ನಿಮ್ಮ ಬ್ಯಾಂಕ್ ಹಾಗೂ ಇತರ ಯಾವುದೇ ಹಣಕಾಸು ಯೋಜನೆಗಳ ಪ್ರತಿಯೊಂದು ಮಾಹಿತಿಯನ್ನೂ ಸಂಬಂಧಿಸಿದ ಕುಟುಂಬ ಸದಸ್ಯರಿಗೆ ನೀಡುವುದು ಬಹಳ ಮುಖ್ಯ. ವಿಮಾ ಪಾಲಿಸಿಗೂ (Insurance policy) ಇದು ಅನ್ವಯ ಆಗುತ್ತದೆ. ಪಾಲಿಸಿದಾರ ವಿಮೆ ಕುರಿತ ಮಾಹಿತಿಗಳನ್ನು ಕುಟುಂಬ ಸದಸ್ಯರ ಜತೆ ಹಂಚಿಕೊಳ್ಳದಿದ್ದರೆ ಅದರಿಂದ ಕುಟುಂಬಕ್ಕೇ ದೊಡ್ಡ ನಷ್ಟ. ಇವತ್ತಿನ ದಿನಗಳಲ್ಲಿ ಯಾರಿಗೆ ಯಾವಾಗ ಯಾವ ಅನಾಹುತ ಆಗುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಕುಟುಂಬದ ಎಲ್ಲಾ ಸದಸ್ಯರಿಗೂ ಇನ್ಷೂರೆನ್ಸ್, ಬ್ಯಾಂಕ್ ಡೆಪಾಸಿಟ್ ಎಲ್ಲವನ್ನೂ ಮಾಡಿಸಿದ ವ್ಯಕ್ತಿ ಅದರ ಮಾಹಿತಿಯನ್ನು ಅವರ್ಯಾರಿಗೂ ಕೊಟ್ಟಿರುವುದಿಲ್ಲ ಎಂದಿಟ್ಟುಕೊಳ್ಳಿ. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಆ ವ್ಯಕ್ತಿ ಇದ್ದಕ್ಕಿದ್ದಂತೆ ಮೃತಪಟ್ಟರೆ ಆ ಕುಟುಂಬ ಏನು ಮಾಡಬೇಕು? ಕುಟುಂಬ ಸದಸ್ಯರ ಸುರಕ್ಷತೆಗೆ ಮಾಡಿಸಿದ ವಿಮೆ ಮತ್ತಿತರ ಹಣಕಾಸು ಯೋಜನೆಗಳು ನೀರಲ್ಲಿ ಹೋಮ ಮಾಡಿದಂತಾಗುತ್ತದೆ.
ಈಗಂತೂ ಬಹಳಷ್ಟು ದಾಖಲೆಗಳು ಎಲೆಕ್ಟ್ರಾನಿಕ್ ರೂಪದಲ್ಲೇ ಉಳಿದುಕೊಂಡುಬಿಡುತ್ತವೆ. ಹೀಗಾಗಿ, ಸ್ಕೀಮ್ಗಳ ಬಗ್ಗೆ ಕುಟುಂಬ ಸದಸ್ಯರಿಗೆ ಗೊತ್ತಾಗುವುದಿಲ್ಲ. ಇಂತಹ ಯಡವಟ್ಟುಗಳಿಂದಾಗಿಯೇ ಪಾಲಿಸಿದಾರ ಮೃತಪಟ್ಟರೂ ವಿಮಾ ಕಂಪನಿಗಳಿಂದ ಕ್ಲೇಮ್ ಮಾಡದ ಪ್ರಕರಣಗಳು ಬೇಕಾದಷ್ಟಿವೆ. ವಿಮಾ ನಿಯಂತ್ರಕ ಸಂಸ್ಥೆ ಐಆರ್‌ಡಿಎ ಮಾಹಿತಿಯಂತೆ ದೇಶದಲ್ಲಿ ವಿಮಾ ಕಂಪನಿಗಳಿಂದ ಕ್ಲೇಮ್ ಪಡೆಯದ ಸಾವಿರಾರು ಪ್ರಕರಣಗಳಿವೆ.
ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾದ ಎಲ್ಐಸಿಯಲ್ಲಿ ಕ್ಲೇಮ್ ಆಗದೇ ಇರುವ ಇನ್ಷೂರೆನ್ಸ್ ಪಾಲಿಸಿಗಳ ಸಂಖ್ಯೆ 11,000ಕ್ಕೂ ಹೆಚ್ಚಿವೆ. ಖಾಸಗಿ ವಲಯ ಇನ್ಷೂರೆನ್ಸ್ ಕಂಪನಿಗಳೂ ಕೂಡ ಕ್ಲೇಮ್ ಆಗದಿರುವ 5,000ಕ್ಕೂ ಹೆಚ್ಚು ಇನ್ಷೂರೆನ್ಸ್ ಪಾಲಿಸಿಗಳನ್ನು ಹೊಂದಿವೆ. ಹೀಗಾಗಿ, ನೀವು ಹೆಲ್ತ್ ಇನ್ಷೂರೆನ್ಸ್ ಆಗಲೀ ಅಥವಾ ಯಾವುದೇ ಇನ್ಷೂರೆನ್ಸ್ ಆಗಲೀ ಪಾಲಿಸಿ ಮಾಡಿಸಿದ್ದರೆ ಅದರ ಮಾಹಿತಿಯನ್ನು ಸಂಬಂಧ ಪಟ್ಟವರಿಗೆ ತಪ್ಪದೇ ನೀಡಿ.
ಇದನ್ನೂ ಓದಿ: ಸಾರ್ವಜನಿಕರ ಷೇರುಪಾಲು ಶೇ. 10ಕ್ಕೆ ಹೆಚ್ಚಿಸಲು ಎಲ್ಐಸಿಗೆ ಸಿಕ್ಕಿತು ಮೂರು ವರ್ಷ ಹೆಚ್ಚುವರಿ ಕಾಲಾವಕಾಶ
ಉದಾಹರಣೆಗೆ, ನಿಮ್ಮ ವೈಯಕ್ತಿಕ ಆಕ್ಸಿಡೆಂಟ್ ಪಾಲಿಸಿ ಮಾಡಿಸಿದ್ದರೆ ಅದು ಕುಟುಂಬದವರ ಗಮನಕ್ಕೆ ತಂದಿರಲೇಬೇಕು. ಯಾರ ಹೆಸರಿನಲ್ಲಿ ಪಾಲಿಸಿಗಳನ್ನು ಮಾಡಿಸಿದ್ದೀರೋ ಆ ಎಲ್ಲಾ ಪಾಲಿಸಿಗಳ ವಿವರಗಳನ್ನು ಕುಟುಂಬದ ಜತೆ ಹಂಚಿಕೊಳ್ಳಿ. ಆಗ ನಿಮ್ಮ ಕುಟುಂಬವು ಈ ರೀತಿಯ ಯಾತನೆ ಅನುಭವಿಸುವುದು ತಪ್ಪುತ್ತದೆ.
ನಿಮ್ಮ ಎಲ್ಲಾ ಪ್ರಮುಖ ದಾಖಲೆಗಳನ್ನು ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಸುರಕ್ಷಿತವಾಗಿರಿಸಲು ಈಗ ನಾನಾ ಬಗೆಯ ಆಯ್ಕೆಗಳಿವೆ. ಅವೆಲ್ಲವೂ ಫ್ರೀಯಾಗಿ ಸಿಗುತ್ತವೆ.
ವಿಮಾ ಪಾಲಿಸಿಗಳ ಹಾರ್ಡ್ ಕಾಪಿಗಳನ್ನು ನೀಡೋ ಜತೆಗೆ ಅವುಗಳನ್ನು ಎಲೆಕ್ಟ್ರಾನಿಕ್ ಫಾರ್ಮ್ಯಾಟ್‌ನಲ್ಲೂ ಸುರಕ್ಷಿತವಾಗಿರಿಸುವಂತೆ ಐಆರ್‌ಡಿಎ ಎಲ್ಲಾ ವಿಮಾ ಕಂಪನಿಗಳಿಗೆ ನಿರ್ದೇಶಿಸಿದೆ. ಹೀಗಾಗಿ ವಿಮಾದಾರರು ಸಿಎಎಂಎಸ್, ಎನ್‌ಎಸ್‌ಡಿಎಲ್, ಸಿಡಿಎಸ್‌ಎಲ್ ಹಾಗೂ ಕಾರ್ವೆ ಅಂತಹ ರೆಪಾಸಿಟರಿ ವೆಬ್‌ಸೈಟ್‌ಗಳಿಗೆ ಭೇಟಿ ಕೊಟ್ಟು ಇ-ಅಕೌಂಟ್ ತೆರೆದು ಪಾಲಿಸಿಯ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಬಹುದು.
ಡಿಜಿಟಲ್ ಇಂಡಿಯಾ ಅಭಿಯಾನದಡಿ ಕೇಂದ್ರ ಸರ್ಕಾರವು ಶ್ರೀಸಾಮಾನ್ಯರಿಗೆ ಡಿಜಿಲಾಕರ್ ತೆರೆಯಲು ಅವಕಾಶ ಕಲ್ಪಿಸಿದೆ. ಇದು ಸಂಪೂರ್ಣ ಉಚಿತವಾಗಿದೆ. ಈ ಡಿಜಿಲಾಕರ್‌ನಲ್ಲಿನೀವು ಪ್ಯಾನ್ ಕಾರ್ಡ್, ಡಿಎಲ್, ಆಧಾರ್ ಕಾರ್ಡ್, ವೋಟರ್ ಐಡಿ ಹೀಗೆ ಎಲ್ಲವನ್ನೂ ಸ್ಕ್ಯಾನ್ ಮಾಡಿ ಸುರಕ್ಷಿತವಾಗಿರಿಸಬಹುದು. ಬೇಕಾದಾಗ ಒಂದೇ ಕ್ಲಿಕ್‌ನಲ್ಲಿ ಡಿಜಿಲಾಕರ್ ಪ್ರವೇಶಿಸಿ ನಿಮ್ಮ ದಾಖಲೆಗಳನ್ನು ತೋರಿಸಬಹುದು. ಸರ್ಕಾರ ಒದಗಿಸುವ ಈ ಸೇವೆಯನ್ನು ಆಪ್ ಮೂಲಕವೂ ಪಡೆದುಕೊಳ್ಳಬಹುದು. ‘
ಇದನ್ನೂ ಓದಿ: ಬ್ರಿಟನ್ನಲ್ಲಿ ದಿಕ್ಕಾಪಾಲಾಗುತ್ತಿದೆ ‘ಬೇಬಿ ಬೂಮರ್ಸ್’ ಆಸ್ತಿ; ಇದು ಪಿತ್ರಾರ್ಜಿತ ಆಸ್ತಿ ತೆರಿಗೆ ತಂದ ಫಜೀತಿ
ನಿಮ್ಮ ವಿಮಾ ಪಾಲಿಸಿಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಡಿಜಿ ಲಾಕರ್‌ನಲ್ಲಿ ಇಡಬಹುದು. ನಿಮ್ಮ ಮೊಬೈಲ್‌ನಿಂದ ಡಿಜಿಲಾಕರ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇವುಗಳ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಕುಟುಂಬ ಸದಸ್ಯರ ಜತೆ ಹಂಚಿಕೊಳ್ಳಿ.
ನೀವೇನಾದರೂ ಇಂಟರ್ನೆಟ್ ಬಳಸದಿದ್ದರೆ, ವಿಮೆ ಪಾಲಿಸಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಚ್ಚುಕಟ್ಟಾಗಿ ಫೈಲ್ ಮಾಡಿ ಇಡಿ. ಇದರ ಜತೆಗೆ ಡೈರಿಯಲ್ಲಿ ಪಾಲಿಸಿಯ ಎಲ್ಲ ವಿವರಗಳನ್ನು ಬರೆದಿಡಿ. ನೀವು ಈ ದಾಖಲೆಗಳನ್ನು ಎಲ್ಲಿ ಇಟ್ಟಿರುತ್ತೀರಿ ಎಂಬುದನ್ನು ಕುಟುಂಬದ ಎಲ್ಲ ಸದಸ್ಯರಿಗೂ ತಿಳಿಸಿರಿ.
(ಮಾಹಿತಿ ನೆರವು: ಮನಿ9)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ