ಮಾರುಕಟ್ಟೆ ಏರುಪೇರು, ಚೀನಾದ ಸುಳ್ಳು ಸುದ್ದಿ ತಂತ್ರ; ರಫೇಲ್ ಮತ್ತು ಚೆಂಗ್ಡು ಅಸಲಿ ಷೇರು ಆಟ
India-Pakistan Conflict, effect on stock market: ಪಾಕಿಸ್ತಾನದ ಚೀನೀ ನಿರ್ಮಿತ ಜೆ-10 ಯುದ್ಧವಿಮಾನವು ಭಾರತದ ಫ್ರಾನ್ಸ್ ನಿರ್ಮಿತ ರಫೇಲ್ ಜೆಟ್ಗಳನ್ನು ಹೊಡೆದುಹಾಕಿದೆ ಎನ್ನುವ ಸುದ್ದಿ ಎಲ್ಲೆಡೆ ಇತ್ತು. ಇದರ ಪರಿಣಾಮವಾಗಿ ಡಸೋ ಏವಿಯೇಶನ್ ಷೇರುಬೇಲೆ ಕಡಿಮೆ ಆಗಿತ್ತು. ಚೀನೀ ಡಿಫೆನ್ಸ್ ಸ್ಟಾಕ್ ಬೆಲೆ ಹೆಚ್ಚಿತ್ತು. ಈಗ ವಾಸ್ತವ ಸಂಗತಿ ಗೊತ್ತಾದ ಬಳಿಕ, ಎಲ್ಲವೂ ತಿರುವುಮುರುವಾಗಿದೆ. ಭಾರತದ ಡಿಫೆನ್ಸ್ ಸ್ಟಾಕ್ಗಳೂ ಕೂಡ ಏರುತ್ತಿವೆ.

ನವದೆಹಲಿ, ಮೇ 13: ಯುದ್ಧದಲ್ಲಿ ಯಾರಿಗೆ ಗೆಲುವು ಎಂಬುದು ಹೊರಗಿನ ಜಗತ್ತಿಗೆ ಸ್ಪಷ್ಟವಾಗಿ ಗೋಚರವಾಗದೇ ಇದ್ದಾಗ ಎರಡೂ ದೇಶಗಳು ತಮಗೇ ಗೆಲುವು ಎಂದು ಬಿಂಬಿಸಿಕೊಳ್ಳುವುದುಂಟು. ಹಾಗೆಯೇ, ಯುದ್ಧಕ್ಕೆ ಸಂಬಂಧಿಸಿದ ವ್ಯಕ್ತಿಗಳು, ಸಂಸ್ಥೆಗಳು, ಸಂಘಟನೆಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಅಭಿಪ್ರಾಯಗಳನ್ನು ಹರಡುವುದುಂಟು. ಇದನ್ನೇ ನೆರೇಟಿವ್ ಎನ್ನುವುದು. ಪಾಕಿಸ್ತಾನದ ವಿರುದ್ಧ ಭಾರತ ಆಪರೇಷನ್ ಸಿಂದೂರ (Operation Sindoor) ನಡೆಸಿದ ಬಳಿಕ ನಾನಾ ರೀತಿಯ ಊಹಾಪೋಹದ ಸುದ್ದಿಗಳು ಹರಡುತ್ತಿವೆ. ಹೆಚ್ಚಿನ ಪ್ರಮುಖ ಜಾಗತಿಕ ಮಾಧ್ಯಮಗಳು ಪಾಕಿಸ್ತಾನದ ಪರವಾದ ಅಂಶಗಳನ್ನು ಎತ್ತಿ ತೋರಿಸಿದವು. ಪಾಕಿಸ್ತಾನದ ಚೀನೀ ನಿರ್ಮಿತ ಜೆಟ್ಗಳು ಭಾರತದ ಫ್ರಾನ್ಸ್ ನಿರ್ಮಿತ 3 ರಫೇಲ್ ಜೆಟ್ಗಳನ್ನು ಹೊಡೆದುರುಳಿಸಿತು ಎನ್ನುವ ಸುದ್ದಿ ಈಗಲೂ ದಟ್ಟವಾಗಿದೆ. ಇದರ ಬೆನ್ನಲ್ಲೇ ಈ ಜೆಟ್ಗಳನ್ನು ತಯಾರಿಸುವ ಕಂಪನಿಗಳ ಷೇರುಗಳ ಮೇಲೂ ನೆರೇಟಿವ್ ಪ್ರಭಾವ ಬಿದ್ದಿದೆ.
ರಫೇಲ್ ಯುದ್ಧವಿಮಾನವನ್ನು ತಯಾರಿಸುವ ಫ್ರಾನ್ಸ್ನ ಡಸೋ ಏವಿಯೇಶನ್ ಸಂಸ್ಥೆಯ ಷೇರುಗಳು ಮೇ 9ರಿಂದ ಕುಸಿದಿವೆ. ಇನ್ನೊಂದೆಡೆ, ಪಿಎಲ್-15 ಕ್ಷಿಪಣಿ ತಯಾರಿಸುವ ಝುಝೋ ಹೊಂಗ್ಡಾ ಎಲೆಕ್ಟ್ರಾನಿಕ್ಸ್ ಹಾಗೂ ಜೆ-10 ಜೆಟ್ ತಯಾರಿಸುವ ಚೆಂಗ್ಡು ಏರ್ಕ್ರಾಫ್ಟ್ ಕಂಪನಿಯ ಷೇರುಗಳು ಏರಿಕೆ ಆಗತೊಡಗಿದವು. ಇದನ್ನೇ ಮುಂದಿಟ್ಟುಕೊಂಡು ಭಾರತದ ಕೆಲ ಮಾಧ್ಯಮಗಳು ಕೂಡ ರಫೇಲ್ ಜೆಟ್ಗಳನ್ನು ಚೀನಾದ ಅಗ್ಗದ ಜೆಟ್ಗಳು ಹೊಡೆದು ಹಾಕಿದವು ಎಂದು ವರದಿಗಳನ್ನು ಬರೆದದ್ದುಂಟು. ಆದರೆ, ವಾಸ್ತವ ಸಂಗತಿ ಬೇರೆಯೇ ಇದೆ.
ಇದನ್ನೂ ಓದಿ: 2,000 ಕೋಟಿ ರೂಗೆ ತನ್ನ ಪೇಟಿಎಂ ಷೇರು ಮಾರಲಿರುವ ಚೀನಾದ ಆ್ಯಂಟ್ ಗ್ರೂಪ್
ಇವತ್ತು ಮಾರುಕಟ್ಟೆಯಲ್ಲಿ ಚೀನಾದ ಡಿಫೆನ್ಸ್ ಕಂಪನಿಗಳ ಷೇರುಬೆಲೆ ಕುಸಿತ ಕಂಡಿವೆ. ಪಾಕಿಸ್ತಾನಕ್ಕೆ ಎಫ್-16 ಸರಬರಾಜು ಮಾಡಿದ ಅಮೆರಿಕದ ಲಾಕ್ಹೀಡ್ ಮಾರ್ಟಿನ್ ಸಂಸ್ಥೆಯ ಷೇರುಬೆಲೆಯೂ ಕುಸಿದಿದೆ. ಇನ್ನೊಂದೆಡೆ, ರಫೇಲ್ ತಯಾರಕ ಸಂಸ್ಥೆಯಾದ ಡೊಸೋ ಏವಿಯೇಶನ್ ಷೇರುಬೆಲೆ ಏರಿದೆ. ಭಾರತದ ಬಿಇಎಲ್, ಎಚ್ಎಎಲ್ ಇತ್ಯಾದಿ ಡಿಫೆನ್ಸ್ ಕ್ಷೇತ್ರದ ಕಂಪನಿಗಳ ಷೇರುಗಳಿಗೂ ಬೇಡಿಕೆ ಹೆಚ್ಚಿದೆ.
China manipulates its markets. During #OperationSindoor, China tried to push up the stock price PL-15 missile maker and J-10 maker using fake news. But now as reality hits institutional investors, they are dumping the stocks fast, while India’s BEL & HAL are surging. #win #share pic.twitter.com/qWuP0lm1DY
— Aravind (@aravind) May 13, 2025
ಕೆಲ ಮಾಧ್ಯಮಗಳಲ್ಲಿ ಚೀನೀ ಜೆಟ್ಗಳು ರಫೇಲ್ಗಿಂತ ಹೆಚ್ಚು ಪರಿಣಾಮಕಾರಿ ಎಂದು ಬಿಂಬಿಸುವಂತಹ ವರದಿಗಳನ್ನು ಪ್ರಕಟಿಸಿದ್ದರ ಫಲವಾಗಿ ಚೀನೀ ಸ್ಟಾಕುಗಳ ಮೌಲ್ಯ ಏರಿಕೆ ಆಗಿತ್ತು. ಈಗ ಭಾರತದ ಸೇನಾಧಿಕಾರಿಗಳು ಚೀನೀ ಶಸ್ತ್ರಾಸ್ತ್ರಗಳ ದೌರ್ಬಲ್ಯವನ್ನು ಸಾಕ್ಷ್ಯ ಸಮೇತವಾಗಿ ತೋರಿಸಿದ ಬಳಿಕ ಹೂಡಿಕೆದಾರರಿಗೆ ವಾಸ್ತವ ಸಂಗತಿ ಗೊತ್ತಾಗಿರಬಹುದು.
ಇದನ್ನೂ ಓದಿ: ಬೆಂಗಳೂರಿನ ಕಂಪನಿಗಳಿಂದ ಸ್ಪೈ ಸೆಟಿಲೈಟ್ಗಳ ತಯಾರಿಕೆ; ಪಾಕಿಸ್ತಾನದ ಮೇಲೆ ಹದ್ದಿನಗಣ್ಣಿಡಲು ಬಳಕೆ
ಪಾಕಿಸ್ತಾನ ವಾಯುಪಡೆಯ ಪ್ರಮುಖ ಶಸ್ತ್ರಾಸ್ತ್ರಗಳನ್ನು ಚೀನಾ, ಅಮೆರಿಕ ಹಾಗು ಟರ್ಕಿ ದೇಶಗಳು ಸರಬರಾಜು ಮಾಡುತ್ತವೆ. ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಂ ಸಂಪೂರ್ಣವಾಗಿ ಚೀನಾ ನಿರ್ಮಿತವಾದುವು. ಪಾಕಿಸ್ತಾನದಲ್ಲಿರುವ ಜೆಟ್ಗಳಲ್ಲಿ ಹೆಚ್ಚಿನವು ಅಮೆರಿಕ ಮತ್ತು ಚೀನಾದಿಂದ ನೀಡಲಾಗಿರುವಂಥವು. ಚೀನಾ ನಿರ್ಮಿತ ಏರ್ ಡಿಫೆನ್ಸ್ ಸಿಸ್ಟಂ ವಿಶ್ವದ ಅತ್ಯುತ್ತಮ ರಕ್ಷಣಾ ಕೋಟೆಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು. ಆದರೆ, ಭಾರತದ ಆಪರೇಷನ್ ಸಿಂದೂರದಲ್ಲಿ ಈ ರಕ್ಷಣಾ ಕೋಟೆ ಅಭೇದ್ಯ ಅಲ್ಲ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ.
ಇನ್ನೊಂದೆಡೆ, ರಷ್ಯಾ, ಇಸ್ರೇಲ್ ಹಾಗೂ ದೇಶೀಯ ನಿರ್ಮಿತ ರಕ್ಷಣಾ ವ್ಯವಸ್ಥೆ ಹೊಂದಿದ್ದ ಭಾರತವು ಪಾಕಿಸ್ತಾನದಿಂದ ಹಾರಿ ಬಂದ ನೂರಾರು ಡ್ರೋನ್ಗಳನ್ನು ತಡೆಯಲು ಯಶಸ್ವಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Tue, 13 May 25




