಇ ಮಾರ್ಕೆಟ್ ಕ್ಯಾಪ್ 5.50 ಲಕ್ಷ ಕೋಟಿ ರೂನಷ್ಟಿದೆ. ಭಾರತದ ಮೊದಲ ಸ್ಟಾಕ್ ಎಕ್ಸ್​ಚೇಂಜ್ ಆದ ಬಿಎಸ್​ಇ ಕೂಡ ಲಿಸ್ಟ್ ಆಗಿದ್ದು, ಅದರ ಮಾರ್ಕೆಟ್ ಕ್ಯಾಪ್ 1.50 ಲಕ್ಷ ಕೋಟಿ ರೂ ಮಾತ್ರವೇ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us