ಕಂಪನಿಗಳು ನೀಡುವ ವಿವಿಧ ಆಫರ್ಗಳಿಗೆ ಆಕರ್ಷಿತರಾಗಿ ವರ್ಷಾಂತ್ಯದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಾರು ಖರೀದಿಗೆ ಮುಂದಾಗುತ್ತಿರುತ್ತಾರೆ. ಹೊಸ ಕಾರುಗಳು ಶೋರೂಮ್ಗಳಿಗೆ ಬರುವುದರಿಂದ ಹಳೆಯ ಕಾರುಗಳ ಮಾರಾಟಕ್ಕಾಗಿ ಕಂಪನಿಗಳು ಹೊಸ ಹೊಸ ಆಫರ್ಗಳನ್ನು, ರಿಯಾಯಿತಿ ದರದ ಕೊಡುಗೆಗಳನ್ನು ಘೋಷಿಸುತ್ತವೆ. ಈ ವರ್ಷದ ಕೊನೆಯಲ್ಲಿ ಕಾರು (Car Buying) ಖರೀದಿಸಲು, ಅದಕ್ಕಾಗಿ ಸಾಲ (Car Loan) ಪಡೆಯಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಅಂಶಗಳು ಗಮನದಲ್ಲಿರಲಿ.
ಕ್ರೆಡಿಟ್ ಸ್ಕೋರ್
ಸಾಲ ಪಡೆಯುವಲ್ಲಿ ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಿದ್ದರೆ ನಿಮಗೆ ಉತ್ತಮ ಬಡ್ಡಿ ದರ, ಇಎಂಐ ಆಫರ್ಗಳನ್ನು ಬ್ಯಾಂಕ್ಗಳು ನೀಡಬಹುದು. ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವಂತೆ ನೋಡಿಕೊಳ್ಳುವ ಮೂಲಕ ಕಡಿಮೆ ಬಡ್ಡಿ, ಪ್ರಿ ಅಪ್ರೋವ್ಡ್ (ಪೂರ್ವಾನಮತಿ ಸಾಲ) ಸಾಲಗಳ ಆಫರ್ ಪಡೆಯಬಹುದು.
ಮರು ಪಾವತಿ ಅವಧಿ
ಸಾಲವನ್ನು ನೀವು ಮರು ಪಾವತಿ ಮಾಡುವ ಅವಧಿ ಬಹಳ ಮುಖ್ಯದ್ದಾಗುತ್ತದೆ. ನೀವು ದೀರ್ಘಾವಧಿಯ ಮರುಪಾವತಿ ಆಯ್ಕೆ ಮಾಡಿಕೊಂಡಲ್ಲಿ ತಿಂಗಳ ಇಎಂಐ ಮೊತ್ತ ಕಡಿಮೆ ಬರಬಹುದು. ಆದರೆ, ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ ಎಂಬುದು ನೆನಪಿರಲಿ. ಒಂದು ವೇಳೆ ಕಡಿಮೆ ಅವಧಿಯ ಮರುಪಾವತಿ ಆಯ್ಕೆ ಮಾಡಿಕೊಂಡಲ್ಲಿ ಇಎಂಐ ಮೊತ್ತ ಹೆಚ್ಚು ಬರಬಹುದು. ಆದರೆ, ಬಡ್ಡಿ ದರ ಕಡಿಮೆ ಇರಬಹುದು. ಕಡಿಮೆ ಅವಧಿಗೆ ಕಾರು ಸಾಲ ಪಡೆದಾಗ ಸಾಮಾನ್ಯವಾಗಿ ಬ್ಯಾಂಕ್ಗಳು ಕಡಿಮೆ ಬಡ್ಡಿ ದರದ ಆಫರ್ ನೀಡುತ್ತವೆ.
ಸಾಲದ ಮೊತ್ತ
ಮರುಪಾವತಿ ವೇಳೆ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳುವಲ್ಲಿ ಸಾಲದ ಮೊತ್ತ ಬಹಳ ಮುಖ್ಯವಾದದ್ದಾಗುತ್ತದೆ. ಹೆಚ್ಚು ಮೊತ್ತದ ಸಾಲ ಪಡೆದರೆ ಇಎಂಐ ಮೊತ್ತವೂ ಹೆಚ್ಚಾಗುತ್ತದೆ. ಹೆಚ್ಚು ಮೊತ್ತದ ಇಎಂಐ ಪಾವತಿ ತಡೆಯಲು ಸಾಲ ಮರುಪಾವತಿ ಅವಧಿ ಹೆಚ್ಚಿಸಬೇಕಾಗುತ್ತದೆ. ಇದಕ್ಕಾಗಿ ಸಾಲದ ಮೊತ್ತ ಅಂತಿಮಗೊಳಿಸುವ ಮುನ್ನ ಸಾಕಷ್ಟು ಯೋಚಿಸಿ.
ಈಗಾಗಲೇ ಸಾಲ ಪಡೆದಿದ್ದೀರಾ?
ಈಗಾಗಲೇ ನೀವು ಬೇರೆ ಉದ್ದೇಶಕ್ಕೆ ಸಾಲ ಪಡೆದಿದ್ದರೆ, ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುತ್ತಿದ್ದರೆ ಸಾಲ ಪಡೆಯುವ ಪ್ರಕ್ರಿಯೆ ಬಹು ಸುಲಭವಾಗಬಹುದು. ಸಾಲದಾತನಲ್ಲಿ ನಿಮ್ಮ ದಾಖಲೆಗಳು ಈಗಾಗಲೇ ಇರುವುದರಿಂದ ಸುಲಭವಾಗಿ ಸಾಲ ಪಡೆಯಬಹುದು. ಕೆಲವೊಂದು ದಾಖಲೆಗಳ ಶುಲ್ಕದಲ್ಲಿಯೂ ವಿನಾಯಿತಿ ದೊರೆಯಬಹುದು.
ಆದಾಯ
ಆದಾಯ ಉತ್ತಮವಾಗಿದ್ದರೆ, ಸಾಲ ಮರುಪಾವತಿ ಮಾಡಲು ಯಾವುದೇ ಹಣಕಾಸಿನ ಸಮಸ್ಯೆಗಳು ಎದುರಾಗದು. ಸಾಲದಾತರು ನಿಮ್ಮ ಅರ್ಹತೆಯನ್ನು ನಿರ್ಣಯಿಸಲು ಮತ್ತು ತ್ವರಿತವಾಗಿ ಸಾಲವನ್ನು ನೀಡಲು ಮುಂದಾಗಬಲ್ಲರು. ನಿಮ್ಮ ಆದಾಯ, ಮರು ಪಾವತಿ ಸಾಮರ್ಥ್ಯದ ಆಧಾರದಲ್ಲಿ ಸಾಲದ ಮೊತ್ತ ನಿರ್ಣಯಿಸುವುದು ಉತ್ತಮ.
ಬಡ್ಡಿ ದರ ಎಷ್ಟಿರಬಹುದು?
ಕಾರು ಖರೀದಿಗೆ ಸಾಲ ನೀಡುವಾಗ ಬ್ಯಾಂಕ್ಗಳು ಬಡ್ಡಿ ದರ ನಿರ್ಣಯಿಸುವಲ್ಲಿ ಕ್ರೆಡಿಟ್ ಸ್ಕೋರ್ ಸೇರಿದಂತೆ ಅನೇಕ ಅಂಶಗಳು ಪಾತ್ರ ವಹಿಸುತ್ತವೆ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಕಡಿಮೆ ಬಡ್ಡಿ ದರದ ಆಫರ್ ದೊರೆಯಬಹುದು. ಸದ್ಯ ಕಾರು ಖರೀದಿ ಸಾಲಕ್ಕೆ ಶೇಕಡಾ 7.90ರಿಂದ ತೊಡಗಿ ಶೇಕಡಾ 10.40ರ ವರೆಗೂ ವಿವಿಧ ಬ್ಯಾಂಕ್ಗಳು ಹಲವು ಪ್ರಮಾಣದಲ್ಲಿ ಬಡ್ಡಿ ನಿಗದಿಪಡಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ