Nvidia Share Price: 2 ವರ್ಷದಿಂದ ಡಾರ್ಲಿಂಗ್ ಆಗಿದ್ದ ನಿವಿಡಿಯಾದ ಷೇರುಬೆಲೆ ಸತತವಾಗಿ ಕುಸಿಯುತ್ತಿರುವುದು ಯಾಕೆ?
Why Share Market is Down Today: ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಮಿಂಚಿನ ಸಂಚಾರ ನಡೆಸುತ್ತಿರುವ ನಿವಿಡಿಯಾ ಸಂಸ್ಥೆ ಕಳೆದ ಕೆಲ ದಿನಗಳಿಂದ ವೇಗವಾಗಿ ಕುಸಿಯುತ್ತಿದೆ. ನಿನ್ನೆ (ಸೆ. 3) ಒಂದೇ ದಿನ ಅದರ ಷೇರುಬೆಲೆ ಶೇ. 9.53ರಷ್ಟು ಕುಸಿದಿದೆ. ರುಪಾಯಿ ಲೆಕ್ಕದಲ್ಲಿ 23 ಲಕ್ಷ ಕೋಟಿ ರೂನಷ್ಟು ಷೇರುಸಂಪತ್ತು ಕರಗಿದೆ.
ವಾಷಿಂಗ್ಟನ್, ಸೆಪ್ಟೆಂಬರ್ 4: ಚ್ಯಾಟ್ಜಿಪಿಟಿ ಬಂದ ಬಳಿಕ ಎಐ ಎಲ್ಲರ ಲೇಟೆಸ್ಟ್ ಮಂತ್ರವಾಗಿದೆ. ಇಡೀ ಜಗತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಗ್ಗೆ ಕನಸು ಕಾಣತೊಡಗಿದೆ. ಈ ಬೂಮ್ನಲ್ಲಿ ಭರ್ಜರಿ ಲಾಭ ಮಾಡಿದ್ದು ಚಿಪ್ ತಯಾರಕರು. ಎಐ ಟೆಕ್ನಾಲಜಿ ಅಳವಡಿಕೆಗೆ ಭದ್ರ ಅಡಿಪಾಯ ಹಾಕುವುದು ಚಿಪ್ಗಳು. ಅಮೆರಿಕದ ನಿವಿಡಿಯಾ, ಬ್ರಾಡ್ಕಾಮ್ ಇತ್ಯಾದಿ ಚಿಪ್ ತಯಾರಕರ ಷೇರುಗಳು ಸಖತ್ತಾಗಿ ಏರಿವೆ. ಎಐ ನಿರೀಕ್ಷೆಗಳಂತೆ ಈ ಚಿಪ್ ಷೇರುಗಳೂ ಕೂಡ ಬಲೂಲಿನಂತೆ ಊದಿಕೊಂಡಿವೆ. ಇದೀಗ ಈ ಬಲೂನು ಬೇರೆ ಬೇರೆ ಕಾರಣಗಳಿಗೆ ಠುಸ್ ಆಗಿದೆ. ನಿವಿಡಿಯಾ ಮೊದಲಾದ ಷೇರುಗಳ ಬೆಲೆ ಸತತವಾಗಿ ಇಳಿಯುತ್ತಿದೆ. ನಿವಿಡಿಯಾ ಒಂದೇ ದಿನದಲ್ಲಿ 279 ಬಿಲಿಯನ್ ಡಾಲರ್ ಷೇರು ಸಂಪತ್ತನ್ನು ಕಳೆದುಕೊಂಡಿದೆ. ಅಂದರೆ ಬರೋಬ್ಬರಿ 23 ಲಕ್ಷ ಕೋಟಿ ರೂನಷ್ಟು ಸಂಪತ್ತು ಕಡಿಮೆ ಆಗಿದೆ.
ನಿನ್ನೆ ಮಂಗಳವಾರ (ಸೆ. 3) ಅಮೆರಿಕದ ನಾಸ್ಡಾಕ್ನಲ್ಲಿ 119-120 ಡಾಲರ್ ಬೆಲೆಯಲ್ಲಿ ಆರಂಭವಾದ ನಿವಿಡಿಯಾ ಷೇರು ದಿನಾಂತ್ಯದಲ್ಲಿ 11 ಡಾಲರ್ಗೂ ಹೆಚ್ಚು ಮೌಲ್ಯ ಕಳೆದುಕೊಂಡಿತು. ಶೇ. 9.53ರಷ್ಟು ಷೇರುಸಂಪತ್ತು ಕರಗಿತು. ಆಗಸ್ಟ್ 27ರಂದು ಕೂಡ ದಿನದ ಟ್ರೇಡಿಂಗ್ ಅವಧಿಯಲ್ಲಿ ನಿವಿಡಿಯಾ ಷೇರುಬೆಲೆ ಏಕ್ದಂ 20 ಡಾಲರ್ನಷ್ಟು ಮೌಲ್ಯ ಕಳೆದುಕೊಂಡಿತ್ತು ನಿವಿಡಿಯಾ ಮಾತ್ರವಲ್ಲ, ಸೆಪ್ಟೆಂಬರ್ 3ರಂದು ಬ್ರಾಡ್ಕಾಮ್ನ ಸ್ಟಾಕ್ ಸಹ ಶೇ. 6ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ.
ನಿವಿಡಿಯಾ ಷೇರುಬೆಲೆ ಯಾಕೆ ಕುಸಿಯುತ್ತಿದೆ?
ಎಐ ತಂತ್ರಜ್ಞಾನದ ಕ್ರೇಜ್ನಲ್ಲಿ ಬಹಳಷ್ಟು ಹೂಡಿಕೆದಾರರು ಆ ಕ್ಷೇತ್ರದ ಉದ್ಯಮಗಳತ್ತ ಮುಗಿಬೀಳುತ್ತಿದ್ದಾರೆ. ಆದರೆ, ನಿವಿಡಿಯಾ ಮೊದಲಾದ ಕಂಪನಿಗಳ ಆದಾಯ ನಿರೀಕ್ಷಿತ ರೀತಿಯಲ್ಲಿ ಏರುತ್ತಿಲ್ಲ. ನಿವಿಡಿಯಾ ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಎಷ್ಟು ಲಾಭ ಬರಬಹುದು ಎಂದು ಮಾಡಿದ್ದ ಅಂದಾಜು, ಹೂಡಿಕೆದಾರರನ್ನು ನಿರಾಸೆಗೊಳಿಸಿದೆ. ಎಐ ಕಂಪನಿಯಿಂದ ಬಹಳಷ್ಟು ನಿರೀಕ್ಷಿಸಿದ್ದವರಿಗೆ ನಿರಾಸೆಯಾಗಿದೆ. ಹೀಗಾಗಿ, ಒಂದೇ ದಿನದಲ್ಲಿ ಶೇ. 9.53ರಷ್ಟು ಷೇರುಸಂಪತ್ತು ಕುಸಿದಿದೆ.
ಇದನ್ನೂ ಓದಿ: ಕಂಪನಿ ಮಾರಿ ನೌಕರರನ್ನು ಶ್ರೀಮಂತರನ್ನಾಗಿಸಿದ ಮಾಲೀಕ; ಭಾರತ ಮೂಲದ ಅಮೆರಿಕನ್ ಉದ್ಯಮಿ ಜೈ ಚೌಧರಿಯ ಕಥೆ ಇದು
2022ರ ಅಕ್ಟೋಬರ್ನಲ್ಲಿ 11 ಡಾಲರ್ ಇದ್ದ ನಿವಿಡಿಯಾ ಷೇರುಬೆಲೆ ಎರಡು ವರ್ಷದಲ್ಲಿ 140 ಡಾಲರ್ಗೆ ಏರಿತ್ತು. ಹಲವು ವರ್ಷಗಳಿಂದ ಅತ್ಯಧಿಕ ಷೇರುಸಂಪತ್ತಿನೊಂದಿಗೆ ಟಾಪ್ನಲ್ಲಿದ್ದ ಮೈಕ್ರೋಸಾಫ್ಟ್, ಆ್ಯಪಲ್ ಕಂಪನಿಗಳನ್ನು ನಿವಿಡಿಯಾ ಮೀರಿಸಿಬಿಟ್ಟಿತ್ತು. ಈ ಆಗಸ್ಟ್ ಕೊನೆಯ ವಾರದಿಂದ ಈ ಚಿಪ್ ತಯಾರಕ ಸಂಸ್ಥೆಯ ಷೇರು ನಿರಂತರವಾಗಿ ಕುಸಿಯುತ್ತಿದೆ. ಇಂದು ಸೆಪ್ಟೆಂಬರ್ 4 ಅಮೆರಿಕದಲ್ಲಿ ಷೇರು ಮಾರುಕಟ್ಟೆ ಆರಂಭವಾಗಬೇಕಿದೆ. ನಿವಿಡಿಯಾ ಕುಸಿತ ಇಂದೂ ಮುಂದುವರಿಯುತ್ತದಾ ಎನ್ನುವ ಕುತೂಹಲ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ