
ಬೆಳ್ಳಿ ಮತ್ತು ಚಿನ್ನದ ಬೆಲೆ ಕಳೆದ ಒಂದು ವರ್ಷದಲ್ಲಿ ಸಿಕ್ಕಾಪಟ್ಟೆ ಏರಿದೆ. ವರ್ಷದ ಹಿಂದೆ ಚಿನ್ನ ಖರೀದಿಸಿದ್ದರೆ ಅದರ ಮೌಲ್ಯ 2-3 ಪಟ್ಟು ಹೆಚ್ಚಾಗುತ್ತಿತ್ತಲ್ಲ ಎಂದು ಯಾರಿಗಾದರೂ ಅನಿಸಿರುತ್ತದೆ. ಬಹಳಷ್ಟು ತಜ್ಞರು ಚಿನ್ನದ ಮೇಲೆ ಸ್ವಲ್ಪ ಭಾಗವಾದರೂ ಹೂಡಿಕೆ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ಆದರೆ, ವಿಶ್ವದ ಅಪ್ರತಿಮ ಹೂಡಿಕೆದಾರರೆನಿಸಿದ ಮತ್ತು ವಿಶ್ವದ ಅತಿ ಶ್ರೀಮಂತರ ಪೈಕಿ ಒಬ್ಬರೆನಿಸಿದ ವಾರನ್ ಬಫೆಟ್ ಅವರು ಚಿನ್ನದಂತಹ ಲೋಹಗಳ ಮೇಲೆ ಹೂಡಿಕೆ ಮಾಡಲು ಇದೂವರೆಗೆ ಮನಸ್ಸನ್ನೇ ಮಾಡಿಲ್ಲ. ಅವರು ಹೂಡಿಕೆ ದೃಷ್ಟಿಯಲ್ಲಿ ಚಿನ್ನದಿಂದ ದೂರವೇ ಉಳಿದಿದ್ದಾರೆ.
ವಾರನ್ ಬಫೆಟ್ ಅವರು ಚಿನ್ನದ ಮೇಲೆ ಹೂಡಿಕೆ ಮಾಡಿಯೇ ಇಲ್ಲವೆಂದಲ್ಲ, ಆದರೆ ಅವರ ಪ್ರಮುಖ ಹೂಡಿಕೆ ಭಾಗದಲ್ಲಿ ಚಿನ್ನ ಯಾವತ್ತಿಗೂ ಇಲ್ಲ. ಬಹಳ ಬೇಡಿಕೆಯಲ್ಲಿರುವ ಚಿನ್ನದ ಬಗ್ಗೆ ವಾರನ್ ಬಫೆಟ್ಗೆ ಯಾಕೆ ತಿರಸ್ಕಾರ? ಚಿನ್ನದ ಮೇಲೆ ಹೂಡಿಕೆ ಮಾಡುವುದು ವ್ಯರ್ಥ ಎಂದು ಅವರು ವಾದಿಸುವುದು ಯಾಕೆ? ಸೆಂಟ್ರಲ್ ಬ್ಯಾಂಕುಗಳು ಚಿನ್ನ ಖರೀದಿಸಲು ನಾ ಮುಂದು, ತಾ ಮುಂದು ಎಂದು ಯತ್ನಿಸುತ್ತಿರುವಾಗ ವಾರನ್ ಬಫೆಟ್ ಯಾಕೆ ದೂರ ಉಳಿಯುತ್ತಿದ್ದಾರೆ?
ಇದನ್ನೂ ಓದಿ: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…
ವಾರನ್ ಬಫೆಟ್ ಪ್ರಕಾರ ಚಿನ್ನ ಅನುತ್ಪಾದಕ ಆಸ್ತಿ. ಇದರ ಪೂರೈಕೆ ಹೆಚ್ಚಾದರೆ ಅದಕ್ಕೆ ಸರಿದೂಗುವಷ್ಟು ಬಳಕೆ ಇಲ್ಲ ಎಂಬುದು ಇವರ ಅನಿಸಿಕೆ. ಚಿನ್ನ ಅನುತ್ಪಾದಕ ಆಸ್ತಿ ಹಾಗೂ ಹೆಚ್ಚು ಉಪಯುಕ್ತವಲ್ಲದ ಆಸ್ತಿ ಎನ್ನುವ ಎರಡು ಅಂಶಗಳು ಇವರು ಮುಂದಿಡುತ್ತಾರೆ. ಚಿನ್ನವನ್ನು ಆಭರಣಕ್ಕೆ ಬಳಸುವುದೇ ಹೆಚ್ಚು. ಎಲೆಕ್ಟ್ರಾನಿಕ್ಸ್ ಇತ್ಯಾದಿ ಔದ್ಯಮಿಕವಾಗಿ ಇದರ ಉಪಯೋಗ ಇರುವುದು ಬಹಳ ಕಡಿಮೆ. ಹೀಗಾಗಿ, ಇದನ್ನು ಅನುತ್ಪಾದಕ ವಸ್ತುವೆಂದು ಇವರು ಪರಿಗಣಿಸುತ್ತಾರೆ.
ಇದಕ್ಕೆ ವ್ಯತಿರಿಕ್ತವಾಗಿ ಬ್ಯುಸಿನೆಸ್, ಫ್ಯಾಕ್ಟರಿಗಳು, ಅಥವಾ ಕೃಷಿ ಭೂಮಿಯೇ ಆದರೂ ಅವು ಉತ್ಪಾದಕತೆಯ ಗುಣ ಹೊಂದಿವೆ. ಇವುಗಳಿಂದ ಹೊಸ ಸರಕು ಮತ್ತು ಸೇವೆಗಳನ್ನು ಸೃಷ್ಟಿಸಬಹುದು. ಆದರೆ, ಚಿನ್ನದಿಂದ ಇದನ್ನು ಮಾಡಲಾಗುವುದಿಲ್ಲ ಎಂಬುದು ಇವರ ವಾದ.
ವಾರನ್ ಬಫೆಟ್ ಅವರು ಔದ್ಯಮಿಕ ಸಂಸ್ಥೆಗಳ ಷೇರುಗಳ ಮೇಲೆ ಹೂಡಿಕೆ ಮಾಡಲು ಪ್ರಾಶಸ್ತ್ಯ ನೀಡುತ್ತಾರೆ. ಈ ಷೇರುಗಳಿಂದ ಡಿವಿಡೆಂಡ್ ಇತ್ಯಾದಿ ಹೆಚ್ಚುವರಿ ಲಾಭಗಳು ದೊರಕುತ್ತವೆ. ಚಿನ್ನದಿಂದ ಏನೂ ಗೀಟುವುದಿಲ್ಲ ಎನ್ನುತ್ತಾರೆ.
ಇದನ್ನೂ ಓದಿ: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್ಗಳ ನಡುವೆ ಏನು ವ್ಯತ್ಯಾಸ?
ಚಿನ್ನದ ಬೆಲೆ ಕಳೆದ ಒಂದು ವರ್ಷದಲ್ಲಿ 2-3 ಪಟ್ಟು ಹೆಚ್ಚಿರುವುದು ಹೌದು. ಈ ರೀತಿಯ ಉಬ್ಬರ ವೈಪರೀತ್ಯವು ಆಗೊಮ್ಮೆ ಈಗೊಮ್ಮೆ ಇರುತ್ತದೆ. ದೀರ್ಘಾವಧಿಯಲ್ಲಿ ಚಿನ್ನ ಇದೇ ಸ್ಥಿರತೆ ಹೊಂದಿಲ್ಲ ಎಂಬುದು ಹೌದು. ಎರಡು ದಶಕಕ್ಕಿಂತ ಹೆಚ್ಚು ದೀರ್ಘಾವಧಿಯಲ್ಲಿ ಚಿನ್ನ ಹಾಗೂ ಷೇರು ಹೂಡಿಕೆಯನ್ನು ತುಲನೆ ಮಾಡಿದರೆ ಷೇರು ಹೆಚ್ಚು ರಿಟರ್ನ್ ಕೊಟ್ಟಿರುವುದು ಗಮನಾರ್ಹ ಸಂಗತಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ