AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಬ್ಬದ ಸೀಸನ್​ನಲ್ಲಿ ಸ್ಮಾರ್ಟ್​ಫೋನ್ ಮಾರಾಟ ಶೇ. 22 ಕುಸಿತ; ಹೆಚ್ಚು ಮೊಬೈಲ್ ಮಾರಿದ ಬ್ರ್ಯಾಂಡ್ ಸ್ಯಾಮ್​ಸಂಗ್

ಕೌಂಟರ್‌ಪಾಯಿಂಟ್ ರಿಸರ್ಚ್ ವರದಿಯ ಪ್ರಕಾರ, 2026ರ ಹಬ್ಬದ ಅವಧಿಯಲ್ಲಿ (ಅಕ್ಟೋಬರ್ 8–ನವೆಂಬರ್ 10) ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 22ರಷ್ಟು ಕುಸಿದಿದೆ. ಮೆಮೊರಿ ಚಿಪ್​ಗಳ ವೆಚ್ಚ ಏರಿಕೆಯಿಂದ ಬೆಲೆಗಳು ಹೆಚ್ಚಾಗಿವೆ. ಇದರಿಂದ ಬಜೆಟ್ ಫೋನ್‌ಗಳ ಮಾರಾಟಕ್ಕೆ ಭಾರಿ ಪೆಟ್ಟು ಬಿದ್ದಿದೆ ಎಂದು ವರದಿಯು ಹೇಳುತ್ತಿದೆ.

ಹಬ್ಬದ ಸೀಸನ್​ನಲ್ಲಿ ಸ್ಮಾರ್ಟ್​ಫೋನ್ ಮಾರಾಟ ಶೇ. 22 ಕುಸಿತ; ಹೆಚ್ಚು ಮೊಬೈಲ್ ಮಾರಿದ ಬ್ರ್ಯಾಂಡ್ ಸ್ಯಾಮ್​ಸಂಗ್
ಭಾರತದಲ್ಲಿರುವ ಒಂದು ಆ್ಯಪಲ್ ಐಫೋನ್ ಸ್ಟೋರ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 20, 2026 | 1:24 PM

Share

ನವದೆಹಲಿ, ನವೆಂಬರ್ 20: ಈ ದಸರಾ ಮತ್ತು ದೀಪಾವಳಿ ಹಬ್ಬದ ಸೀಸನ್​ನಲ್ಲಿ ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಭಾರೀ ಕುಸಿತ ಕಂಡಿದೆ. ನಿರೀಕ್ಷೆಮೀರಿದ ಮಟ್ಟದ ಕುಸಿತವಾಗಿದೆ. ಕೌಂಟರ್​ಪಾಯಿಂಟ್ ರಿಸರ್ಚ್ (Counterpoint Research) ವರದಿ ಪ್ರಕಾರ, ಹಬ್ಬದ ಸೀಸನ್​ನಲ್ಲಿ ಹಿಂದಿನ ವರ್ಷದಕ್ಕೆ ಹೋಲಿಸಿದರೆ ಶೇ. 22ರಷ್ಟು ಮಾರಾಟ ಇಳಿಕೆಯಾಗಿದೆ. ಶೇ. 12ರಷ್ಟು ಮಾರಾಟ ಕುಸಿಯಬಹುದು ಎಂದು ಈ ಮೊದಲು ನಿರೀಕ್ಷಿಸಲಾಗಿತ್ತಾದರೂ, ಅದನ್ನೂ ಮೀರಿಸಿದಷ್ಟು ಪ್ರಮಾಣದಲ್ಲಿ ಸ್ಮಾರ್ಟ್​ಫೋನ್ ಮಾರಾಟ ಸಂಖ್ಯೆ ಇಳಿಮುಖವಾಗಿದೆ.

ಮೆಮೊರಿ ಚಿಪ್​ಗಳ ಹೊಡೆತ: DRAM ಮತ್ತು NAND ಮೆಮೊರಿ ಚಿಪ್ ಬೆಲೆಗಳ ಏರಿಕೆಯಿಂದಾಗಿ ಫೋನ್‌ಗಳ ಬೆಲೆ ಹೆಚ್ಚಳವಾಗಿದೆ. ಕಂಪನಿಗಳಿಗೆ ದೊಡ್ಡ ರಿಯಾಯಿತಿ ನೀಡಲು ಸಾಧ್ಯವಾಗಿಲ್ಲ. 2025ರಲ್ಲಿ ಶೇ. 35–40ರಷ್ಟಿದ್ದ ಹಬ್ಬದ ರಿಯಾಯಿತಿಗಳು ಈ ಬಾರಿ ಶೇ. 10–25ಕ್ಕೆ ಸೀಮಿತವಾಗಿವೆ.

ಆದಾಗ್ಯೂ, ಸರಾಸರಿ ಮಾರಾಟ ಬೆಲೆ (ASP) ಶೇ. 28ರಷ್ಟು ಹೆಚ್ಚಾಗಿರುವುದರಿಂದ ಮಾರುಕಟ್ಟೆಯ ಒಟ್ಟು ಮೌಲ್ಯವು (Market value) ಸ್ಥಿರವಾಗಿ ಉಳಿದಿದೆ. ಶೇ. 48ರಷ್ಟು ಖರೀದಿಗಳು ಇಎಂಐ (EMI) ಮತ್ತು ಹಣಕಾಸು ಸೌಲಭ್ಯಗಳ ಮೂಲಕ ನಡೆದಿವೆ.

ಇದನ್ನೂ ಓದಿ: ವಿಶ್ವ ದಾಖಲೆಯ ಐಪಿಒ ಬಳಿಕ ಆಂಥ್ರೋಪಿಕ್​ನ ಶೇ. 96 ಉದ್ಯೋಗಿಗಳು ಈಗ ಮಿಲಿಯನೈರ್​ಗಳು

ವಿವಿಧ ಬ್ರ್ಯಾಂಡ್‌ಗಳ ಪ್ರದರ್ಶನ ಹೇಗಿತ್ತು?

ಸ್ಯಾಮ್‌ಸಂಗ್: ಮಾರುಕಟ್ಟೆ ಕುಸಿತದ ನಡುವೆಯೂ ಸ್ಯಾಮ್‌ಸಂಗ್ ಕೇವಲ ಶೇ. 8ರಷ್ಟು ಇಳಿಕೆಯೊಂದಿಗೆ ಶೇ. 21ರಷ್ಟು ಪಾಲು ಪಡೆದು ಮುಂಚೂಣಿಯಲ್ಲಿ ನಿಂತಿದೆ. ಗ್ಯಾಲಕ್ಸಿ ಎಸ್25 ಅಲ್ಟ್ರಾ (Galaxy S25 Ultra) ಮತ್ತು ಎಸ್25 ಮಾದರಿಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು, ಸೇಲ್ ಮುಗಿಯುವವರೆಗೆ ಬೆಲೆ ಏರಿಕೆಯನ್ನು ಮುಂದೂಡಿದ್ದು ಇದಕ್ಕೆ ನೆರವಾಯಿತು.

ಬಜೆಟ್ ವಿಭಾಗಕ್ಕೆ ಪೆಟ್ಟು: ರೂ. 20,000ಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮಾರಾಟ ಸುಮಾರು ಶೇ. 50ರಷ್ಟು ಕುಸಿದಿದೆ. ವಿವೋ (ಶೇ. 21 ಕುಸಿತ), ಒಪ್ಪೋ (ಶೇ. 24 ಕುಸಿತ) ಮತ್ತು ಶಿಯೋಮಿ ಕೂಡ ಕುಸಿತ ಕಂಡಿವೆ (ದೀಪಾವಳಿ ವೇಳೆ ರೆಡ್ಮಿ ನೋಟ್ 15 ಮತ್ತು 17 ಸರಣಿ ಚೇತರಿಕೆ ಕಂಡಿತು).

ಆ್ಯಪಲ್ ಮತ್ತು ಗೂಗಲ್: ಹೊಸ ಐಫೋನ್ 18 ಪ್ರೊ ಸರಣಿಗೆ ಉತ್ತಮ ಪ್ರತಿಕ್ರಿಯೆ ಇದ್ದರೂ, ನವೀಕೃತ (Refurbished) ಐಫೋನ್‌ಗಳಿಗೆ ಬೇಡಿಕೆ ಹೆಚ್ಚಾದ ಕಾರಣ ಹೊಸ ಐಫೋನ್ ಮಾರಾಟ ಎರಡಂಕಿಯಲ್ಲಿ ಕುಸಿದಿದೆ. ಇತ್ತ ರೂ. 45,000ಕ್ಕಿಂತ ಹೆಚ್ಚಿನ ಅಲ್ಟ್ರಾ-ಪ್ರೀಮಿಯಂ ವಿಭಾಗದಲ್ಲಿ ಗೂಗಲ್ ಪಿಕ್ಸೆಲ್ (Pixel) ಅತಿ ವೇಗವಾಗಿ ಬೆಳೆದ ಬ್ರ್ಯಾಂಡ್ ಎನಿಸಿಕೊಂಡಿದೆ.

ಇದನ್ನೂ ಓದಿ: ಇಪಿಎಫ್ ನಿಯಮ ಇನ್ನಷ್ಟು ಸರಳ; ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್​ಗೆ ಅನುಮೋದನೆ; 55 ವರ್ಷ ನಿರ್ಬಂಧ, ನಿರುದ್ಯೋಗ ನಿಯಮ ಸಡಿಲ

ಕೌಂಟರ್​ಪಾಯಿಂಟ್ ರಿಸರ್ಚ್ ಪರಿಣಿತರ ಅನಿಸಿಕೆ

ಫೋನ್‌ಗಳ ಬೆಲೆ ನಿರಂತರವಾಗಿ ಏರುತ್ತಿರುವಾಗ ಕೇವಲ ರಿಯಾಯಿತಿಗಳು ಮಾರಾಟವನ್ನು ಎಳೆದುಕೊಂಡು ಹೋಗಲಾರವು; ಅಗತ್ಯವಿದ್ದವರು ಮಾತ್ರ ಹೆಚ್ಚಾಗಿ ಇಎಂಐ ಮೂಲಕ ಖರೀದಿಸಿದ್ದಾರೆ, ಉಳಿದವರು ಹಳೆಯ ಫೋನ್‌ಗಳನ್ನೇ ಬಳಸಿದ್ದಾರೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ ವಿಶ್ಲೇಷಕ ಶುಭಂ ಸಿಂಗ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More